ಹೀಗೆ ಎಲ್ಲರೂ ಅಯೋಗ್ಯ ವಿಚಾರ ಮತ್ತು ಟೀಕೆಗಳಿಗೆ ಯೋಗ್ಯವಾಗಿ ಪ್ರತಿವಾದ ಮಾಡದಿರುವುದರಿಂದ ಧರ್ಮದ ಮೇಲಿನ ಹಿಂದೂಗಳ ಶ್ರದ್ಧೆಯು ಡೋಲಾಯಮಾನವಾಗುತ್ತದೆ ಮತ್ತು ಇದರಿಂದ ಧರ್ಮಹಾನಿಯಾಗುತ್ತದೆ. ಈ ಹಾನಿಯನ್ನು ನಿಲ್ಲಿಸಲು ಹಿಂದೂಗಳಿಗೆ ಬೌದ್ಧಿಕ ಬಲ ಪ್ರಾಪ್ತವಾಗಬೇಕೆಂಬುದಕ್ಕಾಗಿ ಅಯೋಗ್ಯ ವಿಚಾರ ಮತ್ತು ಟೀಕೆಗಳ ಖಂಡನೆಯನ್ನು ಮುಂದೆ ಕೊಡಲಾಗಿದೆ.
೧. ‘ಭಾರತದಲ್ಲಿ ಅತಿಹೆಚ್ಚು ಅಧಾರ್ಮಿಕ ಜನರಿದ್ದಾರಂತೆ !’
ಅಯೋಗ್ಯ ವಿಚಾರ : ಭಾರತದಲ್ಲಿ ಅತಿಹೆಚ್ಚು ಅಧಾರ್ಮಿಕ ಜನರಿದ್ದಾರೆ; ಹಾಗಾಗಿ ಅವರಿಗೆ ಗುರುಗಳ ಅವಶ್ಯಕತೆ ಹೆಚ್ಚಿದೆ !
ಖಂಡನೆ : ಧರ್ಮದ ಉದಯವು ಭಾರತದಲ್ಲಿಯೇ ಆಗಿರುವುದು. ಪ್ರತ್ಯಕ್ಷದಲ್ಲಿ ಇತರ ದೇಶಗಳ ತುಲನೆಯಲ್ಲಿ ಭಾರತದಲ್ಲಿ ಗುರುಗಳಿಂದ ಕಲಿಯುವ ತಳಮಳವಿರುವ ಸಾತ್ತ್ವಿಕ ಸಾಧಕರು ಹೆಚ್ಚು ಪ್ರಮಾಣದಲ್ಲಿದ್ದಾರೆ; ಹಾಗಾಗಿ ಭಾರತದಲ್ಲಿ ಗುರುಗಳು ಹೆಚ್ಚು ಪ್ರಮಾಣದಲ್ಲಿದ್ದಾರೆ. ಗುರು-ಶಿಷ್ಯ ಪರಂಪರೆಯೇ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ. ಇಂದು ಭೋಗವಾದದಲ್ಲಿ ಮುಳುಗಿರುವ ವಿದೇಶದ ಸಾವಿರಾರು ಜನರು ಈ ಗುರುಪರಂಪರೆಯಲ್ಲಿ ಸಹಭಾಗಿಯಾಗಿ ಮನಃಶಾಂತಿ ಪಡೆಯುತ್ತಿದ್ದಾರೆ.
೨. ‘ಬಟ್ಟೆಗಳಂತೆ ಗುರುಗಳನ್ನೂ ‘ನೋಡಿ’ ಆರಿಸಬೇಕಂತೆ !’
ಅಯೋಗ್ಯ ವಿಚಾರ : ಜುಬ್ಬಾ ಖರೀದಿಸುವಾಗ ಹತ್ತರಲ್ಲಿ ಒಂದು ಮತ್ತು ಸೀರೆ ಖರೀದಿಸುವಾಗ ನೂರರಲ್ಲಿ ಒಂದು ಹೀಗೆ ನೋಡಿ ಖರೀದಿಸುತ್ತೇವೆ, ಅದರಂತೆಯೇ, ಗುರುಗಳನ್ನೂ ನೋಡಿ ಆರಿಸಬೇಕು. ಗುರುಗಳ ಅರ್ಹತೆಯು ಕಡಿಮೆಯಿದ್ದರೆ ಶಿಷ್ಯನ ಪ್ರಗತಿಯೂ ಕಡಿಮೆಯಾಗುತ್ತದೆ.
ಖಂಡನೆ : ಬಟ್ಟೆಗಳನ್ನು ಖರೀದಿಸುವಾಗ ನಮ್ಮಇಷ್ಟಗಳಿಗನುಸಾರ ಖರೀದಿಸುತ್ತೇವೆ; ಆದರೆ ಔಷಧಿಗಳನ್ನು ನಮ್ಮ ಇಷ್ಟಕ್ಕನುಸಾರ ತೆಗೆದುಕೊಳ್ಳದೇ, ವೈದ್ಯರು (ಡಾಕ್ಟರ್) ಹೇಳಿದಂತೆಯೇ ತೆಗೆದುಕೊಳ್ಳುತ್ತೇವೆ. ಗುರುಗಳನ್ನು ಪರೀಕ್ಷಿಸುವುದು ಸಾಮಾನ್ಯ ವ್ಯಕ್ತಿಗೆ ಅಸಾಧ್ಯವಾಗಿದೆ. ಒಬ್ಬ ವೈದ್ಯನೇ ಇನ್ನೊಬ್ಬ ವೈದ್ಯನು ಉತ್ತಮವಾಗಿದ್ದಾನೆಯೋ ಇಲ್ಲವೋ ಎಂಬುದನ್ನು ಹೇಳಬಲ್ಲನು. ಅದೇ ರೀತಿ ಓರ್ವ ಗುರುಗಳೇ ಬೇರೊಬ್ಬ ಗುರುಗಳು ಯೋಗ್ಯವಾಗಿದ್ದಾರೆಯೋ ಅಥವಾ ಇಲ್ಲವೋ ಎಂಬುದನ್ನು ಸೂಕ್ಷ್ಮದಿಂದ ತಿಳಿದುಕೊಂಡು ಹೇಳಬಲ್ಲರು. ಸಾಮಾನ್ಯವ್ಯಕ್ತಿಗೆ ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುವುದಿಲ್ಲ, ಆದುದರಿಂದ ಅವನು ಇದರ ಬಗ್ಗೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಲು ಪಾತ್ರನಾಗಿರುವುದಿಲ್ಲ.
೩. ‘ಗ್ರಂಥಗಳಿರುವಾಗ ಗುರುಗಳ ಆವಶ್ಯಕತೆ ಏಕಿದೆಯಂತೆ !’
ಅಯೋಗ್ಯ ವಿಚಾರ : ನಮ್ಮಲ್ಲಿ ಅಧ್ಯಾತ್ಮಶಾಸ್ತ್ರದ ಬಗ್ಗೆ ಒಂದಕ್ಕಿಂತ ಒಂದು ಆದರ್ಶ ಗ್ರಂಥಗಳಿರುವಾಗ ಮತ್ತು ಅವುಗಳಲ್ಲಿ ಎಲ್ಲ ಅಂಶಗಳನ್ನು ಸವಿಸ್ತಾರವಾಗಿ ಚರ್ಚಿಸಲಾಗಿರುವುದರಿಂದ, ಅವುಗಳ ಆಧಾರದಲ್ಲಿ ಜಿಜ್ಞಾಸುಗಳು ಕೊನೆಯವರೆಗೆ (ಮೋಕ್ಷಕ್ಕೆ) ತಲುಪ ಬಲ್ಲರು. ಹೀಗಿರುವಾಗ ಗುರುಗಳ ಆವಶ್ಯಕತೆ ಏನಿದೆ ?
ಖಂಡನೆ : ಗ್ರಂಥ ಕೇವಲ ಗುರುಪ್ರಾಪ್ತಿಯನ್ನು ಹೇಗೆ ಮಾಡುವುದು, ಗುರುಗಳ ಮನಸ್ಸನ್ನು ಹೇಗೆ ಗೆಲ್ಲುವುದು ಇತ್ಯಾದಿಗಳನ್ನು ಕಲಿಸಿಕೊಡುತ್ತದೆ; ಆದರೆ ಅದಕ್ಕನುಸಾರ ಸ್ವತಃ ಪ್ರಯತ್ನ ಮಾಡದೆ ಸಾಧ್ಯವಾಗುವುದಿಲ್ಲ. ಶಸ್ತ್ರಚಿಕಿತ್ಸೆಯ (ಸರ್ಜರಿ) ಬಗ್ಗೆ ಎಷ್ಟೇ ಪುಸ್ತಕಗಳನ್ನು ಓದಿದರೂ, ಸ್ವತಃ ಯಾರದ್ದಾದರೂ ಮಾರ್ಗದರ್ಶನದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡದೇ ಶಸ್ತ್ರಚಿಕಿತ್ಸೆಯ ಕೌಶಲ್ಯವು ನಿಜವಾದ ಅರ್ಥದಲ್ಲಿ ಕರಗತವಾಗುವುದಿಲ್ಲ, ಇಲ್ಲಿ ಕೂಡ ಅದೇ ಅನ್ವಯಿಸುತ್ತದೆ. ಅದೇ ರೀತಿ ಗುರುಗಳ ಅಸ್ತಿತ್ವದಿಂದ ಆಗುವ ಚೈತನ್ಯದ ಲಾಭ ಗ್ರಂಥದಿಂದ ಸಿಗುವುದಿಲ್ಲ. ಶಿಷ್ಯನ ನಿಜವಾದ ಪ್ರಗತಿಯು ಗುರುಗಳ ‘ಸಂಕಲ್ಪ’ದಿಂದಲೇ ಆಗುತ್ತದೆ. ಗ್ರಂಥಗಳು ಸಂಕಲ್ಪವನ್ನು ಮಾಡುವುದಿಲ್ಲ.
೪. ‘ಗುರುಗಳನ್ನು ಪ್ರಶ್ನಿಸಿ ಅವರ ಮಟ್ಟವನ್ನು ಅಳೆಯಬೇಕಂತೆ !’
ಅಯೋಗ್ಯ ವಿಚಾರ : ‘ಪ್ರಸ್ತುತ ಕಾಲದಲ್ಲಿ ಮೊದಲೇ ಗೊಂದಲದಲ್ಲಿರುವ ಪಾಮರರು ಯಾವ ಗುರುಗಳ ಶಿಷ್ಯತ್ವವನ್ನು ಸ್ವೀಕರಿಸಬೇಕು ಎಂಬ ವಿಚಾರದಿಂದ ಇನ್ನಷ್ಟು ಗೊಂದಲಕ್ಕೀಡಾಗುತ್ತಾರೆ. ಬ್ರಿಟನ್‌ನ ‘ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಇನ್ವೆನ್‌ಶನ್ಸ್’ ಎಂಬ ಸಂಸ್ಥೆಯು ಇಂತಹವರಿಗೆ ಮಾರ್ಗದರ್ಶನ ಮಾಡಲು ನಿರ್ಧರಿಸಿದೆ. ಧಾರ್ಮಿಕ ಗುರುಗಳ ಆಯ್ಕೆ ಮಾಡುವಾಗ ಅವರನ್ನು ವಿಚಾರಿಸಲು ಈ ಸಂಸ್ಥೆಯು ೧೪ ಪ್ರಶ್ನೆಗಳ ಪಟ್ಟಿ ಮಾಡಿದೆ. ದಿವಂಗತ ಆಚಾರ್ಯ ರಜನೀಶ ಇವರಿಗೆ ಕೇವಲ ೧೭ ಅಂಕಗಳನ್ನು ನೀಡಲಾಗಿದೆ, ಆದರೆ ಮಹರ್ಷಿ ಮಹೇಶ ಯೋಗಿ ಇವರಿಗೆ ೨೩ ಅಂಕಗಳನ್ನು ನೀಡಲಾಗಿದೆ. ಯೇಸು ಕ್ರಿಸ್ತ ಮತ್ತು ಆ ಪರಂಪರೆಯ ಗುರುಗಳಿಗೆ ೭೦ ಕ್ಕಿಂತ ಅಧಿಕ ಅಂಕವಿದೆ. ಆದುದರಿಂದ ಗುರುಗಳಿಗೆ ಪ್ರಶ್ನಿಸುವ ಅಭ್ಯಾಸ ಮಾಡಿಸುವುದು ಒಳ್ಳೆಯದು. ಏಕೆಂದರೆ ಯಾರಿಗೆ ಇಷ್ಟು ಪ್ರಶ್ನೆಯನ್ನು ಕೇಳಬಹುದೋ; ಅವರಿಗೆ ಬಹುಶಃ ಮುಂದೆ ಗುರುಗಳ ಅಷ್ಟು ಅವಶ್ಯಕತೆಯೂ ಅನಿಸಲಾರದು. (ಆಧಾರ : ಅಜ್ಞಾತ)
ಖಂಡನೆ : ಕ್ರೈಸ್ತ ಪಂಥದ ವಿಚಾರಸರಣಿಯ ಆಧಾರದಲ್ಲಿ ತಯಾರಿಸಿದ ಪ್ರಶ್ನಾವಳಿಯಲ್ಲಿ ಪ್ರಶ್ನೆಗಳು ಮಾನಸಿಕ ಸ್ತರದಲ್ಲಿರುವುದರಿಂದ ಹಿಂದೂ ಸಂತರಿಗೆ ಅಲ್ಪ ಅಂಕ ಸಿಕ್ಕಿರುವುದರಲ್ಲಿ ಆಶ್ಚರ್ಯವಿಲ್ಲ ! ಹಿಂದೂ ಧರ್ಮದಲ್ಲಿ ಗುರುಗಳ ಮಟ್ಟ ಸೂಕ್ಷ್ಮದಲ್ಲಿನ ಅಧ್ಯಯನದಿಂದ ನಿರ್ಧರಿಸಲಾಗುತ್ತದೆ.