ಉದ್ಘಾಟನೆ ಎಂದರೇನು ಮತ್ತು ಹೇಗೆ ಮಾಡಬೇಕು?

೧. ಉದ್ಘಾಟನೆ

ಅ. ವ್ಯಾಖ್ಯೆ: ‘ಉದ್’ ಎಂದರೆ ಪ್ರಕಟ ಮಾಡುವುದು. ದೇವತೆಗಳ ಲಹರಿಗಳನ್ನು ಪ್ರಕಟ ಮಾಡಿ ಅಥವಾ ಆವಾಹನೆ ಮಾಡಿ ಅವುಗಳನ್ನು ಕಾರ್ಯಸ್ಥಳದಲ್ಲಿ ಸ್ಥಾನಸ್ಥವಾಗಲು ಪ್ರಾರ್ಥನೆಯನ್ನು ಮಾಡುವುದು ಮತ್ತು ಕಾರ್ಯಾರಂಭವನ್ನು ಮಾಡುವುದು ಎಂದರೆ ಉದ್ಘಾಟನೆ ಮಾಡುವುದು.

ಆ. ಮಹತ್ವ : ಹಿಂದೂಧರ್ಮದಲ್ಲಿನ ಪ್ರತಿಯೊಂದು ಕೃತಿಯು ಅಧ್ಯಾತ್ಮಶಾಸ್ತ್ರದ ಮೇಲೆ ಆಧಾರಿತವಾಗಿರುವುದರಿಂದ ಜೀವಗಳ ಆಸಕ್ತಿಯು ಅಧ್ಯಾತ್ಮಶಾಸ್ತ್ರದಲ್ಲಿ ಹೇಳಿದಂತೆ ಮಾಡುವುದರ ಕಡೆಗೆ ಇರಬೇಕು. ಈ ರೀತಿಯಲ್ಲಿ ಮಾಡಿದರೆ ಮಾತ್ರ ಜೀವಗಳಿಗೆ ನಿಜವಾದ ಲಾಭವು ಸಿಗುತ್ತದೆ. ಯಾವುದೇ ಒಂದು ಸಮಾರಂಭ ಅಥವಾ ಕಾರ್ಯವು ಯಶಸ್ವಿಯಾಗಲು ದೇವತೆಗಳ ಆಶೀರ್ವಾದ ಸಿಗುವುದು ಅವಶ್ಯಕವಾಗಿರುತ್ತದೆ. ಹಿಂದೂಧರ್ಮದಲ್ಲಿ ಹೇಳಿದಂತೆ ಉದ್ಘಾಟನೆಯನ್ನು ಮಾಡಿದರೆ ಕಾರ್ಯಸ್ಥಳದಲ್ಲಿ ದೇವತೆಗಳ ಲಹರಿಗಳು ಬಂದು ಸಂರಕ್ಷಣಾಕವಚವು ನಿರ್ಮಾಣವಾಗಿ ಅಲ್ಲಿರುವ ತೊಂದರೆದಾಯಕ ಸ್ಪಂದನಗಳು ನಿಂತುಹೋಗುತ್ತವೆ. ಆದುದರಿಂದ ಅಧ್ಯಾತ್ಮಶಾಸ್ತ್ರದಲ್ಲಿ ಹೇಳಿದಂತಹ ವಿಧಿಗಳ ಪಾಲನೆಯನ್ನು ಮಾಡಿ ಉದ್ಘಾಟನೆಯನ್ನು ಮಾಡಬೇಕು.

ಇ. ಉದ್ಘಾಟನೆಯನ್ನು ಮಾಡುವ ಪದ್ಧತಿ: ತೆಂಗಿನಕಾಯಿಯನ್ನು ಒಡೆಯುವುದು ಮತ್ತು ದೀಪಪ್ರಜ್ವಲನವನ್ನು ಮಾಡುವ ವಿಧಿಗಳು ವಾಸ್ತುಶುದ್ಧಿಯಲ್ಲಿನ ಅಂದರೆ ಉದ್ಘಾಟನೆಯಲ್ಲಿನ ಮಹತ್ವದ ವಿಧಿಗಳಾಗಿವೆ.

ಇ. ೧. ವ್ಯಾಸಪೀಠದ ಮೇಲಿನ ಕಾರ್ಯಕ್ರಮದ ಉದ್ಘಾಟನೆ: ಚರ್ಚಾಗೋಷ್ಠಿಗಳು, ಸಾಹಿತ್ಯ ಸಮ್ಮೇಳನಗಳು, ಸಂಗೀತ ಮಹೋತ್ಸವಗಳು ಇತ್ಯಾದಿಗಳನ್ನು ದೀಪವನ್ನು ಪ್ರಜ್ವಲಿಸಿ ಉದ್ಘಾಟನೆ ಮಾಡುತ್ತಾರೆ. ವ್ಯಾಸಪೀಠದ ತಯಾರಿಯನ್ನು ಮಾಡುವುದಕ್ಕಿಂತ ಮೊದಲು ತೆಂಗಿನಕಾಯಿಯನ್ನು ಒಡೆಯಬೇಕು ಮತ್ತು ಪ್ರತ್ಯಕ್ಷ ಉದ್ಘಾಟನೆಯನ್ನು ಮಾಡುವ ಸಮಯದಲ್ಲಿ ದೀಪಪ್ರಜ್ವಲನವನ್ನು ಮಾಡಬೇಕು. ತೆಂಗಿನಕಾಯಿಯನ್ನು ಒಡೆಯುವುದರ ಹಿಂದೆ ಕಾರ್ಯಸ್ಥಳವು ಶುದ್ಧಿಯಾಗಬೇಕೆಂಬ ಉದ್ದೇಶವಿರುತ್ತದೆ. ವ್ಯಾಸಪೀಠವು ಜ್ಞಾನದಾನಕ್ಕೆ ಸಂಬಂಧಿಸಿರುವುದರಿಂದ, ಅಂದರೆ ಅದು ಜ್ಞಾನಪೀಠವಾಗಿರುವುದರಿಂದ ಅಲ್ಲಿ ದೀಪಕ್ಕೆ ಮಹತ್ವವಿದೆ.

ಇ. ೨. ಅಂಗಡಿಗಳು, ಕಛೇರಿಗಳು ಇತ್ಯಾದಿಗಳ ಉದ್ಘಾಟನೆ: ಅಂಗಡಿ, ಕಛೇರಿ ಇತ್ಯಾದಿಗಳು ಹೆಚ್ಚಾಗಿ ವ್ಯವಹಾರಕ್ಕೆ ಸಂಬಂಧಿಸಿರುವುದರಿಂದ ಅವುಗಳ ಉದ್ಘಾಟನೆಯನ್ನು ಮಾಡುವಾಗ ದೀಪಪ್ರಜ್ವಲನೆಯನ್ನು ಮಾಡುವುದು ಆವಶ್ಯಕವಾಗಿರುವುದಿಲ್ಲ. ಆದುದರಿಂದ ಕೇವಲ ತೆಂಗಿನಕಾಯಿಯನ್ನು ಒಡೆದು ಉದ್ಘಾಟನೆಯನ್ನು ಮಾಡಬೇಕು.

ಇ. ೨ಅ. ಸಂತರಿಂದ ಉದ್ಘಾಟನೆ ಮಾಡುವ ಉದ್ದೇಶ: ಸಂತರ ಅಸ್ತಿತ್ವದಿಂದ ಬ್ರಹ್ಮಾಂಡದಲ್ಲಿನ ಆವಶ್ಯಕ ದೇವತೆಗಳ ಸೂಕ್ಷ್ಮತರ ಲಹರಿಗಳು ಕಾರ್ಯಸ್ಥಳದಲ್ಲಿ ಆಕರ್ಷಿತವಾಗುತ್ತವೆ ಮತ್ತು ಕಾರ್ಯನಿರತವಾಗುತ್ತವೆ. ಇದರಿಂದ ವಾತಾವರಣವು ಚೈತನ್ಯಮಯ ಮತ್ತು ಶುದ್ಧವಾಗಿ ಕಾರ್ಯಸ್ಥಳದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗುತ್ತದೆ; ಆದುದರಿಂದ ಸಂತರು ಉದ್ಘಾಟನೆಯನ್ನು ಮಾಡಿದರೆ ತೆಂಗಿನಕಾಯಿಯನ್ನು ಒಡೆಯುವ ಆವಶ್ಯಕತೆಯಿರುವುದಿಲ್ಲ.

೧. ಈ. ಪಾಶ್ಚಾತ್ಯ ಸಂಸ್ಕೃತಿಯಂತೆ ರಿಬ್ಬನ್‌ನ್ನು ಕತ್ತರಿಸಿ ಏಕೆ ಉದ್ಘಾಟನೆ ಮಾಡಬಾರದು?

ಯಾವುದೇ ಒಂದು ವಸ್ತುವನ್ನು ಕತ್ತರಿಸುವುದು ವಿಧ್ವಂಸಕ ವೃತ್ತಿಯ ದ್ಯೋತಕವಾಗಿದೆ. ರಿಬ್ಬನ್‌ನ್ನು ಕತ್ತರಿಸುವುದು ಎಂದರೆ ರಿಬ್ಬನ್‌ನ ಅಖಂಡತೆಯನ್ನು ಭಂಗ ಮಾಡುವುದು ಅಥವಾ ಲಯ ಮಾಡುವುದು. ಯಾವುದರಿಂದ ಲಯವು ಸಾಧ್ಯವಾಗುತ್ತದೆಯೋ ಅಂತಹ ಕೃತಿಯು ತಾಮಸಿಕತೆಯ ಲಕ್ಷಣವಾಗಿದೆ. ರಿಬ್ಬನ್ ಕತ್ತರಿಸುವ ತಾಮಸಿಕ ಕೃತಿಯಿಂದ ಉದ್ಘಾಟನೆಯನ್ನು ಮಾಡಿದರೆ ವಾಸ್ತುವಿನಲ್ಲಿನ ತೊಂದರೆದಾಯಕ ಸ್ಪಂದನಗಳ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.

ಸಾಮಾನ್ಯ ವ್ಯಕ್ತಿಗಳು ರಾಜಸಿಕ ಮತ್ತು ತಾಮಸಿಕ ವೃತ್ತಿಯವರಾಗಿರುತ್ತಾರೆ. ರಿಬ್ಬನ್ ಕತ್ತರಿಸಿ ಉದ್ಘಾಟನೆ ಮಾಡುವಾಗ ಅವರಲ್ಲಿನ ಅಹಂಭಾವವು ಜಾಗೃತವಾಗುತ್ತದೆ. ಅವರ ದೇಹದಿಂದ ಪ್ರಕ್ಷೇಪಿತವಾಗುವ ರಜ-ತಮಾತ್ಮಕ ಲಹರಿಗಳಿಂದಾಗಿ ಅವರ ಸುತ್ತಲೂ ಇರುವ ವಾಯುಮಂಡಲ ಮತ್ತು ಅವರ ಕೈಯಲ್ಲಿರುವ ಕತ್ತರಿಯೂ ರಜ-ತಮಕಣಗಳಿಂದ ತುಂಬಿಹೋಗುತ್ತದೆ. ಇಂತಹ ಕತ್ತರಿಯ ಸ್ಪರ್ಶದಿಂದ ರಿಬ್ಬನ್‌ನ ಸುತ್ತಲೂ ಇರುವ ವಾಯುಮಂಡಲದಲ್ಲಿನ ರಜ-ತಮ ಕಣಗಳಿಗೆ ವೇಗವು ಪ್ರಾಪ್ತವಾಗುತ್ತದೆ ಮತ್ತು ಕತ್ತರಿಯಿಂದ ರಿಬ್ಬನ್‌ನ್ನು ಕತ್ತರಿಸುವುದರಿಂದ ತುಂಡಾಗುವ ರಿಬ್ಬನ್‌ನಿಂದ ಕಾರಂಜಿಯಂತಹ ರಜ-ತಮಾತ್ಮಕ ಗತಿಮಾನ ಲಹರಿಗಳು ಸಂಪೂರ್ಣ ವಾಯುಮಂಡಲದಲ್ಲಿ ಪ್ರಕ್ಷೇಪಿತವಾಗುತ್ತವೆ. ಹಿಂದೂ ಧರ್ಮವು ತೊಂದರೆದಾಯಕ ಲಹರಿಗಳನ್ನು ನಿರ್ಮಾಣ ಮಾಡುವ ಕೃತಿಗಳನ್ನು ಮಾಡಲು ಕಲಿಸುವುದಿಲ್ಲ, ಆದುದರಿಂದ ರಿಬ್ಬನ್‌ನ್ನು ಕತ್ತರಿಸಿ ಉದ್ಘಾಟನೆಯನ್ನು ಮಾಡಬಾರದು.

– ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ ೧೮.೧.೨೦೦೫, ಮಧ್ಯಾಹ್ನ ೫.೫೨)

(ಹೆಚ್ಚಿನ ಮಾಹಿತಿ ಮತ್ತು ವಿವರವಾಗಿ ಓದಿ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಕೌಟುಂಬಿಕ ಮತ್ತು ಸಾಮಾಜಿಕ ಧಾರ್ಮಿಕ ಕೃತಿಯ ಹಿಂದಿನ ಶಾಸ್ತ್ರ’)

 

1 thought on “ಉದ್ಘಾಟನೆ ಎಂದರೇನು ಮತ್ತು ಹೇಗೆ ಮಾಡಬೇಕು?”

Leave a Comment