ಕೆಲವರಿಗೆ ಯಜ್ಞವೆಂದರೆ ತುಪ್ಪ, ಎಳ್ಳು, ಅಕ್ಕಿ ಮುಂತಾದವುಗಳನ್ನು ವ್ಯರ್ಥವಾಗಿ ಸುಡುವುದು ಎಂದೆನಿಸುತ್ತದೆ. ಹಾಗಾಗಿ ಎಲ್ಲಿಯಾದರು ಯಜ್ಞಗಳಾದರೆ ‘ಸುಮ್ಮನೇ ಏಕೆ ಸುಡುತ್ತೀರಿ ? ಅದಕ್ಕಿಂತ ಬಡವರಿಗೆ ನೀಡಿರಿ. ಅವರ ಆತ್ಮತೃಪ್ತವಾಗುವುದು’ ಎಂದು ಅನೇಕರು ಹೇಳುತ್ತಾರೆ.
ಆದರೆ ಯಜ್ಞವೆಂದರೆ ಸುಡುವುದಲ್ಲ, ‘ಗಳಿಸಿಕೊಳ್ಳುವುದು ಮತ್ತು ಆಹುತಿಯಲ್ಲಿನ ಎಲ್ಲ ವಸ್ತುಗಳ ಶಕ್ತಿಯನ್ನು ಒಟ್ಟುಗೂಡಿಸುವುದು’ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಹೊಲದಲ್ಲಿ ಬೀಜವನ್ನು ಬಿತ್ತಿದ ನಂತರ ಸಸಿಯು ಹುಟ್ಟಿದಾಗ ಬೀಜದ ಶಕ್ತಿಯು ಮುಗಿಯುತ್ತದೆ; ಆದರೆ ಯಜ್ಞದಲ್ಲಿ ನೀಡಿದ ಆಹುತಿಯಲ್ಲಿನ ಬೀಜಗಳ ಸುಡುವಿಕೆಯಿಂದ ಶಕ್ತಿಯು ಹೆಚ್ಚಾಗುತ್ತದೆ ಎಂಬುದು ಆಯುರ್ವೇದದಲ್ಲಿ ಮಾಡಲಾಗುವ ತಾಮ್ರ, ಬೆಳ್ಳಿ, ಬಂಗಾರ, ವಜ್ರ ಇವುಗಳ ಭಸ್ಮದಿಂದ ಸಿದ್ಧವಾಗುತ್ತದೆ. ಬಂಗಾರವನ್ನು ಕುದಿಸಿ ಸೇವಿಸಿದರೆ ಅದರ ಗುಣ ನಮ್ಮಲ್ಲಿ ಬರಲು ಸಮಯ ತಗಲುತ್ತದೆ. ಆದರೆ ಅದರ ಬದಲು ಸ್ವರ್ಣಭಸ್ಮವನ್ನು ಸ್ವೀಕರಿಸಿದರೆ ಅದರಿಂದ ಕೂಡಲೇ ಲಾಭವಾಗುತ್ತದೆ. ಅಂದರೆ ಬಂಗಾರವನ್ನು ಸುಡುವುದರಿಂದ ಅದರ ಶಕ್ತಿ ಮುಗಿಯುವುದಿಲ್ಲ ಅದರ ಬದಲು ಹೆಚ್ಚಾಗುತ್ತದೆ. ಇದೇ ತತ್ತ್ವವು ಯಜ್ಞದ ದ್ರವ್ಯಗಳಿಗೂ ಅನ್ವಯಿಸುತ್ತದೆ. ಯಜ್ಞದಲ್ಲಿ ಆಹುತಿಯಾಗಿ ನೀಡಿದ ವಸ್ತುಗಳ ಭಸ್ಮವನ್ನು ಹೊಲದಲ್ಲಿ ಗೊಬ್ಬರವೆಂದು ಹಾಕಿದರೆ ಬೆಳೆಯು ಉತ್ತಮವಾಗಿ ಬರುತ್ತದೆ ಎಂಬುದು ಈಗ ಅನೇಕರಿಗೆ ಸ್ವತಃ ಅನುಭವಕ್ಕೆ ಬಂದಿದೆ. ಆದುದರಿಂದ ಯಜ್ಞವೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು ಎಂಬುದು ಸ್ಪಷ್ಟವಾಗುತ್ತದೆ.
– ದಿ.ಪಂ. ಧುಂಡೀರಾಜಶಾಸ್ತ್ರಿ ದಾತೆ (ಸೌಜನ್ಯ-ದಾತೇ ಪಂಚಾಂಗಕರ್ತ)
(ಅನೇಕ ಕಾರಣಗಳಲ್ಲಿ ಇದು ಒಂದು ಕಾರಣವಾಗಿದೆ. ಸೂಕ್ಷ್ಮಸ್ತರದಲ್ಲಿಯೂ ಯಜ್ಞದಿಂದ ಇದೇ ರೀತಿ ಅನೇಕ ಪಟ್ಟು ಲಾಭವಾಗುತ್ತದೆ. ಅತ್ಯಂತ ಕಲುಷಿತವಾಗಿರುವ ಕಲಿಯುಗದ ವಾತಾವರಣವು ಸಾತ್ತ್ವಿಕವಾಗಲು ಸಹಾಯವಾಗುತ್ತದೆ, ವಾತಾವರಣವು ಸಾತ್ತ್ವಿಕವಾಗುವುದರಿಂದ ಮಾನವನ ಮನಸ್ಸು ಕೂಡ ಶಾಂತವಾಗುತ್ತದೆ ಮತ್ತು ಇಡೀ ಮನುಕುಲಕ್ಕೆ ಅದರ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಲಾಭಗಳಾಗುತ್ತವೆ.)
(ಆಧಾರ: ಸಾಪ್ತಾಹಿಕ ಸನಾತನ ಪ್ರಭಾತ)