ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯುವುದರ ಮಹತ್ವ
ಅ. ತೆಂಗಿನಕಾಯಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಹೀಗೆ ಎರಡೂ ರೀತಿಯ ಲಹರಿಗಳು ಸೆಳೆಯಲ್ಪಡುತ್ತವೆ ಅಲ್ಲದೇ, ತೆಂಗಿನಕಾಯಿಯಲ್ಲಿ ರಜ-ತಮಾತ್ಮಕ ಲಹರಿಗಳು ಕಡಿಮೆ ಸಮಯದಲ್ಲಿ ಆಕರ್ಷಿಸುತ್ತವೆ. ತೆಂಗಿನಕಾಯಿಯು ಸಾತ್ತ್ವಿಕವಾಗಿರುವುದರಿಂದ ಬಹಳಷ್ಟು ರಜ-ತಮಾತ್ಮಕ ಲಹರಿಗಳು ಅದರ ಒಳಗೆ ವಿಘಟನೆಯಾಗುತ್ತವೆ.
ಆ. ತೆಂಗಿನಕಾಯಿಯಲ್ಲಿ ದೃಷ್ಟಿ ತೆಗೆಯುವ ಕ್ಷಮತೆಯು ಇತರ ವಸ್ತುಗಳಿಗಿಂತ ಹೆಚ್ಚಿರುವುದರಿಂದ, ವ್ಯಕ್ತಿಯ ಸೂಕ್ಷ್ಮದೇಹದಲ್ಲಿರುವ ಕಪ್ಪು ಶಕ್ತಿಯ ಆವರಣವನ್ನು ಸೆಳೆದುಕೊಳ್ಳುವಲ್ಲಿ ಅದು ಶ್ರೇಷ್ಠವಾಗಿದೆ. ಯಾವುದೇ ರೀತಿಯ ದೊಡ್ಡ ದೃಷ್ಟಿಯೂ ಸಹ ತೆಂಗಿನಕಾಯಿಯಿಂದ ಕಡಿಮೆಯಾಗುತ್ತದೆ.
ಇ. ತೆಂಗಿನಕಾಯಿಯು ಸರ್ವಸಮಾವೇಶಕವಾಗಿರುವುದರಿಂದ ಅದು ಎಲ್ಲ ವಿಧದ ದೃಷ್ಟಿಯನ್ನು ಅಥವಾ ಮಾಟವನ್ನು ತೆಗೆಯಲು ಉಪಯುಕ್ತವಾಗಿದೆ.
ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯುವ ಪದ್ಧತಿ
ಅ. ಪ್ರಾರ್ಥನೆ
೧. ದೃಷ್ಟಿ ತಗಲಿರುವ ವ್ಯಕ್ತಿಯು ಮಾರುತಿಗೆ ನಮಸ್ಕರಿಸಿ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು : ‘ಹೇ ಮಾರುತಿ, ನನ್ನಲ್ಲಿರುವ (ತಮ್ಮ ಹೆಸರನ್ನು ಹೇಳಬೇಕು) ಎಲ್ಲ ತ್ರಾಸದಾಯಕ ಸ್ಪಂದನಗಳನ್ನು ಈ ತೆಂಗಿನಕಾಯಿಯಲ್ಲಿ ಆಕರ್ಷಿಸಿ ನಾಶಗೊಳಿಸು.’
೨. ದೃಷ್ಟಿ ತೆಗೆಯುವ ವ್ಯಕ್ತಿಯು ಮಾರುತಿಗೆ ನಮಸ್ಕರಿಸಿ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು : ‘ಹೇ ಮಾರುತಿ, ದೃಷ್ಟಿ ತಗಲಿದ ವ್ಯಕ್ತಿಯ (ವ್ಯಕ್ತಿಯ ಹೆಸರನ್ನು ಹೇಳಬೇಕು) ದೇಹದಲ್ಲಿನ ಹಾಗೂ ದೇಹದ ಹೊರಗಿನ ಎಲ್ಲ ತ್ರಾಸದಾಯಕ ಸ್ಪಂದನಗಳನ್ನು ನೀನು ಈ ತೆಂಗಿನಕಾಯಿಯಲ್ಲಿ ಸೆಳೆದುಕೊಂಡು ನಾಶಗೊಳಿಸು. ದೃಷ್ಟಿಯನ್ನು ತೆಗೆಯುವಾಗ ನಿನ್ನ ಕೃಪೆಯಿಂದ ನನ್ನ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗಲಿ.’
ಆ. ಕೃತಿ
೧. ಯಾವ ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯಬೇಕಾಗಿದೆಯೋ, ಆ ತೆಂಗಿನಕಾಯಿಯ ಜುಟ್ಟನ್ನು ಬಿಟ್ಟು ಉಳಿದ ಸಿಪ್ಪೆಯನ್ನು ಸುಲಿಯಬೇಕು.
೨. ದೃಷ್ಟಿಯನ್ನು ತೆಗೆಯುವವನು ತೆಂಗಿನಕಾಯಿಯನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಂಡು ದೃಷ್ಟಿ ತಗಲಿದ ವ್ಯಕ್ತಿಯ ಎದುರು ನಿಲ್ಲಬೇಕು. ತೆಂಗಿನಕಾಯಿಯ ಜುಟ್ಟಿನ ತುದಿಯು ದೃಷ್ಟಿ ತಗಲಿದ ವ್ಯಕ್ತಿಯ ಕಡೆಗಿರಬೇಕು.
೩. ದೃಷ್ಟಿ ತೆಗೆಸಿಕೊಳ್ಳುವವನು ತೆಂಗಿನಕಾಯಿಯ ಜುಟ್ಟಿನ ಕಡೆಗೆ ನೋಡುತ್ತಿರಬೇಕು.
೪. ದೃಷ್ಟಿ ತಗಲಿದ ವ್ಯಕ್ತಿಯ ಕಾಲಿನಿಂದ ತಲೆಯವರೆಗೆ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತೆಂಗಿನಕಾಯಿಯನ್ನು ವರ್ತುಲಾಕಾರದಲ್ಲಿ ಮೂರು ಸಲ ತಿರುಗಿಸಬೇಕು. ನಂತರ ಆ ವ್ಯಕ್ತಿಯ ಸುತ್ತಲೂ ಮೂರು ಸಲ ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆಯನ್ನು ಹಾಕುವಾಗ ತೆಂಗಿನಕಾಯಿಯ ಜುಟ್ಟು ಸತತವಾಗಿ ದೃಷ್ಟಿ ತಗಲಿದ ವ್ಯಕ್ತಿಯ ಕಡೆಗಿರಬೇಕು. (ಎಲ್ಲರನ್ನು ಒಟ್ಟಿಗೆ ಕೂರಿಸಿ ಸಾಮೂಹಿಕ ದೃಷ್ಟಿಯನ್ನೂ ತೆಗೆಯಬಹುದು.)
ದೃಷ್ಟಿಯನ್ನು ತೆಗೆದ ನಂತರ ತೆಂಗಿನಕಾಯಿಯನ್ನು ಏನು ಮಾಡಬೇಕು?
ಅ. ದೃಷ್ಟಿ ತಗಲಿರುವ ವ್ಯಕ್ತಿಗೆ ಮಂದ ಅಥವಾ ಮಧ್ಯಮ ತೊಂದರೆಯಿದ್ದರೆ, ದೃಷ್ಟಿ ತೆಗೆದ ತೆಂಗಿನಕಾಯಿಯನ್ನು ಮೂರ‍್ದಾರಿಯ ಮೇಲೆ (ಮೂರು ದಾರಿಗಳು ಒಂದಾಗುವ ಸ್ಥಳದಲ್ಲಿ) ಒಡೆಯಬೇಕು.
ಆ. ದೃಷ್ಟಿ ತಗಲಿರುವ ವ್ಯಕ್ತಿಗೆ ತೀವ್ರ ತೊಂದರೆಯಿದ್ದರೆ ದೃಷ್ಟಿಯನ್ನು ತೆಗೆದ ತೆಂಗಿನಕಾಯಿಯನ್ನು ಮಾರುತಿಯ (ಹನುಮಂತನ) ದೇವಸ್ಥಾನದಲ್ಲಿ ಒಡೆಯಬೇಕು. ಮಾರುತಿಯ ದೇವಸ್ಥಾನವು ಹತ್ತಿರವಿಲ್ಲದಿದ್ದರೆ, ಇತರ ಯಾವುದಾದರೂ ಜಾಗೃತ ದೇವತೆಯ ಅಥವಾ ಉಚ್ಚ ದೇವತೆಯ ದೇವಸ್ಥಾನದ ಮೆಟ್ಟಿಲುಗಳ ಮೇಲೆ ತೆಂಗಿನಕಾಯಿಯನ್ನು ಒಡೆಯಬೇಕು. ಕೆಲವರು ತೆಂಗಿನಕಾಯಿಯನ್ನು ದೇವಸ್ಥಾನದ ಮೆಟ್ಟಿಲುಗಳ ಮೇಲಿಟ್ಟು ಹೋಗುತ್ತಾರೆ, ಹೀಗೆ ಮಾಡುವುದು ಅಯೋಗ್ಯವಾಗಿದೆ. ತೆಂಗಿನಕಾಯಿಯನ್ನು ಮೆಟ್ಟಿಲುಗಳ ಮೇಲೆ ಒಡೆದು ಹೋಗಬೇಕು.
ವ್ಯಕ್ತಿಗೆ ತೀವ್ರ ತೊಂದರೆಯಿದ್ದರೆ ತೆಂಗಿನಕಾಯಿಯನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬಹುದು.
ಇ. ಮೇಲಿನಂತೆ ಯಾವುದನ್ನೂ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ‘ಮಾರುತಿಯ ಸಾತ್ತ್ವಿಕ ಚಿತ್ರ’ವನ್ನು ವಾಸ್ತುವಿನ ಬಳಿ ಪೂಜಿಸಿ, ಮಾರುತಿಯಲ್ಲಿ ಕೆಟ್ಟ ಶಕ್ತಿಗಳನ್ನು ನಾಶಮಾಡಲು ಪ್ರಾರ್ಥನೆಯನ್ನು ಮಾಡಿ, ಅವನೆದುರು ದೃಷ್ಟಿಯನ್ನು ತೆಗೆದ ತೆಂಗಿನಕಾಯಿಯನ್ನು ಒಡೆಯಬೇಕು.
ತೆಂಗಿನಕಾಯಿಯನ್ನು ಒಡೆಯುವಾಗ ಅಥವಾ ನೀರಿನಲ್ಲಿ ವಿಸರ್ಜನೆ ಮಾಡುವಾಗ ‘ಬಜರಂಗಬಲಿ ಹನುಮಾನಕಿ ಜೈ’ ಅಥವಾ ‘ಹನುಮಂತನಿಗೆ ಜಯವಾಗಲಿ!’ ಎಂದು ಮೂರು ಸಲ ಜಯಘೋಷ ಮಾಡಬೇಕು.
ಇತರ ಸಮಯದಲ್ಲಿ ದೇವರಿಗೆ ನೈವೇದ್ಯವೆಂದು ಅರ್ಪಿಸಿದ ತೆಂಗಿನಕಾಯಿಯ ಕೊಬ್ಬರಿಯನ್ನು ಪ್ರಸಾದವೆಂದು ಸ್ವೀಕರಿಸಬೇಕು; ಆದರೆ ದೃಷ್ಟಿಯನ್ನು ತೆಗೆದ ತೆಂಗಿನಕಾಯಿಯ ಕೊಬ್ಬರಿಯನ್ನು ಪ್ರಸಾದವೆಂದು ಸ್ವೀಕರಿಸಬಾರದು; ಏಕೆಂದರೆ ತೆಂಗಿನಕಾಯಿಯಲ್ಲಿ ಸೆಳೆಯಲ್ಪಟ್ಟ ಕೆಟ್ಟ ಶಕ್ತಿಗಳಿಂದ ತೊಂದರೆಯಾಗಬಹುದು.
(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ನಿರ್ಮಿಸಿದ ಗ್ರಂಥ: ‘ದೃಷ್ಟಿ ತಗಲುವುದು ಮತ್ತು ತೆಗೆಯುವುದು ಇವುಗಳ ಹಿಂದಿನ ಅಧ್ಯಾತ್ಮಶಾಸ್ತ್ರ’)
Jai sri raam