ಪ್ರತಿಯೊಂದು ಋತುವಿಗನುಸಾರ ವಾತಾವರಣವು ಬದಲಾಗುತ್ತಿರುತ್ತದೆ. ಈ ಬದಲಾವಣೆಗೆ ಹೊಂದಿಕೊಳ್ಳಲು ಮನುಷ್ಯನಿಗೆ ಆಹಾರದಲ್ಲಿಯೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ಸಾಮಾನ್ಯವಾಗಿ ಭೂಮಿಯ ಮೇಲೆ ಬೇಸಿಗೆಗಾಲ ಮತ್ತು ಚಳಿಗಾಲ ಈ ಎರಡೇ ಋತುಗಳಿವೆ. ಹಿಂದೂಸ್ಥಾನದಲ್ಲಿ ಮಳೆ, ಚಳಿ ಮತ್ತು ಬೇಸಿಗೆಗಾಲ ಎಂಬ ಮೂರು ಮುಖ್ಯ ಋತುಗಳಿವೆ. ಪ್ರತಿಯೊಂದು ಮುಖ್ಯ ಋತುವು ಮತ್ತೆ ೨ ಋತುಗಳಲ್ಲಿ ವಿಭಾಜನೆಯಾಗುತ್ತದೆ. ಈ ವಿಭಾಜನೆಯಾಗಿರುವ ಪ್ರತಿಯೊಂದು ಋತುವಿನಲ್ಲಿ ೨ ತಿಂಗಳುಗಳಿರುತ್ತವೆ. ೬ ಋತುಗಳು ಸೇರಿ ಒಂದು ವರ್ಷವಾಗುತ್ತದೆ.
ವಸಂತಋತುವಿನಲ್ಲಿನ ಆಹಾರ
ಈ ಋತುವಿನಲ್ಲಿ ಜಡ, ಎಣ್ಣೆ-ತುಪ್ಪಯುಕ್ತ, ಹುಳಿ ಮತ್ತು ಸಿಹಿ ಪದಾರ್ಥಗಳನ್ನು ಸೇವಿಸದೇ, ಅರಳು, ಹುರಿದ ಕಡಲೆ, ಗೋಧಿ, ಹೆಸರು, ಮೆಂತ್ಯ, ಹಾಗಲಕಾಯಿ, ಮೂಲಂಗಿ, ನುಗ್ಗೆ, ಸುವರ್ಣಗಡ್ಡೆ, ತಾಜಾ ಅರಿಶಿನ, ಹಸಿಶುಂಠಿ, ಕಾಳುಮೆಣಸು ಮತ್ತು ಶುಂಠಿ ಇಂತಹ ಜೀರ್ಣಿಸಲು ಸುಲಭವಾದ, ಒಣಗಿದ, ಕಹಿ, ಒಗರು ಮತ್ತು ಖಾರದ ಪದಾರ್ಥಗಳನ್ನು ಸೇವಿಸಬೇಕು.
೧. ಆರೋಗ್ಯವೃದ್ಧಿಗಾಗಿ ಉಪ್ಪಿಲ್ಲದ-ಸಪ್ಪೆ ಊಟ ಮಾಡುವುದರ ಮಹತ್ವ: ಚೈತ್ರ ಮಾಸದಲ್ಲಿ ೧೫ ದಿನ ‘ಸಪ್ಪೆ ವ್ರತ’ (ಉಪ್ಪನ್ನು ತಿನ್ನದಿರುವುದು) ವನ್ನು ಪಾಲಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದೆ. ಇದರಿಂದ ರಕ್ತಶುದ್ಧಿಯಾಗಿ ಹೃದಯ, ಯಕೃತ್ತು, ಮೂತ್ರಪಿಂಡ ಮತ್ತು ಚರ್ಮ ಇವುಗಳ ರೋಗದಿಂದ ರಕ್ಷಣೆಯಾಗುತ್ತದೆ.
ಈ ವ್ರತವನ್ನು ಪ್ರತಿವರ್ಷ ಪಾಲಿಸುವ ವ್ಯಕ್ತಿಗಳ ಆರೋಗ್ಯವು ಇತರ ವ್ಯಕ್ತಿಗಳಿಗಿಂತ ಉತ್ತಮವಾಗಿರುವುದು ಕಂಡುಬಂದಿದೆ.
೨.ವಸಂತಋತುವಿನಲ್ಲಿ ಮಾಡಬೇಕಾದ ಕೆಲವು ಲಾಭದಾಯಕ ಕೃತಿಗಳು
ಅ. ಪ್ರತಿದಿನ ಬೆಳಗ್ಗೆ ೨ಗ್ರಾಂ ಅಳಲೇಕಾಯಿಯ ಚೂರ್ಣವನ್ನು ಜೇನಿನೊಂದಿಗೆ ಸೇವಿಸಬೇಕು.
ಆ. ಪ್ರತಿದಿನ ಬೆಳಗ್ಗೆ ಬೇವಿನ ೧೫-೨೦ ಎಳೆಯ ಎಲೆಗಳನ್ನು ೨-೩ ಕರಿಮೆಣಸುಗಳೊಂದಿಗೆ ಚೆನ್ನಾಗಿ ಅಗಿದು ತಿನ್ನಬೇಕು.
ಇ. ಬೇವಿನ ಹೂವುಗಳ ೧೫ ರಿಂದ ೨೦ ಮಿ.ಲೀ. ರಸವನ್ನು ೭ರಿಂದ ೧೫ ದಿನಗಳ ಕಾಲ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಚರ್ಮವ್ಯಾಧಿ ಮತ್ತು ಮಲೇರಿಯಾದಿಂದ ರಕ್ಷಣೆಯಾಗುತ್ತದೆ.
ಗ್ರೀಷ್ಮಋತುವಿನಲ್ಲಿನ ಆಹಾರ
ಈ ಋತುವಿನಲ್ಲಿ ಜೀರ್ಣಶಕ್ತಿಯು ಮಂದವಾಗಿರುತ್ತದೆ. ಈ ಕಾಲದಲ್ಲಿ ಹಾಲು, ತುಪ್ಪ, ಬೆಣ್ಣೆಯಂತಹ ಸ್ನಿಗ್ಧ ಪದಾರ್ಥಗಳನ್ನು ತಿನ್ನಬೇಕು. ಏಲಕ್ಕಿ, ಕೊತ್ತಂಬರಿ, ಜೀರಿಗೆ ಇವುಗಳನ್ನು ಬಳಸಿದ ಪದಾರ್ಥಗಳು, ಹಾಗೆಯೇ ಸಿಹಿ ಮತ್ತು ಹುಳಿ ರಸಾತ್ಮಕ, ಉದಾ.ನೆಲ್ಲಿಕಾಯಿ, ದಾಳಿಂಬೆಯಂತಹ ಹಣ್ಣುಗಳನ್ನು ತಿನ್ನಬೇಕು. ಅತೀ ತಣ್ಣನೆಯ ಮತ್ತು ಬಿಸಿ ಪದಾರ್ಥಗಳನ್ನು ತಿನ್ನಬಾರದು.
ವರ್ಷಾಋತುವಿನಲ್ಲಿನ ಆಹಾರ
ಇದು ವಾತಪ್ರಕೋಪ ಮತ್ತು ಪಿತ್ತಸಂಚಯದ ಕಾಲವಾಗಿದೆ. ಈ ಕಾಲದಲ್ಲಿ ಊಟದಲ್ಲಿ ಎಲ್ಲ ರಸಗಳ ಸೇವನೆ ಮಾಡಬೇಕು ಮತ್ತು ಉಷ್ಣ ಪದಾರ್ಥಗಳನ್ನು ತಿನ್ನಬೇಕು. ಅತಿ ಎಣ್ಣೆಯುಕ್ತ ಅಥವಾ ಒಣ ಪದಾರ್ಥಗಳನ್ನು ತಿನ್ನಬಾರದು. ದ್ರವ ಪದಾರ್ಥಗಳು ಅಲ್ಪ ಪ್ರಮಾಣದಲ್ಲಿರಬೇಕು, ಈ ಕಾಲದಲ್ಲಿ ಆಗಾಗ ಉಪವಾಸ ಮಾಡುವುದು ಲಾಭದಾಯಕವಾಗಿದೆ.
ಶರದಋತುವಿನಲ್ಲಿನ ಆಹಾರ
ಇದು ವಾತ ಸಂಚಯದ ಕಾಲ ಮತ್ತು ಪಿತ್ತ ಪ್ರಕೋಪದ ಕಾಲವಾಗಿದೆ. ಈ ಕಾಲದಲ್ಲಿ ರುಚಿಕರ (ಸಿಹಿ), ಕಹಿ ಮತ್ತು ಒಗರು ರಸಾತ್ಮಕ ಆಹಾರವನ್ನು ಸೇವಿಸಬೇಕು. ತುಪ್ಪವು ಪಿತ್ತ ಶಾಮಕವಾಗಿರುವುದರಿಂದ ಅದನ್ನು ಉಪಯೋಗಿಸಬೇಕು, ಆದರೆ ಎಣ್ಣೆಯುಕ್ತ ಮತ್ತು ಕೊಬ್ಬುಯುಕ್ತ ಪದಾರ್ಥಗಳನ್ನು ತಿನ್ನಬಾರದು.
ಹೇಮಂತಋತುವಿನಲ್ಲಿನ ಆಹಾರ
ಹೇಮಂತಋತುವು ಚಳಿಗಾಲದ ಪ್ರಾರಂಭದ ಕಾಲವಾಗಿದೆ. ಈ ಕಾಲದಲ್ಲಿ ಜೀರ್ಣಶಕ್ತಿಯು ಚೆನ್ನಾಗಿರುತ್ತದೆ. ಈ ಕಾಲದಲ್ಲಿ ಎಣ್ಣೆಯುಕ್ತ ಪದಾರ್ಥಗಳನ್ನು ಸೇವಿಸಬೇಕು, ಆದರೆ ಅತ್ಯಂತ ತಂಪು ಮತ್ತು ಒಣ ಪದಾರ್ಥಗಳನ್ನು ಸೇವಿಸಬಾರದು.
ಶಿಶಿರಋತುವಿನಲ್ಲಿನ ಆಹಾರ
ಈ ಕಾಲದಲ್ಲಿ ಜೀರ್ಣಶಕ್ತಿಯು ಉತ್ತಮವಾಗಿರುತ್ತದೆ. ಸಿಹಿ, ಹುಳಿ ಮತ್ತು ಉಪ್ಪುಳ್ಳ ರಸಾತ್ಮಕ ಪದಾರ್ಥಗಳನ್ನು ಸೇವಿಸಬೇಕು. ಖಾರ, ಕಹಿ ಮತ್ತು ಒಗರು ರಸಾತ್ಮಕ ಪದಾರ್ಥಗಳನ್ನು ಸೇವಿಸಬಾರದು. ಎಣ್ಣೆ ಮತ್ತು ತುಪ್ಪವನ್ನು ತಿನ್ನಬಹುದು.
(ಆಧಾರ: ಸನಾತನ ನಿರ್ಮಿಸಿದ ಗ್ರಂಥ ‘ಆಹಾರದ ನಿಯಮಗಳು ಮತ್ತು ಆಧುನಿಕ ಆಹಾರದ ಹಾನಿಗಳು)\