ಮಾರ್ಚ ೧೫ ರಂದು ನಾವು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಯೋಗ್ಯಕರ್ತಾ ಎಂಬ ನಗರದಿಂದ ೫೦೦ ಕಿ. ಮೀ. ದೂರದಲ್ಲಿರುವ ಸುರಾಬಾಯಾಕ್ಕೆ ತಲುಪಿದೆವು. ಸುರಾಬಾಯಾ ಇದು ಇಂಡೋನೇಶಿಯಾದಲ್ಲಿ ಎರಡನೇ ಕ್ರಮಾಂಕದ ನಗರವಾಗಿದೆ. ಈ ಸ್ಥಳದಲ್ಲಿ ಶೇ. ೯೯ ರಷ್ಟು ಮುಸಲ್ಮಾನರ ಜನಸಂಖ್ಯೆ ಇದೆ. ನಮಗೆ ಸುರಾಬಾಯಾದಿಂದ ೧೦೦ ಕಿ.ಮೀ. ದೂರದಲ್ಲಿರುವ ಸುಮೇರು ಪರ್ವತದ ದರ್ಶನ ಪಡೆಯಬೇಕಾಗಿತ್ತು.
ಇಂಡೋನೇಶಿಯಾ ಅಂದರೆ ಜೀವಂತ ಜ್ವಾಲಾಮುಖಿಗಳ ದೇಶ ! ಈ ದೇಶದಲ್ಲಿ ಒಟ್ಟು ೧೪೦ ಪರ್ವತಗಳಿವೆ. ಅವುಗಳು ಎಲ್ಲವೂ ಜ್ವಾಲಾಮುಖಿಗಳಿಂದ ನಿರ್ಮಾಣವಾಗಿವೆ. ಅದರಲ್ಲಿ ಎಲ್ಲಕ್ಕಿಂತ ಎತ್ತರವಾದ ಮತ್ತು ಅಪಾಯಕರವನ್ನುಂಟುಮಾಡುವ ಪರ್ವತವೆಂದರೆ ಮೇರಾಪಿ ಪರ್ವತ, ಅನಂತರ ಸುಮೇರು ಪರ್ವತ ಮತ್ತು ಅಗುಂಗ ಪರ್ವತ. ಮೇರಾಪಿ ಪರ್ವತವು ಯೋಗ್ಯಕರ್ತಾ ನಗರದ ಸಮೀಪದಲ್ಲಿದೆ. ಸುಮೇರು ಇದು ಸುರಾಬಾಯಾದ ಹತ್ತಿರವಿದೆ ಮತ್ತು ಅಗುಂಗ ಪರ್ವತವು ಬಾಲಿ ದ್ವೀಪದಲ್ಲಿದೆ. ಸುಮೇರು ಪರ್ವತದ ದರ್ಶನ ನಾವು ದೂರದಿಂದಲೇ ಪಡೆಯಬಹುದು; ಏಕೆಂದರೆ ಆ ಪರ್ವತಕ್ಕೆ ಇಂಡೋನೇಶಿಯಾದಲ್ಲಿ ಹಿಂದೂಗಳು ಪವಿತ್ರ ಪರ್ವತವೆಂದು ನಂಬಿಕೆ ಇಡುತ್ತಾರೆ.
೧. ಸಮುದ್ರ ಮಂಥನದ ಸಮಯದಲ್ಲಿ ಕಡಗೋಲಿನ ಕಾರ್ಯ ಮಾಡಿದ ಪರ್ವತವೇ ಸುಮೇರು ಪರ್ವತ !
೧. ಹೊಗೆಯಾಡುತ್ತಿರುವ ಬ್ರೊಮೊ ಪರ್ವತ ೨. ಎಲ್ಲಕ್ಕಿಂತ ಎತ್ತರವಾಗಿ ಕಾಣಿಸುತ್ತಿರುವ ಸುಮೇರು ಪರ್ವತ (ದೂರದಲ್ಲಿದೆ)
ಸುಮೇರು ಪರ್ವತದ ಬಗ್ಗೆ ನಾವು ಭಾಗವತದಲ್ಲಿ ಹಾಗೂ ವಿವಿಧ ಪುರಾಣಗಳಲ್ಲಿ ಓದಿರುತ್ತೇವೆ. ಸಮುದ್ರ ಮಂಥನದ ಸಮಯದಲ್ಲಿ ಕಡಗೋಲಿನ ಕಾರ್ಯ ಮಾಡಿದ್ದೇ ಸುಮೇರು ಪರ್ವತ ! ಕ್ಷೀರಸಾಗರದಲ್ಲಿನ ಅಮೃತವನ್ನು ಪಡೆಯಲು ದೇವತೆ ಮತ್ತು ಅಸುರರಿಗೆ ಸಮುದ್ರಮಂಥನ ಮಾಡಬೇಕಿತ್ತು, ಆಗ ವಿಷ್ಣು,”ನಾವು ಹಿಮಾಲಯದಲ್ಲಿನ ಮಂದಾರ ಪರ್ವತವನ್ನು ಇಲ್ಲಿ ತಂದು ಮತ್ತು ಅದನ್ನು ಕಡಗೋಲು ಮಾಡಿ ಮಂಥನ ಮಾಡಿದರೆ, ಚೆನ್ನಾಗಿರುತ್ತದೆ” ಎಂದು ಹೇಳುತ್ತಾರೆ. ಆ ಪ್ರಕಾರ ಮಂದಾರ ಪರ್ವತದ ಒಂದು ಭಾಗವನ್ನು ಇಲ್ಲಿ ತರಲಾಯಿತು. ಆ ಭಾಗವನ್ನೇ ಸುಮೇರು ಪರ್ವತ ಎಂದು ಕರೆಯಲಾಗುತ್ತದೆ. ಈ ಪರ್ವತವನ್ನು ಹೊತ್ತುಕೊಳ್ಳಲು ಶ್ರೀಮನ್ನಾರಾಯಣನು ಕೂರ್ಮಾವತಾರ ತಾಳಿದನು. ಅದು ಕೂಡ ಇದೇ ಪ್ರದೇಶದಲ್ಲಿ ನಡೆದಿರುವುದರಿಂದ ಇಂಡೋನೇಶಿಯಾದಲ್ಲಿ ವಿಷ್ಣುವಿನ ಪ್ರತಿಯೊಂದು ದೇವಸ್ಥಾನಗಳಲ್ಲಿ ಸುಮೇರು ಮತ್ತು ಅದರ ಕೆಳಗೆ ಕೂರ್ಮ ಇರುವ ಗುರುತುಗಳು ಕಂಡುಬರುತ್ತವೆ. ಸಮುದ್ರ ಮಂಥನವು ಇದೇ ಪ್ರದೇಶದಲ್ಲಿ ನಡೆದಿರುವುದರಿಂದ ಮತ್ತೊಂದು ಸ್ಪಷ್ಟವಾದ ಸಾಕ್ಷಿ ಅಂದರೆ ಇಂಡೋನೇಶಿಯಾದ ಒಂದು ಬದಿಗೆ ಉತ್ತರದಲ್ಲಿ ಪ್ರಶಾಂತ ಮಹಾಸಾಗರವಿದೆ ಮತ್ತು ದಕ್ಷಿಣದಲ್ಲಿ ಹಿಂದೂ ಮಹಾಸಾಗರವಿದೆ. ಈ ಮಹಾಸಾಗರದಲ್ಲಿ ಸಮುದ್ರ ಮಂಥನಕ್ಕಾಗಿ ಎಲ್ಲ ದೇವ-ದೇವತೆಗಳು ಬಂದಿದ್ದರು ಮತ್ತು ಋಷಿಮುನಿಗಳು ನೆರೆದಿದ್ದರು. ಎಲ್ಲ ದೈವೀ ಶಕ್ತಿಯು ಈ ಸ್ಥಳದಲ್ಲಿ ಉಪಸ್ಥಿತರಿದ್ದರಿಂದ ಈ ಸುಮೇರು ಪರ್ವತವು ದೈವೀ ಶಕ್ತಿಯಿಂದ ತುಂಬಿದೆ. ಸುಮೇರು ಪರ್ವತದ ಹತ್ತಿರ ೩೦ ಕಿ.ಮೀ. ಪರಿಸರದಲ್ಲಿ ಯಾರೂ ಇರುವುದಿಲ್ಲ ಮತ್ತು ಸರಕಾರ ಕೂಡ ಅದರ ಹತ್ತಿರ ಸೈನ್ಯವನ್ನು ನಿಲ್ಲಿಸಿದೆ.
೨. ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರ ಪ್ರತೀಕವಾಗಿರುವ ಕ್ರಮವಾಗಿ ಬ್ರೊಮೊ, ಸುಮೇರು ಮತ್ತು ಮೇರಾಪಿ ಪರ್ವತ !
ಯೋಗ್ಯಕರ್ತಾ ನಗರದ ಹತ್ತಿರುವ ಮೇರಾಪಿ ಪರ್ವತವು ಶಿವನ ರೂಪವಾಗಿದೆ ಎಂದು ಹಿಂದೂಗಳ ನಂಬಿಕೆ ಇದೆ
ಸುರಾಬಾಯಾ ಈ ನಗರದಿಂದ ೧೦೦ ಕಿ.ಮೀ. ದೂರದಲ್ಲಿ ಪರ್ವತಗಳ ದೊಡ್ಡ ಸಾಲುಗಳಿವೆ. ಆ ಪರ್ವತಗಳ ಸಾಲಿನಲ್ಲಿ ಅನಂತ ಗುಡಂಗ, ಅರ್ಜುನ, ಬ್ರಹ್ಮ, ಸುಮೇರು ಎಂಬ ಅನೇಕ ಪರ್ವತಗಳಿವೆ. ಆ ೮-೧೦ ಪರ್ವತಗಳಲ್ಲಿ ಯಾವುದು ಎತ್ತರವಾದ ಪರ್ವತ ಕಾಣಿಸುತ್ತದೆಯೊ, ಅದೇ ಸುಮೇರು ! ಸ್ಥಳೀಯ ಭಾಷೆಯಲ್ಲಿ ಬ್ರೊಮೊ, ಸುಮೇರು ಮತ್ತು ಮೇರಾಪಿ ಎಂದು ಸಂಬೋಧಿಸಲಾಗುವ ಈ ಮೂರು ಪರ್ವತಗಳು ಇಲ್ಲಿನ ಹಿಂದೂಗಳಿಗೆ ಪವಿತ್ರವಾಗಿವೆ. ಬ್ರೊಮೊ ಅಂದರೆ ಸಾಕ್ಷಾತ್ ಬ್ರಹ್ಮ, ಸುಮೇರು ಅಂದರೆ ಶ್ರೀವಿಷ್ಣು ಮತ್ತು ಮೇರಾಪಿ ಅಂದರೆ ಶಿವ ! ಈ ಮೂರು ಪರ್ವತಗಳು ಜಗತ್ತಿನಲ್ಲಿನ ಎಲ್ಲಕ್ಕಿಂತ ಭೀಕರ ಜ್ವಾಲಾಮುಖಿಗಳಾಗಿರುತ್ತವೆ. ಈ ಮೂರು ಪರ್ವತಗಳಿಂದ ಒಂದೇ ಸಮಯಕ್ಕೆ ಸ್ಫೋಟವಾಗುತ್ತದೆ. ಮೇರಾಪಿ ಪರ್ವತದಲ್ಲಿ ಯಾವಾಗ ಜ್ವಾಲಾಮುಖಿಯ ಸಂದರ್ಭದಲ್ಲಿ ಚಟುವಟಿಕೆಗಳು ಪ್ರಾರಂಭವಾಗಿರುವುದು ಕಂಡುಬರುತ್ತದೆ, ಅದೇರೀತಿಯ ಚಟುವಟಿಕೆಗಳಿಗೆ ಆ ಎರಡು ಪರ್ವತಗಳಲ್ಲಿಯೂ ಪ್ರಾರಂಭವಾಗುವುದು ಕಂಡುಬರುತ್ತದೆ. (ಅದಕ್ಕೆ ಸೈಸ್ಮಿಕ್ ಆಕ್ಟಿವಿಟಿ ಎನ್ನುತ್ತಾರೆ.) ಇದರಿಂದ ಗಮನಕ್ಕೆ ಬರುವುದೇನೆಂದರೆ, ಈ ಮೂರು ಪರ್ವತಗಳು ತ್ರಿಮೂರ್ತಿಗಳೇ ಆಗಿವೆ.
ಹೊಗೆಯಾಡುತ್ತಿರುವ ಬ್ರೊಮೊ ಪರ್ವತದ ಜಾಗೃತ ಜ್ವಾಲಾಮುಖಿ
೩. ಪರ್ವತಗಳಲ್ಲಿರುವ ದೇವತ್ವದ ಕುರಿತು ಬಂದಿರುವ ಅನುಭೂತ
ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀವಿಷ್ಣು ಇವರನ್ನು ವರ್ಣಿಸುವ ಹಾಡು ಹೇಳುವಾಗ ವಿಷ್ಣು ಸ್ವರೂಪವಾಗಿರುವ ಸುಮೇರು ಪರ್ವತದ ಗರ್ಭದಲ್ಲಿ ವಿಸ್ಫೋಟವಾಗುವುದು : ಸುಮೇರು ಪರ್ವತಗಳ ದರ್ಶನ ಪಡೆಯುವುದಕ್ಕಾಗಿ ನಾವು ಸುರಾಬಾಯಾದಿಂದ ರಾತ್ರಿ ೧೧ ಗಂಟೆಗೆ ಹೊರಟೆವು. ಮೂರು ಗಂಟೆಗಳ ಪ್ರಯಾಣ ಮಾಡಿ ಪನಾಂಜಕಾನ್ ಪರ್ವತದ ಮೇಲೆ ತಲುಪಿದೆವು. ಅಲ್ಲಿ ಸ್ವಲ್ಪ ವಿಶ್ರಾಂತಿ ಪಡೆದುಕೊಂಡು ಬೆಳಗ್ಗೆ ಮೂರುವರೆ ಗಂಟೆಗೆ ನಾವು ಆ ಪರ್ವತದ ತುದಿಯಿಂದ ಸೂರ್ಯೋದಯವನ್ನು ನೋಡಲೆಂದು ಹೋದೆವು. ಆ ದೃಶ್ಯವನ್ನು ನೋಡಲು ಜಗತ್ತಿನಲ್ಲಿನ ಪ್ರವಾಸಿಗಳು ಬರುತ್ತಿರುತ್ತಾರೆ. ಪನಾಂಜಕಾನ್ ಪರ್ವತವು ಸಮುದ್ರ ಮಟ್ಟದಿಂದ ೧೦ ಸಾವಿರ ಅಡಿ ಎತ್ತರವಿದೆ. ಅಲ್ಲಿಂದ ನಮಗೆ ಸುಮೇರು ಮತ್ತು ಬ್ರಹ್ಮ ಪರ್ವತಗಳ ದರ್ಶನ ಆಗುವುದಿತ್ತು. ಬೆಳಗ್ಗೆ ನಾಲ್ಕೂವರೆ ಗಂಟೆಗೆ ಸೂರ್ಯನ ಮೊದಲನೇ ಕಿರಣಗಳು ಬೀಳುತ್ತಲೇ ನಮಗೆ ಮೊದಲು ಸುಮೇರುವಿನ ದರ್ಶನವಾಯಿತು. ಬ್ರಹ್ಮ ಪರ್ವತದ ದರ್ಶನವೂ ಆಯಿತು. ಐದೂವರೆ ಗಂಟೆಯವರೆಗೆ ನಾವು ಆ ಎಲ್ಲ ದೃಶ್ಯವನ್ನು ಚಿತ್ರೀಕರಣ ಮಾಡಿದೆವು. ಆ ಸಮಯದಲ್ಲಿ ನಮಗೆ ದೊಡ್ಡ ಅನುಭೂತಿ ಬಂದಿತು. ಸುಮೇರು ಪರ್ವತದಿಂದ, ಅಂದರೆ ಸಮುದ್ರ ಮಂಥನದಿಂದ ನಮಗೆ ಅಮೃತ ದೊರಕಿತು. ಶ್ರೀಕೃಷ್ಣನ ಕೈಯಲ್ಲಿರುವ ಪಾಂಚಜನ್ಯ ಶಂಖ, ಶ್ರೀವಿಷ್ಣುವಿನ ಕೈಯಲ್ಲಿರುವ ಗದೆ, ಸ್ವರ್ಗದಲ್ಲಿರುವ ಅಪ್ಸರೆ, ಕಾಮಧೇನು, ಪಾರಿಜಾತ ವೃಕ್ಷ, ಏಳು ಮುಖಗಳಿರುವ ಉಚ್ಚಶ್ರೈವಾಸ ಕುದುರೆ, ಇಂದ್ರನ ಐರಾವತ ಆನೆ, ವಿಷ್ಣುವಿನ ಕಿರೀಟದಲ್ಲಿರುವ ಕೌಸ್ತುಭ ಮಣಿ, ಹಾಲಾಹಲ ವಿಷ (ಅದನ್ನು ನಂತರ ಶಿವನು ಕುಡಿದನು), ಧನ್ವಂತರಿ ದೇವತೆ, ಚಂದ್ರ, ಕಲ್ಪವೃಕ್ಷ, ಶಾರಂಗ ಎಂಬ ಧನುಷ್ಯ, ಈ ಎಲ್ಲವೂ ಸಮುದ್ರ ಮಂಥನದಲ್ಲಿ ದೊರಕಿವೆ. ಎಲ್ಲಕ್ಕಿಂತ ಮಹತ್ವದ್ದೆಂದರೆ ವಿಷ್ಣುವಿನ ಹೃದಯದಲ್ಲಿರುವ ಶ್ರೀ ಮಹಾಲಕ್ಷ್ಮೀ ಕೂಡ ಇದೇ ಸಮುದ್ರ ಮಂಥನದಿಂದ ಬಂದಿದ್ದಾಳೆ. ಆದುದರಿಂದ ಸುಮೇರು ಪರ್ವತದ ಸ್ಥಾನಕ್ಕೆ ನಾವು ಶ್ರೀ ಮಹಾಲಕ್ಷ್ಮಿಯ ಉಗಮಸ್ಥಾನವೆಂದು ಕರೆಯಬಹುದು. ನಾವು ಎಲ್ಲ ಸಾಧಕರು ಅಲ್ಲಿ ಶ್ರೀ ಮಹಾಲಕ್ಷ್ಮಿಯ ವರ್ಣನೆ ಮಾಡುತ್ತಿದ್ದೆವು ಮತ್ತು ವಿಷ್ಣುಸ್ತುತಿ ಹಾಡುತ್ತಿದ್ದೆವು, ಅದೇ ಸಮಯದಲ್ಲಿ ಸುಮೇರು ಪರ್ವತದ ಗರ್ಭದಲ್ಲಿ ವಿಸ್ಫೋಟವಾಯಿತು. ನಾವು ಅದನ್ನು ಪ್ರತ್ಯಕ್ಷ ನೋಡಿದೆವು. ಆಗ ನಾವು ಸುಮೇರು ಪರ್ವತದ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸಿದೆವು. ಆ ಸಮಯದಲ್ಲಿ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ನಮಗೆ, ‘ಹೇ, ಸುಮೇರು ಪರ್ವತವೇ, ನೀನು ಶ್ರೀವಿಷ್ಣುವೇ ಆಗಿರುವೆ, ಮುಂಬರುವ ಆಪತ್ಕಾಲದಲ್ಲಿ ಎಲ್ಲ ಸಾಧಕರ ರಕ್ಷಣೆ ಮಾಡು ಮತ್ತು ನಿನ್ನಲ್ಲಿರುವ ಜ್ವಾಲಾಮುಖಿಯಿಂದ, ಅಂದರೆ ಜ್ವಾಲೆಯಿಂದ ಕೆಟ್ಟ ಶಕ್ತಿಗಳನ್ನು ನಾಶ ಮಾಡು’ ಹೀಗೆ ಪ್ರಾರ್ಥನೆ ಮಾಡಲು ಹೇಳಿದರು.
೪. ಬ್ರಹ್ಮ ಪರ್ವತದ ಕೆಳಗೆ ಹಿಂದೂ ಜನಸಂಖ್ಯೆಯಿರುವ ಊರಿನ ಪರಂಪರೆಯನ್ನು ಅವಲೋಕಿಸಿ ಅಲ್ಲಿನ ಹಿಂದೂಗಳೊಡನೆ ಸಂವಾದ ಸಾಧಿಸುವುದು
ಆನಂತರ ಸುಮೇರು ಪರ್ವತದಿಂದ ಕೆಳಗೆ ಬಂದು ವಾಹನದಿಂದ ನಾವು ಬ್ರಹ್ಮ ಪರ್ವತದಕಡೆಗೆ ಹೊರಟೆವು. ಆ ಪರ್ವತದ ಸಮೀಪದಲ್ಲಿರುವ ಎಲ್ಲ ಗ್ರಾಮಗಳು ಶೇ. ೯೫ ರಷ್ಟು ಹಿಂದೂ ಜನಸಂಖ್ಯೆ ಇರುವ ಗ್ರಾಮಗಳಾಗಿವೆ. ಅವರು ‘ಜಾವಾನೀಸ್’ ಮತ್ತು ‘ಬಾಲಿ’ ಈ ಎರಡು ಭಾಷೆಗಳಲ್ಲಿ ಮಾತನಾಡುತ್ತಾರೆ. ಅವರಿಗೆ ಸಂಸ್ಕೃತ ಬರದಿದ್ದರೂ, ಅವರು ವೇದ ಮತ್ತು ಉಪನಿಷತ್ತುಗಳನ್ನು ತಮ್ಮ ಧರ್ಮಗ್ರಂಥಗಳೆಂದು ನಂಬುತ್ತಾರೆ. ಅವರ ಧರ್ಮವು ಹಿಂದೂ ಇದ್ದರೂ, ಅವರು ಬಾಲಿ ದ್ವೀಪದಲ್ಲಿರುವ ಹಿಂದೂಗಳ ಸಂಪ್ರದಾಯದಂತೆ ಆಚರಣೆ ಮಾಡುತ್ತಾರೆ. ನಾವು ಅವರನ್ನು ಭೇಟಿಯಾದೆವು. ಅವರೊಡನೆ ಮಾತನಾಡಿದೆವು. ಇಲ್ಲಿಯ ಅನೇಕ ಜನರ ಹೆಸರುಗಳು ಆದಿತ್ಯ, ಸೂರ್ಯ, ನಾರಾಯಣ ಹೀಗೆ ಇರುತ್ತವೆ. ಕೆಲವರ ಹೆಸರು ವಿಷ್ಣು ಅಥವಾ ಕೃಷ್ಣ ಹೀಗೂ ಇದೆ. ಅವರು ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ಮೂರು ದೇವತೆಗಳ ಉಪಾಸನೆಯನ್ನು ಮಾಡುತ್ತಾರೆ. ಅವರನ್ನು ‘ತ್ರಿದೇವ’ ಎಂದು ಕರೆಯುತ್ತಾರೆ. ಹಿಂದೂ ಧರ್ಮದ ಪದ್ಧತಿಯಂತೆ ಧೂಪ ಹಚ್ಚುವುದು, ಹೂವು ಅರ್ಪಿಸುವುದು, ತೀರ್ಥ ತೆಗೆದುಕೊಳ್ಳುವುದು, ಹೀಗೆ ಬೇರೆಬೇರೆ ಪದ್ಧತಿಗಳ ಆಚರಣೆ ಮಾಡಿ ಅವರು ಹಿಂದೂ ಧರ್ಮವನ್ನು ಇಂದಿಗೂ ಉಳಿಸಿದ್ದಾರೆ. ಅವರು ಯುಗಾದಿ ಹಬ್ಬಕ್ಕೆ ‘ನ್ಯೇಪಿ’ ಎಂದು ಕರೆಯುತ್ತಾರೆ.
೫. ಸಾವಿರಾರು ಪಟ್ಟು ಅಗ್ನಿತತ್ತ್ವ ಕಾರ್ಯನಿರತವಾಗಿರುವ ಬ್ರಹ್ಮ ಪರ್ವತದ ದರ್ಶನ ಪಡೆದು ಅದರ ತಳದಲ್ಲಿರುವ ಬ್ರಹ್ಮ, ವಿಷ್ಣು ಮತ್ತು ಮಹೇಶ ದೇವಸ್ಥಾನದಲ್ಲಿ ದರ್ಶನ ಪಡೆಯುವುದು
ಬ್ರಹ್ಮ ಪರ್ವತವು ಇಂಡೋನೇಶಿಯಾದಲ್ಲಿನ ಎಲ್ಲಕ್ಕಿಂತ ಜಾಗೃತ ಪರ್ವತವಾಗಿದೆ. ಅಲ್ಲಿ ಜಾಗೃತ ಜ್ವಾಲಾಮುಖಿ ಇದೆ. ಆ ಸ್ಥಳಕ್ಕೆ ಹೋಗಿ ನಾವು ಪ್ರತ್ಯಕ್ಷವಾಗಿ ನೋಡಬಹುದು. ಇದು ೩ ಕಿಲೋಮೀಟರನ ಪ್ರವಾಸವಾಗಿದೆ. ಅಲ್ಲಿ ನಾವು ನಡೆದು ಕೊಂಡು ಅಥವಾ ಕುದುರೆಯ ಮೂಲಕ ಹೋಗಬಹುದು. ಅಲ್ಲಿಗೆ ಹೋಗಲು ೬೦೦ ಕ್ಕಿಂತ ಹೆಚ್ಚು ಕುದುರೆ ಮತ್ತು ಅವುಗಳಿಗಾಗಿ ಚಾಲಕರಿದ್ದಾರೆ. ಇವರೆಲ್ಲರೂ ಹಿಂದೂಗಳೇ ಆಗಿದ್ದಾರೆ. ನಾವು ಕುದುರೆಯಲ್ಲಿ ಹೋದೆವು. ಆಗ ನಮ್ಮೊಡನೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂತರಾದ ಪೂ. ರೆಂಡಿ ಇಕರಾಂತಿಯೊ ಇವರೂ ಸಹ ಇದ್ದರು. ನಾವು ಬ್ರಹ್ಮ ಪರ್ವತದ ತಳಹದಿಗೆ ತಲುಪಿದೆವು. ಅಲ್ಲಿಂದ ನಮಗೆ ೨೫೦ ಮೆಟ್ಟಲು ಹತ್ತಬೇಕಾಗುತ್ತದೆ. ಹತ್ತಿದಮೇಲೆ ನಮಗೆ ನೇರ ಜ್ಚಾಲಾಮುಖಿಯ ದರ್ಶನವಾಯಿತು. ಒಂದೊಂದು ಜ್ವಾಲಾಮುಖಿಯೆಂದರೆ ಸಾವಿರಾರು ಪಟ್ಟು ಕಾರ್ಯನಿರತ ಅಗ್ನಿತತ್ತ್ವವೇ ಆಗಿದೆ. ಆ ಸಮಯದಲ್ಲಿ ಸದ್ಗುರು (ಸೌ.) ಅಂಜಲಿ ಗಾಡಗೀಳರವರು ನಮಗೆ ಹೀಗೆ ಪ್ರಾರ್ಥನೆ ಮಾಡಲು ಹೇಳಿದರು, “ಹೇ ಬ್ರಹ್ಮ ಪರ್ವತವೇ, ಹೇ ಸುಮೇರು ಪರ್ವತವೇ, ಹೇ ಮೇರಾಪಿ ಪರ್ವತವೇ, ನಿಮ್ಮ ಉದರದಲ್ಲಿ ನೀವು ಯಾವ ಅಗ್ನಿಯನ್ನು ಸಂಗ್ರಹಿಸಿ ಇಟ್ಟಿರುವಿರೊ, ಅದು ಕಲಿಯುಗದ ಅಂತ್ಯದಲ್ಲಿ ಶೇ. ೧೦೦ ರಷ್ಟು ಖಂಡಿತವಾಗಿ ಜಾಗೃತಗೊಳ್ಳಲಿಕ್ಕಿದೆ. ಅಲ್ಲಿಯವರೆಗೆ ಈ ಕಲಿಯುಗಾಂತರ್ಗತ ಕಲಿಯುಗದಲ್ಲಿ ನೀವು ಸಾಧಕರ ರಕ್ಷಣೆ ಮಾಡಿರಿ. ನೀವು ಎಲ್ಲ ಭಕ್ತರ ರಕ್ಷಣೆ ಮಾಡಿರಿ ಮತ್ತು ಎಲ್ಲ ಸಾಧಕರ ಸುತ್ತಲೂ ಸಂರಕ್ಷಕಕವಚವು ನಿರ್ಮಾಣವಾಗಲಿ. ಮುಂಬರುವ ಕಾಲದಲ್ಲಿ ಅಗ್ನಿತತ್ತ್ವದಿಂದ ಸಾಧಕರ ಮೇಲೆ ಯಾವುದೇ ವಿಪತ್ತು ಬರುವುದಿದ್ದರೆ ಅದು ದೂರವಾಗಲಿ”. ನಮಗೆ ಬ್ರಹ್ಮ ಪರ್ವತದ ದರ್ಶನವಾಯಿತು. ಈ ಪರ್ವತದ ತಳದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರ ದೇವಸ್ಥಾನಗಳಿವೆ. ಅದಕ್ಕೆ ಅವರು ‘ಪುರಾ ಬ್ರೊಮೊ’ ಎಂದು ಕರೆಯುತ್ತಾರೆ. (ಪುರಾ ಅಂದರೆ ದೇವಸ್ಥಾನ) ಅಲ್ಲಿಂದ ತುಂಬಾ ದೂರದಲ್ಲಿರುವ ಸುಮೇರು ಪರ್ವತಕಾಣಿಸುತ್ತದೆ. ಅಲ್ಲಿಂದ ೭-೮ ಕಿಲೋಮೀಟರ್ ಗಳಷ್ಟು ಪರಿಸರದಲ್ಲಿ ಕೇವಲ ಜ್ವಾಲಾಮುಖಿಯ ಬೂದಿ ಕಾಣಿಸುತ್ತದೆ. ಬೂದಿಯ ಬೆಟ್ಟ ಹೇಗೆ ಇರುತ್ತದೆಯೋ, ಅದೇರೀತಿ ಸುಮೇರು ಪರ್ವತವಿದೆ. ಅಲ್ಲಿಯ ಪವಿತ್ರವಾದ ಬೂದಿ ನಾವು ಸಂಶೋಧನೆಗಾಗಿ ತೆಗೆದುಕೊಂಡೆವು. ಅಲ್ಲಿಯ ಪವಿತ್ರ ಕಲ್ಲುಗಳನ್ನೂ ಸಂಗ್ರಹಕ್ಕಾಗಿ ತೆಗೆದುಕೊಂಡೆವು.
೬. ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಆಧ್ಯಾತ್ಮಿಕ ಅಧ್ಯಯನ ಪ್ರಯಾಣ ಅಂದರೆ ಇದೊಂದು ಪ್ರಕಾರದ ದಿವ್ಯ ಪ್ರಯಾಣವೇ ಆಗಿದೆ
ಜಗತ್ತಿನಲ್ಲಿ ಇಂಡೋನೇಶಿಯಾದ ಭೂಭಾಗಕ್ಕೆ ‘ಪ್ಯಾಸಿಫಿಕ್ ರಿಂಗ್ ಆಫ್ ಫಾಯರ್’ ಎನ್ನುತ್ತಾರೆ. ‘ಪ್ಯಾಸಿಫಿಕ್ ರಿಂಗ್ ಆಫ್ ಫಾಯರ್’ ಅಂದರೆ ಇಲ್ಲಿನ ಭೂಮಿಯು ಎರಡು ಭಾಗವಾಗಿ ವಿಭಜನೆಗೊಂಡಿದೆ. ಆ ಎರಡು ಭಾಗದಲ್ಲಿ ಇಂದಿಗೂ ಘರ್ಷಣೆ ಆಗುತ್ತಿರುತ್ತದೆ. ಈ ಘರ್ಷಣೆಯ ಮಧ್ಯದಲ್ಲಿರುವ ವಿಶ್ವದ ಭೂಭಾಗವೆಂದರೆ ಇಂಡೋನೇಶಿಯಾ ! ಈ ಪ್ರದೇಶದಲ್ಲಿ ಅತ್ಯಂತ ದೊಡ್ಡ ಭೂಕಂಪ, ಎಲ್ಲಕ್ಕಿಂತ ದೊಡ್ಡ ಜ್ವಾಲಾಮುಖಿಗಳ ಸ್ಫೋಟವಾಗುತ್ತವೆ. ಭೂಗರ್ಭದಲ್ಲಿನ ಸರ್ವಾಧಿಕ ಚಲನವಲನ, ಘರ್ಷಣೆಗಳು ಇದೇ ಭೂಭಾಗದಲ್ಲಿ ಆಗುತ್ತವೆ. ಪ.ಪೂ. ಗುರುದೇವರ ಕೃಪೆಯಿಂದ ಸುಮೇರು ದರ್ಶನದಿಂದ ನಮಗೆ ಏನೆಲ್ಲ ದೊರಕಿತೋ, ಇದಕ್ಕಾಗಿ ನಾವೆಲ್ಲರೂ ಅವರ ಚರಣಗಳಲ್ಲಿ ಕೃತಜ್ಞತೆ ಸಲ್ಲಿಸುತ್ತೇವೆ. ನಮಗೆ ಇಲ್ಲಿಗೆ ಬಂದಮೇಲೆ ತಿಳಿಯಿತು ಏನೆಂದರೆ, ಈ ದರ್ಶನ ಪಡೆಯಲು ಭಾಗ್ಯವೇ ಬೇಕು. ಅನೇಕಬಾರಿ ಈ ಸ್ಥಳದಲ್ಲಿ ಮೋಡಗಳು ಕವಿದಿರುತ್ತವೆ ಅಥವಾ ವಿಪರೀತ ಚಳಿ ಇರುತ್ತದೆ. ಕೆಲವೊಮ್ಮೆ ತುಂಬಾ ಮಳೆ ಬೀಳುತ್ತದೆ. ಇದರಿಂದಾಗಿ ಪ್ರವಾಹ ಬರುತ್ತದೆ. ಅಲ್ಲಿ ಹೋಗಲು ಅಸಾಧ್ಯವೆಂಬಂತಹ ಸ್ಥಿತಿ ಇರುತ್ತದೆ. ಯುರೋಪನ ಓರ್ವ ಯುವತಿಯು ಹೇಳಿದಳು, ‘ನೀವು ಮೂರು ತಿಂಗಳ ಹಿಂದೆ ಇಲ್ಲಿಗೆ ಬಂದಿದ್ದರೆ, ಅದರ ಹತ್ತಿರವೂ ಹೋಗಲು ಆಗುತ್ತಿರಲಿಲ್ಲ. ನೀವು ನಿಜವಾಗಿಯೂ ಅದೃಷ್ಟವಂತರು’. ಇದೆಲ್ಲ ಘಟಿಸಲು ಪರಾತ್ಪರ ಗುರು ಡಾ. ಆಠವಲೆ ಇವರ ಕೃಪೆಯೇ ಮಹತ್ವದ್ದಾಗಿದೆ. ಇದಕ್ಕಾಗಿ ನಾವು ಅವರ ಚರಣಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ. – ಶ್ರೀ. ವಿನಾಯಕ ಶಾನಭಾಗ, ಇಂಡೋನೇಶಿಯಾ.
(ಸೌ.) ಅಂಜಲಿ ಗಾಡಗೀಳ ಇವರು ಅನುಭವಿಸಿದ ಸ್ವಪ್ನದೃಷ್ಟಾಂತ
‘ಇಂಡೋನೇಶಿಯಾದಲ್ಲಿ ಪ್ರಯಾಣ ಮಾಡುವಾಗ ನಮ್ಮ ನಿವಾಸ ಸುರಾಬಾಯಾದಲ್ಲಿ ಇತ್ತು. ಸಮುದ್ರಮಂಥನ ಆಗಿರುವ ಸುಮೇರು ಪರ್ವತದ ಪ್ರದೇಶವು ಇದೇ ಸ್ಥಳದಲ್ಲಿದೆ. ೧೬.೩.೨೦೧೮ ರಂದು ಬೆಳಗ್ಗೆ ನನಗೆ ಸುಂದರ ಸ್ವಪ್ನದೃಷ್ಟಾಂತವಾಯಿತು. ಅದರಲ್ಲಿ ನಾನು ಸಾಧಕರೊಂದಿಗೆ ಒಂದು ಸ್ಥಳದಲ್ಲಿ ಹೋಗಿದ್ದೆನು. ಅಲ್ಲಿ ಕೇಸರಿ ವಸ್ತ್ರದಲ್ಲಿರುವ ಓರ್ವ ಮಹಾನ ದಿವ್ಯ ಯೋಗಿಯು ದೂರದಿಂದಲೇ ಒಂದು ದೊಡ್ಡ ತುಳಸಿ ಮಾಲೆಯನ್ನು ನನ್ನ ಕಡೆಗೆ ಎಸೆದರು. ಗಾಳಿಯಲ್ಲಿ ಹಾರುತ್ತ ಆ ಹಾರವು ನನ್ನ ಕೊರಳಲ್ಲಿ ಬಂದು ಬಿದ್ದಿತು. ತುಳಸಿಯ ಆ ಮಾಲೆಯು ಪ್ರಚಂಡ ಗಾತ್ರದ್ದಾಗಿತ್ತು ಮತ್ತು ಕೊರಳಲ್ಲಿ ಹಾಕಿಯೂ ಕೆಳಗೆ ನೆಲಕ್ಕೆ ತಾಗುತ್ತಿತ್ತು. ಆದರೂ ನನಗೆ ಅದರ ಭಾರ ಅನಿಸಲಿಲ್ಲ. ‘ಇದು ಸಮುದ್ರ ಮಂಥನ ನಡೆದ ಶ್ರೀವಿಷ್ಣುವಿನ ದೈವೀ ಪ್ರದೇಶವಿದೆ. ಆದುದರಿಂದ ಶ್ರೀವಿಷ್ಣುವಿಗೆ ಇಷ್ಟವಾಗಿರುವ ತುಳಸಿ ಪತ್ರೆಯ ಹಾರವನ್ನು ದೇವರೇ ನನ್ನ ಕೊರಳಲ್ಲಿ ಹಾಕಿದ್ದಾನೆ, ಎಂದು ನನಗೆ ಅನಿಸಿತು. ‘ಪರಾತ್ಪರ ಗುರು ಡಾಕ್ಟರ ಆಠವಲೆ ಇವರ ಸಂಕಲ್ಪದಿಂದ ನಡೆಯುತ್ತಿರುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪ್ರಸಾರ ಮಾಡುವ ಸಲುವಾಗಿ ಭಗವಂತನು ನೀಡಿರುವ ಇದೊಂದು ದೊಡ್ಡದಾದ ಆಶೀರ್ವಾದವೇ’, ಎಂದು ನನಗೆ ಅನಿಸಿತು. – ಸದ್ಗುರು (ಸೌ.) ಅಂಜಲಿ ಗಾಡಗೀಳ
ಪರಾತ್ಪರ ಗುರು ಡಾ. ಆಠವಲೆಯವರ ಅಮೃತ ಮಹೋತ್ಸವದ ಮರುವರ್ಷವೇ ಸದ್ಗುರು (ಸೌ.) ಅಂಜಲಿ ಗಾಡಗೀಳರು ಸಮುದ್ರ ಮಂಥನದಿಂದ ಅಮೃತಕುಂಭ ದೊರೆತ ಸುಮೇರು ಪರ್ವತದ ದರ್ಶನಕ್ಕೆ ಹೋಗುವುದು ದೈವಿ ನಿಯೋಜನೆ !
೧. ಪರಾತ್ಪರ ಗುರು ಡಾ. ಆಠವಲೆ ಇವರು ಇಂಡೋನೇಶಿಯಾ ಪ್ರಯಾಣಕ್ಕೆ ಅನುಮತಿ ನೀಡಿದ ನಂತರ ೧ ವಾರದಲ್ಲಿ ಎಲ್ಲ ವ್ಯವಸ್ಥೆಯಾಗುವುದು
ಪ.ಪೂ. ಡಾಕ್ಟರ, ನಿಮ್ಮ ಕೃಪೆಯಿಂದ ನಮಗೆ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಇಂಡೊನೇಶಿಯಾದೇಶದಲ್ಲಿ ಆಧ್ಯಾತ್ಮಿಕ ಪ್ರಯಾಣ ಮಾಡುವ ಅವಕಾಶ ಸಿಕ್ಕಿತು. ಜನವರಿ ೨೦೧೮ ರಲ್ಲಿನಾವು ಶ್ರೀಲಂಕಾಕ್ಕೆ ಹೋಗಿದ್ದೆವು, ಆ ಸಮಯದಲ್ಲಿ ನಮಗೆ ಇಂಡೊನೇಶಿಯಾದಲ್ಲಿ ಹಿಂದೂ ದೇವಸ್ಥಾನಗಳು ಮತ್ತು ಅಲ್ಲಿನ ವೈಶಿಷ್ಟ್ಯಪೂರ್ಣ ಸ್ಥಳಗಳ ಕುರಿತು ಮಾಹಿತಿ ದೊರಕಿತು. ಆಗ ಸದ್ಗುರು ಕಾಕೂ ಎಂದರು. ‘ನಾವು ಈ ಎಲ್ಲ ಮಾಹಿತಿಯನ್ನು ಪ.ಪೂ. ಡಾಕ್ಟರರಿಗೆ ತಿಳಿಸೋಣ. ಅವರು ಹೇಳಿದ ಹಾಗೆ ಮಾಡೋಣ’. ಶ್ರೀಲಂಕಾದಿಂದ ಚೆನ್ನೈಗೆ ತಲುಪಿದ ಮೇಲೆ ಸದ್ಗುರು ಕಾಕುರವರು ಎಲ್ಲ ಮಾಹಿತಿ ಹೇಳಿದಾಗ ಪ.ಪೂ. ಗುರುದೇವರು ಹೇಳಿದರು, ‘ಈಗ ಸಮಯ ಯೋಗ್ಯವಿದೆ. ನೀವು ಹೋಗಿ ಬನ್ನಿರಿ’. ‘ಯಾವಾಗ ಪರಾತ್ಪರ ಗುರು ಡಾ. ಆಠವಲೆಯವರ ಆಜ್ಞೆಯಾಗುತ್ತದೆಯೊ, ಆಗ ಅವರ ಆಶೀರ್ವಾದ, ಸಂಕಲ್ಪ, ಚೈತನ್ಯ ಮತ್ತು ಆಧ್ಯಾತ್ಮಿಕ ಕವಚವೂ ಸಿಗುತ್ತದೆ’ ಎಂಬುದು ನಾವು ಪುನಃ ಒಮ್ಮೆ ಅನುಭವಿಸಿದೆವು. ಕೇವಲ ೧ ವಾರದ ಅವಧಿಯಲ್ಲಿ ಇಂಡೋನೆಶಿಯಾಕ್ಕೆ ಹೋಗಲು ಅವಶ್ಯಕವಿರುವ ಎಲ್ಲ ವ್ಯವಸ್ಥೆ ಆಯಿತು ಮತ್ತು ಅಲ್ಲಿನ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂತರಾದ ಪೂ. ರೆಂಡಿ ಇಕರಾಂತಿಯೊ ಇವರು ಕೂಡ ನಮಗೆ ಸಮಯ ನೀಡಿದರು. ಹೇ ಗುರುದೇವಾ,‘ಈ ಎಲ್ಲ ಲೀಲೆ ನಿಮ್ಮದೇ ಆಗಿದೆ,’ ಎಂಬುದು ಆ ಸಮಯದಲ್ಲಿ ನಮ್ಮ ಗಮನದಲ್ಲಿ ಬರಲಿಲ್ಲ.
೨. ಸಾಕ್ಷಾತ್ ವಿಷ್ಣು ಸ್ವರೂಪವಾಗಿರುವ ಸುಮೇರು ಪರ್ವತದ ದರ್ಶನ ಪಡೆಯುವಾಗ ಅನುಭವಿಸಿದ ಬೇರೆ ಬೇರೆ ಅನುಭೂತಿಗಳು
ಸುಮೇರು ಪರ್ವತದಿಂದ ಆಕಾಶಗಂಗೆಯ ದರ್ಶನ
ಇಂಡೋನೇಶಿಯಾ ದೇಶಕ್ಕೆ ಹೋದನಂತರ ಹೀಗೆ ನಿರ್ಧರಿಸಲಾಯಿತು ಏನೆಂದರೆ, ೨ ದಿನ ನಾವು ಸುಮೇರು ಪರ್ವತದ ಸ್ಥಳಕ್ಕೆ ಹೋಗುವುದಿದೆ. ‘ಸತ್ಯಯುಗದಲ್ಲಿ ಸಮುದ್ರಮಂಥನ ಯಾವ ಸ್ಥಳದಲ್ಲಿ ನಡೆಯಿತೋ, ಅದು ಈ ಪ್ರದೇಶವಾಗಿದೆ’, ಎಂಬ ಮಾಹಿತಿ ನಮಗೆ ತಿಳಿದಿತ್ತು. ಅದೇರೀತಿ ನಾವು ಸಮುದ್ರ ಮಂಥನದಲ್ಲಿ ಕಡಗೋಲಿನ ಕಾರ್ಯ ಮಾಡಿರುವ ಸುಮೇರು ಪರ್ವತದ ದರ್ಶನಪಡೆಯಲು ಹೊರಟೆವು, ಆಗ ಸೂರ್ಯೋದಯಕ್ಕಿಂತ ಮೊದಲು ನಾವು ಇರುತ್ತಿರುವ ಆಕಾಶಗಂಗೆಯ (‘ಮಿಲ್ಕಿ ವೇ’) ದರ್ಶನವಾಯಿತು. ನಂತರ ನಾವು ಸುಮೇರು ಪರ್ವತದ ದರ್ಶನ ಪಡೆದೆವು. ಆ ದರ್ಶನವು ಅವಿಸ್ಮರಣೀಯವಾಗಿತ್ತು. ಸುಮೇರು ದರ್ಶನ ಆಗುತ್ತಿದ್ದಂತೆಯೇ ಮುಂದಿನ ಶ್ಲೋಕವು ತಾನಾಗಿಯೇ ಹೇಳಲಾಯಿತು,
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಾಧಾರಂ ಗಗನಸದೃಶ್ಯಂ ಮೇಘವರ್ಣಂ ಶುಭಾಂಗಮ್ |
ಲಕ್ಷ್ಮೀಕಾಂತಂ ಕಮಲನಯನಂ ಯೋಗಭಿರ್ದ್ಯಾನಗಮ್ಯಮ್ ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಮ್ ||
ಯಾವ ದಿವಸ ಸುಮೇರು ಪರ್ವತದ ದರ್ಶನವಾಯಿತೋ, ಆ ದಿನವೇ ಸದ್ಗುರು ಗಾಡಗೀಳಕಾಕೂರವರಿಗೆ ‘ಯಾರೋ ಒಬ್ಬರು ಯೋಗಿಯು ಬಂದು ಅವರ ಕೊರಳಲ್ಲಿ ತುಳಸಿ ಹಾರ ಹಾಕುತ್ತಿದ್ದಾರೆ’, ಎಂಬ ಸ್ವಪ್ನದೃಷ್ಟಾಂತವಾಯಿತು.
೩. ಪರಾತ್ಪರ ಗುರು ಡಾ. ಆಠವಲೆಯವರ ಅಮೃತ ಮಹೋತ್ಸವದ ಮರುವರ್ಷ ಬಂದ ಈ ದಿವ್ಯ ಅನುಭೂತಿ ಗುರುಗಳ ಲೀಲೆಯೇ !
ಇಂಡೋನೇಶಿಯಾದ ನಂತರ ನಾವು ಕಂಬೋಡಿಯಾಕ್ಕೆ ತಲುಪಿದೆವು. ಇಲ್ಲಿಗೆ ಬಂದನಂತರ ನಮ್ಮ ಗಮನಕ್ಕೆ ಬಂದಿತು ಏನೆಂದರೆ, ಕಳೆದ ವರ್ಷವೇ ಪರಾತ್ಪರ ಗುರು ಡಾ. ಆಠವಲೆಯವರ ಅಮೃತ ಮಹೋತ್ಸವ ಆಗಿದೆ. ‘ತಕ್ಷಣವೇ ಮುಂದಿನ ವರ್ಷದಲ್ಲಿ ಸದ್ಗುರು (ಸೌ.) ಗಾಡಗೀಳ ಕಾಕುರವರು ಸತ್ಯಯುಗದಲ್ಲಿ ಅಮೃತ ಕುಂಭವು ಯಾವ ಸ್ಥಳದಲ್ಲಿ ಮೇಲೆ ಬಂತು, ಆ ಪ್ರದೇಶಕ್ಕೆ ಹೋಗುವುದು’, ಇದು ಕೂಡ ನಿಮ್ಮದೇ ಲೀಲೆಯಾಗಿದೆ.
– ಶ್ರೀ. ವಿನಾಯಕ ಶಾನಭಾಗ, ಕಂಬೋಡಿಯಾ (೨೯.೩.೨೦೧೮)