ಭಸ್ಮಧಾರಣೆ

ಭಸ್ಮವನ್ನು ಹಚ್ಚಿಕೊಳ್ಳುವುದು: ಪವಿತ್ರ ರಕ್ಷೆಗೆ (ಬೂದಿ) ಭಸ್ಮ ಎಂಬ ಹೆಸರಿದೆ. ಯಾವ ರೀತಿ ಭಸ್ಮವು ನಿತ್ಯಕರ್ಮದಲ್ಲಿ ಆವಶ್ಯಕವಾಗಿದೆಯೋ, ಅದರಂತೆಯೇ ಅದು ಶೈವ ಸಂಪ್ರದಾಯದಲ್ಲಿನ ಸಾಧನೆಯ ಒಂದು ಅತ್ಯಾವಶ್ಯಕ ಅಂಗವಾಗಿದೆ. ಭಸ್ಮವನ್ನು ಧರಿಸದೆ ಶಿವಪೂಜೆಯನ್ನು ಪ್ರಾರಂಭಿಸಬಾರದು.

ಭಸ್ಮದ ವ್ಯಾಖ್ಯೆ: ‘ಭಸ್ಮವೆಂದರೆ ಯಾವುದೇ ವಸ್ತುವನ್ನು ಸುಟ್ಟನಂತರ ಉಳಿದಿರುವ ಬೂದಿ, ಎಂದು ತಪ್ಪು ತಿಳುವಳಿಕೆಯಿದೆ. ಯಜ್ಞದಲ್ಲಿ ಆಹುತಿ ನೀಡಿದ ಸಮಿಧೆ ಮತ್ತು ತುಪ್ಪವು ಸುಟ್ಟುಹೋದ ನಂತರ ಉಳಿದ ಭಾಗಕ್ಕೆ ಭಸ್ಮವೆನ್ನುತ್ತಾರೆ. ಕೆಲವು ಜನರು ಪೂಜೆಯನ್ನು ಮಾಡಲು ದೇವತೆಗೆ ಬೂದಿಯಿಂದ ಅಭಿಷೇಕ ಮಾಡುತ್ತಾರೆ. ದೇವತೆಯ ಮೂರ್ತಿಯ ಸ್ಪರ್ಶದಿಂದ ಪವಿತ್ರವಾದ ಈ ಬೂದಿಯನ್ನೂ ಭಸ್ಮವೆಂದು ಉಪಯೋಗಿಸುತ್ತಾರೆ.

ಭಸ್ಮದ ಅರ್ಥ ಮತ್ತು ಮಹತ್ವ: ಭಸ್ಮ ಶಬ್ದದಲ್ಲಿನ ‘ಭ’ ಎಂದರೆ ‘ಭರ್ತ್ಸನಮ್’ ಅಂದರೆ ‘ನಾಶವಾಗಲಿ.’ ಭಸ್ಮ ಶಬ್ದದಲ್ಲಿನ ‘ಸ್ಮ’ ಎಂದರೆ ಸ್ಮರಣೆ. ಭಸ್ಮದಿಂದ ಪಾಪವು ನಾಶವಾಗಿ ಈಶ್ವರನ ಸ್ಮರಣೆಯಾಗುತ್ತದೆ.

ಭಸ್ಮದ ಸಮಾನಾರ್ಥಕ ಶಬ್ದ: ವಿಭೂತಿ, ರಕ್ಷೆ, ಬೂದಿ.

ಭಸ್ಮದ ಬೋಧನೆ

೧. ಮನುಷ್ಯನು ತನ್ನ ಆಹುತಿಯನ್ನು ನೀಡಿ ಭಸ್ಮವಾಗಬೇಕು, ಅಂದರೆ ತನ್ನ ಇಚ್ಛೆ – ಆಕಾಂಕ್ಷೆ, ದೋಷ, ಅಜ್ಞಾನ ಮತ್ತು ಅಹಂಗಳನ್ನು ತ್ಯಾಗ ಮಾಡಿ ಮನಸ್ಸಿನ ಶುದ್ಧತೆಯನ್ನು ಪಡೆದುಕೊಳ್ಳಬೇಕು.
೨. ಮಾನವೀ ದೇಹವು ನಶ್ವರವಾಗಿರುವುದರಿಂದ ಮರಣದ ನಂತರ ಈ ದೇಹವು ಸುಟ್ಟು ಬೂದಿಯಾಗುತ್ತದೆ. ಆದುದರಿಂದ ಯಾರೂ ದೇಹಾಸಕ್ತಿಯನ್ನು ಇಟ್ಟುಕೊಳ್ಳಬಾರದು. ಮೃತ್ಯು ಯಾವುದೇ ಕ್ಷಣ ಬರಬಹುದು. ಇದರ ಅರಿವನ್ನಿಟ್ಟುಕೊಂಡು ಬಹುಪ್ರಯತ್ನದಿಂದ ದೊರಕಿರುವ ಈ ಮನುಷ್ಯಜನ್ಮವನ್ನು ಸಾರ್ಥಕ ಮಾಡಿಕೊಳ್ಳಲು ಮತ್ತು ನಮ್ಮ ಪ್ರತಿಯೊಂದು ಕ್ಷಣವನ್ನು ಪವಿತ್ರ ಹಾಗೂ ಆನಂದಮಯಗೊಳಿಸಲು ಪ್ರಯತ್ನಿಸಬೇಕು ಎಂಬುದನ್ನೇ ಭಸ್ಮವು ಸೂಚಿಸುತ್ತದೆ.’ (?)
೩. ಭಸ್ಮವು ವೈರಾಗ್ಯವನ್ನು ಕಲಿಸುತ್ತದೆ.

ಭಸ್ಮವೆಂದು ಏನು ಉಪಯೋಗಿಸುತ್ತಾರೆ ?

೧. ಗೋಮಯ ದ್ರವ್ಯವನ್ನು (ಹಸುವಿನ ಸಗಣಿ) ಅಗ್ನಿಯಲ್ಲಿ ಹಾಕಿ ತಯಾರಿಸಿದ ಭಸ್ಮ: ಶಿವನಿಗೆ ಚಿತಾಭಸ್ಮವು ಅತ್ಯಂತ ಪ್ರಿಯವಾಗಿದೆ ಆದರೆ, ಸಾಮಾನ್ಯ ವ್ಯಕ್ತಿಗಳಿಗೆ ಚಿತಾಭಸ್ಮವನ್ನು ಸಹಿಸಲಾಗುವುದಿಲ್ಲ. ಆದುದರಿಂದ ಈ ಭಸ್ಮವನ್ನು ಉಪಯೋಗಿಸುತ್ತಾರೆ.
೨. ಸಂತರು ಮಾಡಿದ ಯಜ್ಞಯಾಗಾದಿಗಳಿಂದ ನಿರ್ಮಾಣವಾದ ಭಸ್ಮ
೩. ಅಗ್ನಿಹೋತ್ರಿ ಬ್ರಾಹ್ಮಣರ ಯಜ್ಞಕುಂಡದಲ್ಲಿನ ಭಸ್ಮ
೪. ಹಳೆಯ ಯಜ್ಞಸ್ಥಾನಗಳಲ್ಲಿನ ಮಣ್ಣು
೫. ಗಾಣಗಾಪುರದಲ್ಲಿ ಭಸ್ಮದ ಬೆಟ್ಟವೇ ಇದೆ.
೬. ಚಿತಾಭಸ್ಮ: ಮೃತರಿಗೆ ಮಂತ್ರಾಗ್ನಿ ನೀಡಿ ದಹನಸಂಸ್ಕಾರ ಮಾಡುತ್ತಾರೆ. ಅದರ ಬೂದಿಗೆ ಚಿತಾಭಸ್ಮ ಎನ್ನುತ್ತಾರೆ. ವಾರಾಣಸಿಯಲ್ಲಿ ವಿಶ್ವೇಶ್ವರನಿಗೆ ಪ್ರತಿದಿನ ಚಿತಾಭಸ್ಮದಿಂದಲೇ ಅರ್ಚನೆ ಯನ್ನು ಮಾಡುತ್ತಾರೆ. ತಾಂತ್ರಿಕರು ಹೆಚ್ಚಾಗಿ ಚಿತಾಭಸ್ಮವನ್ನು ಉಪಯೋಗಿಸುತ್ತಾರೆ.

(ಹೆಚ್ಚಿನ ಮಾಹಿತಿಗಾಗಿ ಓದಿ – ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶಿವ’)

1 thought on “ಭಸ್ಮಧಾರಣೆ”

Leave a Comment