೧. ಉತ್ಪತ್ತಿ ಮತ್ತು ಅರ್ಥ
ಅ. ‘ವ್ರತ’ ಎಂಬ ಶಬ್ದವು ‘ವೃ’ ಧಾತುವಿನಿಂದ ಉಂಟಾಗಿದೆ. ವರಿಸುವುದು, ಸಂಕಲ್ಪ, ಇಚ್ಛೆ, ಆಜ್ಞಾಪಾಲನೆ, ಉಪಾಸನೆ, ಪ್ರತಿಜ್ಞೆ ಹೀಗೆ ಈ ಶಬ್ದದ ಅನೇಕ ಅರ್ಥಗಳಿವೆ.
ಆ. ವಿಶಿಷ್ಟ ಕಾಲಕ್ಕಾಗಿ ಅಥವಾ ಆಮರಣ ಆಚರಿಸಲ್ಪಡುವ ವಿಶಿಷ್ಟ ನೇಮಧರ್ಮವೆಂದರೆ ‘ವ್ರತ’.
ಇ. ವಿಶಿಷ್ಟ ತಿಥಿಯಂದು, ವಾರದಂದು, ತಿಂಗಳಿನಲ್ಲಿ ಅಥವಾ ಇತರ ಪರ್ವಕಾಲದಲ್ಲಿ ವಿಶಿಷ್ಟ ದೇವತೆಯ ಉಪಾಸನೆಯನ್ನು ಮಾಡಿ ನಮ್ಮ ಮನೋಕಾಮನೆಗಳ ಪೂರ್ತಿಗಾಗಿ ಆಹಾರಸೇವನೆಯಲ್ಲಿ ಮತ್ತು ಇತರ ಆಚರಣೆಗಳಲ್ಲಿ ನಿರ್ಬಂಧವನ್ನು ಪಾಲಿಸುವುದೆಂದರೆ ವ್ರತವನ್ನು ಮಾಡುವುದು.’
ಈ. ಅನೇಕ ಬಾರಿ ‘ವ್ರತವೈಕಲ್ಯ’ ಎಂಬ ಶಬ್ದಪ್ರಯೋಗವನ್ನು ಮಾಡುತ್ತಾರೆ. ಇದರಲ್ಲಿನ ‘ವೈಕಲ್ಯ’ ಶಬ್ದದ ಅರ್ಥವು ‘ಕೊರತೆ ಅಥವಾ ದೋಷ’ ಎಂದಾಗಿದೆ. ಪುರಾಣದಲ್ಲಿಯೂ ಎಲ್ಲೆಡೆ ‘ವ್ರತವೈಕಲ್ಯ’ ಎಂಬ ಶಬ್ದಪ್ರಯೋಗವನ್ನು ವ್ರತದಲ್ಲಿ ಉಳಿದ ದೋಷ ಅಥವಾ ಕೊರತೆಯನ್ನು ತೋರಿಸಲು ಉಪಯೋಗಿಸಲಾಗಿದೆ. ಆದ್ದರಿಂದ ‘ವ್ರತವೈಕಲ್ಯ’ ಶಬ್ದವನ್ನು ಉಪಯೋಗಿಸದೇ ಕೇವಲ ‘ವ್ರತ’ ಎಂಬ ಶಬ್ದವನ್ನೇ ಉಪಯೋಗಿಸಬೇಕು.
೨. ಇತಿಹಾಸ ಮತ್ತು ನಿರ್ಮಿತಿ
ಅ. ಮಾನವನನ್ನು ನಿರ್ಮಿಸುವ ಮೊದಲೇ ಈಶ್ವರನು ಮಾನವನ ಆಚಾರಸಂಹಿತೆಯನ್ನು ನಿರ್ಮಿಸಿದನು. ಅದನ್ನೇ ನಾವು ‘ಅಪೌರುಷೇಯ ವೇದ’ ಎನ್ನುತ್ತೇವೆ. ವೇದಧರ್ಮವನ್ನು ವರ್ಣಾಶ್ರಮಕ್ಕನುಸಾರ ಪಾಲಿಸಿದರೆ ಮಾನವನಿಗೆ, ಜನ್ಮದಿಂದ ಮೃತ್ಯುವಿನವರೆಗೆ ದುಃಖವಂತೂ ಬರುವುದೇ ಇಲ್ಲ, ಇದರ ಬದಲು ಸುಖವು ಲಭಿಸುತ್ತದೆ. ಸುಖವೂ ಮಿಥ್ಯವೇ (ಸುಳ್ಳು) ಆಗಿದೆ, ಆದರೆ ಮಿಥ್ಯವಾದರೂ ಅವನಿಗೆ ಅದು ಸಿಗಬೇಕೆನ್ನುವ ಅಪೇಕ್ಷೆಯಿರುತ್ತದೆ. ಇಂತಹ ಮಿಥ್ಯಾಸುಖವನ್ನು ಪಡೆಯುತ್ತಾ ಆ ಸುಖದ ಬಗ್ಗೆ ವೈರಾಗ್ಯವು ಬಂದು ಅವನು ಮೋಕ್ಷಕ್ಕೆ ಪಾತ್ರನಾಗಬೇಕು ಎನ್ನುವ ರೀತಿಯಲ್ಲಿ ಧರ್ಮದ ರಚನೆಯನ್ನು ಮಾಡಲಾಗಿದೆ. ಅಂದರೆ ಐಹಿಕ ಸುಖದ ಎಲ್ಲ ಭೋಗಗಳನ್ನು ಭೋಗಿಸುತ್ತಾ ಅವನಿಗೆ ಮೋಕ್ಷವು ಲಭಿಸಬೇಕೆಂದು ಈಶ್ವರನು ಧರ್ಮಸಂಹಿತೆಯನ್ನು ನಿರ್ಮಿಸಿದ್ದಾನೆ. ಆದುದರಿಂದ ಭಗವದ್ಗೀತೆಯ ಮೂರನೆಯ ಅಧ್ಯಾಯವನ್ನು ‘ಕರ್ಮಯೋಗ’ ಎನ್ನಲಾಗಿದೆ. ನಿಷ್ಕಾಮ ಭಾವನೆಯಿಂದ ಧರ್ಮಾಚರಣೆ ಮಾಡುವುದನ್ನೇ ಕರ್ಮಯೋಗ ಎನ್ನುತ್ತಾರೆ. ನಮ್ಮ ಧರ್ಮವು ಸಕಾಮ ಭಕ್ತಿಯನ್ನು ಅಪೇಕ್ಷಿಸುವುದಿಲ್ಲ. ಆದರೆ ಕಾಲಪ್ರವಾಹದಲ್ಲಿ ಮಾನವನಲ್ಲಿ ಧರ್ಮದ ಬಗೆಗಿನ ಈ ಮೂಲ ಧೋರಣೆಯು ನಾಶವಾಗುತ್ತಾ ಹೋಯಿತು. ಇದರಿಂದ ಅವನ ಧರ್ಮಾಚರಣೆಯಲ್ಲಿ ದಿನೇದಿನೇ ನ್ಯೂನತೆ ಉಂಟಾಗತೊಡಗಿತು; ಆಗ ವ್ರತಗಳು ನಿರ್ಮಾಣವಾದವು.
ಆ. ಧಾರ್ಮಿಕ ಆಚಾರ ಅಥವಾ ಉಪಾಸನೆಗಳ ಪ್ರಾರಂಭ: ‘ಸಾಮರ್ಥ್ಯವಿರುವ ಅಥವಾ ಅಧಿಕಾರರೂಢರಾಗಿರುವ ವ್ಯಕ್ತಿಯ ಇಚ್ಛೆಯನ್ನೇ ಇತರರಿಗೆ ಆಜ್ಞೆ ಅಥವಾ ನಿಯಮವೆಂದು ಪಾಲಿಸಬೇಕಾಗುತ್ತದೆ. ‘ದೇವರು ತನಗಾಗಿ ಮತ್ತು ಪ್ರಾಣಿಮಾತ್ರರಿಗಾಗಿ ಕೆಲವು ವಿಶಿಷ್ಟ ಆಜ್ಞೆಗಳನ್ನು ಮಾಡಿದ್ದಾನೆ’, ಎಂದು ಶ್ರದ್ಧೆಯುಳ್ಳ ಜನರ ವಿಚಾರವಾಗಿದೆ. ಯಾವಾಗ ಇಂತಹ ಆಜ್ಞೆ ಅಥವಾ ಕರ್ತವ್ಯಗಳನ್ನು ದೀರ್ಘಕಾಲ ಪಾಲಿಸಲಾಗುತ್ತದೆಯೋ, ಆಗ ಅವುಗಳಿಗೆ ರೂಢಿ ಅಥವಾ ನಡತೆಗಳ ಸ್ವರೂಪವು ಪ್ರಾಪ್ತವಾಗುತ್ತದೆ. ‘ದೇವರು ನಿಯಮಿಸಿದ ವಿಶಿಷ್ಟ ಕೃತಿಗಳನ್ನು ನಾವು ಮಾಡಲೇಬೇಕು’, ಎಂಬ ಶ್ರದ್ಧೆ ಜನರಲ್ಲಿ ಉತ್ಪನ್ನವಾದಾಗ ಆ ಕೃತಿಗಳಿಗೆ ಧಾರ್ಮಿಕ ಆಚಾರ ಅಥವಾ ಉಪಾಸನೆಯ ಅರ್ಥವು ಪ್ರಾಪ್ತವಾಗುತ್ತದೆ. ಒಬ್ಬ ವ್ಯಕ್ತಿ ತನ್ನ ಆಚಾರಗಳ ಮೇಲೆ ಅಥವಾ ಆಹಾರ ಮುಂತಾದವುಗಳ ಮೇಲೆ ದೇವರ ಕೃಪೆಗಾಗಿ ನಿರ್ಬಂಧ ಹಾಕಿದಾಗ, ಆ ನಿರ್ಬಂಧಗಳಿಗೆ ಪವಿತ್ರ ಪ್ರತಿಜ್ಞೆ ಅಥವಾ ಧಾರ್ಮಿಕ ಕರ್ತವ್ಯದ ಸ್ವರೂಪವು ಪ್ರಾಪ್ತವಾಗುತ್ತದೆ. ಈ ಎಲ್ಲವುಗಳಿಂದ ವ್ರತ ಎಂಬ ಶಬ್ದದ ಸುತ್ತಲೂ ಆಜ್ಞೆ, ಆಜ್ಞಾಪಾಲನೆ, ಧಾರ್ಮಿಕ ಕರ್ತವ್ಯ, ದೇವತೆಗಳ ಉಪಾಸನೆ, ನೈತಿಕ ಆಚರಣೆ, ವಿಧಿಯುಕ್ತ ಪ್ರತಿಜ್ಞೆ, ಅಂಗೀಕೃತ ಕಾರ್ಯ ಎಂಬ ವಿವಿಧ ಅರ್ಥಗಳು ಒಟ್ಟುಗೂಡುತ್ತದೆ.
೩. ವ್ರತದ ಮಹತ್ವ ಮತ್ತು ಲಾಭಗಳು
ನಮ್ಮ ಶಾಸ್ತ್ರವು ದೇಶಕಾಲ ಪರಿಸ್ಥಿತಿಗನುಗುಣವಾಗಿ ಆಚರಣೆಯನ್ನು ಹೇಳುತ್ತದೆ. ವೇದಗಳಲ್ಲಿ ಹೇಳಿರುವಂತಹ ಆಚರಣೆಯನ್ನು ಮಾಡುವುದು ಸಾಮಾನ್ಯ ಮನುಷ್ಯರಿಗೆ ಕಠಿಣವಾಗಿದೆ. ಅದನ್ನು ಸುಗಮಗೊಳಿಸಿ ಎಲ್ಲರೂ ಆಚರಣೆ ಮಾಡುವಂತಾಗಲಿ ಮತ್ತು ಎಲ್ಲರ ಉದ್ಧಾರವಾಗಲಿ ಎನ್ನುವ ಉದ್ದೇಶದಿಂದ ಪುರಾಣಗಳಲ್ಲಿ ಈ ವ್ರತಗಳನ್ನು ಹೇಳಲಾಗಿದೆ.
ಅ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ : ಪೃಥ್ವಿಯು ಸೂರ್ಯನ ಸುತ್ತಲೂ ತಿರುಗುವುದರಿಂದ ಋತುಗಳು ಉಂಟಾಗುತ್ತವೆ. ಶರೀರ ಹಾಗೂ ಮನಸ್ಸುಗಳನ್ನು ಈ ಬದಲಾವಣೆಗಳೊಂದಿಗೆ ಹೊಂದಿಸಿಕೊಳ್ಳಲು ಅನುಕೂಲವಾಗಲೆಂದು ವ್ರತಗಳನ್ನು ಹೇಳಲಾಗಿದೆ. ರೋಗಗಳು ಒಂದು ವಿಧದಲ್ಲಿ ಪಾಪದ ಫಲವೇ ಆಗಿರುವುದರಿಂದ ವ್ರತಗಳನ್ನು ಆಚರಿಸುವುದರಿಂದ ಶಾರೀರಿಕ, ಮಾನಸಿಕ ಹಾಗೂ ಸೋಂಕು ರೋಗಗಳು ನಾಶವಾಗುತ್ತವೆ.
ಭೀಷ್ಮಾಚಾರ್ಯರು ಸ್ತ್ರೀಯೊಂದಿಗೆ ಯುದ್ಧ ಮಾಡಲಾರೆ ಎನ್ನುವ ವ್ರತವನ್ನು ಸ್ವೀಕರಿಸಿದ್ದರು. ಆದುದರಿಂದಲೇ ಅವರು ಪೂರ್ವ ಜನ್ಮದಲ್ಲಿ ಸ್ತ್ರೀಯಾಗಿದ್ದ ಶಿಖಂಡಿಯೊಂದಿಗೆ ಯುದ್ಧ ಮಾಡಲಿಲ್ಲ. ಆ ಯುದ್ಧದಲ್ಲಿ ಶಿಖಂಡಿಯ ಬಾಣಗಳಿಂದ ಭೀಷ್ಮಾಚಾರ್ಯರಿಗೆ ವೇದನೆಯಾಗದೆ ಆನಂದವೇ ಆಯಿತು.
ಆ. ತಪ್ಪುಗಳ ಪರಿಮಾರ್ಜನೆ : ವ್ರತ, ಉಪವಾಸ, ನಿಯಮ ಮತ್ತು ಶರೀರ ಶುದ್ಧಿಗಳಿಂದಾಗಿ ಎಲ್ಲ ವರ್ಣಗಳೂ ನಿಸ್ಸಂಶಯವಾಗಿಯೂ ಪಾತಕಗಳಿಂದ ಮುಕ್ತವಾಗುತ್ತವೆ.
ಇ. ವ್ರತಂ ಭಾಗ್ಯಮ್ : ವ್ರತದಿಂದ ಭಾಗ್ಯೋದಯವಾಗುತ್ತದೆ. ಇದರಿಂದ ದುಃಖ ಮತ್ತು ಆಪತ್ತುಗಳು ನಾಶವಾಗಿ ಸಂಪತ್ತು, ಕೀರ್ತಿ, ಯಶಸ್ಸು ಮತ್ತು ಆಯುರಾರೋಗ್ಯಗಳು ಲಭಿಸುತ್ತವೆ.
ಈ. ವ್ರತಂ ಪುಣ್ಯಮ್ : ವ್ರತದಿಂದ ಪುಣ್ಯವು ಲಭಿಸುತ್ತದೆ.
ಉ. ವ್ರತಂ ಯಜ್ಞಃ : ಯಜ್ಞಾತ್ ಭವತಿ ಪರ್ಜನ್ಯಃ| ಎನ್ನುವ ಉಕ್ತಿಯಿದೆ. ವ್ರತವು ಯಜ್ಞವಾಗಿರುವುದರಿಂದ, ಅದರಿಂದ ಪರ್ಜನ್ಯ (ಮಳೆ), ವಿಶ್ವಶಾಂತಿಯಂತಹ ಲಾಭಗಳಾಗುತ್ತವೆ. ಹೆಚ್ಚಾಗಿ ಯಜ್ಞಗಳನ್ನು ಮಾಡಿದರೆ ಅದರ ಫಲವಾಗಿ ಸ್ವರ್ಗಪ್ರಾಪ್ತಿಯಾಗುತ್ತದೆ ಮತ್ತು ಅದು ಮೃತ್ಯುವಿನ ನಂತರ ಲಭಿಸುತ್ತದೆ. ವ್ರತದ ಸಂದರ್ಭದಲ್ಲಿ ಹೀಗಾಗುವುದಿಲ್ಲ. ವ್ರತಕರ್ತನಿಗೆ (ವ್ರತವನ್ನಾಚರಿಸುವವನಿಗೆ) ಈ ಜನ್ಮದಲ್ಲಿಯೇ ವ್ರತದ ಫಲವು ಪ್ರಾಪ್ತವಾಗುತ್ತದೆ. ವೈದಿಕ ಯಜ್ಞವು ಮೂರು ವರ್ಣದವರಿಗೆ ಮಾತ್ರ ಮಾಡಲು ಆಗುತ್ತದೆ. ಆದರೆ ವ್ರತಗಳನ್ನು ನಲ್ಕೂ ವರ್ಣದವರು, ಕುಮಾರಿಯರು, ಮುತ್ತೈದೆಯರು, ವಿಧವೆಯರು, ವೇಶ್ಯೆಯರು ಎಲ್ಲರೂ ಆಚರಿಸಬಹುದಾಗಿದೆ.
ಊ. ವ್ರತಂ ತಪಃ : ವ್ರತವು ಒಂದು ವಿಧದ ತಪಸ್ಸೇ ಆಗಿದೆ ಎಂದು ಜಾಬಾಲೋಪನಿಷದ್ ದರ್ಶನದಲ್ಲಿ ಹೇಳಲಾಗಿದೆ. ವ್ರತದಿಂದ ತಪಸ್ಸಿನಿಂದ ಸಿಗುವಂತಹ ಎಲ್ಲ ಫಲಗಳೂ ಸಿಗುತ್ತವೆ.
ಋ. ಉಪಾಸನೆಗೆ ಪೂರಕ ಉಪವಾಸ : ಉಪವಾಸ ಶಬ್ದವು ‘ಉಪ’ ಎಂದರೆ ಹತ್ತಿರ ಮತ್ತು ‘ವಾಸ’ ಎಂದರೆ ವಾಸಿಸುವುದು ಎಂಬುದರಿಂದ ಉತ್ಪನ್ನವಾಗಿದೆ. ಯಾವುದಾದರೊಂದು ಪುಣ್ಯದಿನದಂದು ದೇವರ, ಗುರುಗಳ ಅಥವಾ ಸಂತರ ಸಾನಿಧ್ಯದಲ್ಲಿ ವಾಸಿಸುವುದನ್ನೇ ಉಪವಾಸ ಎನ್ನಲಾಗಿದೆ. ಉಪವಾಸದ ದಿನ ಸ್ವಲ್ಪ ಸಮಯವಾದರೂ ಧ್ಯಾನ-ಧಾರಣೆ, ಜಪ ಇತ್ಯಾದಿ ಮಾಡುವುದು ಅಗತ್ಯವಾಗಿರುತ್ತದೆ. ಶಾಸ್ತ್ರೋಕ್ತವಾದ ಉಪವಾಸದಿಂದ ದೇಹ ಶುದ್ಧಿಯಾಗುತ್ತದೆ ಹಾಗೂ ಅಂತರ್ ಪ್ರವೃತ್ತಿಯು ಶಾಂತವಾಗಲು ಸಹಾ ಯವಾಗುತ್ತದೆ. ಉಪವಾಸದ ದಿನ ಆಲಸ್ಯ, ನಿದ್ರೆ, ಪಿತ್ತ ವಿಕಾರಾದಿಗಳು ಉಂಟಾಗದೇ ಉಪವಾಸವು ಒಳ್ಳೆಯ ರೀತಿಯಲ್ಲಿ ಆಗಲೆಂದು, ಆ ದಿನ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಲು ಹೇಳಲಾಗಿದೆ. ಐತರೇಯ ಬ್ರಾಹ್ಮಣದಲ್ಲಿ,’ವ್ರತವನ್ನು ಅಂಗೀಕರಿಸದವರು ಅರ್ಪಿಸಿದ ಆಹುತಿಗಳನ್ನು ದೇವರು ಸ್ವೀಕರಿಸುವುದಿಲ್ಲ’ ಎಂದು ಹೇಳಲಾಗಿದೆ.
ಎ. ವ್ರತಂ ದೇವೇಶಪೂಜನಂ : ವ್ರತವೆಂದರೆ ದೇವರ ಪೂಜೆಯೇ ಆಗಿದೆ. ಅದರಿಂದ ದೇವರು ಪ್ರಸನ್ನರಾಗುತ್ತಾರೆ.
ಏ. ಭಗವತ್ಪ್ರಾಪ್ತಿ : ವ್ರತದಿಂದ ಭಗವಂತನ ಪಾಪ್ತಿಯಾಗುತ್ತದೆ ಎಂದು ಕೂರ್ಮಪುರಾಣದಲ್ಲಿ ಹೇಳಲಾಗಿದೆ.
ಐ. ತ್ರಿದೋಷಗಳ ನಿವಾರಣೆ : ಪ್ರಾಣಿಮಾತ್ರರ ಅಂತಃಕರಣದಲ್ಲಿ ಮಲ, ವಿಕ್ಷೇಪ ಮತ್ತು ಆವರಣ ಎನ್ನುವ ಮೂರು ದೋಷಗಳಿವೆ. ಶಾಸ್ತ್ರದ ಪ್ರಕಾರ ಈ ಮೂರು ದೋಷಗಳು ನಿತ್ಯನೈಮಿತ್ತಿಕ ವ್ರತಾಚರಣೆ ಮಾಡುವುದರಿಂದ ನಾಶವಾಗುತ್ತವೆ.
ಒ. ಕಡಿಮೆ ಶ್ರಮದಲ್ಲಿ ಹೆಚ್ಚಿನ ಲಾಭ : ಗುರುವಿಲ್ಲದವರಿಗೆ ಕನಿಷ್ಠ ಶ್ರಮ, ಕನಿಷ್ಠ ಖರ್ಚು ಇತ್ಯಾದಿಗಳನ್ನು ಮಾಡಿಯೂ ವ್ರತಪಾಲನೆಯಿಂದ ಅಧಿಕಾಧಿಕ ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಲಾಭವಾಗುತ್ತದೆ.
ಓ. ಸಾಮಾಜಿಕ ಐಕ್ಯ : ವ್ರತಗಳು ಹಿಂದೂ ಕುಟುಂಬಗಳಲ್ಲಿ ಮತ್ತು ಸಮಾಜದಲ್ಲಿ ಐಕ್ಯವನ್ನು ಮೂಡಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿಭಾಯಿಸಿವೆ. ಉದಾಹರಣೆಗೆ, ಆಷಾಢ ಏಕಾದಶಿಯ ಪಂಢರಪುರದ ಪಾದಯಾತ್ರೆ.
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)