ಪೂಜೆ ಮಾಡುವಾಗ ದೇವತೆ, ಸಂತರು ಅಥವಾ ಗುರುಗಳು ಪ್ರತ್ಯಕ್ಷ ಎದುರಿಗಿದ್ದಾರೆ ಎಂಬ ಭಾವವಿಟ್ಟು ಅವರ ಪೂಜೆ ಮಾಡಿರಿ !
೧. ಪೂಜೆಯ ಸಮಯದಲ್ಲಾಗುವ ಅಯೋಗ್ಯ ಕೃತಿ ಪೂಜೆ ಮಾಡುವಾಗ ಮನೆಮನೆಗಳಲ್ಲಿ ಮುಂದಿನ ಅಯೋಗ್ಯ ಕೃತಿಗಳಾಗುವುದು ಕಂಡು ಬರುತ್ತದೆ.
ಅ. ದೇವತೆಯ ಚಿತ್ರ ಅಥವಾ ಮೂರ್ತಿಯನ್ನು ತಲೆಯ ಬದಿಯಿಂದ ಒಂದು ಕೈಯಿಂದ ಎತ್ತುವುದು ಮತ್ತು ತೂಗಾಡುವಂತೆ ಹಿಡಿಯುವುದು.
ಆ. ದೇವತೆಯ ಚಿತ್ರ/ಮೂರ್ತಿ ಅಥವಾ ಸಂತರ/ಗುರುಗಳ ಛಾಯಾಚಿತ್ರವನ್ನು ಒಟ್ಟಾರೆ ಒರೆಸುತ್ತಾರೆ.
ಇ. ಗಂಧ, ಕುಂಕುಮ ಹೇಗೇಗೋ ಹಚ್ಚುತ್ತಾರೆ. ಅದು ದೇವತೆಯ ಕಣ್ಣುಗಳಲ್ಲಿ ಹೋಗಿರುತ್ತದೆ ಅಥವಾ ಕುಂಕುಮದಿಂದ, ಗಂಧದಿಂದ ದೇವತೆಯ ಮುಖ ಮುಚ್ಚಲ್ಪಡುತ್ತದೆ.
ಈ. ಹೂವುಗಳನ್ನು ಹೇಗೇಗೋ ಅರ್ಪಿಸುತ್ತಾರೆ. ಅವು ಚಿತ್ರ ಅಥವಾ ಮೂರ್ತಿಗೆ ತಕ್ಕಂತಹ ಆಕಾರದ್ದಿರುವುದಿಲ್ಲ. ಇದರಿಂದ ಚಿತ್ರ ಅಥವಾ ಮೂರ್ತಿ ಮುಚ್ಚಲ್ಪಡುತ್ತದೆ.
ಉ. ಪೂಜೆ ಮಾಡುವಾಗ ಇತರೆಡೆ ಗಮನವಿರುತ್ತದೆ ಅಥವಾ ಇತರರೊಂದಿಗೆ ಅನಾವಶ್ಯಕವಾಗಿ ಮಾತನಾಡುತ್ತಾರೆ.
ಇವೆಲ್ಲವು ಪೂಜೆ ಮಾಡಬೇಕೆಂದು ಮಾಡುವುದು ಮತ್ತು ಭಾವದ ಅಭಾವದ ಲಕ್ಷಣಗಳ ಉದಾಹರಣೆಗಳಾಗಿವೆ. ಇದರಿಂದ ಪೂಜೆ ಮಾಡುವ ಆಧ್ಯಾತ್ಮಿಕ ಲಾಭವಂತೂ ಸಿಗುವುದೇ ಇಲ್ಲ, ತದ್ವಿರುದ್ಧ ದೇವರ ಅವಕೃಪೆಯಾಗುತ್ತದೆ. ಇದರಿಂದ ಹಿಂದೂಗಳಿಗೆ ಇಂತಹ ಚಿಕ್ಕಪುಟ್ಟ ವಿಷಯಗಳ ಬಗ್ಗೆ ಧರ್ಮ ಶಿಕ್ಷಣ ನೀಡುವುದು ಎಷ್ಟು ಆವಶ್ಯಕತೆಯಿದೆ ಎಂಬುದು ಗಮನಕ್ಕೆ ಬರುತ್ತದೆ!
೨. ಪೂಜೆಯ ಸಮಯದಲ್ಲಿ ಮಾಡಬೇಕಾದ ಯೋಗ್ಯ ಕೃತಿಗಳು ಮುಂದಿನಂತೆ ಪೂಜೆ ಮಾಡಿದ್ದಲ್ಲಿ ನಿಶ್ಚಿತವಾಗಿಯೂ ಪೂಜೆಯ ಲಾಭವಾಗುತ್ತದೆ.
ಅ. ದೇವತೆಯ ಚಿತ್ರ ಅಥವಾ ಮೂರ್ತಿಗಳನ್ನು ಎರಡೂ ಕೈಗಳಿಂದ, ನಿಧಾನವಾಗಿ ಮತ್ತು ಮಧ್ಯಭಾಗದಲ್ಲಿ ಹಿಡಿದು ಎತ್ತಬೇಕು.
ಆ. ದೇವತೆ, ಸಂತರು ಅಥವಾ ಗುರುಗಳನ್ನು ಒರೆಸುವಾಗ ಅವರು ಪ್ರತ್ಯಕ್ಷ ಅಲ್ಲಿದ್ದಾರೆಂಬ ಭಾವವಿಟ್ಟು ಮತ್ತು ನಾವು ಒರೆಸುತ್ತಿದ್ದೇವೆ ಎಂದು ಅವರಿಗೆ ಹೇಳಿ ಮೇಲಿನಿಂದ ಕೆಳಗಿನ ವರೆಗೆ ಅವರ ಒಂದೊಂದು ಅವಯವಗಳನ್ನು ನಿಧಾನವಾಗಿ ಒರೆಸಬೇಕು. ತಾಯಿಯು ಮಗುವಿಗೆ ಹೇಗೆ ಸ್ನಾನ ಮಾಡಿಸುತ್ತಾಳೆ ? “ಈಗ ನಿನಗೆ ಸ್ನಾನ ಮಾಡಿಸುತ್ತೇನೆ ಆಯಿತಾ, ನೀನು ಕಣ್ಣು ಮುಚ್ಚಿಕೋ, ಆಗ ಕಣ್ಣುಗಳಲ್ಲಿ ನೀರು ಹೋಗುವುದಿಲ್ಲ” ಎಂದು ಮಗುವಿಗೆ ಹೇಳುತ್ತಾಳೆ. ಮಗುವಿನೊಂದಿಗೆ ಮಾತನಾಡುತ್ತಾ, ಅದರ ಕಲ್ಪನೆ ನೀಡಿ ಮಗುವಿನ ಕಾಳಜಿ ವಹಿಸುತ್ತಾ ಸ್ನಾನ ಮಾಡಿಸುತ್ತಾಳೆ. ಅದೇ ರೀತಿಯಲ್ಲಿ ನಾವು ಕೂಡಾ ದೇವತೆಯ ಚಿತ್ರ/ಮೂರ್ತಿ ಅಥವಾ ಸಂತರು/ಗುರುಗಳ ಛಾಯಾಚಿತ್ರವನ್ನು ಒರೆಸಬೇಕು. ಆ ಕೃತಿಯು ಭಾವಪೂರ್ಣ ವಾಗಿರಬೇಕು. ಚಿತ್ರ ಅಥವಾ ಛಾಯಾಚಿತ್ರವನ್ನು ಒರೆಸುವಾಗ ಅದರಲ್ಲಿಯ ದೇವತೆ, ಸಂತರು ಅಥವಾ ಗುರುಗಳನ್ನು ಮೊದಲು ಒರೆಸಬೇಕು ಮತ್ತು ನಂತರ ಅದರಲ್ಲಿನ ಇತರ ಭಾಗವನ್ನು ಒರೆಸಬೇಕು.
ಇ. ದೇವತೆಗೆ ಅಥವಾ ಗುರುಗಳಿಗೆ ಗಂಧ, ಕುಂಕುಮವನ್ನು ಹಚ್ಚುವಾಗ ಅದನ್ನು ಸರಿಯಾಗಿ ಹಣೆಯ ಮೇಲೆ ಮತ್ತು ಕಣ್ಣುಗಳಿಗೆ ಹೋಗದಂತೆ ಯೋಗ್ಯ ಆಕಾರದಲ್ಲಿ ಹಚ್ಚಬೇಕು. ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸಲಿಕ್ಕಿದ್ದರೆ ಅದನ್ನು ಚರಣಗಳಲ್ಲಿ ಹಾಕಬೇಕು.
ಈ. ಯೋಗ್ಯವಾದ ಮತ್ತು ಯೋಗ್ಯ ಆಕಾರದ ಹೂವುಗಳನ್ನು ಅರ್ಪಿಸಬೇಕು. ಅವುಗಳ ರಚನೆ ಸಾತ್ತ್ವಿಕವಿರಬೇಕು.
ಉ. ಪೂಜೆ ಮಾಡುವಾಗ ಇತರೆಡೆ ಗಮನವಿರಬಾರದು. ತಲ್ಲೀನರಾಗಿ ಮನೋಭಾವದಿಂದ ಪೂಜೆ ಮಾಡಬೇಕು. ಹೀಗೆ ಮಾಡಿದರೆ ಮಾತ್ರ ಆ ದೇವತೆ, ಸಂತರು ಅಥವಾ ಗುರುಗಳ ತತ್ತ್ವ ಜಾಗೃತವಾಗಿ ನಮಗೆ ಅದರ ಲಾಭವಾಗುತ್ತದೆ. – ಪ.ಪೂ. ಡಾ. ಜಯಂತ ಆಠವಲೆ, ಸ್ಥಾಪಕರು, ಸನಾತನ ಸಂಸ್ಥೆ (೨೦.೧.೨೦೧೪)
ನಿಜವಾದ ಕ್ಷಮೆಯಾಚನೆ !
ಪೂಜೆಯ ಕೊನೆಗೆ ಕ್ಷಮೆಯಾಚನೆ ಮಾಡುವಾಗ ಮುಂದಿನ ಶ್ಲೋಕವನ್ನು ಹೇಳುತ್ತಾರೆ,
ಅಪರಾಧಸಹಸ್ರಾಣಿ ಕ್ರಿಯಂತೇರ್ನಿಶಂ ಮಯಾ|
ದಾಸೋಯಮಿತಿ ಮಾಂ ಮತ್ವಾ ಕ್ಷಮಸ್ವ ಪರಮೇಶ್ವರ||
ಅರ್ಥ: ಹೇ ಭಗವಂತಾ, ನಾನು ಪ್ರತಿದಿನ ಸಾವಿರಾರು ಅಪರಾಧಗಳನ್ನು ಮಾಡುತ್ತಿರುತ್ತೇನೆ. ಹೇ ಪರಮೇಶ್ವರಾ, ನಾನು ನಿನ್ನ ದಾಸನಾಗಿದ್ದೇನೆ ಎಂದು ತಿಳಿದು ನನ್ನನ್ನು ಕ್ಷಮಿಸು!
ನಾನು ಭಗವಂತನ ದಾಸನಾಗಿದ್ದೇನೆ ಎಂಬ ಉತ್ಕಟ ಅರಿವಿನೊಂದಿಗೆ ಅಪರಾಧಿ ಭಾವಜಾಗೃತವಾಗಿ ಅಹಂಭಾವ ಕಡಿಮೆಯಾದರೆ ಮಾತ್ರ ನಿಜವಾದ ಅರ್ಥದಿಂದ ಕ್ಷಮೆ ಕೇಳಿದಂತಾಗುತ್ತದೆ ಮತ್ತು ಅದೇ ಸಮಯದಲ್ಲಿ ಈಶ್ವರನೂ ಕ್ಷಮಿಸುತ್ತಾನೆ. ಇಲ್ಲದಿದ್ದರೆ ಕ್ಷಮೆ ಕೇಳುವುದು ಕೇವಲ ಶಬ್ದದಲ್ಲಿ ತೋರಿಕೆಗೆ ಮಾತ್ರ ಇರುತ್ತದೆ. – ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೧.೧.೨೦೧೪)