ಗುರುಗೃಹದಿಂದ ತನ್ನ ಮನೆಗೆ ಹೋಗುವಾಗ ಗುರುಗಳು ನೀಡಿದ ಆಶೀರ್ವಾದರೂಪಿ ಮಂತ್ರ
ಮುಂದಿನ ಶ್ಲೋಕ ಶಿಷ್ಯನನ್ನು ಉದ್ದೇಶಿಸಿ ಆಶೀರ್ವಾದಸ್ವರೂಪವಾಗಿದೆ. ಶಿಷ್ಯನು ಗುರುಗೃಹದಲ್ಲಿದ್ದು ವಿದ್ಯಾವಂತನಾದ ನಂತರ ತನ್ನ ಮನೆಗೆ ಹಿಂದಿರುಗುವಾಗ ಗುರುಗಳು ಶಿಷ್ಯನಿಗೆ ನೀಡಿದ ಈ ಆಶೀರ್ವಾದ ಅಥವಾ ಸಂದೇಶವಾಗಿದೆ.
ಮನಸ್ತ ಆಪ್ಯಾಯತಾಂ ವಾಕ್ತ ಆಪ್ಯಾಯತಾಂ ಪ್ರಾಣಸ್ತ ಆಪ್ಯಾಯತಾಂ ಚಕ್ಷುಸ್ತ ಆಪ್ಯಾಯತಾಂ ಶ್ರೋತ್ರಂ ತ ಆಪ್ಯಾಯತಾಮ್ |
ಯತ್ತೆ ಕ್ರೂರಂ ಯದಾಸ್ಥಿತಂ ತತ್ತ ಆಪ್ಯಾಯತಾಂ ನಿಷ್ಟ್ಯಾಯತಾಂ ತತ್ತೆ ಶುಧ್ಯತು ಶಮಹೊಭ್ಯಃ |
ಓಷಧೆ ತ್ರಾಯಸ್ವ ಸ್ವಧಿತೆ ಮೈನಂ ಹಿಂಸಿಃ ||’
– ಯಜುರ್ವೇದ, ಅಧ್ಯಾಯ ೬, ಕಂಡಿಕಾ ೧೫
ಅರ್ಥ : ಹೇ ಶಿಷ್ಯ ! ನಾನು ನಿನಗೆ ಯಾವ ವಿದ್ಯೆಯನ್ನು ಪ್ರದಾನಿಸಿದ್ದೆನೋ, ಆ ಯೋಗದಿಂದ ನಿನ್ನ ಮನಸ್ಸು ಸದೃಢವಾಗಲಿ, ಪ್ರಾಣವು ಗಟ್ಟಿಮುಟ್ಟಾಗಲಿ, ಕಣ್ಣುಗಳಿಗೆ ಸರ್ವೋತ್ತಮ ಮತ್ತು ಸೂಕ್ಷ್ಮವನ್ನು ನೋಡುವ ಸಾಮರ್ಥ್ಯವು ಪ್ರಾಪ್ತವಾಗಲಿ, ಕಿವಿಗಳಿಗೆ ಅತ್ಯಂತ ಸೂಕ್ಷ್ಮನಾದ ಮತ್ತು ಕಲ್ಯಾಣಮಯ ವಾರ್ತೆಯನ್ನು ಕೇಳುವ ಸಾಮರ್ಥ್ಯವು ಪ್ರಾಪ್ತವಾಗಲಿ. ಯಾವ ವ್ಯವಹಾರ ಇನ್ನೊಬ್ಬರಿಗೆ ತೊಂದರೆ ನೀಡುವುದಿದೆಯೋ, ಅದರಿಂದ ದೂರವಿರು. ನಿನ್ನ ಪ್ರತಿಯೊಂದು ವ್ಯವಹಾರ ಶುದ್ಧವಾಗಲಿ. ಔಷಧಿ ವನಸ್ಪತಿಗಳೇ, ಇವನ ರಕ್ಷಣೆ ಮಾಡಿರಿ. ನೀನು ನಿನ್ನ ವಿದ್ಯೆ ಉಪಯೋಗಿಸಿ ಯಾರನ್ನೂ ಹಿಂಸಿಸಬೇಡ.
ಈ ಕಂಡಿಕೆ (ಶ್ಲೋಕ)ಯಿಂದ, ಹಿಂದೆ ಗುರುಕುಲದಲ್ಲಿರುವ ಸಾಧಕರ (ಶಿಷ್ಯನ) ಕಾಳಜಿಯನ್ನು ಗುರುಗಳು ಎಷ್ಟು ವಹಿಸುತ್ತಿದ್ದರು ಎಂದು ಸ್ಪಷ್ಟವಾಗುತ್ತದೆ ! ಕೇವಲ ವಿದ್ಯೆಯನ್ನು ನೀಡುವುದು, ಇಷ್ಟೇ ಆಗಿರದೇ ‘ಶಿಷ್ಯನು ಸ್ವತಃ ಕೃತಿಶೀಲನಾಗಬೇಕು’, ಎಂಬ ವಿಚಾರ ಇರುತ್ತಿತ್ತು. ಶಿಷ್ಯನ
ಅಂತಃಕರಣ ಶುದ್ಧ ಮಾಡಲು ಗುರುಗಳು ಅವನ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದರು. ಅವನ ಅಂತಃಕರಣ ಶುದ್ಧವಾದಾಗ ಅವನಲ್ಲಿನ ಚೈತನ್ಯ ಜಾಗೃತವಾಗುತ್ತಿತ್ತು ಮತ್ತು ಆ ಚೈತನ್ಯ ಅವನ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಮಾಡಿಸಿಕೊಳ್ಳುತ್ತಿರುವುದರಿಂದ ಅವನು ಬ್ರಾಹ್ಮತೇಜ ಮತ್ತು ಕ್ಷಾತ್ರತೇಜವುಳ್ಳವನಾಗುತ್ತಿದ್ದನು. ಅವನ ಆತ್ಮಬಲ ಹೆಚ್ಚಾದುದರಿಂದ ಗೃಹಸ್ಥಾಶ್ರಮ, ವಾನಪ್ರಸ್ಥಾಶ್ರಮ ಮತ್ತು ಸಂನ್ಯಾಸಾಶ್ರಮ ಇವುಗಳಲ್ಲಿನ ಜೀವನ ಸುಖವಾಗಿ, ಅವನಿಂದ ಧರ್ಮ ಮತ್ತು ರಾಷ್ಟ್ರ
ಇವುಗಳ ಪುನರುತ್ಥಾನದ ಕಾರ್ಯವಾಗಿ ಕೊನೆಗೆ ಮೋಕ್ಷಪ್ರಾಪ್ತಿಯಾಗುತ್ತಿತ್ತು; ಏಕೆಂದರೆ ಗುರುಗೃಹದಿಂದ ತನ್ನ ಮನೆಗೆ ಹೋಗುವಾಗ
ಗುರುಗಳು ಅವನಿಗೆ ಯಾವ ಉಪದೇಶವನ್ನು ನೀಡಿದ್ದರೋ, ಆ ಉಪದೇಶದ ಆಜ್ಞಾಪಾಲನೆಯಿಂದಾಗಿ ಅವನ ಕೈಯಿಂದ ಕೆಟ್ಟ ಕಾರ್ಯವಾಗುತ್ತಿರಲಿಲ್ಲ. ಅವನ ಜೀವನ ಇತರರಿಗೆ ದುಃಖಕರವಾಗದೇ ಉಪಕಾರಿಯಾಗುತ್ತಿತ್ತು. ಗುರುಗಳು ಔಷಧಿ ವನಸ್ಪತಿಗಳಿಗೆ, ‘ಹೇ
ವನಸ್ಪತಿಗಳೇ, ಈ ಶಿಷ್ಯನ ರಕ್ಷಣೆ ಮಾಡಿ’ ಎಂದು ಪ್ರಾರ್ಥನೆ ಮಾಡಿದ್ದರು. ಇದರ ಅರ್ಥ ‘ಅವನ ಶರೀರ ಉತ್ತಮವಾಗಿರಲು ಸಮಯಕ್ಕೆ ಸರಿಯಾಗಿ ನಿಮ್ಮ ಬಳಕೆಯಾಗಲಿ !’
– ಪರಾತ್ಪರ ಗುರು ಪರಶರಾಮ ಪಾಂಡೆ