ದೀಪಾವಳಿಯ ಲಕ್ಷ್ಮೀಪೂಜೆಯ ಸಮಯದಲ್ಲಿ ಸಂಪೂರ್ಣ ವರ್ಷದ ಆದಾಯ-ಖರ್ಚಿನ ಲೆಕ್ಕಾಚಾರದ ಪುಸ್ತಕವನ್ನು ಲಕ್ಷ್ಮೀಯ ಮುಂದಿಟ್ಟು ಶ್ರೀ ಲಕ್ಷ್ಮೀದೇವಿಗೆ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು,
‘ಹೇ ಲಕ್ಷ್ಮೀ, ನಿನ್ನ ಆಶೀರ್ವಾದದಿಂದ ದೊರೆತ ಧನವನ್ನು ನಾವು ಸತ್ಕಾರ್ಯಕ್ಕಾಗಿ ಮತ್ತು ಈಶ್ವರೀಕಾರ್ಯವೆಂದು ಉಪಯೋಗಿಸಿದ್ದೇವೆ. ಅದನ್ನು ತಾಳೆ ಮಾಡಿ ನಿನ್ನ ಮುಂದಿಟ್ಟಿದ್ದೇವೆ. ಅದಕ್ಕೆ ನಿನ್ನ ಒಪ್ಪಿಗೆಯಿರಲಿ. ಮುಂದಿನ ವರ್ಷವೂ ನಮ್ಮ ಕಾರ್ಯವು ವ್ಯವಸ್ಥಿತವಾಗಿ ಪೂರ್ಣಗೊಳ್ಳಲಿ.
ನನ್ನ ಪಾಲನೆಪೋಷಣೆಗಾಗಿ ಚೈತನ್ಯವನ್ನು ನೀಡುವ, ನನ್ನ ಪ್ರತಿಯೊಂದು ಕಾರ್ಯದಲ್ಲಿ ಸಹಭಾಗಿಯಾಗಿರುವ ಭಗವಂತನು ನನ್ನಲ್ಲಿದ್ದು ಕಾರ್ಯವನ್ನು ಮಾಡುತ್ತಾನೆ. ಆದ್ದರಿಂದ ಅವನೂ ಈ ಹಣದಲ್ಲಿ ಪಾಲುದಾರನಾಗಿದ್ದಾನೆ. ನಾನು ಇಡೀ ವರ್ಷದಲ್ಲಿ ಎಷ್ಟು ಹಣವನ್ನು ಗಳಿಸಿದೆನು ಮತ್ತು ಅದನ್ನು ಹೇಗೆ ಉಪಯೋಗಿಸಿದೆನು, ಎಂಬುದರ ಸಂಪೂರ್ಣ ಲೆಕ್ಕಾಚಾರವನ್ನು ಈ ಜಮಾ-ಖರ್ಚಿನ ಪುಸ್ತಕದಲ್ಲಿ ನಮೂದಿಸಲಾಗಿದೆ. ಇಂದು ಅದನ್ನು ತಪಾಸಣೆಗಾಗಿ ನಿನ್ನ ಮುಂದೆ ಇಡಲಾಗಿದೆ. ನೀನು ಸಾಕ್ಷಿಯಾಗಿರುವಿ. ನಿನ್ನಿಂದ ನಾನು ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ನೀನು ನನ್ನ ಬಳಿ ಬಂದಾಗಿನಿಂದ ನಿನ್ನ ಗೌರವವನ್ನೇ ಮಾಡಿದ್ದೇನೆ. ನಿನ್ನ ವಿನಿಯೋಗವನ್ನು ಪ್ರಭುಕಾರ್ಯಕ್ಕಾಗಿಯೇ ಮಾಡಲಾಗಿದೆ; ಏಕೆಂದರೆ ಅದರಲ್ಲಿ ಪ್ರಭುವಿನ ಪಾಲೂ ಇದೆ. ಹೇ ಲಕ್ಷ್ಮೀದೇವೀ, ನೀನು ಸ್ವಚ್ಛ ಮತ್ತು ನಿಷ್ಕಳಂಕಳಾಗಿರುವಿ, ಆದ್ದರಿಂದ ನಾನು ನಿನ್ನನ್ನು ಕೆಟ್ಟ ಕೆಲಸಗಳಿಗೆ ಎಂದೂ ಉಪಯೋಗಿಸಲಿಲ್ಲ.
ಇದೆಲ್ಲವೂ ನನಗೆ ಶ್ರೀ ಸರಸ್ವತೀದೇವಿಯು ಮಾಡಿದ ಸಹಾಯದಿಂದಾಗಿ ಸಾಧ್ಯವಾಯಿತು. ಅವಳು ಎಂದಿಗೂ ನನ್ನ ವಿವೇಕವನ್ನು ಕಡಿಮೆಯಾಗಲು ಬಿಡಲಿಲ್ಲ. ಆದ್ದರಿಂದ ನನ್ನ ಆತ್ಮಬಲವು ಕಡಿಮೆಯಾಗಲಿಲ್ಲ. ನನಗೆ ಮತ್ತು ನನ್ನ ಕುಟುಂಬಕ್ಕೆ ಸುಖ ಮತ್ತು ಸಮಾಧಾನವು ಲಭಿಸಿತು. ನಾನು ಪ್ರಭುವಿನ ಸ್ಮರಣೆಯನ್ನಿಟ್ಟೇ ಈ ಖರ್ಚನ್ನು ಮಾಡಿದ್ದೇನೆ; ಅವನನ್ನು ಸಹಭಾಗಿ ಮಾಡಿಕೊಂಡಿದ್ದರಿಂದ ಅವನ ಸಹಾಯವೂ ದೊರೆಯಿತು. ‘ಒಂದು ವೇಳೆ ನಾನು ನಿನ್ನ ವಿನಿಯೋಗವನ್ನು ಯೋಗ್ಯ ರೀತಿಯಲ್ಲಿ ಮಾಡದಿದ್ದಲ್ಲಿ ನೀನು ನನ್ನನ್ನು ಬಿಟ್ಟು ಹೋಗುವೆ’, ಎಂಬುದರ ಅರಿವನ್ನು ನಾನು ಸತತವಾಗಿಟ್ಟುಕೊಳ್ಳುತ್ತೇನೆ. ಆದ್ದರಿಂದ ಹೇ ಲಕ್ಷ್ಮೀದೇವೀ, ನನ್ನ ಖರ್ಚಿಗೆ ಅನುಮತಿ ಕೊಡಲು ನೀನು ಭಗವಂತನ ಬಳಿ ನನ್ನ ಶಿಫಾರಸ್ಸು ಮಾಡು; ಏಕೆಂದರೆ ನಿನ್ನ ಶಿಫಾರಸ್ಸಾಗದೇ ಅವನು ಅದನ್ನು ಮನ್ನಿಸುವುದಿಲ್ಲ. ನನಗೆ ಏನಾದರೂ ತಪ್ಪುಗಳು ಕಂಡುಬಂದಲ್ಲಿ ಇನ್ನು ಮುಂದೆ ನಾನು ತಪ್ಪುಗಳಾಗದಂತೆ ನೋಡಿಕೊಳ್ಳುತ್ತೇನೆ. ಆದ್ದರಿಂದ ಹೇ ಲಕ್ಷ್ಮೀದೇವಿ ಮತ್ತು ಹೇ ಸರಸ್ವತೀದೇವಿ, ನೀವು ನನ್ನ ಮೇಲೆ ಕೃಪೆ ಮಾಡಿರಿ ಮತ್ತು ನನ್ನಿಂದ ಇಡಿ ಜನ್ಮದಲ್ಲಿ ಹಣದ ಹಿತಕಾರಕ ವಿನಿಯೋಗವೇ ಆಗಲಿ’.
(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)
Liked