ಕ್ವಾಂಟಮ್ ಸಿದ್ಧಾಂತ ಪ್ರಕಟಗೊಂಡ ನಂತರ ಜಗತ್ತು ಅನೇಕ ತಿರುವುಗಳನ್ನು ಕಂಡಿದೆ. ಬೆಳಕಿನ ಪುಂಜವೊಂದು ನಮ್ಮೆಡೆಗೆ ಬರುವಾಗ ಹೇಗೆ ಚಲಿಸುತ್ತೆ? ಎಂಬ ಪ್ರಶ್ನೆಗೆ ವಿಜ್ಞಾನಿಗಳು ’ಅಲೆಗಳಂತೆ, ಶುದ್ಧ ಸಿಪಾಯಿಗಳಾಗಿ’ ಎಂದು ಉತ್ತರಿಸಿದ್ದರು. ಅದನ್ನು ಸಾಬೀತೂ ಪಡಿಸಿದರು. ಕ್ವಾಂಟಮ್ ಸಿದ್ಧಾಂತ ಚಾಲ್ತಿಗೆ ಬಂದ ಮೇಲೆ ಮತ್ತೊಂದಷ್ಟು ವಿಜ್ಞಾನಿಗಳು ಹೇಳಿದರು, ’ಹಾಗಿಲ್ಲ. ಬೆಳಕಿನ ಪುಂಜ ಶಾಲೆ ಬಿಟ್ಟ ಮಕ್ಕಳಂತೆ ಅಡ್ಡಾದಿಡ್ಡಿಯಾಗಿ ಬಂದು ಎರಗುತ್ತವೆ’ ಎಂದು. ಹೀಗೆ ಹೇಳಿದ್ದಷ್ಟೇ ಅಲ್ಲ, ಅವರದನ್ನು ಸಾಬೀತೂ ಪಡಿಸಿದರು. ಆದರೆ, ಒಂದೇ ಬೆಳಕಿನ ಕಿರಣ ಒಮ್ಮೆ ಶಿಸ್ತಿನಿಂದ ಅಲೆಯಾಗಿ, ಮತ್ತೊಮ್ಮೆ ಚದುರಿದ ಅಶಿಸ್ತಿನ ಕಣವಾಗಿ ನಡೆದಾಡಿದ್ದು ಹೇಗೆ? ತಲೆ ಕೆಡಿಸಿಕೊಂಡ ಬುದ್ಧಿವಂತರೆಂದರು, ’ಅದು ಬೆಳಕಿನ ಇಚ್ಛೆ’.
ಅರೆ ವಾಹ್! ಬೆಳಕಿಗೂ ಇಚ್ಛೆಯಾ ? ಅದಕ್ಕೂ ಮನಸ್ಸಿದೆಯಾ? ಹಾಗಿದ್ದರೆ ಈ ಎಲ್ಲ ಮನಸ್ಸಿಗೂ ಕೇಂದ್ರವಿದೆಯಾ ಎಂಬ ಚರ್ಚೆಗಳು ಶುರುವಾದುವಲ್ಲ, ಆಗಲೇ ವಿಶ್ವಪ್ರಜ್ಞೆಯ ಪರಿಕಲ್ಪನೆ ಹುಟ್ಟಿಕೊಂಡಿದ್ದು. ಈ ವಿಶ್ವಪ್ರಜ್ಞೆಯನ್ನೆ ಕೆಲವರು ಶಕ್ತಿ ಎಂದರು, ಕೆಲವರು ದೇವರು ಎಂದರು. ಈ ವಿಶ್ವ ಶಕ್ತಿಯೊಂದಿಗೆ ತಮ್ಮ ಶಕ್ತಿಯನ್ನು ಟ್ಯೂನ್ ಮಾಡಿಕೊಳ್ಳುವ ಬಗೆ ಕೆಲವರಿಗೆ ಧ್ಯಾನ ಎನ್ನಿಸಿದರೆ, ಮತ್ತೆ ಕೆಲವರಿಗೆ ಅದು ಆಚರಣೆ ಎನ್ನಿಸಿತು ಅಷ್ಟೆ.
ಕೊಂಕಣಿ ಭಾಷೆ ತನಗೆ ಅರ್ಥವಾಗುವುದಿಲ್ಲ, ತನಗೆ ಬರುವುದಿಲ್ಲ ಅಂದ ಮಾತ್ರಕ್ಕೆ ಆ ಭಾಷೆಯೇ ಸರಿಯಿಲ್ಲ ಅನ್ನುವುದು ಎಷ್ಟು ತಪ್ಪೋ ತನಗೆ ದೇವರ ಅರಿವಾಗಲಿಲ್ಲ ಎಂದ ಮಾತ್ರಕ್ಕೆ ಆರಾಧಕರನ್ನು ಟೀಕಿಸುವುದೂ ಮಂದಿರದಿಂದ ದೂರ ತಳ್ಳುವುದೂ ಅಷ್ಟೇ ತಪ್ಪು. ಬಹುಶಃ ಮೂರ್ಖತನವೂ ಹೌದು.
ಮೂಲ : ನೆಲದ ಮಾತು