‘ಭಾವ’ ಈ ಶಬ್ದದ ವ್ಯಾಖ್ಯೆ ಮತ್ತು ಅರ್ಥ
ದೈನಂದಿನ ಜೀವನವನ್ನು ನಡೆಸುತ್ತಿರುವಾಗ, ಜೀವನದಲ್ಲಿನ ಪ್ರತಿಯೊಂದು ಕೃತಿಯನ್ನೂ ಮಾಡುತ್ತಿರುವಾಗ ನಮಗೆ ನಮ್ಮ ಅಸ್ತಿತ್ವದ ಅರಿವು ಸದಾ ಇರುತ್ತದೆ; ಏಕೆಂದರೆ ಅದು ನಮ್ಮ ವೃತ್ತಿಯಲ್ಲಿ ಬೇರೂರಿರುತ್ತದೆ. ಈ ಅಸ್ತಿತ್ವಕ್ಕೆ ಸಂಬಂಧಪಟ್ಟಂತೆಯೇ, ಇದರ ಹಿನ್ನಲೆಯಲ್ಲಿಯೇ ನಮ್ಮಿಂದ ಎಲ್ಲವೂ ನಡೆಯುತ್ತಿರುತ್ತದೆ ಮತ್ತು ನಾವು ಎಲ್ಲವನ್ನೂ ಅನುಭವಿಸುತ್ತಿರುತ್ತೇವೆ. ಜೀವನದಲ್ಲಿ ‘ನಾನು’ ಎನ್ನುವ ಜಾಗದಲ್ಲಿ ಮತ್ತು ಅಷ್ಟೇ ತೀವ್ರವಾಗಿ ಈಶ್ವರನ ಅಥವಾ ಈಶ್ವರನ ರೂಪದ ಅರಿವು ನಿರ್ಮಾಣವಾಗುವುದೆಂದರೆ ಭಾವ. ಈಶ್ವರನ ಅಥವಾ ಗುರುಗಳ ಅಸ್ತಿತ್ವದ ಬಗೆಗಿನ, ಯಾವುದೇ ಸ್ವರೂಪದಲ್ಲಿನ ಅರಿವು ಉತ್ಕಟವಾಗಿರುವುದು, ಆ ಅರಿವಿನಿಂದಾಗಿ ಜೀವನದಲ್ಲಿನ ಕಾರ್ಯಗಳನ್ನು ಮಾಡುವುದು ಮತ್ತು ಆ ಅರಿವಿನ ಹಿನ್ನೆಲೆಯ ಮೇಲೆಯೇ ಜೀವನವನ್ನು ಅನುಭವಿಸುವುದು, ಇದನ್ನು ಈಶ್ವರನ ಅಥವಾ ಗುರುಗಳ ಬಗ್ಗೆ ಭಾವ ಇರುವುದು ಎನ್ನುತ್ತಾರೆ. ಈಶ್ವರನ ಬಗೆಗಿನ ಭಾವವು ‘ಭಾವ’ ಈ ಶಬ್ದಕ್ಕೂ ಮೀರಿರುವಂತಹದ್ದಾಗಿದೆಯಲ್ಲದೆ ಅದು ಭಾವಕ್ಕೆ ಸಂಬಂಧಿಸಿದಂತಹ ಎಲ್ಲ ಸಂಕಲ್ಪನೆಗಳಿಗೂ ಮೀರಿರುವಂತಹದ್ದಾಗಿದೆ. ಭಾವವು ನಿರ್ಮಾಣವಾಯಿತೆಂದರೆ ಜೀವವು ಸದಾ ಈಶ್ವರಸನ್ಮುಖವಾಗಿರುತ್ತದೆ.
ವಿಶ್ವಾಸ, ಶ್ರದ್ಧೆ, ಭಾವ ಮತ್ತು ಭಕ್ತಿ
ಅಧ್ಯಾತ್ಮದ ಮಹತ್ವವು ತಿಳಿಯುವುದಕ್ಕಾಗಿ ಹಾಗೂ ಸಾಧನೆಯನ್ನು ಪ್ರಾರಂಭಿಸಲು ಮೊಟ್ಟಮೊದಲು ವಿಶ್ವಾಸ ಇರಬೇಕು. ವಿಶ್ವಾಸವು ಶಬ್ದಜನ್ಯ ಮಾಹಿತಿಯಿಂದ ನಿರ್ಮಾಣ ಆಗುತ್ತದೆ. ವಿಶ್ವಾಸವು ನಿರ್ಮಾಣವಾದ ನಂತರ ಸಾಧನೆ ಮಾಡಿದಾಗ ಅನುಭೂತಿ ಬರುತ್ತದೆ. ಅನುಭೂತಿಗಳು ಬಂದ ನಂತರವೇ ಶ್ರದ್ಧೆ ಉಂಟಾಗುತ್ತದೆ. ಶ್ರದ್ಧೆ ನಿರ್ಮಾಣವಾಯಿತೆಂದರೆ ಸಾಧನೆಯು ಇನ್ನೂ ಹೆಚ್ಚಾಗುತ್ತದೆ. ಸಾಧನೆಯು ಇನ್ನೂ ಹೆಚ್ಚಾದ ನಂತರ ಇನ್ನೂ ಹೆಚ್ಚಿನ ಮಟ್ಟದ ಅನುಭೂತಿಗಳು ಬರುತ್ತವೆ. ಈ ವಿಧವಾಗಿ ಶ್ರದ್ಧೆ-ಸಾಧನೆ-ಅನುಭೂತಿ ಹೆಚ್ಚುತ್ತಾ ಹೋಗಿ ಕೊನೆಗೆ ಭಾವವು ನಿರ್ಮಾಣವಾಯಿತೆಂದರೆ ಆತ್ಮಾನುಭೂತಿಯು ಬರುತ್ತದೆ, ಎಂದರೆ ಆನಂದಾವಸ್ಥೆಯು ಪ್ರಾಪ್ತವಾಗುತ್ತದೆ.
ಭಾವ ಮತ್ತು ಭಾವನೆ ಇವುಗಳಲ್ಲಿನ ವ್ಯತ್ಯಾಸ
‘ಭಾವವು ಚಿತ್ತದ ಒಂದು ಅವಸ್ಥೆಯಾಗಿದೆ. ಗುಣಗಳು ಮತ್ತು ಗುಣಧಾರಕ ಇವುಗಳ ಸಂಯೋಗಸ್ವರೂಪದಲ್ಲಿ ಯಾವಾಗ ಚಿತ್ತದ ಏಕಾಗ್ರ ಸ್ಥಿತಿಯು ನಿರ್ಮಾಣವಾಗುತ್ತದೆಯೋ ಅದನ್ನು ಭಾವ ಎನ್ನಬಹುದು ಮತ್ತು ಭಾವನೆಯು ಮನಸ್ಸಿನ ಸ್ತರದ ವೃತ್ತಿಯ ವಿಧವಾಗಿದೆ. ವಾಸನೆಗಳೂ, ಭಾವನೆಗಳೂ ಮನಸ್ಸಿನ ಅಲೆಗಳಾಗಿವೆ.’
-ಪ.ಪೂ.ಭಕ್ತರಾಜ ಮಹಾರಾಜರು
ಕಣ್ಣುಗಳಿಂದ ಅಶ್ರುಗಳು ಸುರಿಯುವುದು ಭಾವ ಅಥವಾ ಭಾವನೆ ಇವೆರಡರಿಂದಲೂ ಅನುಭವಿಸಲ್ಪಡುವಂತಹ ಒಂದು ಲಕ್ಷಣವಾಗಿದೆ. ಮನಸ್ಸಿಗೆ ದುಃಖವಾದಾಗ ಅಳು ಬರುವುದು ಭಾವನೆಯಾದರೆ, ಗುರುಗಳ ಅಥವಾ ದೇವತೆಗಳ ನೆನಪು ಬಂದು ಕಣ್ಣೀರು ಬರುವುದು ಭಾವ.
ಭಾವದ ಮಹತ್ವ
ಭಾವ ಎಂದರೆ ದೇವರ ಅಸ್ತಿತ್ವ
ನ ಕಾಷ್ಠೇ ವಿದ್ಯತೇ ದೇವೋ ನ ಪಾಷಾಣೇ ನ ಮೃಣ್ಮಯೇ|
ಭಾವೇ ತು ವಿದ್ಯತೇ ದೇವೋ ತಸ್ಮದ್ಭಾವೋ ಹಿ ಕಾರಣಮ್||
ಅರ್ಥ : ದೇವರು ಮರದ, ಕಲ್ಲಿನ ಅಥವಾ ಮಣ್ಣಿನ ಮೂರ್ತಿಯಲ್ಲಿರುವುದಿಲ್ಲ. ದೇವರು ಭಾವದಲ್ಲಿರುತ್ತಾರೆ; ಆದ್ದರಿಂದ ಭಾವವು ಮಹತ್ವದ್ದಾಗಿರುತ್ತದೆ.
ಭಾವದ ಲಕ್ಷಣಗಳು
- ಸ್ತಂಭ (ಸ್ತಂಭಿತರಾಗುವುದು)
- ಸ್ವೇದ (ಬೆವರುವುದು)
- ರೋಮಾಂಚನ
- ವೈಸ್ವರ್ಯ (ಸ್ವರಭಂಗ, ಧ್ವನಿ ಬದಲಾಗುವುದು)
- ಕಂಪನ
- ವೈವರ್ಣ್ಯ (ವರ್ಣ ಬದಲಾಗುವುದು)
- ಅಶ್ರುಪಾತ (ಕಣ್ಣೀರು ಸುರಿಯುವುದು)
- ಮೂರ್ಛೆ ಬರುವುದು
ಹೆಚ್ಚಿನ ಸಾಧಕರಿಗೆ ದೇವರ ಆರತಿಯ ಸಮಯದಲ್ಲಿ ಅಥವಾ ಗುರುಗಳ ಇಲ್ಲವೇ ಈಶ್ವರನ ಸ್ಮರಣೆಯಾದಾಗ ಅಥವಾ ಅವರಿಗೆ ಸಂಬಂಧಪಟ್ಟ ಯಾವುದಾದರೊಂದು ಬೇರೆ ವಿಷಯದಿಂದಾಗಿ ಕಣ್ಣುಗಳಿಂದ ಅಶ್ರುಗಳು ಸುರಿಯುತ್ತವೆ. ಇದು ಮೇಲೆ ಕೊಟ್ಟಿರುವ ಭಾವದ ಎಂಟು ಲಕ್ಷಣಗಳ ಪೈಕಿ ‘ಅಶ್ರುಪಾತ’ ಈ ಲಕ್ಷಣವಾಗಿದೆ. ಎಂಟೂ ಲಕ್ಷಣಗಳು ಕಂಡು ಬಂದಾಗ ‘ಅಷ್ಟಸಾತ್ತ್ವಿಕಭಾವವು’ ಜಾಗೃತವಾಯಿತು ಎನ್ನುತ್ತಾರೆ.
ಭಾವವು ನಿರ್ಮಾಣವಾಗುವುದರಲ್ಲಿನ ಅಡಚಣೆಗಳು
ಭಾವವು ನಿರ್ಮಾಣವಾಗುವುದರಲ್ಲಿ ಕೆಳಗೆ ಕೊಟ್ಟಿರುವ ಮೂರು ಅಡಚಣೆಗಳಿರುತ್ತವೆ – ಅಜ್ಞಾನ, ಕರ್ತೃತ್ವ ಮತ್ತು ಅಹಂಭಾವ. ಇವುಗಳ ಪೈಕಿ ಅಜ್ಞಾನವು ಈಶ್ವರನ ಗುಣಗಳು, ಸ್ವರೂಪ, ಆತನ ಕಾರ್ಯವೈಖರಿ ಇವುಗಳಿಗೆ ಸಂಬಂಧಪಟ್ಟದ್ದಾಗಿದೆ. ಕರ್ತೃತ್ವವು, ಜೀವನದಲ್ಲಿನ ವಿವಿಧ ಸಂಗತಿಗಳು ಈಶ್ವರನಿಂದಾಗಿ ಆಗುತ್ತಿರದೆ ಬೇರೆ ಯಾರಿಂದಲಾದರೂ, ಬಹಳಷ್ಟು ಬಾರಿ ತನ್ನಿಂದ ಆಗುತ್ತಿವೆ ಎಂದೆನಿಸುವುದಕ್ಕೆ ಸಂಬಂಧಪಟ್ಟದ್ದಾಗಿದೆ. ‘ತಾನು ಈಶ್ವರನಿಂದ ಬೇರೆ ಆಗಿದ್ದೇನೆ’ ಎನ್ನುವುದರ ಅರಿವೆಂದರೆ ಅಹಂಭಾವ. ಅಹಂಭಾವವು ಭಾವ ನಿರ್ಮಾಣವಾಗುವುದರಲ್ಲಿನ ಎಲ್ಲಕ್ಕಿಂತ ದೊಡ್ಡ ಅಡಚಣೆಯಾಗಿದೆ.
ಅಹಂಭಾವವು ಎಷ್ಟು ಹೆಚ್ಚು ಇರುವುದೋ ಅಷ್ಟೇ ಪ್ರಮಾಣದಲ್ಲಿ ಈಶ್ವರನ ಬಗ್ಗೆ ಭಾವವು ನಿರ್ಮಾಣವಾಗುವ ಸಾಧ್ಯತೆಯು ಕಡಿಮೆ ಇರುತ್ತದೆ. ಅಹಂಭಾವವು ಹೆಚ್ಚು ಇರುವುದರಿಂದಾಗುವ ಇನ್ನೊಂದು ನಷ್ಟವೆಂದರೆ ಇಂತಹ ವ್ಯಕ್ತಿಗೆ ಅನಿಷ್ಟ ಶಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆಯು ಇನ್ನೂ ಹೆಚ್ಚು ಇರುತ್ತದೆ. ಅಂತೆಯೇ ಅನಿಷ್ಟ ಶಕ್ತಿಗಳಿಗೆ, ಇಂತಹ ವ್ಯಕ್ತಿಗಳ ಮಾಧ್ಯಮದಿಂದ ಇತರರಿಗೆ ತೊಂದರೆ ಕೊಡುವುದು ಹಾಗೂ ಸಮಷ್ಟಿ ಕಾರ್ಯದಲ್ಲಿ ಅಡ್ಡಿಗಳನ್ನುಂಟು ಮಾಡುವುದು ಸುಲಭವಾಗಿರುತ್ತದೆ. ಮಾನವಸಹಜವಾಗಿರುವ ಸ್ವಭಾವದೋಷಗಳೂ ಸಹ ಭಾವನಿರ್ಮಿತಿಯಲ್ಲಿ ಅಡ್ಡಿಯನ್ನುಂಟು ಮಾಡುತ್ತವೆ.
ಕೆಲವೊಮ್ಮೆ ಸಾಧಕರಿಗೆ ಸಹಾಯ ಮಾಡುವ ಭುವಲೋಕದಲ್ಲಿನ ಒಳ್ಳೆಯ ಶಕ್ತಿಗಳು ಭಾವಕ್ಕೆ ಸಂಬಂಧಿಸಿದ ಅಥವಾ ಇನ್ನಿತರ ಸಾತ್ತ್ವಿಕ ವಿಚಾರಗಳನ್ನು ಪ್ರಕ್ಷೇಪಿಸುತ್ತವೆ. ಆದರೆ ಸ್ವಭಾವದೋಷಗಳು ಹೆಚ್ಚು ಇದ್ದರೆ ಈ ವಿಚಾರಗಳನ್ನು ಗ್ರಹಿಸಲಾಗುವುದಿಲ್ಲ.
ಅಜ್ಞಾನ, ಕರ್ತೃತ್ವ ಮತ್ತು ಅಹಂಭಾವ ಈ ಅಡಚಣೆಗಳ ಪೈಕಿ ಯಾವುದಾದರೊಂದು ಅಡಚಣೆಯು ನಿಜವಾದ ಅರ್ಥದಲ್ಲಿ ದೂರವಾದರೆ ಇನ್ನುಳಿದ ಎರಡು ಅಡಚಣೆಗಳು ಸಹಜವಾಗಿ ದೂರವಾಗುತ್ತವೆ. ಈ ಅಡಚಣೆಗಳನ್ನು ಹಂತಹಂತವಾಗಿ ದೂರ ಮಾಡುವ ಪ್ರಕ್ರಿಯೆ ಎಂದರೇನೆ ಭಾವಜಾಗೃತಿಗಾಗಿ ಪ್ರಯತ್ನ.
(ಆಧಾರ ಗ್ರಂಥ : ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ “ಭಾವದ ವಿಧಗಳು ಮತ್ತು ಜಾಗೃತಿ”)
ಇಂಥಹಾ ಜ್ಞಾನ ಕೊಟ್ಟಿದ್ದಕ್ಕಾಗಿ ಪ. ಪೂ ಗುರುಗಳ ಚರಣಗಳಲ್ಲಿ ಅನಂತ ಅನಂತ ಕೋಟಿ ಕೃತಜ್ಞತೆಗಳು .
Good information and helpful