‘ದೇವರ ಕುರಿತು ಶ್ರದ್ಧಾಯುಕ್ತ ಅಂತಃಕರಣದಿಂದ ವಿಧಿವತ್ತಾಗಿ ಮಾಡಿದ ಉಪಚಾರಗಳ ಸಮರ್ಪಣೆಯೆಂದರೆ ಪೂಜೆ’, ಹೀಗೆ ‘ಶ್ರೀಮದ್ಭಾಗವತ’ದಲ್ಲಿ ಪೂಜೆಯ ವ್ಯಾಖ್ಯೆಯನ್ನು ಮಾಡಲಾಗಿದೆ. ದೇವರ ಪ್ರತಿಮೆಗೆ ಉಪಚಾರಗಳ ವಿಧಿವತ್ ಸಮರ್ಪಣೆ ಮಾಡುವುದೆಂದರೆ ಕರ್ಮಕಾಂಡದಲ್ಲಿ ಬರುವ ಸ್ಥೂಲದಲ್ಲಿನ ಪೂಜೆಯಾಗಿದೆ. ಆಧ್ಯಾತ್ಮಿಕ ಸಾಧನೆಯ ದೃಷ್ಟಿಯಿಂದ ಸ್ಥೂಲದಲ್ಲಿ ಮಾಡುವ ಪೂಜೆಯು ಪ್ರಾಥಮಿಕ ಹಂತದ್ದಾಗಿದ್ದು ಅನಂತರ ಮನಸ್ಸಿನ ಸ್ತರದಲ್ಲಿ ಉಪಾಸನೆಯು ಆರಂಭವಾಗುತ್ತದೆ. ಈ ಹಂತ ತಲುಪಲು ಸುಲಭವಾದ ಸಾಧನವೆಂದರೆ ಮಾನಸಪೂಜೆ! ಮಾನಸಪೂಜೆಯಲ್ಲಿ ಸ್ಥೂಲದಲ್ಲಿ ಮಾಡುವ ಪೂಜೆಯ ವಿಧಿಗಳನ್ನು ಮಾನಸಿಕವಾಗಿ ಮಾಡುವುದಿರುತ್ತದೆ.
ಮಾನಸಪೂಜೆಯ ಲಾಭ
ಮಾನಸಪೂಜೆಯಲ್ಲಿ ನಮ್ಮ ಮನಸ್ಸಿನಲ್ಲಿ ಮೂಡಿದ ದೇವರ ರೂಪದ ಪೂಜೆ ಮಾಡಲು ಸಾಧ್ಯವಾಗುತ್ತದೆ. ಈ ಪೂಜೆಯ ಒಂದು ಲಾಭವೆಂದರೆ ಸ್ಥಳ, ಉಪಕರಣಗಳು, ಶುಚಿತ್ವ ಇತ್ಯಾದಿ ಕರ್ಮಕಾಂಡದಲ್ಲಿ ಬರುವ ಬಂಧನಗಳು ಇಲ್ಲದಿರುವುದರಿಂದ ಯಾವುದೇ ಸ್ಥಳದಲ್ಲಿ ಇದನ್ನು ಮಾಡಬಹುದು. ಎರಡನೆಯ ಲಾಭವೆಂದರೆ ಮಾನಸಪೂಜೆಯ ಮೂಲಕ ಅಖಿಲ ಬ್ರಹ್ಮಾಂಡದಲ್ಲಿ ಯಾವುದೇ ಅತ್ಯುತ್ತಮವಾದ ವಸ್ತುವನ್ನೂ ದೇವರಿಗೆ ಅರ್ಪಣೆ ಮಾಡಬಹುದು. ಇದಕ್ಕಿಂತಲೂ ಶ್ರೇಷ್ಠವಾದ ಮೂರನೆಯ ಲಾಭವೆಂದರೆ ಎಷ್ಟು ಕಾಲ ನಮ್ಮ ಮಾನಸಪೂಜೆಯು ನಡೆಯುತ್ತಿರುತ್ತದೆಯೋ, ಅಷ್ಟು ಕಾಲ ಆ ದೇವರೊಂದಿಗೆ ನಾವು ಅನುಸಂಧಾನದಲ್ಲಿರಬಹುದು. ಸಾಧಕರಿಗೆ ಆಧ್ಯಾತ್ಮಿಕ ಸಾಧನೆಯಲ್ಲಿ ಭಾವಜಾಗೃತವಾಗಲು ಈ ಮಾನಸಪೂಜೆಯು ತುಂಬಾ ಸಹಾಯಕವಾಗಿದೆ.
ಮನಸಪೂಜೆಯನ್ನು ಹೇಗೆ ಮಾಡಬೇಕು ?
ಇಲ್ಲಿ ಉದಾಹರಣೆಗೆಂದು ಶ್ರೀ ಮಹಾಲಕ್ಷ್ಮಿ ದೇವಿಯ ಮನಸಪೂಜೆಯನ್ನು ಹೇಗೆ ಮಾಡಬೇಕು ಎಂದು ತೋರಿಸಲಾಗಿದೆ. ಇದೆ ರೀತಿ ತಮ್ಮ ಇಷ್ಟ ದೇವತೆ, ಕುಲದೇವತೆ, ಗುರುಗಳ ಮನಸಪೂಜೆಯನ್ನು ಮಾಡಬಹುದು. ಮಾತ್ರವಲ್ಲ, ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯನ್ನು ಕೂಡ ಮಾನಸವಾಗಿ ಮಾಡಬಹುದು.
ಶ್ರೀ ಮಹಾಲಕ್ಷ್ಮಿ ದೇವಿಯ ಮನಸಪೂಜೆ
ಪೂಜೆಗಾಗಿ ಬೇಕಾಗುವ ಸಾಹಿತ್ಯ
ಚಿನ್ನದ ತಟ್ಟೆಗಳು, ಚಿನ್ನದ ಹರಿವಾಣ, ಚಿನ್ನದ ಬಟ್ಟಲು, ಚಿನ್ನದ ತಟ್ಟೆಯಲ್ಲಿ ಹೂವುಗಳು, ಚಿನ್ನದ ಕಲಶ, ಚಿನ್ನದ ೫ ನೀಲಾಂಜನ, ಮತ್ತು ದೊಡ್ಡ ಬಟ್ಟಲಿನಲ್ಲಿ ಅರಿಶಿನ ಕುಂಕುಮ – ಇವಿಷ್ಟನ್ನು ನಿಮ್ಮ ಮನಸ್ಸಿನಲ್ಲಿ ನಿಮ್ಮ ಮುಂದೆ ಇಟ್ಟುಕೊಳ್ಳಿ.
ಪೂಜೆ
ಇಂದು ನನ್ನ ಜೀವನದ ಅತ್ಯಂತ ಭಾಗ್ಯದ ದಿನ! ನನಗೆ ಪ್ರತ್ಯಕ್ಷ ದೇವಿಯ ಪೂಜೆಯನ್ನು ಮಾಡುವ ಅವಕಾಶ ಲಭಿಸಿದೆ! ನಾನು ಒಂದು ಚಿನ್ನದ ಕಲಶದಲ್ಲಿ ಸ್ವಲ್ಪ ಬೆಚ್ಚಗಿನ ಸುವಾಸನೆಯುಕ್ತ ನೀರನ್ನು ತೆಗೆದುಕೊಂಡಿದ್ದೇನೆ. ಆ ನೀರಿನಿಂದ ದೇವಿಯ ವಿಗ್ರಹಕ್ಕೆ ಅಭಿಷೇಕ ಮಾಡುತ್ತಿದ್ದೇನೆ. ಈಗ ಒಂದು ಚಿನ್ನದ ಬಟ್ಟಲಿನಲ್ಲಿ ಪಂಚಾಮೃತವನ್ನು ತಯಾರಿಸಿದ್ದೇನೆ. ಈಗ ಆ ಪಂಚಾಮೃತದಿಂದ ದೇವಿಯ ವಿಗ್ರಹಕ್ಕೆ ನಿಧಾನವಾಗಿ ಅಭಿಷೇಕ ಮಾಡುತ್ತಿದ್ದೇನೆ. ಈಗ ಮತ್ತೊಮ್ಮೆ ಬೆಚ್ಚನಗಿನ ನೀರಿನಿಂದ ವಿಗ್ರಹವನ್ನು ತೊಳೆಯುತ್ತಿದ್ದೇನೆ. ಈಗ ಮೃದುವಾದ ರೇಷ್ಮೆ ಬಟ್ಟೆಯಿಂದ ವಿಗ್ರಹವನ್ನು ಒರೆಸುತ್ತಿದ್ದೇನೆ.
ಮಹಾಲಕ್ಷ್ಮಿ ದೇವಿಯು ಬಂಗಾರದ ಅಂಚಿರುವ ಕೆಂಪು ವಸ್ತ್ರಗಳನ್ನು ಧರಿಸಿದ್ದಾಳೆ. ಸುಂದರ ವಿನ್ಯಾಸವಿರುವ ಹಳದಿ ಬಣ್ಣದ ವಸ್ತ್ರವನ್ನು ದೇವಿ ಹೊದ್ದುಕೊಂಡಿದ್ದಾಳೆ. ದೇವಿಯು ವಿವಿಧ ಒಡವೆಗಳನ್ನು ಕೂಡ ಧರಿಸಿರುವುದು ಕಾಣಿಸುತ್ತಿದೆ. ನನ್ನ ಮನಸ್ಸಿನ ಭಾವ ಬದಲಾಗುತ್ತಿದ್ದಂತೆ ದೇವಿಯ ವಿವಿಧ ರೂಪಗಳ ದರ್ಶನ ಕೂಡ ನನಗೆ ಆಗುತ್ತಿದೆ. ಇದರಿಂದ ನನ್ನ ಮನಸ್ಸಿಗೆ ಆನಂದವಾಗುತ್ತಿದೆ.
ಚಿನ್ನದ ಹರಿವಾಣದಲ್ಲಿ ಇಟ್ಟಿರುವ ಚಿನ್ನದ ಬಟ್ಟಲಿನಲ್ಲಿ ಅರಿಶಿನ ಕುಂಕುಮ, ಕೇಸರಿ, ಅಷ್ಟಗಂಧ ಮತ್ತು ಕಸ್ತೂರಿ ಇವೆ. ಅದನ್ನು ನಾನು ದೇವಿಯ ಹಣೆಗೆ ಹಚ್ಚುತ್ತಿದ್ದೇನೆ. ಈಗ ನಾನು ದೇವಿಗೆ ಪ್ರಿಯವಾಗಿರುವ ತಾವರೆ, ಸೇವಂತಿಗೆ, ಗೊಂಡೆ ಹೂವುಗಳನ್ನು ದೇವಿಯ ಚರಣಗಳಲ್ಲಿ ಅರ್ಪಿಸುತ್ತಿದ್ದೇನೆ. ಈಗ ಎರಡು ಸುವಾಸನೆಯುಕ್ತ ಊದುಬತ್ತಿಗಳಿಂದ ದೇವಿಯನ್ನು ಬೆಳಗುತ್ತಿದ್ದೇನೆ. ಅದರೊಂದಿಗೆ ಗಂಟೆಯನ್ನು ಬಾರಿಸುತ್ತಿದ್ದೇನೆ. ಈಗ ನಾನು ದೇವಿಗೆ ಹೋಳಿಗೆ ನೈವೇದ್ಯವನ್ನು ಅರ್ಪಿಸಿ ದೇವಿಗೆ ಆ ನೈವೇದ್ಯವನ್ನು ಸ್ವೀಕರಿಸುವಂತೆ ಆರ್ತತೆಯಿಂದ ಪ್ರಾರ್ಥಿಸುತ್ತಿದ್ದೇನೆ. ಈಗ ನಾನು ತುಪ್ಪದ ೫ ನೀಲಾಂಜನಗಳನ್ನು ಬೆಳಗಿಸಿದ್ದೇನೆ. ಪಂಚಾರತಿಯನ್ನು ಬೆಳಗುವಾಗ ನನಗೆ ದೇವಿಯ ವಿವಿಧ ರೂಪಗಳ ದರ್ಶನವಾಗುತ್ತಿದೆ. ದೇವಿಯ ಚರಣಗಳಲ್ಲಿ ಸಂಪೂರ್ಣವಾಗಿ ಶರಣಾಗಿ ‘ನನ್ನನ್ನು ಉದ್ಧರಿಸು’ ಎಂದು ಕಳಕಳಿಯಿಂದ ವಿನಂತಿಸುತ್ತಿದ್ದೇನೆ. ದೇವಿಯು ವಾತ್ಸಲ್ಯದಿಂದ ನೋಡುತ್ತಿದ್ದಾಳೆ. ಅವಳ ಕೃಪಾದೃಷ್ಟಿಯಿಂದ ನನ್ನ ಸರ್ವ ದುಃಖಗಳು ನಾಶವಾಗಿವೆ. ದೇವಿಯು ಅವಳ ಪ್ರೇಮಮಯ ವರದಹಸ್ತವನ್ನು ನನ್ನ ತಲೆಯ ಮೇಲಿಟ್ಟು ನನ್ನನ್ನು ಆಶೀರ್ವದಿಸುತ್ತಿದ್ದಾಳೆ. ದೇವಿಯು ಅವಳ ಹೂವಿನ ಜಡೆಯನ್ನು ನನಗೆ ಪ್ರಸಾದವೆಂದು ನೀಡುತ್ತಿದ್ದಾಳೆ. ನಾನು ಅವಳ ಚರಣಗಳಲ್ಲಿ ‘ಅಮ್ಮ, ನಿನ್ನ ಸೇವೆಯನ್ನು ಮಾಡುವ ಅವಕಾಶ ನೀಡಿದ್ದಕ್ಕೆ ಕೋಟಿ ಕೋಟಿ ಕೃತಜ್ಞತೆಗಳು’ ಎಂದು ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ.