೧. ಶೈವ ಮತ್ತು ವೈಷ್ಣವ ಇವೆರಡೂ ಪಂಥಗಳ ಐಕ್ಯದ ಸಂಕೇತವಾಗಿರುವ ಏಕೈಕ ದೇವತೆ
‘ಭಾರತದಲ್ಲಿನ ಮುಖ್ಯ ಸಂಪ್ರದಾಯಗಳಲ್ಲಿ ಶೈವ ಮತ್ತು ವೈಷ್ಣವ ಇವೆರಡು ಸಂಪ್ರದಾಯಗಳಿವೆ. ಇವೆರಡೂ ಸಂಪ್ರದಾಯಗಳು ಶ್ರೇಷ್ಠವಾಗಿವೆ. ವಿಷ್ಣು ಮತ್ತು ಶಿವ ಪರಸ್ಪರರ ಪರಮ ಭಕ್ತರಾಗಿದ್ದಾರೆ. ಶಿವನು ರಾಮನ ನಾಮಜಪ ಮಾಡುತ್ತಾನೆ ಮತ್ತು ರಾಮನು ಶಿವನ ಉಪಾಸನೆ ಮಾಡುತ್ತಾನೆ. ವಿಷ್ಣು ಎಲ್ಲಕ್ಕಿಂತ ಶ್ರೇಷ್ಠ ಶೈವನಾಗಿದ್ದಾನೆ ಮತ್ತು ಶಿವನು ಸರ್ವಶ್ರೇಷ್ಠ ವೈಷ್ಣವನಾಗಿದ್ದಾನೆ. ಆದ್ದರಿಂದ ಶಿವನ ಅಂಶವಿರುವ ಹನುಮಾನನು ಪ್ರಭು ಶ್ರೀರಾಮನ ಪರಮ ಭಕ್ತನಾಗಿದ್ದಾನೆ. ಶೈವ ಮತ್ತು ವೈಷ್ಣವ ಇವರಲ್ಲಿ ಮತಭೇದಗಳಿದ್ದರೂ ಹನುಮಾನನು ಎರಡೂ ಸಂಪ್ರದಾಯಗಳಿಗೆ ವಂದನೀಯನಾಗಿದ್ದಾನೆ. ಈ ರೀತಿಯಲ್ಲಿ ಹನುಮಾನನು ಶೈವ ಮತ್ತು ವೈಷ್ಣವ ಇವೆರಡೂ ಪಂಥದವರ ಐಕ್ಯದ ಸಂಕೇತವಿರುವ ಏಕೈಕ ದೇವತೆಯಾಗಿದ್ದಾನೆ.
೨. ಪಂಚದೇವತೆಯರೊಂದಿಗೆ ನಿಕಟ ಸಂಬಂಧವಿರುವುದು
ಅ. ಶ್ರೀವಿಷ್ಣು : ಹನುಮಾನನು ಪ್ರಭು ಶ್ರೀರಾಮನ ಪರಮ ಭಕ್ತನಾಗಿದ್ದಾನೆ.
ಆ. ಶಿವ : ಹನುಮಾನನು ಶಿವನ ಅಂಶಾವತಾರನಾಗಿದ್ದು ಅವನು ೧೧ ನೇ ರುದ್ರನಾಗಿದ್ದಾನೆ.
ಇ. ದೇವಿ : ಹನುಮಂತನಿಗಾಗಿ ಲಕ್ಷ್ಮೀ ದೇವಿ ಮತ್ತು ಪಾರ್ವತಿದೇವಿ ಇವರಿಬ್ಬರೂ ಪೂಜನೀಯರಾಗಿದ್ದಾರೆ. ಸೀತಾಮಾತೆಯನ್ನು ಹುಡುಕುವ ಸಂಪೂರ್ಣ ಶ್ರೇಯಸ್ಸು ಹನುಮಂತನಿಗೆ ಸಲ್ಲುತ್ತದೆ. ಅದರಂತೆಯೇ ಹನುಮಂತನ ಮೇಲೆ ಸರಸ್ವತೀದೇವಿಯ ವಿಶೇಷ ಕೃಪೆಯಿತ್ತು; ಆದ್ದರಿಂದ ಹನುಮಂತನು ಸಂಗೀತ ಮತ್ತು ವ್ಯಾಕರಣದಲ್ಲಿ ನಿಪುಣನಾಗಿದ್ದಾನೆ.
ಈ. ಗಣಪತಿ : ಗಣಪತಿ ಮತ್ತು ಹನುಮಂತ ಇಬ್ಬರೂ ಶಿವನಿಗೆ ಪರಮ ಪ್ರಿಯರಾಗಿದ್ದಾರೆ. ಇಬ್ಬರ ಬಣ್ಣವೂ ಕೆಂಪಾಗಿದೆ ಮತ್ತು ಇಬ್ಬರಿಗೂ ಸಿಂಧೂರ ಪ್ರಿಯವಾಗಿದೆ. ಶಮಿ ಅಥವಾ ಮಂದಾರ ಈ ವೃಕ್ಷದಲ್ಲಿ ಗಣಪತಿ ಮತ್ತು ಹನುಮಂತ ಇವೆರಡೂ ತತ್ತ್ವಗಳಿರುತ್ತವೆ. ಮಂಗಳ ಈ ಗ್ರಹವು, ಹಾಗೆಯೇ ಮಂಗಳವಾರ ಈ ವಾರ ಎರಡೂ ದೇವತೆಗಳ ತತ್ತ್ವದೊಂದಿಗೆ ಮತ್ತು ಕೆಂಪು ಬಣ್ಣದೊಂದಿಗೆ ಸಂಬಂಧಿಸಿವೆ. ಇಬ್ಬರೂ ಎಲ್ಲ ವಿಘ್ನಗಳನ್ನು ಮತ್ತು ಅರಿಷ್ಟಗಳನ್ನು ನಾಶಪಡಿಸುವ ಪರಮ ಮಾಂಗಲ್ಯದ ಶುಭಸೂಚಕರಾಗಿದ್ದಾರೆ.
ಉ. ಸೂರ್ಯದೇವ : ಸೂರ್ಯನಾರಾಯಣನು ಹನುಮಂತನ ಗುರುವಾಗಿದ್ದಾನೆ. ಬಾಲಕ ಹನುಮಾನನು ಕೆಲವು ಸಮಯ ಸೂರ್ಯಲೋಕದಲ್ಲಿ ನಿವಾಸ ಮಾಡಿ ಸೂರ್ಯನಿಂದ ವೇದ, ವೇದಾಂಗ, ಶಾಸ್ತ್ರ, ವಿದ್ಯೆ ಮತ್ತು ಕಲೆಗಳ ಜ್ಞಾನದೊಂದಿಗೆ ಆತ್ಮಜ್ಞಾನವನ್ನೂ ಪ್ರಾಪ್ತ ಮಾಡಿಕೊಂಡಿದ್ದನು. ಹನುಮಾನನು ಬೃಹಸ್ಪತಿಯಂತೆ ಪ್ರಗಲ್ಭನಾಗಿದ್ದರಿಂದ ಸೂರ್ಯನ ಪರಮಪ್ರೀತಿಯ ಶಿಷ್ಯನಾದನು.
೩. ತನ್ನನ್ನು ಶ್ರೀರಾಮನ ದಾಸನೆಂದು ತಿಳಿಯುವ ಹನುಮಂತ!
೩ ಅ. ಸ್ವತಃ ಉಚ್ಚ ದೇವತೆಯಾಗಿದ್ದರೂ ದೇವತ್ವ ಸ್ವೀಕರಿಸದೆ ರಾಮನ ಭಕ್ತಿ ಮಾಡಿ ತನ್ನನ್ನು ‘ರಾಮದಾಸ’ ಹೇಳಿಸಿಕೊಳ್ಳುವಲ್ಲಿ ಹನುಮಂತನು ಗೌರವ ಅನುಭವಿಸಿದನು.
೩ ಆ. ರುದ್ರಾವತಾರ, ಪವನಸುತ ಮತ್ತು ಕೇಸರಿನಂದನನಾಗಿದ್ದರೂ ರಾವಣನಿಗೆ ‘ಪ್ರಭು ಶ್ರೀರಾಮನ ದಾಸ’ ಎಂಬ ತನ್ನ ಪರಿಚಯ ನೀಡುವ ವಿನಯಶೀಲ ಹನುಮಾನನು ! : ಅಶೋಕವನದಿಂದ ಹನುಮಂತನ್ನು ಬಂಧಿಸಿ ರಾಜದರ್ಬಾರಿನಲ್ಲಿ ರಾವಣನ ಮುಂದೆ ನಿಲ್ಲಿಸಲಾಯಿತು. ಆಗ ‘ನೀನು ಯಾರು ? ನಿನ್ನ ಪರಿಚಯ ಹೇಳು’, ಎಂದು ರಾಕ್ಷಸರು ಹನುಮಂತನನ್ನು ಕೇಳಿದರು. ಹನುಮಂತನು ೧೧ ನೇ ರುದ್ರ, ಸೂರ್ಯನಾರಾಯಣನ ಶಿಷ್ಯ, ವಾಯುಪುತ್ರ, ವಾನರರಾಜ ಕೇಸರಿಯ ರಾಜಪುತ್ರ, ಸುಗ್ರೀವನ ಮಂತ್ರಿ ಮತ್ತು ಪ್ರಭು ಶ್ರೀರಾಮನ ಪರಮ ಭಕ್ತನಾಗಿದ್ದನು; ಆದರೆ ಅವನು ಮೇಲಿನ ಪೈಕಿ ತನ್ನ ಯಾವುದೇ ಪರಿಚಯ ಹೇಳಲಿಲ್ಲ. ಅವನು, “ನಾನು ತ್ರಿಲೋಕಪತಿ ಪ್ರಭು ಶ್ರೀರಾಮಚಂದ್ರನ ದಾಸ ಮತ್ತು ಸೇವಕ ಹನುಮಂತನಾಗಿದ್ದೇನೆ ಮತ್ತು ರಾವಣನ ಬಳಿ ಶ್ರೀರಾಮನ ದೂತನಾಗಿ ಬಂದಿದ್ದೇನೆ”, ಎಂದು ಹೇಳಿದನು. ಇದರಿಂದ ಹನುಮಂತನ ಹೃದಯದಲ್ಲಿನ ಪ್ರಭು ಶ್ರೀರಾಮನ ಬಗ್ಗೆ ಅಪಾರ ವಿನಮ್ರಭಾವವು ಪ್ರಕಟವಾಗುತ್ತದೆ.
೪. ಬ್ರಹ್ಮದೇವನು ಹನುಮಂತನಿಗೆ ಬ್ರಹ್ಮಾಸ್ತ್ರದಿಂದ ಮುಕ್ತವಿರುವ ಅಭಯದಾನ ನೀಡಿದ್ದರೂ ಬ್ರಹ್ಮಾಸ್ತ್ರದ ಗೌರವ ಕಾಪಾಡಲು ಭಗವಂತನ ಇಚ್ಛೆ ಅರಿತು ಹನುಮಂತನು ತನ್ನನ್ನು ಬ್ರಹ್ಮಪಾಶದಲ್ಲಿ ಸಿಲುಕಿಸಿಕೊಳ್ಳುವುದು
೪ ಅ. ಬ್ರಹ್ಮದೇವನ ಶ್ರೇಷ್ಠ ಶಕ್ತಿಯ ಗೌರವ ಕಾಪಾಡುವುದು : ಲಂಕೆಯಲ್ಲಿನ ಅಶೋಕವನದಲ್ಲಿ ಹನುಮಂತನೊಂದಿಗೆ ಯುದ್ಧ ಮಾಡುವಾಗ ಜಂಬು ಮಾಳಿ ಮತ್ತು ಅಕ್ಷಕುಮಾರ ಇವರ ವಧೆಯ ನಂತರ ಹನುಮಂತನನ್ನು ಬಂಧಿಸಲು ಇಂದ್ರಜಿತು ಬಂದನು. ಅವನು ಬಳಸಿದ ಎಲ್ಲ ಶಸ್ತ್ರಾಸ್ತ್ರಗಳು ಹನುಮಂತನೆದುರು ನಿಷ್ಫಲವಾದವು. ಆಗ ಕೊನೆಯ ಪ್ರಯತ್ನವೆಂದು ಅವನು ಹನುಮಂತನ ಮೇಲೆ ಬ್ರಹ್ಮಾಸ್ತ್ರ ಉಪಯೋಗಿಸಿದನು. ಬ್ರಹ್ಮಾಸ್ತ್ರವು ಶ್ರೇಷ್ಠ ಮತ್ತು ನಿಖರವಾದ ಅಸ್ತ್ರವಾಗಿದೆ. ಅದರ ಪ್ರಭಾವದಿಂದ ಯಾರೂ ಉಳಿಯಲಾರರು; ಆದರೆ ಬ್ರಹ್ಮದೇವನು ಹನುಮಂತನಿಗೆ ಅವನ ಬಾಲ್ಯದಲ್ಲಿಯೇ ಬ್ರಹ್ಮಾಸ್ತ್ರದಿಂದ ಅಭಯದಾನ ನೀಡಿದ್ದನು. ಆದ್ದರಿಂದ ಬ್ರಹ್ಮಾಸ್ತ್ರವೂ ಹನುಮಂತನ ಮುಂದೆ ನಿಷ್ಫಲವೇ ಆಗುವುದಿತ್ತು. ಆದರೂ ಬ್ರಹ್ಮದೇವನ ಶ್ರೇಷ್ಠ ಶಕ್ತಿಯ ಗೌರವ ಕಾಪಾಡಲು ಹನುಮಂತನು ಬ್ರಹ್ಮಾಸ್ತ್ರದಿಂದ ಬಂದಿಯಾಗುವುದನ್ನು ಸ್ವೀಕರಿಸಿದನು.
೪ ಆ. ಲವ-ಕುಶರು ಸಾಕ್ಷಾತ್ ಶ್ರೀರಾಮ ಮತ್ತು ಸೀತೆಯರ ಪುತ್ರರಾಗಿರುವುದನ್ನು ಅಂತರ್ಜ್ಞಾನದಿಂದ ಗುರುತಿಸುವುದು : ಇಂತಹ ಮತ್ತೊಂದು ಪ್ರಸಂಗವು ಉತ್ತರ ರಾಮಾಯಣಕಾಲದಲ್ಲಿಯೂ ಘಟಿಸಿತು. ಲವ-ಕುಶರು ಪ್ರಭು ಶ್ರೀರಾಮನ ಅಶ್ವಮೇಧ ಯಜ್ಞದ ಯಜ್ಞೀಯ ಅಶ್ವವನ್ನು ಹಿಡಿದರು. ಆಗ ಅವರೊಂದಿಗೆ ಯುದ್ಧ ಮಾಡಲು ಹೋಗಿದ್ದ ಶತ್ರುಘ್ನ, ಲಕ್ಷ್ಮಣ, ಭರತ ಮತ್ತು ಸುಗ್ರೀವರು ಅಯೋಧ್ಯೆಯ ಚದುರಂಗಿ ಸೇನೆಯೊಂದಿಗೆ ಪರಾಜಯಗೊಂಡು ಮೂರ್ಛೆ ಹೋದರು. ಆಗ ರಾಮಭಕ್ತ ಹನುಮಂತನು ಲವ-ಕುಶರೊಂದಿಗೆ ಯುದ್ಧ ಮಾಡಲು ಹೋದನು. ಲವ-ಕುಶರನ್ನು ನೋಡಿದಾಗ ‘ಅವರು ದೈವೀ ಬಾಲಕರಾಗಿದ್ದು ಸಾಕ್ಷಾತ್ ಪ್ರಭು ಶ್ರೀರಾಮಚಂದ್ರ ಮತ್ತು ಸೀತಾಮಾತಾ ಇವರ ಸುಪುತ್ರರಾಗಿದ್ದಾರೆ’ ಎಂಬುದನ್ನು ಹನುಮಂತನು ಅಂತರ್ಜ್ಞಾನದಿಂದ ಗುರುತಿಸಿದನು. ಆದ್ದರಿಂದ ಲವ-ಕುಶರು ಬ್ರಹ್ಮಾಸ್ತ್ರವನ್ನು ಬಿಟ್ಟಾಗ ಹನುಮಂತನು ಬ್ರಹ್ಮಪಾಶದಲ್ಲಿ ಸಿಲುಕಿಕೊಳ್ಳುವುದನ್ನು ಸ್ವೀಕರಿಸಿದನು.
೪ ಇ. ಶ್ರೀಕೃಷ್ಣನ ಆಜ್ಞಾಪಾಲನೆ ಮಾಡುವುದು : ದ್ವಾಪರಯುಗದಲ್ಲಿ ಹನುಮಂತನು ಹಿಮಾಲಯದಲ್ಲಿ ಧ್ಯಾನಸ್ಥನಾಗಿ ಕುಳಿತುಕೊಂಡಿದ್ದನು. ಆಗ ಮಾಯಾವೀ ಪೌಂಡ್ರಕ ರಾಜನು ದ್ವಿವಿದ ವಾನರನನ್ನು ಹಿಮಾಲಯಕ್ಕೆ ಕಳುಹಿಸಿದನು. ಭಗವಾನ್ ಶ್ರೀಕೃಷ್ಣನ ಆಜ್ಞೆಯಿಂದ ಹನುಮಾನನು ಅವನೊಂದಿಗೆ ಯುದ್ಧ ಮಾಡಲಾರಂಭಿಸಿದನು. ಯುದ್ಧದಲ್ಲಿ ಸೋತಂತೆ ನಟಿಸಿ ಬಂದಿಯಾಗಿ ದ್ವಿವಿದ ವಾನರನೊಂದಿಗೆ ಪೌಂಡ್ರಕನ ನಗರಕ್ಕೆ ಹೋಗುವ ಸೂಕ್ಷ್ಮ-ಸಂಕೇತವನ್ನು ಶ್ರೀಕೃಷ್ಣನು ಹನುಮಂತನಿಗೆ ನೀಡಿದನು. ಆದ್ದರಿಂದ ದ್ವಿವಿದ ವಾನರನಿಗಿಂತ ಲಕ್ಷಪಟ್ಟು ಹೆಚ್ಚು ಬಲಶಾಲಿಯಾಗಿರುವ ಹನುಮಂತನು ದ್ವಿವಿದನ ಬ್ರಹ್ಮಪಾಶದಲ್ಲಿ ಸಿಲುಕಿಕೊಂಡನು. ಈ ಮೂರೂ ಪ್ರಸಂಗಗಳಲ್ಲಿ ಪ್ರತಿಸ್ಪರ್ಧಿಯವರಿಂದ ಯುದ್ಧದಲ್ಲಿ ಪರಾಜಯಗೊಂಡು ಅವಮಾನಗೊಳ್ಳುವ ಪ್ರಸಂಗ ಒದಗಿದರೂ ಹನುಮಂತನು ಸ್ಥಿತಪ್ರಜ್ಞನಾಗಿದ್ದನು ಮತ್ತು ಅವನಿಗೆ ಇದರ ಬಗ್ಗೆ ಏನೂ ಅನಿಸಲಿಲ್ಲ. ತನ್ನ ಪರಾಜಯ ಮತ್ತು ಅವಮಾನ ಇವುಗಳ ಬಗ್ಗೆ ಅವನಿಗೆ ಏನೂ ಅನಿಸುತ್ತಿರಲಿಲ್ಲ, ಅಂದರೆ ತನ್ನ ಪ್ರತಿಷ್ಠೆಯು ಅವನಿಗೆ ಸ್ವಲ್ಪವೂ ಮಹತ್ವದ್ದೆಂದು ಅನಿಸುತ್ತಿರಲಿಲ್ಲ. ಅವನ ದೃಷ್ಟಿಯಲ್ಲಿ ‘ಭಗವಂತನ ಇಚ್ಛೆ ಅರಿತುಕೊಂಡು ಅದರಂತೆ ಆಜ್ಞಾಪಾಲನೆ ಮಾಡುವುದು’, ಇದುವೇ ಎಲ್ಲಕ್ಕಿಂತ ಮಹತ್ವದ್ದಿತ್ತು. ಇದರಿಂದಲೇ ಮಾರುತಿರಾಯನ ಶ್ರೇಷ್ಠತೆ ಗಮನಕ್ಕೆ ಬರುತ್ತದೆ. ಶತ್ರುವನ್ನು ತಿಳಿದುಕೊಳ್ಳಲು ರಾಕ್ಷಸರಿಂದ ಪರಾಭವಗೊಳ್ಳುವುದು, ಬಂಧಿತನಾಗುವುದು ಮತ್ತು ಅವಮಾನಗೊಳ್ಳುವುದನ್ನು ಸಹಜವಾಗಿ ಸ್ವೀಕರಿಸುವ ಅಹಂಕಾರವಿಲ್ಲದ, ಕೂಟನೀತಿಜ್ಞ ಮತ್ತು ಕುಶಲ ರಾಜದೂತ ಎಂದು ಕೂಡಾ ಹನುಮಂತನು ವಿಖ್ಯಾತನಾಗಿದ್ದಾನೆ.
೫. ಅಪಾರ ಸಾಮರ್ಥ್ಯವಿರುವ ಮಹಾಬಲಿ !
೫ ಅ. ರಾಕ್ಷಸ ಯೋಧರು ಪ್ರಾಣಘಾತಕ ಶಸ್ತ್ರಾಸ್ತ್ರಗಳಿಂದ ಮಾಡಿದ ದಾಳಿಯು ವಾನರಸೇನೆಯವರೆಗೆ ತಲುಪುವ ಮೊದಲು ತನ್ನ ಮೈಮೇಲೆ ತಡೆದು ಅವುಗಳನ್ನು ನಿಷ್ಕ್ರಿಯ ಮಾಡುವ ವಜ್ರಾಂಗ ಹನುಮಂತ ! : ಲಂಕೆಯ ಧರ್ಮಯುದ್ಧದಲ್ಲಿ ರಾವಣನ ಸೈನ್ಯದಲ್ಲಿನ ಮಾಯಾವೀ ಶಕ್ತಿಸಂಪನ್ನರಾಗಿರುವ ಅತಿಕಾಯ, ನರಾಂತಕ, ದೇವಾಂತಕ, ಪ್ರಹಸ್ತ, ಇಂದ್ರಜಿತು ಇವರಂತಹ ಮಹಾಬಲಶಾಲಿ ರಾಕ್ಷಸ ಯೋಧರು ಅನೇಕ ಪ್ರಸಂಗಗಳಲ್ಲಿ ವಾನರಸೇನೆ, ಹಾಗೆಯೇ ಸುಗ್ರೀವ, ಅಂಗದ, ವಿಭೀಷಣ, ಲಕ್ಷ್ಮಣ ಇತ್ಯಾದಿ ಧರ್ಮಯೋಧರ ಮೇಲೆ ವಿವಿಧ ರೀತಿಯ ವಿಧ್ವಂಸಕ ಮತ್ತು ಪ್ರಾಣಘಾತಕ ಶಸ್ತ್ರಾಸ್ತ್ರಗಳ ಸುರಿಮಳೆಗೈದರು; ಆದರೆ ಹನುಮಂತನು ಇವೆಲ್ಲ ಶಸ್ತ್ರಾಸ್ತ್ರಗಳನ್ನು ವಾನರಸೇನೆಯವರೆಗೆ ತಲುಪುವ ಮೊದಲೇ ತನ್ನ ಮೈಮೇಲೆ ತಡೆದು ಅವುಗಳನ್ನು ನಿಷ್ಕ್ರಿಯಗೊಳಿಸಿದನು. ಅಸಂಖ್ಯ ಶಸ್ತ್ರಾಸ್ತ್ರಗಳ ಆಘಾತದಿಂದ ವಜ್ರಾಂಗ ಹನುಮಂತನಿಗೆ ಯಾವುದೇ ಅಹಿತವಾಗಲಿಲ್ಲ.
೫ ಆ. ಮಹಾಭಾರತದ ಯುದ್ಧದ ಸಮಯದಲ್ಲಿ ಅರ್ಜುನನ ರಥದ ಮೇಲೆ ಸೂಕ್ಷ್ಮರೂಪದಿಂದ ಉಪಸ್ಥಿತನಿರುವ ಹನುಮಂತನು ತಡೆ ಹಿಡಿದಿದ್ದ ದಿವ್ಯಾಸ್ತ್ರಗಳನ್ನು ಯುದ್ಧ ಮುಗಿದ ನಂತರ ಮುಕ್ತ ಮಾಡಿದ್ದರಿಂದ ದೊಡ್ಡ ವಿಸ್ಫೋಟವಾಗಿ ಅರ್ಜುನನ ರಥವು ನುಚ್ಚುನೂರಾಗುವುದು : ಮಹಾಭಾರತದ ಧರ್ಮಯುದ್ಧವು ಆರಂಭವಾಗುವ ಮೊದಲು ಭಗವಾನ ಶ್ರೀಕೃಷ್ಣನು ಹನುಮಂತನಿಗೆ ಅರ್ಜುನನ ರಥದ ಮೇಲೆ ಸೂಕ್ಷ್ಮರೂಪದಲ್ಲಿ ಉಪಸ್ಥಿತನಿರಲು ಹೇಳಿದನು. ಅದರಂತೆ ಅರ್ಜುನನ ಕಪಿಧ್ವಜದಲ್ಲಿ ಹನುಮಂತನು ಸೂಕ್ಷ್ಮರೂಪದಲ್ಲಿ ಸ್ಥಾನಾಪನ್ನನಾದನು. ಮಹಾಭಾರತದ ಧರ್ಮಯುದ್ಧದಲ್ಲಿ ಭೀಷ್ಮಾಚಾರ್ಯ, ದ್ರೋಣಾಚಾರ್ಯ, ಅಶ್ವತ್ಥಾಮಾ ಮತ್ತು ಕರ್ಣ ಇವರಂತಹ ಮಹಾರಥಿಗಳು ಅರ್ಜುನನ ಮೇಲೆ ಪ್ರಾಣಘಾತಕ ಹಾಗೆಯೇ ಸೃಷ್ಟಿ ವಿಧ್ವಂಸಕ ದಿವ್ಯಾಸ್ತ್ರಗಳನ್ನು ಬಿಟ್ಟರು, ಆದರೂ ಶ್ರೀಕೃಷ್ಣನ ಕೃಪೆಯಿಂದ ಅರ್ಜುನನಿಗೆ ಯಾವುದೇ ಆಹಿತವಾಗಲಿಲ್ಲ. ರಥದ ಮೇಲೆ ಸೂಕ್ಷ್ಮರೂಪದಲ್ಲಿ ಕುಳಿತುಕೊಂಡಿದ್ದ ಹನುಮಂತನು ಎಲ್ಲ ದಿವ್ಯಾಸ್ತ್ರಗಳನ್ನು ಕೆಲವು ಸಮಯಕ್ಕಾಗಿ ತಡೆ ಹಿಡಿದನು. ೧೮ ದಿನಗಳ ಯುದ್ಧ ಮುಗಿದ ನಂತರ ಶ್ರೀಕೃಷ್ಣ ಮತ್ತು ಅರ್ಜುನರು ರಥದಿಂದ ಕೆಳಗೆ ಇಳಿದರು ಮತ್ತು ಶ್ರೀಕೃಷ್ಣನ ಆಜ್ಞೆಯಿಂದ ಮಾರುತಿರಾಯನು ರಥ ಬಿಟ್ಟು ಅರ್ಜುನನೆದುರಿನಲ್ಲಿ ಪ್ರಕಟನಾದನು. ಆಗ ಹನುಮಂತನು ತಡೆ ಹಿಡಿದಿದ್ದ ದಿವ್ಯಾಸ್ತ್ರಗಳನ್ನು ಮುಕ್ತ ಮಾಡಿದ್ದರಿಂದ ದೊಡ್ಡ ವಿಸ್ಫೋಟವಾಯಿತು ಮತ್ತು ಅರ್ಜುನನ ರಥವು ನುಚ್ಚುನೂರಾಯಿತು. ಇದರಿಂದ ಹನುಮಂತನಲ್ಲಿರುವ ಅಪೂರ್ವ ಸಾಮರ್ಥ್ಯದ ಅನುಭವವಾಗುತ್ತದೆ. ‘ಧರ್ಮಯುದ್ಧದಲ್ಲಿ ಸೂಕ್ಷ್ಮದಲ್ಲಿ ಕಾರ್ಯ ಮಾಡಿ ನಾಮರಹಿತನಾಗಿದ್ದು ಧರ್ಮರಕ್ಷಣೆಯ ಜವಾಬ್ದಾರಿಯನ್ನು ಹೇಗೆ ಪೂರ್ಣಗೊಳಿಸುವುದು ?’ ಎಂಬುದರ ಉತ್ತಮ ಉದಾಹರಣೆ ಎಂದರೆ ಹನುಮಂತ !
೬. ಹನುಮಂತನಂತಹ ಅಹಂರಹಿತ ಭಕ್ತನ ಮಾಧ್ಯಮದಿಂದ ಭಗವಂತನು ಅನೇಕರ ಗರ್ವಹರಣ ಮಾಡುವುದು
ಹನುಮಂತನು ಭಗವಂತನ ಪರಮ ಭಕ್ತನಾಗಿದ್ದನು. ಆದ್ದರಿಂದ ಅವನಲ್ಲಿ ಸ್ವಲ್ಪವೂ ಅಹಂಕಾರವಿರಲಿಲ್ಲ. ಹನುಮಂತನಂತಹ ಅಹಂರಹಿತ ಭಕ್ತನ ಮಾಧ್ಯಮದಿಂದ ಭಗವಂತನು ಶ್ರೀರಾಮ ಅವತಾರದಲ್ಲಿ ರಾವಣ, ಇಂದ್ರಜಿತು, ಅಹಿರಾವಣ, ಮಹಿರಾವಣ ಇತ್ಯಾದಿ ಬಲಾಢ್ಯ ಅಸುರರ ಗರ್ವಹರಣ ಮಾಡಿದ್ದನು, ಹಾಗೆಯೇ ಕೃಷ್ಣಾವತಾರದಲ್ಲಿ ಭಗವಂತನು ಹನುಮಂತನ ಮಾಧ್ಯಮದಿಂದ ವಿಷ್ಣುವಾಹನ ಗರುಡ, ಸುದರ್ಶನಚಕ್ರ, ಬಲರಾಮ, ಭೀಮ ಮತ್ತು ಅರ್ಜುನ ಈ ಭಕ್ತರ ಸೂಕ್ಷ್ಮ ಅಹಂಭಾವವನ್ನು ನಾಶ ಮಾಡಿದನು.
೭. ಎಲ್ಲರ ಉದ್ಧಾರ ಮಾಡಲು ಮಾರುತಿರಾಯನ ಚರಣಗಳಲ್ಲಿ ಮಾಡಿದ ಪ್ರಾರ್ಥನೆ !
ಅಷ್ಟಾವಧಾನಿ ವ್ಯಕ್ತಿತ್ವವಿರುವ ಹನುಮಂತನ ಚರಣಗಳಲ್ಲಿ ಕೃತಜ್ಞತಾ ಭಾವದಿಂದ ನತಮಸ್ತಕರಾಗಿ ಅವನಿಗೆ ಸಂಪೂರ್ಣ ಶರಣಾಗೋಣ. ತನ್ನ, ಕುಟುಂಬದ, ಸಮಾಜದ, ರಾಷ್ಟ್ರದ, ಧರ್ಮದ ಮತ್ತು ಅಖಿಲ ವಿಶ್ವದ ಉದ್ಧಾರ ಮಾಡಲು ಅವನ ಚರಣಗಳಲ್ಲಿ ಕಳಕಳಿಯಿಂದ ಪ್ರಾರ್ಥನೆ ಮಾಡೋಣ !’
– ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೫.೩.೨೦೧೫)
(ಆಧಾರ : ಸಾಪ್ತಾಹಿಕ ‘ಸನಾತನ ಪ್ರಭಾತ’)