ನಾವು ಧ್ಯಾನ, ಭಕ್ತಿ, ಕರ್ಮ, ಜ್ಞಾನ ಇತ್ಯಾದಿ ಮಾರ್ಗಗಳಿಂದ ಸಾಧನೆಯನ್ನು ಮಾಡಬಹುದು. ಆದರೆ ಯಾವುದೇ ಮಾರ್ಗದಿಂದ ಸಾಧನೆಯನ್ನು ಮಾಡಿದರೂ ಗುರುಕೃಪೆ ಮತ್ತು ಗುರುಪ್ರಾಪ್ತಿಯಾಗದೆ ಈಶ್ವರಪ್ರಾಪ್ತಿಯಾಗುವುದಿಲ್ಲ. ಗುರು ಎಂಬುದು ಒಂದು ತತ್ತ್ವವಾಗಿದೆ ಮತ್ತು ಅದು ಬೇರೆ ಬೇರೆ ದೇಹಗಳ ಮಾಧ್ಯಮದಿಂದ ಕಾರ್ಯ ಮಾಡುತ್ತದೆ. ಗುರುಕೃಪೆ ಎಂದರೆ ಈ ತತ್ತ್ವವು ನಮ್ಮ ಮೇಲೆ ಮಾಡಿದ ಕೃಪೆ.
ಗುರುಕೃಪೆ ಮತ್ತು ಗುರುಪ್ರಾಪ್ತಿ ಆಗುವುದಕ್ಕೆ ಏನು ಮಾಡಬೇಕು ?
ತೀವ್ರ ಮುಮುಕ್ಷತ್ವ (ತನಗೆ ಈ ಜನ್ಮದಲ್ಲಿಯೇ ಮೋಕ್ಷಪ್ರಾಪ್ತಿಯಾಗಬೇಕು) ಅಥವಾ ಗುರುಪ್ರಾಪ್ತಿಗಾಗಿ ತೀವ್ರ ತಳಮಳ, ಈ ಒಂದು ಗುಣದಿಂದಲೇ ಗುರುಪ್ರಾಪ್ತಿಯು ಬೇಗನೆ ಆಗುತ್ತದೆ ಮತ್ತು ಗುರುಕೃಪೆಯು ಸತತವಾಗಿ ಆಗುತ್ತಾ ಇರುತ್ತದೆ. ಸತ್ಯ, ತ್ರೇತಾ ಮತ್ತು ದ್ವಾಪರಯುಗಗಳಂತೆ ಕಲಿಯುಗದಲ್ಲಿ ಗುರುಪ್ರಾಪ್ತಿ ಮತ್ತು ಗುರುಕೃಪೆಯಾಗುವುದು ಕಠಿಣವಿಲ್ಲ. ಇಲ್ಲಿ ಗಮನದಲ್ಲಿಡಬೇಕಾದ ವಿಷಯವೇನೆಂದರೆ ಗುರುಕೃಪೆಯಾಗದ ಹೊರತು ಗುರುಪ್ರಾಪ್ತಿಯಾಗುವುದಿಲ್ಲ. ಗುರುಗಳಿಗೆ, ಮುಂದೆ ಯಾರು ತಮ್ಮ ಶಿಷ್ಯರಾಗುವವರಿದ್ದಾರೆ ಎಂಬುದರ ಜ್ಞಾನವಿರುತ್ತದೆ. ಗುರುಕೃಪೆ ಮತ್ತು ಗುರುಪ್ರಾಪ್ತಿಗಾಗಿ ಮುಂದೆ ನೀಡಿದ ಸಾಧನೆಯನ್ನು ಮಾಡಬೇಕು.
ಗುರುಕೃಪಾಯೋಗಾನುಸಾರ ಸಾಧನೆ
ಗುರುಕೃಪೆ ಮತ್ತು ಗುರುಪ್ರಾಪ್ತಿಯಾಗಲು ಮತ್ತು ಗುರುಕೃಪೆಯು ಸತತವಾಗಿ ಆಗುತ್ತಿರಲು ಮಾಡಬೇಕಾದ ಸಾಧನೆಗೆ ‘ಗುರುಕೃಪಾಯೋಗಾನುಸಾರ ಸಾಧನೆ’ ಎನ್ನುತ್ತಾರೆ.
ಗುರುಕೃಪಾಯೋಗಾನುಸಾರ ಸಾಧನೆಯ ವಿಧಗಳು
‘ವ್ಯಷ್ಟಿ ಸಾಧನೆ’ ಮತ್ತು ‘ಸಮಷ್ಟಿ ಸಾಧನೆ’ ಇವು ಗುರುಕೃಪಾಯೋಗಾನುಸಾರ ಸಾಧನೆಯ ಎರಡು ವಿಧಗಳಾಗಿವೆ. ವ್ಯಷ್ಟಿ ಸಾಧನೆಯೆಂದರೆ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನ. ಸಮಷ್ಟಿ ಸಾಧನೆಯೆಂದರೆ ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನ.
ಅ. ವ್ಯಷ್ಟಿ ಸಾಧನೆ (ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾದ ಪ್ರಯತ್ನ) : ಸಾಧನೆಯ ಸಂಪತ್ಕಾಲವೆಂದರೆ, ಸಾಧನೆಯು ನಿರ್ವಿಘ್ನವಾಗಿ ನಡೆಯಬಹುದಾದ ಅನುಕೂಲಕರ ಕಾಲ. ಸತ್ಯಯುಗದ ಕಾಲವು ಹೀಗಿತ್ತು. ಸಂಪತ್ಕಾಲದಲ್ಲಿ ಕೇವಲ ವ್ಯಷ್ಟಿ ಸಾಧನೆ ಮಾಡಿದರೂ ಈಶ್ವರಪ್ರಾಪ್ತಿಯಾಗುತ್ತದೆ. ವ್ಯಷ್ಟಿ ಸಾಧನೆಯ ಅಂಗಗಳು ಮುಂದಿನಂತಿವೆ. ನಾಮಜಪ, ಸತ್ಸಂಗ, ತ್ಯಾಗ, ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ ಮತ್ತು ಭಾವಜಾಗೃತಿ. (ವಿವರವಾದ ಮಾಹಿತಿಯನ್ನು ಮುಂದೆ ಕೊಡಲಾಗಿದೆ.)
ಆ. ಸಮಷ್ಟಿ ಸಾಧನೆ (ಸಂಪೂರ್ಣ ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನ) : ಸಾಧನೆಗೆ ಆಪತ್ಕಾಲವೆಂದರೆ, ಸಾಧನೆಯಲ್ಲಿ ಬರುವ ಅಡಚಣೆಗಳಿಂದ ಕೂಡಿದ, ಸಾಧನೆಯ ಪ್ರತಿಕೂಲ ಕಾಲ. ಪ್ರಸ್ತುತ ಹೆಚ್ಚುತ್ತಿರುವ ರಜ-ತಮದ ಪ್ರದೂಷಣೆ ಮತ್ತು ಧರ್ಮಹಾನಿ, ಅರಾಜಕತೆಯೆಡೆಗೆ ರಾಷ್ಟ್ರದ ಮಾರ್ಗಕ್ರಮಣ ಇತ್ಯಾದಿಗಳಿಂದಾಗಿ ಸದ್ಯದ ಕಾಲವು ಆಪತ್ಕಾಲವಾಗಿದೆ. ಆಪತ್ಕಾಲದಲ್ಲಿ ಕೇವಲ ವ್ಯಷ್ಟಿ ಸಾಧನೆಯಿಂದ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು ಬಹಳ ಕಠಿಣವಾಗಿದೆ. ಆದುದರಿಂದ ವ್ಯಷ್ಟಿ ಸಾಧನೆಗೆ ಸಮಷ್ಟಿ ಸಾಧನೆಯ ಜೊತೆ ಇರುವುದು ಆವಶ್ಯಕವಾಗಿದೆ. ಸಮಷ್ಟಿ ಸಾಧನೆಯಲ್ಲಿ ಅಧ್ಯಾತ್ಮ ಪ್ರಸಾರ ಮಾಡುವುದು, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ, ಹಿಂದೂ ಸಂಘಟನೆ, ಇತರರ ಬಗ್ಗೆ ಪ್ರೀತಿ ಇವುಗಳು ಒಳಗೊಂಡಿರುತ್ತವೆ. (ವಿವರವಾದ ಮಾಹಿತಿಯನ್ನು ಮುಂದೆ ಕೊಡಲಾಗಿದೆ.)
ಇ. ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ
ಇ ೧. ಕಾಲಮಹಿಮೆಯಂತೆ ವ್ಯಷ್ಟಿ ಸಾಧನೆಗಿಂತ ಸಮಷ್ಟಿ ಸಾಧನೆ ಮಹತ್ವದ್ದಾಗಿದೆ: ಕಾಲಮಹಿಮೆಯಂತೆ ಕಲಿಯುಗದಲ್ಲಿ ಸಮಷ್ಟಿ ಸಾಧನೆಗೆ ಶೇ. ೭೦ ರಷ್ಟು ಮತ್ತು ವ್ಯಷ್ಟಿ ಸಾಧನೆಗೆ ಶೇ. ೩೦ ರಷ್ಟು ಮಹತ್ವವಿದೆ.
ಇ ೨. ಎರಡೂ ಸಾಧನೆಗಳು ಪರಸ್ಪರ ಪೂರಕವಾಗಿವೆ: ವ್ಯಷ್ಟಿ ಸಾಧನೆಯನ್ನು ಮಾಡುವವರು ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸಮಷ್ಟಿ ಸಾಧನೆಯನ್ನು ಮಾಡುವುದು ಆವಶ್ಯಕ ವಾಗಿದೆ, ಆದರೆ ಸಮಷ್ಟಿ ಸಾಧನೆಯು ವ್ಯಷ್ಟಿ ಸಾಧನೆಯ ಆಧಾರದ ಮೇಲಿರುವುದರಿಂದ ಸಮಷ್ಟಿ ಸಾಧನೆಯನ್ನು ಮಾಡುವವರು ವ್ಯಷ್ಟಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ.
ಇ ೩. ಗುರುಕೃಪೆಯು ಸತತವಾಗಿರಬೇಕು: ಗುರುಪ್ರಾಪ್ತಿಯಾಗಿ ಗುರುಮಂತ್ರವು ದೊರೆತ ನಂತರ ಗುರುಕೃಪೆಯು ಆರಂಭವಾಗುತ್ತದೆ. ಅದು ಅಖಂಡವಾಗಿ ಉಳಿಯಲು ಗುರುಗಳು ಹೇಳಿದ ಸಾಧನೆಯನ್ನು ಆಯುಷ್ಯಪೂರ್ತಿ ಸತತವಾಗಿ ಮಾಡುತ್ತಿರುವುದು ಆವಶ್ಯಕವಾಗಿರುತ್ತದೆ.
ಗುರುಕೃಪಾಯೋಗಾನುಸಾರ ಸಾಧನೆಯ ಹಂತಗಳು
ಅಷ್ಟಾಂಗ ಸಾಧನೆಯ ಹಂತಗಳ ಮಾನದಂಡವು ಸಾಧಕನ ಗುಣಮಟ್ಟದ ಮೇಲೆ ಅವಲಂಬಿಸಿರುತ್ತದೆ,
ಅ. ಮಾನದಂಡ ೧ – ಸಾಧಕನಲ್ಲಿ ತುಂಬಾ ಸ್ವಭಾವದೋಷಗಳು ಮತ್ತು ಅಹಂ ಹೆಚ್ಚಿದ್ದರೆ : ಇಂತಹ ಸಾಧಕನು ಮುಂದೆ ನೀಡಿರುವ ಕ್ರಮದಲ್ಲಿ ಅಷ್ಟಾಂಗ ಸಾಧನೆಯ ಪ್ರಯತ್ನಗಳನ್ನು ಮಾಡಬೇಕು –
೧. ಸ್ವಭಾವದೋಷ ನಿರ್ಮೂಲನ ಮತ್ತು ಗುಣ ಸಂವರ್ಧನೆ | ೨. ಅಹಂ ನಿರ್ಮೂಲನ | ೩. ನಾಮಜಪ | ೪. ಭಕ್ತಿಭಾವ ಜಾಗೃತಗೊಳಿಸಲು ಪ್ರಯತ್ನಗಳು | ೫. ಸತ್ಸಂಗ | ೬. ಸತ್ಸೇವೆ | ೭. ಸತ್ ಗಾಗಿ ತ್ಯಾಗ | ೮. ಇತರರ ಬಗ್ಗೆ ಪ್ರೀತಿ (ನಿರಪೇಕ್ಷ ಪ್ರೇಮ) ಮತ್ತು ಸಾಕ್ಷೀಭಾವ
ಆ. ಮಾನದಂಡ ೨ – ಸಾಧಕನಲ್ಲಿ ಭಕ್ತಿಭಾವ ಇದ್ದಾಗ : ಭಕ್ತಿಪ್ರಧಾನ ವ್ಯಕ್ತಿತ್ವವಿರುವ ಸಾಧಕನು ಮುಂದೆ ನೀಡಿರುವ ಕ್ರಮದಲ್ಲಿ ಅಷ್ಟಾಂಗ ಸಾಧನೆಯ ಪ್ರಯತ್ನಗಳನ್ನು ಮಾಡಬೇಕು
೧. ನಾಮಜಪ | ೨. ಮುಂದಿನ ಹಂತದ ಭಕ್ತಿಭಾವ ಜಾಗೃತಗೊಳಿಸಲು ಪ್ರಯತ್ನಗಳು | ೩. ಸತ್ಸಂಗ | ೪. ಸತ್ಸೇವೆ | ೫. ಸ್ವಭಾವದೋಷ ನಿರ್ಮೂಲನ ಮತ್ತು ಗುಣ ಸಂವರ್ಧನೆ | ೬. ಅಹಂ ನಿರ್ಮೂಲನ | ೭. ಸತ್ ಗಾಗಿ ತ್ಯಾಗ | ೮. ಇತರರ ಬಗ್ಗೆ ಪ್ರೀತಿ (ನಿರಪೇಕ್ಷ ಪ್ರೇಮ) ಮತ್ತು ಸಾಕ್ಷೀಭಾವ
೧. ನಾಮಜಪ: ಗುರುಕೃಪಾಯೋಗಾನುಸಾರ ಸಾಧನೆಯಲ್ಲಿನ ಮೊದಲನೆಯ ಹಂತವೆಂದರೆ ನಾಮಜಪ. ‘ಕಲಿಯುಗದಲ್ಲಿ ಹರಿನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವು’ ಎಂದು ಸಂತರು ನಾಮಜಪದ ಮಹತ್ವವನ್ನು ಹಾಡಿ ಹೊಗಳಿದ್ದಾರೆ.
ಅ. ಕುಲದೇವರ ನಾಮಜಪದ ಮಹತ್ವ: ಹಿಂದೂ ಧರ್ಮದಲ್ಲಿ ಅನೇಕ ದೇವರಿದ್ದಾರೆ. ಆದುದರಿಂದ ನಾವು ಯಾವ ದೇವರ ನಾಮಜಪವನ್ನು ಮಾಡಬೇಕು ಎಂಬ ಪ್ರಶ್ನೆಯು ಯಾರಿಗಾದರೂ ಬರಬಹುದು. ಯಾವ ಕುಲದೇವರು ನಮ್ಮ ಆಧ್ಯಾತ್ಮಿಕ ಉನ್ನತಿಗೆ ಅತ್ಯಂತ ಪೂರಕವಾಗಿದ್ದಾರೆಯೋ ಅಂತಹ ಕುಲದಲ್ಲಿಯೇ ಭಗವಂತನು ನಮ್ಮನ್ನು ಜನ್ಮಕ್ಕೆ ಹಾಕಿರುತ್ತಾನೆ. ಆದುದರಿಂದ ಸತತವಾಗಿ ಕುಲದೇವತೆಯ ನಾಮಜಪವನ್ನು ಮಾಡಬೇಕು.
ಆ. ನಾಮಜಪವನ್ನು ಹೇಗೆ ಮಾಡಬೇಕು ? : ಕುಲದೇವತೆಯ ಹೆಸರಿಗೆ ‘ಶ್ರೀ’ ಸೇರಿಸಿ ಚತುರ್ಥಿ ವಿಭಕ್ತಿ ಪ್ರತ್ಯಯವನ್ನು ಜೋಡಿಸಿ ಕೊನೆಗೆ ‘ನಮಃ’ ಎಂದು ಹೇಳಬೇಕು. ಉದಾ. ಕುಲದೇವರು ಗಣೇಶ ಆಗಿದ್ದರೆ ‘ಶ್ರೀ ಗಣೇಶಾಯ ನಮಃ’, ಕುಲದೇವಿಯು ಭವಾನಿಯಾಗಿದ್ದರೆ ‘ಶ್ರೀ ಭವಾನಿದೇವ್ಯೈ ನಮಃ’ ಎಂದು ಹೇಳಬೇಕು. ಕುಲದೇವರು ಯಾರೆಂದು ತಿಳಿಯದಿದ್ದರೆ ‘ಶ್ರೀ ಕುಲದೇವತಾಯೈ ನಮಃ’ ಎಂದು ಜಪ ಮಾಡಬೇಕು.
ಇ. ದತ್ತನ ನಾಮಜಪದ ಮಹತ್ವ : ಪ್ರಸ್ತುತ ಬಹಳಷ್ಟು ಜನರು ಶ್ರಾದ್ಧ, ಪಕ್ಷ ಇತ್ಯಾದಿಗಳನ್ನು ಮಾಡುವುದಿಲ್ಲ. ಆದುದರಿಂದ ಅವರಿಗೆ ಪೂರ್ವಜರ ಅತೃಪ್ತ ಲಿಂಗದೇಹಗಳಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಉದಾಹರಣೆಗಾಗಿ ವಿವಾಹವಾಗದಿರುವುದು, ಪತಿ-ಪತ್ನಿಯರಲ್ಲಿ ಹೊಂದಾಣಿಕೆ ಆಗದಿರುವುದು, ಗರ್ಭಧಾರಣೆ ಆಗದಿರುವುದು ಅಥವಾ ಗರ್ಭಧಾರಣೆಯಾದರೆ ಗರ್ಭಪಾತವಾಗುವುದು, ಸತತ ಆರ್ಥಿಕ ಅಡಚಣೆ, ದೀರ್ಘಕಾಲೀನ ಶಾರೀರಿಕ ಅಥವಾ ಮಾನಸಿಕ ಅನಾರೋಗ್ಯ, ಮನೆಯಲ್ಲಿ ಯಾವಾಗಲೂ ಜಗಳ, ಕಿರಿಕಿರಿ ಇತ್ಯಾದಿ.
ಪೂರ್ವಜರ ತೊಂದರೆಗಳ ನಿವಾರಣೆಗಾಗಿ ಮತ್ತು ಭವಿಷ್ಯದಲ್ಲಿ ಪೂರ್ವಜರಿಂದ ತೊಂದರೆ ಆಗಬಾರದೆಂದು ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಪ್ರತಿದಿನ ಕಡಿಮೆಪಕ್ಷ 1 ರಿಂದ 2 ಗಂಟೆ ಮಾಡಬೇಕು. ತೊಂದರೆ ಮಧ್ಯಮ ಸ್ವರೂಪದ್ದಾಗಿದ್ದರೆ 3 ರಿಂದ 4 ಗಂಟೆ ಜಪ ಮಾಡಬೇಕು ಮತ್ತು ತೊಂದರೆ ತೀವ್ರವಾಗಿದ್ದರೆ 5 ರಿಂದ 6 ಗಂಟೆ ಜಪ ಮಾಡಬೇಕು.
೨. ಸತ್ಸಂಗ: ಗುರುಕೃಪಾಯೋಗಾನುಸಾರ ಸಾಧನೆಯ ಎರಡನೆಯ ಹಂತವೆಂದರೆ ಸತ್ಸಂಗ. ಸತ್ಸಂಗವೆಂದರೆ ಈಶ್ವರಪ್ರಾಪ್ತಿಗೆ ಪೂರಕವಾಗಿರುವ ವಾತಾವರಣ. ನಾವು ಸತ್ಸಂಗದ ಲಾಭವನ್ನು ಕೆಳಗಿನಂತೆ ಪಡೆಯಬಹುದು. ಸಂತರು ಅಥವಾ ಗುರುಗಳೊಂದಿಗೆ ಇರುವುದು, ಇದು ಎಲ್ಲಕ್ಕಿಂತ ಶ್ರೇಷ್ಠವಾದ ಸತ್ಸಂಗವಾಗಿದೆ. ಆದರೆ ಸಂತರೊಂದಿಗೆ ಇರಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದುದರಿಂದ ಸಾಧಕರೊಂದಿಗೆ ಇರಲು ಪ್ರಯತ್ನಿಸಬೇಕು. ಸಂತರು ಬರೆದಿರುವ ಆಧ್ಯಾತ್ಮಿಕ ಗ್ರಂಥಗಳ ವಾಚನ ಮಾಡುವುದು ಸಹ ಸತ್ಸಂಗವೇ ಆಗಿದೆ. ಸತತವಾಗಿ ಸತ್ಸೇವೆಯನ್ನು ಮಾಡಿದರೂ ಸತ್ಸಂಗವು ಸಿಗುತ್ತದೆ.
೩. ಸತ್ಸೇವೆ: ಗುರುಕೃಪಾಯೋಗಾನುಸಾರ ಸಾಧನೆಯ ಮೂರನೆಯ ಹಂತವೆಂದರೆ ಸತ್ಸೇವೆ. ಸತ್ಸೇವೆ ಎಂದರೆ ಸತ್‌ನ ಅಂದರೆ ಈಶ್ವರನ ಸೇವೆ. ಅಧ್ಯಾತ್ಮಪ್ರಸಾರವೇ ಸರ್ವೋತ್ತಮ ಸತ್ಸೇವೆಯಾಗಿದೆ. ಇದನ್ನು ಮುಂದಿನಂತೆ ಮಾಡಬಹುದು.
ಅ. ನಮಗೆ ತಿಳಿದಂತಹ ನಾಮಜಪದ ಮಾಹಿತಿಯನ್ನು ಇತರರಿಗೆ ಹೇಳುವುದು.
ಆ. ಅವರು ನಾಮಜಪ ಮಾಡಬೇಕೆಂದು ಆಗಾಗ ಅವರಿಗೆ ಕೇಳುವುದು.
ಇ. ಸನಾತನ ಸಂಸ್ಥೆಯು ಪ್ರಕಟಿಸಿದ ಗ್ರಂಥಗಳು, ದೇವತೆಗಳ ಚಿತ್ರಗಳು, ನಾಮಪಟ್ಟಿಗಳು ಮತ್ತು ಊದುಬತ್ತಿ ಇತ್ಯಾದಿಗಳ ವಿತರಣೆ ಮಾಡುವುದು.
ಈ. ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ : ಸದ್ಯ ಭಯೋತ್ಪಾದಕರು ಮತ್ತು ನಕ್ಸಲವಾದಿ ಗಳು ದೇಶದಲ್ಲಿ ಗೊಂದಲವನ್ನುಂಟು ಮಾಡಿದ್ದಾರೆ. ಬಡತನ, ಮತಾಂಧತೆ, ಸಾಮಾಜಿಕ ವೈಷಮ್ಯ, ಭ್ರಷ್ಟಾಚಾರ, ಮೀಸಲಾತಿಗಳಂತಹ ಅನೇಕ ಸಮಸ್ಯೆಗಳು ದೇಶವನ್ನು ಸುತ್ತುವರಿದಿವೆ. ಸ್ವಲ್ಪದರಲ್ಲಿ ಹೇಳುವುದಾದರೆ ರಾಷ್ಟ್ರವು ರಸಾತಳಕ್ಕೆ ಹೋಗುತ್ತಿದೆ.
ದೇಶಕ್ಕೆ ಜಾತ್ಯತೀತ ರಾಜಕಾರಣಿಗಳು ಲಭಿಸಿದ್ದಾರೆ ಮತ್ತು ಹಿಂದೂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಧರ್ಮಪಾಲನೆಯ ಅಭಾವವು ಕಂಡುಬರುತ್ತಿದೆ. ಹಿಂದೂದ್ವೇಷೀಗಳಿಂದ ಹಿಂದೂ ಧರ್ಮ, ದೇವತೆಗಳು, ಸಂತರು, ರಾಷ್ಟ್ರಪುರುಷರು ಹಾಗೂ ಧರ್ಮಗ್ರಂಥಗಳ ವಿಡಂಬನೆ ಮತ್ತು ಧರ್ಮಹಾನಿಯು ರಾಜಾರೋಷವಾಗಿ ನಡೆಯುತ್ತಿದೆ. ಹಿಂದೂಗಳನ್ನು ಮತಾಂತರಿಸುವ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಧರ್ಮವು ರಾಷ್ಟ್ರದ ಪ್ರಾಣವಾಗಿದೆ. ಧರ್ಮ ನಾಶವಾದರೆ, ರಾಷ್ಟ್ರ ಮತ್ತು ಅದರ ಪರಿಣಾಮದಿಂದ ನಾವೆಲ್ಲರೂ ನಾಶವಾಗಬಹುದು. ಆದುದರಿಂದ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಸಮಾಜವನ್ನು ಜಾಗೃತಗೊಳಿಸುವುದು ಮಹತ್ವದ್ದಾಗಿದೆ.
ಉ. ಹಿಂದೂಸಂಘಟನೆ : ಹಿಂದೂ ಧರ್ಮವನ್ನು ವಿರೋಧಿಸುವಾಗ ಹಿಂದೂದ್ವೇಷೀಗಳು ಸಂಘಟಿತರಾಗುತ್ತಾರೆ. ಇದರ ತುಲನೆಯಲ್ಲಿ ಹಿಂದೂ ಧರ್ಮದ ಮತ್ತು ರಾಷ್ಟ್ರದ ಹೆಸರಿನಡಿಯಲ್ಲಿ ಹಿಂದೂಗಳು ಸಂಘಟಿತರಾಗುವ ಪ್ರಮಾಣವು ಬಹಳ ಕಡಿಮೆಯಿದೆ. ಹಿಂದೂಗಳು ಸಂಘಟಿತರಾದರೆ, ಹಿಂದೂ ಧರ್ಮ ಮತ್ತು ರಾಷ್ಟ್ರದ ರಕ್ಷಣೆಯೂ ಆಗುವುದು. ಇದಕ್ಕಾಗಿ ಹಿಂದೂಸಂಘಟನೆಗಾಗಿ ಪ್ರಯತ್ನಿಸುವುದೂ ಸಮಷ್ಟಿ ಸಾಧನೆಯ ಮಹತ್ವದ ಭಾಗವಾಗಿದೆ.
೪. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆ: ತೂತು ಬಿದ್ದ ಒಂದು ನೀರಿನ ಬಿಂದಿಗೆಯಲ್ಲಿ ಎಷ್ಟೇ ನೀರನ್ನು ತುಂಬಿದರೂ ಅದು ತುಂಬುವುದಿಲ್ಲ. ಅದೇ ರೀತಿ ನಾವು ಮಾಡಿದ ಸಾಧನೆಯ ಪರಿಣಾಮವು ಉತ್ತಮವಾಗಿ ಆಗಿ ನಮ್ಮ ಶೀಘ್ರ ಆಧ್ಯಾತ್ಮಿಕ ಉನ್ನತಿ ಆಗಬೇಕಾದರೆ ನಮ್ಮಲ್ಲಿರುವ ಸ್ವಭಾವದೋಷ ನಿರ್ಮೂಲನೆಯಾಗುವುದು ಬಹಳ ಮಹತ್ವದ್ದಾಗಿದೆ. ಇದರ ಬಗೆಗಿನ ವಿವರವಾದ ಮಾಹಿತಿಯನ್ನು ಸನಾತನ ಸಂಸ್ಥೆಯ “ಸ್ವಭಾವದೋಷ ನಿರ್ಮೂಲನೆ” ಗ್ರಂಥಮಾಲಿಕೆಯಲ್ಲಿ ಕೊಡಲಾಗಿದೆ.
೫. ಅಹಂ ನಿರ್ಮೂಲನ ಪ್ರಕ್ರಿಯೆ : ಸಾಮಾನ್ಯ ವ್ಯಕ್ತಿಯಲ್ಲಿ ಮಾತ್ರವಲ್ಲ, ಸಾಧಕರಲ್ಲಿಯೂ ಒಂದಲ್ಲ ಒಂದು ರೀತಿಯ ಅಹಂ ಇದ್ದೇ ಇರುತ್ತದೆ. ಈಶ್ವರನೆಂದರೆ ಶೂನ್ಯ ಅಹಂ. ನಮ್ಮಲ್ಲಿ ಸ್ವಲ್ಪ ಅಹಂ ಇದ್ದರೂ, ನಾವು ಈಶ್ವರನೊಂದಿಗೆ ಎಂದಿಗೂ ಏಕರೂಪವಾಗಲು ಸಾಧ್ಯವಿಲ್ಲ. ಆದುದರಿಂದ ಸಾಧನೆಯನ್ನು ಮಾಡುವಾಗ ಅಹಂ-ನಿರ್ಮೂಲನೆಗಾಗಿ ಉದ್ದೇಶಪೂರ್ವಕವಾಗಿ ಪ್ರಯತ್ನಿಸುವುದು ಆವಶ್ಯಕವಾಗಿರುತ್ತದೆ. ಈ ಪ್ರಯತ್ನವನ್ನು ಹೇಗೆ ಮಾಡಬೇಕು, ಎಂಬುದರ ಬಗೆಗಿನ ವಿವರವಾದ ಮಾಹಿತಿಯನ್ನು ಸನಾತನ ಸಂಸ್ಥೆಯ “ಅಹಂ ನಿರ್ಮೂಲನೆಗಾಗಿ ಸಾಧನೆ” ಎಂಬ ಗ್ರಂಥದಲ್ಲಿ ಕೊಡಲಾಗಿದೆ.
೬. ಭಾವಜಾಗೃತಿ: ‘ನಾನು’ ಎನ್ನುವ ಜಾಗದಲ್ಲಿ ‘ಈಶ್ವರ’ ಎಂದು ಹೇಳುವುದೇ ಭಾವ. ಭಗವಂತನಿಗೆ ಭಾವದ ಹಸಿವಿರುತ್ತದೆ. ಭಾವ ಇದ್ದಲ್ಲಿ ಭಗವಂತನಿರುತ್ತಾನೆ. ನಾವು ಯಾವುದೇ ಕೃತಿಯನ್ನು ಮಾಡುವಾಗ ಭಗವಂತನ ಸ್ಮರಣೆ ಮಾಡುತ್ತಾ ಎಲ್ಲವನ್ನೂ ಅವನೇ ಮಾಡಿಸಿಕೊಳ್ಳುತ್ತಿದ್ದಾನೆ ಎಂಬ ಭಾವವಿಟ್ಟರೆ ಗುರುಕೃಪೆಯು ಶೀಘ್ರವಾಗಿ ಆಗುತ್ತದೆ. ಗುರುಕೃಪೆಗೆ ಪಾತ್ರರಾಗಲು ಭಾವವು ಅವಶ್ಯಕ ಘಟಕವಾಗಿದೆ. ಇದರ ಬಗೆಗಿನ ವಿವರವಾದ ಮಾಹಿತಿಯನ್ನು ಸನಾತನ ಸಂಸ್ಥೆಯ “ಭಾವಜಾಗೃತಿಗಾಗಿ ಸಾಧನೆ” ಎಂಬ ಗ್ರಂಥದಲ್ಲಿ ಕೊಡಲಾಗಿದೆ.
೭. ತ್ಯಾಗ : ನಾಮಜಪ, ಸತ್ಸಂಗ ಮತ್ತು ಸತ್ಸೇವೆ ಈ ಹಂತಗಳು ಸಾಧ್ಯವಾಗತೊಡಗಿದರೆ ಸತ್‌ಗಾಗಿ ಏನಾದರೂ ತ್ಯಾಗ ಸಾಧ್ಯವಾಗುತ್ತದೆ. ಆಧ್ಯಾತ್ಮಿಕ ಉನ್ನತಿಗಾಗಿ ತನು, ಮನ ಮತ್ತು ಧನ ಇವೆಲ್ಲವುಗಳ ತ್ಯಾಗ ಮಾಡಬೇಕಾಗುತ್ತದೆ. ಅವುಗಳಲ್ಲಿ ಧನದ ತ್ಯಾಗ ಮಾಡುವುದು ಭೌತಿಕವಾಗಿ ಎಲ್ಲಕ್ಕಿಂತ ಸುಲಭವಾಗಿದೆ; ಏಕೆಂದರೆ ನಮ್ಮ ಎಲ್ಲ ಧನವನ್ನು ನಾವು ಇತರರಿಗೆ ಕೊಡಬಹುದು. ತನು ಮತ್ತು ಮನಸ್ಸನ್ನು ಹಾಗೆ ಕೊಡಲು ಆಗುವುದಿಲ್ಲ. ಆದರೂ ವ್ಯಕ್ತಿಯು ಮೊದಲು ಅವುಗಳ ತ್ಯಾಗವನ್ನು ಮಾಡಬಹುದು, ಅಂದರೆ ತನುವಿನಿಂದ ಶಾರೀರಿಕ ಸೇವೆ ಮತ್ತು ಮನಸ್ಸಿನಿಂದ ನಾಮಜಪ ಮಾಡಬಹುದು. ಮುಂದೆ ಸಾಧಕನು ಅಲ್ಪಸ್ವಲ್ಪ ಧನದ ತ್ಯಾಗವನ್ನೂ ಮಾಡಬಹುದು. ಸರ್ಕಸ್‌ನಲ್ಲಿ ಎತ್ತರವಾದ ಜೋಕಾಲಿಯ ಮೇಲಿನ ಹುಡುಗಿಯು ಅವಳ ಕೈಯಲ್ಲಿ ಹಿಡಿದ ಜೋಕಾಲಿಯ ಕೋಲನ್ನು ಬಿಡದೇ ಇನ್ನೊಂದು ಜೋಕಾಲಿಯ ಕೋಲಿಗೆ ಕೆಳಮುಖವಾಗಿ ಜೋತಾಡುವ ಮನುಷ್ಯನು ಅವಳನ್ನು ಹಿಡಿಯಲು ಸಾಧ್ಯವಿಲ್ಲ. ಅದರಂತೆ ಸಾಧಕನು ಸರ್ವಸ್ವವನ್ನು ತ್ಯಾಗ ಮಾಡದೇ ಈಶ್ವರನು ಅವನಿಗೆ ಆಧಾರ ಕೊಡಲಾರನು.
ತ್ಯಾಗ ಮಾಡುವುದೆಂದರೆ ವಸ್ತುಗಳನ್ನು ತ್ಯಜಿಸುವುದಲ್ಲ, ‘ಆ ವಸ್ತುಗಳ ಬಗೆಗಿನ ಆಸಕ್ತಿಯನ್ನು ಬಿಡುವುದು’. ಪ್ರಾರಂಭದಲ್ಲಿ ಗುರುಗಳು ಶಿಷ್ಯನಿಗೆ ಅವನಲ್ಲಿರುವ ವಸ್ತುಗಳನ್ನು ತ್ಯಾಗ ಮಾಡಲು ಹೇಳುತ್ತಾರೆ. ಕೊನೆಗೆ ಅವನ ಆಸಕ್ತಿ ಕಡಿಮೆಯಾದ ಮೇಲೆ, ಅವನಿಗೆ ಯಥೇಚ್ಛವಾಗಿ ಕೊಡುತ್ತಾರೆ. ಛತ್ರಪತಿ ಶಿವಾಜಿ ಮಹಾರಾಜರಿಗೆ ಆಸಕ್ತಿಯಿರಲಿಲ್ಲ; ಆದ್ದರಿಂದಲೇ ಸಮರ್ಥ ರಾಮದಾಸಸ್ವಾಮಿಗಳು ಅವರಿಗೆ ಅರ್ಪಿಸಿದ ರಾಜ್ಯವನ್ನು ಶಿವಾಜಿ ಮಹಾರಾಜರಿಗೆ ಹಿಂದಿರುಗಿಸಿದರು.
೮. ಪ್ರೀತಿ : ಸಾಧನೆಯನ್ನು ಮಾಡುತ್ತಾ ಆಧ್ಯಾತ್ಮಿಕ ಮಟ್ಟವು ಶೇ. ೭೦ ರಷ್ಟಾದ ಮೇಲೆ ಇತರರ ಬಗ್ಗೆ ಪ್ರೀತಿಯೆನಿಸತೊಡಗುತ್ತದೆ. ಪ್ರೀತಿಯೆಂದರೆ ನಿರಪೇಕ್ಷ ಪ್ರೇಮ. ವ್ಯಾವಹಾರಿಕ ಪ್ರೇಮದಲ್ಲಿ ಅಪೇಕ್ಷೆಯಿರುತ್ತದೆ. ಸಾಧನೆ ಮಾಡುವುದರಿಂದ ಸಾತ್ತ್ವಿಕತೆಯು ಹೆಚ್ಚಾಗುವುದರಿಂದ ಸಾನ್ನಿಧ್ಯದಲ್ಲಿರುವ ಚರಾಚರಸೃಷ್ಟಿಯನ್ನು ಸಂತುಷ್ಟಗೊಳಿಸುವ ವೃತ್ತಿ ನಿರ್ಮಾಣವಾಗುತ್ತದೆ. ಪ್ರತಿಯೊಂದು ವಸ್ತುವಿನಲ್ಲಿ ಪರಮೇಶ್ವರನ ರೂಪ ಕಾಣಿಸತೊಡಗುತ್ತದೆ. ‘ವಸುಧೈವ ಕುಟುಂಬಕಮ್|’ ಅಂದರೆ ವಿಶ್ವಕ್ಕೆ ಒಂದು ಪ್ರೇಮಮಯ ಕುಟುಂಬದ ಸ್ವರೂಪ ಬರುತ್ತದೆ. ಈ ರೀತಿಯಲ್ಲಿ ಪ್ರೇಮಕ್ಕೆ ವಿಶಾಲತೆಯು ಬಂದು ಇನ್ನೊಬ್ಬರ ಬಗ್ಗೆ ಪ್ರೀತಿ ನಿರ್ಮಾಣವಾಗುತ್ತದೆ. ಇದನ್ನು ಬೇಗನೇ ಸಾಧ್ಯಗೊಳಿಸಲು ಮೊದಲು ಪ್ರಯತ್ನಪೂರ್ವಕವಾಗಿ ಪ್ರೇಮವನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ಸತ್ಸಂಗದಲ್ಲಿರುವುದು ಮಹತ್ವದ್ದಾಗಿರುತ್ತದೆ. ಮೊದಲು ಸತ್ಸಂಗಕ್ಕೆ ಬರುವ ಸಾಧಕರ ಬಗ್ಗೆ ಪ್ರೀತಿ ಎನಿಸುತ್ತದೆ, ನಂತರ ಇತರ ಸಂಪ್ರದಾಯದ ಸಾಧಕರ ಬಗ್ಗೆ, ಮುಂದೆ ಸಾಧನೆ ಮಾಡುವವರ ಬಗ್ಗೆ ಮತ್ತು ಕೊನೆಗೆ ಎಲ್ಲ ಪ್ರಾಣಿಮಾತ್ರರ ಬಗ್ಗೆ ಪ್ರೀತಿಯು ನಿರ್ಮಾಣವಾಗುತ್ತದೆ.
|| ಗುರುಕೃಪಾ ಹಿ ಕೇವಲಂ ಶಿಷ್ಯ ಪರಮಮಂಗಲಂ ||
ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡಿ ಸನಾತನ ಸಂಸ್ಥೆಯಲ್ಲಿ 800ಕ್ಕಿಂತ ಹೆಚ್ಚು ಸಾಧಕರು ಶೇ.60 ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಾರೆ. ಅಂದರೆ ಇಂತಹ ಸಾಧಕರಿಗೆ ಪುನರ್ಜನ್ಮವಿರುವುದಿಲ್ಲ. ಮೃತ್ಯುವಿನ ನಂತರ ಈ ಸಾಧಕರು ಸಪ್ತಲೋಕಗಳಲ್ಲಿ ಒಂದಾದ ಮಹರ್ಲೋಕಕ್ಕೆ ಹೋಗುತ್ತಾರೆ. ಮಹರ್ಲೋಕದಿಂದ ಮುಂದೆ ಸಾಧನೆ ಮಾಡುತ್ತಾ, ಜನಲೋಕ, ತಪರ್ಲೋಕ ಮತ್ತು ಸತ್ಯಲೋಕವನ್ನು ತಲುಪಿ ಮೋಕ್ಷ ಹೊಂದುತ್ತಾರೆ. ಹಾಗೆಯೇ 66 ಸಾಧಕರು ಸಂತಪದವಿಯನ್ನು ತಲುಪಿದ್ದಾರೆ. ಅಂದರೆ ಶೇ.70ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಾರೆ. ಇವರು ಮೃತ್ಯುವಿನ ನಂತರ ಜನಲೋಕಕ್ಕೆ ಹೋಗುತ್ತಾರೆ, ನಂತರ ತಪರ್ಲೋಕ ಮತ್ತು ಸತ್ಯಲೋಕವನ್ನು ತಲುಪಿ ಮೋಕ್ಷ ಹೊಂದುತ್ತಾರೆ.
ಇದರಿಂದಲೇ ಸನಾತನ ಸಂಸ್ಥೆಯು ಕಲಿಸುತ್ತಿರುವ ಗುರುಕೃಪಾಯೋಗದ ಶ್ರೇಷ್ಠತೆ ಗಮನಕ್ಕೆ ಬರುತ್ತದೆ. ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಸಾಧನೆ ಮಾಡಲು ಸ್ಫೂರ್ತಿ ಸಿಗಲಿ ಎಂದು ಗುರುಚರಣಗಳಲ್ಲಿ ಪ್ರಾರ್ಥನೆ.
(ವಿವರವಾದ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ “ಗುರುಕೃಪಾಯೋಗಾನುಸಾರ ಸಾಧನೆ”)
On the Home page, if nakshatra,yoga, karana of the day are added, it would be very
Appropriate
How to contact u? I want to contact and express!!
Namaskar
Please send us an email – [email protected]