ದೇವಸ್ಥಾನಗಳೆಂದರೆ ಬ್ರಹ್ಮಾಂಡದಿಂದ ದೈವಿಕ ಲಹರಿಗಳನ್ನು ಆಕರ್ಷಿಸಿ, ಅಧೋದಿಶೆಗೂ, ಅಷ್ಟದಿಕ್ಕುಗಳಿಗೂ, ಊರ್ಧ್ವದಿಶೆಗೂ ಪ್ರಕ್ಷೇಪಿಸಿ ವಾತಾವರಣವನ್ನು ಸಾತ್ತ್ವಿಕವಾಗಿಯೂ ಚೈತನ್ಯಮಯವಾಗಿಯೂ ಮಾಡುವ ಪ್ರಚಂಡ ಶಕ್ತಿಯುಳ್ಳ ಹಿಂದೂಗಳ ಶ್ರದ್ಧಾಸ್ಥಾನಗಳಾಗಿವೆ. ಮನುಕುಲಕ್ಕೆ ಮಾರಕವಾದ ಕಪ್ಪು ಶಕ್ತಿಯನ್ನೊಳಗೊಂಡಿರುವ ರಜತಮಾತ್ಮಕ ಲಹರಿಗಳು ಗ್ರಹಣದ ಸಮಯದಲ್ಲಿ ಪ್ರಥ್ವಿಯ ಕಡೆಗೆ ಬರುತ್ತಿರುತ್ತವೆ. ದೇವಸ್ಥಾನಗಳಲ್ಲಿರುವ ದೇವತೆಗಳ ಮೂರ್ತಿಗಳಿಂದಲೂ ಅಲ್ಲಿ ನಡೆಯುವ ಪೂಜೆ, ಹೋಮ ಹವನಾದಿಗಳಿಂದಲೂ ಪ್ರಕ್ಷೇಪಿಸಲ್ಪಡುವ ದೇವತೆಗಳ ಚೈತನ್ಯ, ಸಾತ್ತ್ವಿಕತೆ ಹಾಗೂ ಕೆಟ್ಟ ಶಕ್ತಿಗಳಿಗೆ ಮಾರಕವಾದ ದೈವಿಕ ಲಹರಿಗಳು ಈ ರಜತಮಾತ್ಮಕ ಲಹರಿಗಳನ್ನು ಭೂಮಿಯಿಂದ ೫ ಕಿ.ಮೀ ದೂರವಿರುವಾಗಲೇ ನಾಶಪಡಿಸುತ್ತವೆ. ಇದರಿಂದಾಗಿ ಗ್ರಹಣದ ಸಮಯದಲ್ಲಿ ಪೃಥ್ವಿಯ ಮೇಲಾಗುವ ಅನಿಷ್ಟ ಪರಿಣಾಮಗಳು ಕಡಿಮೆಯಾಗುತ್ತವೆ. ಇಂತಹ ಶ್ರದ್ಧಾಸ್ಥಾನಗಳ ಪಾವಿತ್ಯವನ್ನು ಕಾಪಾಡಿ ಅಲ್ಲಿ ಶಾಂತತೆ ಹಾಗೂ ಸಾತ್ತ್ವಿಕ ವಾತಾವರಣವು ನೆಲಸುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ಈ ರೀತಿ ಮಾಡಿರಿ :
- ಪ್ರತಿಯೊಂದು ದೇವಸ್ಥಾನಕ್ಕೂ ತನ್ನದೇ ಆದ ಐತಿಹ್ಯ, ವಿಶೇಷತೆ, ಕ್ಷೇತ್ರಮಹಿಮೆ ಇರುವುದರಿಂದ ಆಯಾಯ ದೇವಸ್ಥಾನದ ಸಂಪ್ರದಾಯ, ಕಟ್ಟುಪಾಡು, ವಿಧಿನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ. ಎಷ್ಟೇ ಉನ್ನತ ಸ್ಥಾನ ಅಥವಾ ಪದವಿಯಲ್ಲಿದ್ದರೂ ಅವುಗಳ ಉಲ್ಲಂಘನೆ ಮಾಡಬಾರದು. “ದೇವರಿಗಿಂತ ನಾನೇ ದೊಡ್ಡವನು” ಎಂಬ ಅಹಂಭಾವ ಎಂದಿಗೂ ಸಲ್ಲದು.
- ಸ್ನಾನ ಮಾಡಿದ ನಂತರವೇ ದೇವಸ್ಥಾನವನ್ನು ಪ್ರವೇಶಿಸಿರಿ.
- ದೇವಸ್ಥಾನದಲ್ಲಿ ಗಲಾಟೆ, ಗದ್ದಲ, ಕೂಗಾಟ, ಜಗಳ ಇತ್ಯಾದಿಗಳಿಂದಾಗಿ ದೇವಸ್ಥಾನದ ಚೈತನ್ಯವು ಕಡಿಮೆಯಾಗದಂತೆ ಶಿಸ್ತಿನಿಂದ ವರ್ತಿಸಿರಿ.
- ನಮ್ಮ ಸೃಷ್ಟಿಕರ್ತನು ಗರ್ಭಗುಡಿಯಲ್ಲಿ ಉಪಸ್ಥಿತನಿರುವನು ಎಂಬುದನ್ನು ನೆನೆದು ದೇವಸ್ಥಾನದಲ್ಲಿ ಮೌನವನ್ನು ಕಾಪಾಡಿರಿ.
- ದೇವಸ್ಥಾನದ ವಾತಾವರಣವು ಶಾಂತವಾಗಿದ್ದರೆ ಮಾತ್ರ ಏಕಾಗ್ರತೆಯಿಂದ ದೇವರ ದರ್ಶನ ಪಡೆದು
- ಮನಃಶಾಂತಿಯನ್ನು ಅನುಭವಿಸಬಹುದು. ಕೆಲವರಿಗೆ ಧ್ಯಾನವೂ ತಗಲಬಹುದು. ಅದರ ಲಾಭವು ಎಲ್ಲರಿಗೂ ಸಿಗುವಂತೆ ನಮ್ಮ ನಡೆನುಡಿಗಳಿರಲಿ.
- ದೇವರ ದರ್ಶನ ಪಡೆದುಕೊಳ್ಳಲು ಸರತಿಯ ಸಾಲಿನಲ್ಲಿ ನಿಂತಿರುವಾಗ ಹರಟೆ ಹೊಡೆಯದೆ, ಮನಸ್ಸು ಸತತವಾಗಿ ನಾಮಜಪ, ಪ್ರಾರ್ಥನೆ, ಕೃತಜ್ಞತೆ ಇವುಗಳಲ್ಲೇ ತೊಡಗಿರಲಿ.
- ದೇವಸ್ಥಾನದ ಪ್ರಾಂಗಣದಲ್ಲಿ ಮೊಬೈಲ್‌ಗಳ ಮಾಧ್ಯಮದಿಂದ ಚಿತ್ರಗೀತೆಗಳನ್ನು ಕೇಳುವುದು, ಜೂಜಾಡುವುದು, ಧೂಮಪಾನ, ಮದ್ಯಪಾನ ಮಾಡುವುದು ಸಲ್ಲದು.
- ಹೊರಗಿನಿಂದ ತಂದ ತಿಂಡಿತೀರ್ಥಗಳನ್ನು ಅಲ್ಲಿ ಸೇವಿಸಬೇಡಿರಿ.
- ತೆಂಗಿನಕಾಯಿಯ ನೀರು, ಎಣ್ಣೆ, ಬೆಲ್ಲ, ಸಕ್ಕರೆ, ಸಿಹಿತಿಂಡಿ ಇತ್ಯಾದಿಗಳನ್ನು ಗರ್ಭಗುಡಿಯ ಪ್ರಾಂಗಣದಲ್ಲಿ ಚೆಲ್ಲಬೇಡಿರಿ.
- ಬಾಳೆಹಣ್ಣು ಸಿಪ್ಪೆ, ತೆಂಗಿನ ಚಿಪ್ಪು, ಪ್ಲಾಸ್ಟಿಕ್ ಚೀಲ ಕಸ ಇತ್ಯಾದಿಗಳನ್ನು ಕೊಂಡೊಯ್ದು ಕಸದ ಗುಂಡಿಯಲ್ಲೇ ಹಾಕಿ ನೈರ್ಮಲ್ಯ ಕಾಪಾಡಿರಿ.
- ಗರ್ಭಗುಡಿಯ ಗೋಡೆ, ಬಲಿಕಲ್ಲು ಇತ್ಯಾದಿಗಳನ್ನು ಸ್ಪರ್ಶಿಸಬೇಡಿರಿ. ಪ್ರಸಾದ ಪಡೆದ ಬಳಿಕ ಕೈಗೆ ಅಂಟಿಕೊಂಡ ಗಂಧ, ಕುಂಕುಮ ಇತ್ಯಾದಿಗಳನ್ನು ಗೋಡೆಗಳಿಗೆ ಅಥವಾ ಧ್ವಜ ಸ್ತಂಭಕ್ಕೆ ಅಂಟಿಸಬೇಡಿರಿ.
- ದೇವಸ್ಥಾನದ ಆವರಣದೊಳಗೆ ಭಗ್ನವಾದ ದೇವರ ಮೂರ್ತಿಗಳನ್ನು ಚಿಕ್ಕ ಚಿಕ್ಕ ವಿಗ್ರಹಗಳನ್ನು ತಂದಿರಿಸುವುದರಿಂದ ದೇವಸ್ಥಾನದ ಪಾವಿತ್ರ್ಯ ಕೆಡುತ್ತದೆ ಎಂಬುದು ತಿಳಿದಿರಲಿ.
- ದೇವಸ್ಥಾನದ ಆವರಣದೊಳಗೆ ಇರುವ ಪರಿವಾರ ದೇವತೆಗಳ ಗುಡಿಗಳ ಬಳಿ ದೀಪಗಳನ್ನು ಉರಿಸಿಟ್ಟು ಎಣ್ಣೆ ಚೆಲ್ಲದಂತೆ ನೋಡಿಕೊಳ್ಳಿರಿ. ನೀವು ಅರ್ಪಿಸುವ ಅಕ್ಷತೆ ಕಾಳುಗಳಿಗಾಗಿ ಇರುವೆಗಳು ಬರುವಂತಾದರೆ ವಾತಾವರಣವು ಕಲುಷಿತವಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳಿರಿ.
- ದೇವಸ್ಥಾನಗಳ ಆವರಣಗಳಲ್ಲಿನ ಅಶ್ವತ್ಥ, ಶಮಿ, ಔದುಂಬರ (ಅತ್ತಿ ಮರ) ಗೋಳಿ ಇತ್ಯಾದಿ ಪೂಜನೀಯ ವೃಕ್ಷಗಳ ಬುಡದಲ್ಲಿ ಗೆದ್ದಲು ಹಿಡಿದು ಭಾಗಶಃ ನಶಿಸಿ ಹೋದ, ಮಸುಕಾದ ಹಾಗೂ ಒಡೆದ ಗಾಜು ಫ್ರೇಮುಗಳುಳ್ಳ ದೇವರ ಭಾವಚಿತ್ರಗಳನ್ನು ತಂದಿರಿಸಬೇಡಿರಿ. ದೇವಸ್ಥಾನಗಳ ಆವರಣಗಳೆಂದರೆ ನಮ್ಮ ಮನೆಯ ಕಸವನ್ನು ವಿಸರ್ಜಿಸುವ ಕಸದ ತೊಟ್ಟಿಗಳಲ್ಲ ಎಂಬುದು ನೆನಪಿರಲಿ. ಅಂತಹ ಭಾವಚಿತ್ರಗಳ ಫ್ರೇಮ್ ಹಾಗೂ ಕನ್ನಡಿಗಳನ್ನು ಕಳಚಿ ಅಕ್ಷತೆ ಹಾಗೂ ಪುಷ್ಪಗಳೊಂದಿಗೆ ದೇವರ ಚಿತ್ರಗಳನ್ನು ಶುಭ್ರ ವಸ್ತ್ರದಲ್ಲಿ ಸುತ್ತಿ, ಹರಿಯುವ ನೀರಲ್ಲಿ ಜಲದೇವತೆಗೆ ಪ್ರಾರ್ಥನೆ ಮಾಡಿ ವಿಸರ್ಜಿಸಿರಿ. ಹರಿಯುವ ನೀರಿಲ್ಲದಿದ್ದರೆ ಅಗ್ನಿದೇವನಿಗೆ ಪ್ರಾರ್ಥನೆಮಾಡಿ ಅಗ್ನಿಗೆ ಅರ್ಪಿಸಿರಿ. ಇದರಿಂದ ದೇವತೆಗಾಗುವ ಅನಾದರವೂ ತಪ್ಪುತ್ತದೆ.
ಕನ್ನಡಿಯು ಸ್ವಚ್ಛವಿದ್ದಷ್ಟೂ ಪ್ರತಿಬಿಂಬವು ಸ್ಪಷ್ಟವಾಗಿ ಗೋಚರಿಸುವಂತೆ ದೇವಸ್ಥಾನಗಳಲ್ಲಿ ಶಾಂತತೆ, ನೈರ್ಮಲ್ಯ, ಪಾವಿತ್ರ್ಯ ಹೆಚ್ಚಿದಂತೆಲ್ಲ ಭಗವದ್ಭಕ್ತರಿಗೆ ಅದರ ಪೂರ್ತಿ ಲಾಭ ಸಿಗುತ್ತದೆ. ಅದಕ್ಕಾಗಿ ನಾವೆಲ್ಲರೂ ಶ್ರಮಿಸೋಣ.
(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ದೇವಸ್ಥಾನದಲ್ಲಿ ದರ್ಶನವನ್ನು ಹೇಗೆ ಪಡೆಯಬೇಕು?’)