ಇಲ್ಲಿಯ ತನಕ ನೀವೆಲ್ಲರೂ ಅನೇಕ ಸಲ ಭಾರತದ ಪ್ರಾಚೀನ ಗುರುಕುಲ ಪದ್ಧತಿಯ ಕುರಿತು ವಿವಿಧ ಮಾಧ್ಯಮಗಳ ಮೂಲಕ ಮಾಹಿತಿಯನ್ನು ಪಡೆದಿರಬಹುದು. ಈ ಶಿಕ್ಷಣ ಪದ್ಧತಿಗೆ ಅನುಗುಣವಾಗಿ ಗುರುಗಳ ಆಶ್ರಮಕ್ಕೆ ಹೋಗಿ ಶಿಕ್ಷಣವನ್ನು ಪಡೆಯುವ ಬಗ್ಗೆ ಮಾತ್ರ ನಮ್ಮ ಜ್ಞಾನ ಸೀಮಿತವಾಗಿರಬಹುದು. ಗುರುಕುಲವೆಂದರೆ ಏನು ? ಅಲ್ಲಿಯ ದಿನಚರಿ, ಅಧ್ಯಯನ ಕ್ರಮ ಹೇಗಿರುತ್ತದೆ ಮುಂತಾದವುಗಳನ್ನು ತಿಳಿದುಕೊಳ್ಳಲು ಉದಾಹರಣೆಯಾಗಿ ಒಂದು ಗುರುಕುಲ ಪದ್ಧತಿಯ ವಿವರಗಳನ್ನು ಇಲ್ಲಿ ನೀಡುತ್ತಿದ್ದೇವೆ. ಗುರುಕುಲ ಶಿಕ್ಷಣ ಪದ್ಧತಿಯ ಮುಖಾಂತರವೇ ರಾಮ, ಕೃಷ್ಣರು ಬೆಳಕಿಗೆ ಬಂದರು. ಇದರಿಂದಾಗಿ ಗುರುಕುಲ ಪದ್ಧತಿಯ ಶ್ರೇಷ್ಠತೆಯು ನಮ್ಮ ಗಮನಕ್ಕೆ ಬರುತ್ತದೆ.
ಗುರುಕುಲ ದಿನಚರಿ
ಗುರುಕುಲದ ದಿನಚರಿಯು ಬಹಳ ಶಿಸ್ತಿನಿಂದ ಕೂಡಿದ್ದು, ಕಠಿಣವಾಗಿರುತ್ತದೆ.
ಅ. ಮುಂಜಾನೆ ೫ ಗಂಟೆಗೆ ಪ್ರಾರ್ಥನೆ, ನಂತರ ಗಂಗಾ (ಪವಿತ್ರ) ಸ್ನಾನ, ಸೂರ್ಯೋದಯಕ್ಕೆ ಸಂಧ್ಯಾವಂದನೆ, ಗಾಯತ್ರಿ ಮಂತ್ರದ ಜಪ ಮತ್ತು ಅದರ ನಂತರ ಸೂರ್ಯನಮಸ್ಕಾರ ಅಥವಾ ಯೋಗಾಸನವನ್ನು ಮಾಡುವುದು.
ಆ. ತದನಂತರ ಬೆಳಿಗ್ಗೆ ೧೧.೩೦ ರ ವರೆಗೆ ಪಾಠಗಳು (ಅಧ್ಯಯನ).
ಇ. ನಂತರ ಮಾಧುಕರಿ ಭಿಕ್ಷೆಯನ್ನು ಬೇಡುವುದು. ಮಾಧುಕರಿ ಬೇಡುವುದು ಬ್ರಹ್ಮಚರ್ಯ ವ್ರತದ ಒಂದು ಅಂಗವಾಗಿರುತ್ತದೆ.
ಈ. ಒಂದು ತಾಸಿನ ವರೆಗೆ ವಿಶ್ರಾಂತಿಯನ್ನು ಪಡೆದು, ನಂತರ ಸೂರ್ಯಾಸ್ತದ ವರೆಗೆ ಪಾಠಗಳು ನಡೆಯುತ್ತವೆ.
ಉ. ಸೂರ್ಯಾಸ್ತಕ್ಕೆ ೧೦-೧೫ ನಿಮಿಷಗಳಿರುವಾಗ ಅಧ್ಯಯನವನ್ನು ನಿಲ್ಲಿಸುವುದು.
ಊ. ನಂತರ ಸಾಯಂಕಾಲದ ಸಂಧ್ಯಾವಂದನೆ ಮಾಡುವುದು, ಸ್ತೋತ್ರ ಪಠಣ ಮಾಡುವುದು, ಅಲ್ಪಾಹಾರವನ್ನು ಮಾಡುವುದು.
ಋ. ವಿಶ್ರಾಂತಿ ಪಡೆಯುವುದು.
ಗುರುಕುಲದಲ್ಲಿ ಅಧ್ಯಯನ-ಅಧ್ಯಾಪನೆ
ಹೊಸ ಪಾಠ ಪ್ರಾರಂಭವಾದ ಕೂಡಲೇ, ಆ ಪಾಠವು ಹಿಂದಿನ ಪಾಠಕ್ಕೆ ಸಂಬಂಧಿಸಿರುತ್ತಿತ್ತು. ಇದರಿಂದಾಗಿ ಹಿಂದಿನ ಪಾಠದ ಪುನರಾವಲೋಕನವಾಗುತ್ತಿತ್ತು. ಪಾಠವನ್ನು ಪ್ರಾರಂಭಿಸುವ ಮೊದಲು ಗುರುಗಳು ೧೦ ನಿಮಿಷಗಳ ಕಾಲ ಹಿಂದಿನ ದಿನದ ಪಾಠ ಎಲ್ಲಿಯವರೆಗೆ ಅರ್ಥವಾಗಿದೆಯೆಂದು ತಿಳಿದುಕೊಳ್ಳಲು ವಿದ್ಯಾರ್ಥಿಗಳ ಜ್ಞಾನವನ್ನು ಪರಿಶೀಲಿಸುತ್ತಿದ್ದರು. ತದನಂತರ ಹೊಸ ಪಾಠದ ಪ್ರಾರಂಭವಾಗುತ್ತಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆಯೋ ಇಲ್ಲವೋ ಎನ್ನುವುದು ಪ್ರತಿದಿನವೂ ತಿಳಿಯುತ್ತಿತ್ತು. ಅಂದರೆ ದಿನವೂ ಪರೀಕ್ಷೆಯಾಗುತ್ತಿತ್ತು. ಇದರಿಂದಾಗಿ ಪರೀಕ್ಷೆ ಯಾವಾಗ ಇದೆ, ಪರೀಕ್ಷೆಯ ತಯಾರಿ ಹೇಗೆ ಮಾಡುವುದು ಎನ್ನುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.
ಆರ್ಥಿಕ ಸಹಾಯ
ನಮ್ಮ ಶಿಕ್ಷಣ ಸಂಸ್ಥೆಗಳು ಎಂದಿಗೂ ಸರಕಾರವನ್ನು ಅವಲಂಬಿಸಿರಲಿಲ್ಲ. ಜನರೇ ಶಿಕ್ಷಣ ಸಂಸ್ಥೆಗಳಿಗೆ ಧನಸಹಾಯವನ್ನು ನೀಡಿ, ತಾವು ಧನ್ಯರಾದೆವೆಂದು ತಿಳಿದುಕೊಳ್ಳುತ್ತಿದ್ದರು. ಅಂದಿನ ಶಾಸನವು ಎಂದಿಗೂ ಶಿಕ್ಷಣ ವ್ಯವಸ್ಥೆ ಅಥವಾ ಶಿಕ್ಷಣ ಸಂಸ್ಥೆಗಳ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಇದು ನಮ್ಮ ಪ್ರಾಚೀನ ರಾಜನೀತಿ ಅಥವಾ ಶಾಸನದ ನಿಯಮವಾಗಿತ್ತು. ಶಿಕ್ಷಣವು ಸಂಪೂರ್ಣವಾಗಿ ಸ್ವತಂತ್ರವಾಗಿರುತ್ತಿತ್ತು.
ಇಂದಿನ ಶಿಕ್ಷಣ ವ್ಯವಸ್ಥೆಯ ಸ್ಥಿತಿ !
ನಿಮ್ಮ ಮಗು ಅಸಾಮಾನ್ಯ ಬುದ್ಧಿವಂತನಾಗಿದ್ದು, ಹತ್ತನೇ ತರಗತಿಯವರೆಗೆ ಪಠ್ಯಕ್ರಮವನ್ನು ೩ ವರ್ಷಗಳಲ್ಲಿ ಸುಲಭವಾಗಿ ಪೂರ್ಣಗೊಳಿಸಿ ಪ್ರಥಮ ಶ್ರೇಣಿಯಲ್ಲಿ ಉನ್ನತ ಅಂಕಗಳೊಂದಿಗೆ ಉತ್ತೀರ್ಣನಾಗಬಲ್ಲನು ಎಂದು ಭಾವಿಸಿ. ಈ ರೀತಿ ಕ್ಷಮತೆಯನ್ನು ಹೊಂದಿರುವಾಗ, ಇಂದಿನ ಶಿಕ್ಷಣ ಪದ್ಧತಿಗನುಗುಣವಾಗಿ ಅವನು ಅನಿವಾರ್ಯವಾಗಿ ೧೦ ನೇ ತರಗತಿಯವರೆಗೆ ಇತರರೊಂದಿಗೆ ಅಧ್ಯಯವನನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ಆ ಮಗುವಿನ ಜೀವನದ ಅತ್ಯಮೂಲ್ಯವಾದ ೮ ವರ್ಷಗಳು ವ್ಯರ್ಥವಾಗುತ್ತವೆ. ಪ್ರತಿಯೊಂದು ಪರೀಕ್ಷೆಯಲ್ಲಿಯೂ ಅವನು ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಬಹುದು, ಆದರೆ ಆ ಮಗುವಿನ ಆಯುಷ್ಯದ ಅಮೂಲ್ಯವಾದ ೮ ವರ್ಷಗಳು ಹಿಂಪಡೆಯಲು ಸಾಧ್ಯವಿಲ್ಲ ! ಆದರೆ ನಮ್ಮ ಗುರುಕುಲ ಪದ್ಧತಿಯಲ್ಲಿ ಹಾಗಾಗುವುದಿಲ್ಲ. ಗುರುಗಳ ಕಡೆಯಿಂದ ವಿದ್ಯಾರ್ಥಿಗಳು ನೀತಿ ಸಂಹಿತೆಯನ್ನು ಕಲಿಯುತ್ತಾರೆ. ಒಂದೊಮ್ಮೆ ಒಬ್ಬ ಮಂದ ವಿದ್ಯಾರ್ಥಿಗೆ ಸಾಮಾನ್ಯವಾದ ಪುರುಷಸೂಕ್ತವನ್ನು ಕಂಠಪಾಠ ಮಾಡಲು ತಿಂಗಳುಗಳೇ ತಗುಲಬಹುದು. ಆದರೆ ಮತ್ತೊಬ್ಬ ವಿದ್ಯಾರ್ಥಿಯು ಆ ಸೂಕ್ತವನ್ನು ೮ ದಿನಗಳಲ್ಲಿ ಕಂಠಪಾಠ ಮಾಡಬಹುದು. ಆಗ ಗುರುಗಳು ಅವನಿಗೆ ಮುಂದಿನ ಸೌರ ಸೂಕ್ತವನ್ನು ಕಲಿಸುತ್ತಾರೆ. ಅದರ ನಂತರ ಮೂರನೆಯ, ನಾಲ್ಕನೇ.. ಹೀಗೆ ಮುಂದಿನ ಪಾಠಗಳನ್ನು ಕಲಿಸುತ್ತಾರೆ. ಅವನ ಪ್ರಗತಿಯು ಮುಂದುವರಿಯುತ್ತದೆ. ಇತರ ವಿದ್ಯಾರ್ಥಿಗಳಿಂದಾಗಿ ಹಿಂದುಳಿಯುವುದಿಲ್ಲ. ಇನ್ನೂ ಕೆಲವು ವಿದ್ಯಾರ್ಥಿಗಳು ೩ ವರ್ಷಗಳಲ್ಲಿ ಸಂಹಿತೆಯನ್ನು ಹೇಳುತ್ತಾರೆ. ಮುಂದೆ ಪದ, ಕ್ರಮ, ಜಟಾ, ಘನ ಇತ್ಯಾದಿಗಳ ತಯಾರಿ ಮಾಡುತ್ತಾರೆ. ಇವುಗಳನ್ನೆಲ್ಲ ಕಲಿಯಲು ಮಂದ ವಿದ್ಯಾರ್ಥಿಗೆ ಕೆಲವೊಮ್ಮೆ ೫-೬ ವರ್ಷಗಳೇ ತಗಲಬಹುದು. ಗುರುಕುಲ ಪದ್ಧತಿಯಿಂದಾಗಿ ಯಾರೊಬ್ಬ ವಿದ್ಯಾರ್ಥಿಯ ಅಮೂಲ್ಯವಾದ ವರ್ಷಗಳು ವ್ಯರ್ಥವಾಗುವ ಸಾಧ್ಯತೆ ಇರುವುದಿಲ್ಲ.
– ಗುರುದೇವ ಡಾ. ಕಾಟೇಸ್ವಾಮಿ (ಸಾಪ್ತಾಹಿಕ ಸನಾತನ ಚಿಂತನ, ೨೭ ಡಿಸೆಂಬರ ೨೦೦೭)