ಪಿತೃತರ್ಪಣ

Article also available in :

೧. ವ್ಯಾಖ್ಯೆ: ಪಿತೃಗಳನ್ನು ಉದ್ದೇಶಿಸಿ ನೀಡಿದ ನೀರಿಗೆ ಪಿತೃತರ್ಪಣ ಎನ್ನುತ್ತಾರೆ. ತಂದೆಯು ಜೀವಂತವಿರುವಾಗ ಮಗನಿಗೆ ಪಿತೃತರ್ಪಣ ನಿಷಿದ್ಧವಾಗಿದೆ.

೨. ಏಕೆ ಕೊಡಬೇಕು?: ಪಿತೃಗಳಿಗೆ ತನ್ನ ವಂಶಜರಿಂದ ಪಿಂಡದ ಮತ್ತು ಬ್ರಾಹ್ಮಣ ಭೋಜನದ ಅಪೇಕ್ಷೆಯಿರುವಂತೆ ನೀರಿನ (ಉದಕ) ಅಪೇಕ್ಷೆಯೂ ಇರುತ್ತದೆ.

೩. ಮಹತ್ವ: ತರ್ಪಣವನ್ನು ಕೊಡುವುದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ. ಅಲ್ಲದೇ ತರ್ಪಣ ಕೊಟ್ಟವರಿಗೆ ಆಯುಷ್ಯ, ತೇಜಸ್ಸು, ಬ್ರಹ್ಮವರ್ಚಸ್ಸು, ಸಂಪತ್ತು, ಯಶಸ್ಸು ಮತ್ತು ಅನ್ನಾದ್ಯ ಅಂದರೆ ಭಕ್ಷಿಸಿದ ಅನ್ನವನ್ನು ಜೀರ್ಣ ಮಾಡುವ ಶಕ್ತಿಯನ್ನು ಕೊಟ್ಟು ತೃಪ್ತಗೊಳಿಸುತ್ತಾರೆ.

೪. ಯಾವಾಗ ಕೊಡಬೇಕು?

ದೇವರು, ಋಷಿ ಮತ್ತು ಪಿತೃಗಳನ್ನು ಉದ್ದೇಶಿಸಿ ಪ್ರತಿದಿನ ತರ್ಪಣವನ್ನು ಕೊಡಬೇಕು. ಮುಂಜಾನೆ ಸ್ನಾನದ ನಂತರ ತರ್ಪಣವನ್ನು ಕೊಡಬೇಕು. ಪಿತೃಗಳಿಗೆ ಪ್ರತಿದಿನ ಶ್ರಾದ್ಧವನ್ನು ಮಾಡಲು ಆಗದಿದ್ದರೆ ಕನಿಷ್ಟಪಕ್ಷ ತರ್ಪಣವನ್ನಾದರೂ ಕೊಡಬೇಕು.

೫. ಎಳ್ಳುತರ್ಪಣ: ಪಿತೃತರ್ಪಣಕ್ಕೆ ಎಳ್ಳನ್ನು ತೆಗೆದುಕೊಳ್ಳಬೇಕು. ಎಳ್ಳಿನಲ್ಲಿ ಕಪ್ಪು ಮತ್ತು ಬಿಳಿ ಹೀಗೆ ಎರಡು ಪ್ರಕಾರಗಳಿವೆ. ಶ್ರಾದ್ಧಕ್ಕೆ ಕಪ್ಪು ಎಳ್ಳನ್ನು ಉಪಯೋಗಿಸಬೇಕು.
ಅ. ‘ಎಳ್ಳು ಮಿಶ್ರಿತ ನೀರಿನಿಂದ ಪಿತೃಗಳಿಗೆ ತರ್ಪಣ ಕೊಡುವುದನ್ನು ಎಳ್ಳುತರ್ಪಣ’ ಎನ್ನುತ್ತಾರೆ.
ಆ. ಎಷ್ಟು ಜನ ಪಿತೃಗಳನ್ನು ಉದ್ದೇಶಿಸಿ ಶ್ರಾದ್ಧವನ್ನು ಮಾಡಿರುತ್ತಾರೆಯೋ, ಅಷ್ಟು ಜನರಿಗೆ ಮಾತ್ರ ಶ್ರಾದ್ಧಾಂಗ ಎಳ್ಳುತರ್ಪಣವನ್ನು ಕೊಡಬೇಕು.
ಇ. ದರ್ಶಶ್ರಾದ್ಧವಿದ್ದಲ್ಲಿ ಅದಕ್ಕಿಂತ ಮುಂಚೆ ಮತ್ತು ವಾರ್ಷಿಕ ಶ್ರಾದ್ಧವಿದ್ದಲ್ಲಿ ಅದರ ಮರುದಿನ ಎಳ್ಳುತರ್ಪಣ ಮಾಡುತ್ತಾರೆ. ಇತರ ಶ್ರಾದ್ಧಗಳಲ್ಲಿ ಎಳ್ಳುತರ್ಪಣವನ್ನು ಶ್ರಾದ್ಧದ ನಂತರ ಕೂಡಲೇ ಮಾಡುತ್ತಾರೆ.
ಈ. ನಾಂದಿಶ್ರಾದ್ಧ, ಸಪಿಂಡಿಶ್ರಾದ್ಧ ಮುಂತಾದ ಶ್ರಾದ್ಧಗಳಲ್ಲಿ ಎಳ್ಳುತರ್ಪಣ ಮಾಡುವುದಿಲ್ಲ.

೬. ಎಳ್ಳುತರ್ಪಣದ ಮಹತ್ವ
ಅ. ‘ಪಿತೃಗಳಿಗೆ ಎಳ್ಳು ಪ್ರಿಯವಾಗಿರುತ್ತವೆ.
ಆ. ಎಳ್ಳನ್ನು ಉಪಯೋಗಿಸುವುದರಿಂದ ಅಸುರರು ಶ್ರಾದ್ಧವಿಧಿಗಳಲ್ಲಿ ತೊಂದರೆಗಳನ್ನು ಕೊಡುವುದಿಲ್ಲ.
ಇ. ಶ್ರಾದ್ಧದ ದಿನ ಮನೆಯಲ್ಲಿ ಎಲ್ಲ ಕಡೆಗಳಲ್ಲಿ ಎಳ್ಳನ್ನು ಹರಡಬೇಕು. ಆಮಂತ್ರಿತ ಬ್ರಾಹ್ಮಣರಿಗೆ ಎಳ್ಳು ಮಿಶ್ರಿತ ನೀರನ್ನು ಕೊಡಬೇಕು ಹಾಗೂ ಎಳ್ಳನ್ನು ದಾನ ಮಾಡಬೇಕು’. – ಜೈಮಿನೀಗೃಹ್ಯಸೂತ್ರ (ಉತ್ತರಭಾಗ, ಖಂಡ ೧), ಬೌಧಾಯನಧರ್ಮಸೂತ್ರ (ಪ್ರಶ್ನೆ ೨, ಅಧ್ಯಾಯ ೮, ಅಂಶ ೮) ಮತ್ತು ಬೌಧಾಯನಗೃಹ್ಯಸೂತ್ರ.

(ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ಓದಿ – ‘ಶ್ರಾದ್ಧ (೨ ಭಾಗಗಳು’)

 

 

2 thoughts on “ಪಿತೃತರ್ಪಣ”

Leave a Comment