ಪೂಜೆಯ ಸಮಯದಲ್ಲಿ ಅಥವಾ ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ (ಅಥವಾ ಎಲೆಯ) ಸುತ್ತಲೂ ನೀರನ್ನು ಎಷ್ಟು ಬಾರಿ, ಯಾವ ರೀತಿ ಮತ್ತು ಏಕೆ ಸಿಂಪಡಿಸುತ್ತಾರೆ?
ಕೃತಿ: ನೈವೇದ್ಯವನ್ನು ಅರ್ಪಿಸುವಾಗ ನೀರಿನಿಂದ ತಟ್ಟೆಯ ಸುತ್ತಲೂ ಒಂದು ಬಾರಿ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ನೀರನ್ನು ಸಿಂಪಡಿಸಬೇಕು (ನೀರಿನಿಂದ ಮಂಡಲವನ್ನು ಹಾಕಬೇಕು). ವಿರುದ್ಧ ದಿಕ್ಕಿನಲ್ಲಿ ಮತ್ತೆ ಮಂಡಲವನ್ನು ಹಾಕಬಾರದು; ಏಕೆಂದರೆ ಅದರಿಂದ ಬ್ರಹ್ಮಾಂಡದಲ್ಲಿನ ಸುಪ್ತ ತಿರ್ಯಕ ಲಹರಿಗಳು ಕಾರ್ಯನಿರತವಾಗಿ ತಟ್ಟೆಯ ಸುತ್ತಲೂ ತೊಂದರೆದಾಯಕ ಲಹರಿಗಳ ಕವಚವು ನಿರ್ಮಾಣವಾಗುತ್ತದೆ ಮತ್ತು ಈ ಕವಚದಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದ ಜೀವದ ಪ್ರಾಣಮಯಕೋಶದಲ್ಲಿನ ತಮೋಗುಣದ ಪ್ರಮಾಣವು ಹೆಚ್ಚಾಗುವುದರಿಂದ ಜೀವವು ಅಸ್ವಸ್ಥವಾಗುತ್ತದೆ. – ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೮.೫.೨೦೦೫, ಮಧ್ಯಾಹ್ನ ೫.೧೦)
ಲಾಭಗಳು
ಅ. ಅತೃಪ್ತ ಲಿಂಗದೇಹಗಳಿಗೆ ಮತ್ತು ಕನಿಷ್ಠ ಕೆಟ್ಟ ಶಕ್ತಿಗಳಿಗೆ ನೈವೇದ್ಯವನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ:
ದೇವರಿಗೆ ನೈವೇದ್ಯವನ್ನು ತೋರಿಸುವಾಗ ಜೀವದ ಮನಃಶಕ್ತಿಯು ಅವಶ್ಯಕ ಪ್ರಮಾಣದಲ್ಲಿ ಜಾಗೃತವಾಗದಿದ್ದರೆ, ಅನ್ನದಿಂದ ಪ್ರಕ್ಷೇಪಿತವಾಗುವ ಆಕರ್ಷಣಲಹರಿಗಳು ಜೀವದ ಮನಃಶಕ್ತಿಯ ಪ್ರಕ್ಷೇಪಣೆಯ ಅಭಾವದಿಂದ ಅಂಕುಡೊಂಕಾಗಿ ಸಂಚರಿಸತೊಡಗುತ್ತವೆ. ಅನ್ನದ ವಾಸನೆಯಿರುವ ಅತೃಪ್ತ ಲಿಂಗದೇಹಗಳು ಅನ್ನದಿಂದ ಪ್ರಕ್ಷೇಪಿತವಾಗುವ ಆಕರ್ಷಣಲಹರಿಗಳ ಮೂಲಕ ಆಕರ್ಷಿತವಾಗಿ ನೈವೇದ್ಯವನ್ನು ಗ್ರಹಿಸಿಕೊಂಡು ಅನ್ನವನ್ನು ತಮೋಕಣಗಳಿಂದ ತುಂಬುವ ಸಾಧ್ಯತೆಯಿರುತ್ತದೆ. ಇದನ್ನು ತಡೆಗಟ್ಟಲು ದೇವರಿಗೆ ನೈವೇದ್ಯವನ್ನು ತೋರಿಸುವಾಗ ಮೊದಲು ನೀರಿನಿಂದ ಮಂಡಲವನ್ನು ಹಾಕಬೇಕು. ನೀರಿನ ಮಂಡಲವನ್ನು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಹಾಕುವುದರಿಂದ ಆಹಾರದಿಂದ ಪ್ರಕ್ಷೇಪಿತವಾಗುವ ಆಕರ್ಷಣಲಹರಿಗಳು ಈ ಮಂಡಲದಲ್ಲಿ ಸಂಚರಿಸಿ ಆಪತತ್ತ್ವದ ಪ್ರಕ್ಷೇಪಣೆಯಿಂದ ಮೇಲಿನ ದಿಕ್ಕಿನಲ್ಲಿ ಸಂಚರಿಸಲು ಪ್ರಾರಂಭವಾಗುತ್ತವೆ. ಇದರಿಂದ ಕನಿಷ್ಠ ಕೆಟ್ಟ ಶಕ್ತಿಗಳಿಗೆ ಸುಲಭವಾಗಿ ಆಹಾರವನ್ನು ಸೆಳೆದುಕೊಳ್ಳಲು ಸಾಧ್ಯವಾಗುವುದಿಲ್ಲ.
– ಓರ್ವ ಜ್ಞಾನಿ (ಶ್ರೀ. ನಿಷಾದ ದೇಶಮುಖ ಇವರ ಮಾಧ್ಯಮದಿಂದ ೧೩.೨.೨೦೦೭, ಮಧ್ಯಾಹ್ನ ೩.೧೮)
ಆ. ಆಹಾರದ ಮಾಧ್ಯಮದಿಂದ ಕೆಟ್ಟಶಕ್ತಿಗಳಿಂದಾಗುವ ತೊಂದರೆಗಳು ಕಡಿಮೆಯಾಗುತ್ತವೆ: ತಟ್ಟೆಯ ಸುತ್ತಲೂ ಹಾಕಿದ ಮಂಡಲದಿಂದ ಪ್ರಕ್ಷೇಪಿತವಾಗುವ ಲಹರಿಗಳು ತಟ್ಟೆಯ ಕೆಳಗಿನ ಕೇಂದ್ರಬಿಂದುವಿನ ಕಡೆಗೆ ಸಂಕ್ರಮಿತವಾಗುವುದರಿಂದ, ಕೇಂದ್ರಬಿಂದುವಿನಲ್ಲಿರುವ ಆಯಾಯ ದೇವತೆಯ ಅಪ್ರಕಟ ಶಕ್ತಿಯು ಜಾಗೃತವಾಗುತ್ತದೆ ಮತ್ತು ಕೇಂದ್ರಬಿಂದುವಿನಿಂದ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುತ್ತದೆ. ಇದರಿಂದ ತಟ್ಟೆಯ ಮೇಲೆ ಸೂಕ್ಷ್ಮ ಸಾತ್ತ್ವಿಕ ಲಹರಿಗಳ ಹೊದಿಕೆಯು ತಯಾರಾಗುತ್ತದೆ. ಆದುದರಿಂದ ಆಹಾರವನ್ನು ಸೇವಿಸುವಾಗ ವಾತಾವರಣದಲ್ಲಿನ ಕೆಟ್ಟಶಕ್ತಿಗಳಿಂದ ಪ್ರಕ್ಷೇಪಿತವಾಗುವ ಕಪ್ಪು ಲಹರಿಗಳು ಶರೀರದಲ್ಲಿ ಸಂಕ್ರಮಿತವಾಗುವುದಿಲ್ಲ. ಅದರಂತೆಯೇ ನೀರಿನಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳಿಂದ ಆಹಾರದ ಮೇಲೆ ಬಂದಿರುವ ರಜ-ತಮಾತ್ಮಕ ಲಹರಿಗಳ ಕಪ್ಪು ಆವರಣವೂ ಸ್ವಲ್ಪ ಪ್ರಮಾಣದಲ್ಲಿ ದೂರವಾಗಲು ಸಹಾಯವಾಗುತ್ತದೆ.
ತಟ್ಟೆಯ ಸುತ್ತಲೂ ಬಿಡಿಸಿರುವ ರಂಗೋಲಿ ಮತ್ತು ನೀರಿನ ಮಂಡಲಗಳ ತುಲನೆ: ಕೆಲವೊಮ್ಮೆ ತಟ್ಟೆಯ ಸುತ್ತಲೂ ರಂಗೋಲಿಯನ್ನೂ ಹಾಕುತ್ತಾರೆ. ರಂಗೋಲಿ ಮತ್ತು ನೀರಿನ ಮಂಡಲ ಇವುಗಳ ಕಾರ್ಯವು ಒಂದೇ ಆಗಿದೆ. ಕೇವಲ ಅವುಗಳ ಕಾರ್ಯಕ್ಷಮತೆ ಮತ್ತು ಲಹರಿಗಳ ಪ್ರಕ್ಷೇಪಣೆಯಲ್ಲಿ ವ್ಯತ್ಯಾಸವಿದೆ. ನೀರಿನ ಮಂಡಲವು ರಂಗೋಲಿಗಿಂತ ಹೆಚ್ಚು ಸೂಕ್ಷ್ಮ ಸ್ತರದಲ್ಲಿ ಕಾರ್ಯವನ್ನು ಮಾಡುತ್ತದೆ. ರಂಗೋಲಿಯು ಎಲ್ಲ ಕಡೆಗಳಲ್ಲಿ ಸಹಜವಾಗಿ ಉಪಲಬ್ಧವಾಗುವುದಿಲ್ಲ. ಆದುದರಿಂದ ಹೆಚ್ಚಾಗಿ ತಟ್ಟೆಯ ಸುತ್ತಲೂ ನೀರಿನ ಮಂಡಲವನ್ನೇ ಹಾಕುತ್ತಾರೆ.
– ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೮.೫.೨೦೦೫, ಮಧ್ಯಾಹ್ನ ೫.೧೦)
(ಹೆಚ್ಚಿನ ಮಾಹಿತಿಗಾಗಿ ಓದಿ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’)
Good information🙏