ವಿಶ್ವಕರ್ಮ ನಿರ್ಮಿಸಿದ ೭ ಅಂತಸ್ತಿನ ದ್ವಾರಕಾಧೀಶ ದೇವಸ್ಥಾನ
೧. ಶ್ರೀಕೃಷ್ಣನ ನಗರ – ದ್ವಾರಕೆ
೧ಅ. ಸಮುದ್ರ ತೀರದಲ್ಲಿ ನೆಲೆಸಿರುವ ದ್ವಾರಕೆ !
ಶ್ರೀಕೃಷ್ಣನು ತನ್ನ ಅವತಾರವನ್ನು ಅಂತ್ಯಗೊಳಿಸುವ ಮೊದಲು ದ್ವಾರಕೆಯನ್ನು ಸಮುದ್ರದಲ್ಲಿ ಮುಳುಗಿಸಿದ್ದನು. ದುರ್ವಾಸ ಋಷಿಗಳ ಶಾಪದಿಂದಾಗಿ ಯದುಕುಲದ ನಾಶವಾಯಿತು. ಸಮುದ್ರದಲ್ಲಿ ಮುಳುಗಿದ ದ್ವಾರಕೆಯ ಹತ್ತಿರದ ಭೂಮಿಗೆ ದ್ವಾರಕೆಯ ಸ್ಥಾನಮಾನ ಪ್ರಾಪ್ತವಾಯಿತು.
೧ಆ. ಶಿಲ್ಪಿ ವಿಶ್ವಕರ್ಮನು ನಿರ್ಮಿಸಿದ ದ್ವಾರಕಾಧೀಶ ದೇವಸ್ಥಾನ !
ಶ್ರೀಕೃಷ್ಣನ ಮರಿಮಗ ವಜ್ರನಾಭನು ಶ್ರೀಕೃಷ್ಣನಿಗೋಸ್ಕರ ಒಂದು ದೇವಸ್ಥಾನವನ್ನು ಕಟ್ಟಿಸಬೇಕು ಎಂದು ನಿರ್ಧರಿಸಿದನು. ಈ ಕಾರ್ಯಕ್ಕಾಗಿ ಅವನು ಶಿಲ್ಪಿ ವಿಶ್ವಕರ್ಮನನ್ನು ಕರೆಸಿಕೊಂಡು ಅವನಿಂದ ಈ ಭವ್ಯ ದೇವಸ್ಥಾನವನ್ನು ಕಟ್ಟಿಸಿಕೊಂಡನು. ಈ ದೇವಸ್ಥಾನವು ೭ ಅಂತಸ್ತಿನ ದೇವಸ್ಥಾನವಾಗಿದ್ದು, ಇದರಲ್ಲಿನ ಶಿಲ್ಪಕಲೆಯು ದೈವೀ ಆಗಿದೆ. ‘ವಿಶ್ವಕರ್ಮನು ಈ ದೇವಸ್ಥಾನವನ್ನು ಸ್ವರ್ಗಲೋಕದಲ್ಲಿ ನಿರ್ಮಿಸಿ ಒಂದೇ ರಾತ್ರಿಯಲ್ಲಿ ಅದನ್ನು ಒಂದು ಉಲ್ಕೆಯ ಹಾಗೆ ಭೂಮಿಯತ್ತ ತಂದು ದ್ವಾರಕೆಯಲ್ಲಿ ಸ್ಥಾಪಿಸಿದ’ ಎಂದು ಹೇಳಲಾಗುತ್ತದೆ.
ದ್ವಾರಕೆಯಲ್ಲಿ ‘ದ್ವಾರಕಾಧೀಶ’ನಾಗಿ ನೆಲೆಸಿರುವ ಶ್ರೀಕೃಷ್ಣ
೧ಇ. ದೇವಸ್ಥಾನದ ಮೇಲೆ ಹಾರಾಡುವ ಧರ್ಮಧ್ವಜ, ದೇವಸ್ಥಾನದ ಮೋಕ್ಷದ್ವಾರ ಮತ್ತು ಸ್ವರ್ಗದ್ವಾರ!
ಶ್ರೀಕೃಷ್ಣನು ದ್ವಾರಕೆಯನ್ನು ಸ್ಥಾಪಿಸಿದನು, ಆದುದರಿಂದ ಈ ದೇವಸ್ಥಾನದ ಮೂರ್ತಿಯನ್ನು ದ್ವಾರಕಾಧೀಶ ಎಂದು ಕರೆಯುತ್ತಾರೆ. ದೇವಸ್ಥಾನದ ಮುಖ್ಯ ಕಲಶದ ಮೇಲೆ ಒಂದು ಧರ್ಮಧ್ವಜ ಹಾರಾಡುತ್ತದೆ. ಈ ಧ್ವಜವನ್ನು ದಿನದಲ್ಲಿ ೫ ಬಾರಿ ಬದಲಿಸಲಾಗುತ್ತದೆ. ದೇವಸ್ಥಾನದ ಉತ್ತರ ದಿಕ್ಕಿಗೆ ಇರುವ ದ್ವಾರವನ್ನು ‘ಮೋಕ್ಷದ್ವಾರ’ ಎಂದೂ, ದಕ್ಷಿಣ ದಿಕ್ಕಿಗೆ ಇರುವ ದ್ವಾರವನ್ನು ಸ್ವರ್ಗದ್ವಾರವೆಂದೂ ಕರೆಯಲಾಗುತ್ತದೆ.
ಎಡದಿಂದ ಶ್ರೀ. ವಿನಾಯಕ ಶಾನಭಾಗ್, ಶ್ರೀ. ದಿವಾಕರ ಆಗಾವಣೆ, ಸದ್ಗುರು (ಸೌ.) ಅಂಜಲಿ ಗಾಡ್ಗಿಳ್, ಶ್ರೀ. ಸತ್ಯಕಾಮ ಕಣಗಲೇಕರ್ ಮತ್ತು ಶ್ರೀ. ಸ್ನೇಹಲ ರಾವುತ್
೨. ದ್ವಾರಕಾಪೀಠ ಮತ್ತು ಅಲ್ಲಿನ ಚಂದ್ರಮೌಳೀಶ್ವರ ಶಿವಲಿಂಗ
ದ್ವಾರಕಾಧೀಶ ದೇವಸ್ಥಾನದ ಹತ್ತಿರದಲ್ಲಿಯೇ ಆದಿ ಶಂಕರಾಚಾರ್ಯರು ಸ್ಥಾಪಿಸಿದ ದ್ವಾರಕಾಪೀಠವಿದೆ. ಇಲ್ಲಿ ಮಠದಲ್ಲಿ ಆದಿ ಶಂಕರಾಚಾರ್ಯರು ನೀಡಿದ ನೀಲಮಣಿಯ ಚಂದ್ರಮೌಳೀಶ್ವರ ಶಿವಲಿಂಗವನ್ನು ಸ್ಥಾಪಿಸಲಾಗಿದೆ.