ಕರ್ಮವೆಂದರೆ ಯಜ್ಞ

ಕರ್ಮವೆಂದರೆ ಯಜ್ಞ

ಋಗ್ವೇದದ ಸಮಯದಲ್ಲಿ ಯಜ್ಞಯಾಗಗಳನ್ನು ಮಾಡುವುದು ‘ಕರ್ಮ’ವಾಗಿತ್ತು. ಯಜ್ಞಗಳಿಂದ ದೇವತೆಗಳನ್ನು ಸಂತುಷ್ಟಗೊಳಿಸುವುದೇ ಆ ಕಾಲದ ಧರ್ಮವಾಗಿತ್ತು. ಬ್ರಾಹ್ಮಣ ಕಾಲದಲ್ಲಿ ಈ ಯಜ್ಞಸಂಸ್ಥೆಯು ಎಲ್ಲ ರೀತಿಯಲ್ಲಿ ವಿಕಸಿತಗೊಂಡಿತು ಮತ್ತು ಅಷ್ಟೇ ಜಟಿಲವೂ ಆಯಿತು. ‘ಯಜ್ಞೋ ವೈ ಶ್ರೇಷ್ಠತಮ ಕರ್ಮ |’, ಅಂದರೆ ‘ಯಜ್ಞವೇ ಶ್ರೇಷ್ಠ ಕರ್ಮವಾಗಿದೆ’ ಎಂಬ ತಿಳುವಳಿಕೆಯು ಬ್ರಾಹ್ಮಣಕಾಲದಲ್ಲಿ ದೃಢವಾಯಿತು. (ಶತಪಥ ಬ್ರಾಹ್ಮಣ ೧.೭.೧.೫). ಆಯುಷ್ಯದಲ್ಲಿನ ಪ್ರತಿಯೊಂದು ಕರ್ಮವನ್ನು ಯಜ್ಞಕರ್ಮಕ್ಕನುಸಾರವಾಗಿಯೇ ಮಾಡಬೇಕು ಮತ್ತು ಕರ್ಮವನ್ನು ಮಾಡದೇ ಯಾವುದೇ ವಸ್ತುವು ಪ್ರಾಪ್ತವಾಗುವುದಿಲ್ಲ ಎಂದು ತಿಳಿದುಕೊಳ್ಳಲಾಯಿತು. ಕರ್ಮಗಳಿಂದಲೇ ಮೋಕ್ಷ ಅಥವಾ ಸ್ವರ್ಗವು ಪ್ರಾಪ್ತವಾಗುತ್ತದೆ ಮತ್ತು ಕರ್ಮಗಳಿಂದಲೇ ದೇವತೆಗಳಿಗೂ ಈಗಿರುವ ಸ್ಥಾನಗಳು ಪ್ರಾಪ್ತವಾಗಿವೆ ಎಂದು ವೈದಿಕ ಜನರು ತಿಳಿಯತೊಡಗಿದರು. (ಶತಪಥ ಬ್ರಾಹ್ಮಣ ೩.೧.೪.೩)

ಪ್ರತಿಯೊಂದು ಕರ್ಮವನ್ನು ಒಳ್ಳೆಯ ಸಂಸ್ಕಾರಗಳಿಂದ ಪರಿಪೂರ್ಣವಾಗಿ ಮಾಡಿದರೆ ಚೈತನ್ಯದ ಲಾಭವಾಗುತ್ತದೆ

ಕರ್ಮ ಬ್ರಹ್ಮೋದ್ಭವಂವಿದ್ಧಿಬ್ರಹ್ಮಾಕ್ಷರಸಮುದ್ಭವಮ್ |
ತಸ್ಮಾತ್ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೆ ಪ್ರತಿಷ್ಠಿತಮ್ || – ಶ್ರೀಮದ್ಭಗವದ್ಗೀತೆ, ೩.೧೫

ಅರ್ಥ : ಕರ್ಮಗಳ ಉತ್ಪತ್ತಿಯು ವೇದಗಳಿಂದಾಗಿದೆ. ವೇದಗಳ ನಿರ್ಮಿತಿಯು ಅವಿನಾಶಿ ಪರಮಾತ್ಮನಿಂದಾಗಿದೆ. ಇದರ ಅರ್ಥವೇನೆಂದರೆ ಸರ್ವವ್ಯಾಪಿ ಪರಮಾತ್ಮನು ಸದಾಕಾಲ ಯಜ್ಞದಲ್ಲಿ (ಕರ್ಮರೂಪಿ ಯಜ್ಞದಲ್ಲಿ) ಇರುತ್ತಾನೆ.

ಹೀಗಿರುವಾಗ ನಮ್ಮಿಂದಾಗುವ ಕರ್ಮಗಳನ್ನು ಒಳ್ಳೆಯ ಸಂಸ್ಕಾರಗಳಿಂದ ಪರಿಪೂರ್ಣವಾಗಿ ಮಾಡಿದರೆ ಮುಂದೆ ಆಗುವ ಪ್ರಕ್ರಿಯೆಯೂ ಸಹ ಒಳ್ಳೆಯದಾಗಿಯೇ ಆಗುತ್ತದೆ. ಇದರಿಂದ ನಮಗೆ ಯಾವಾಗಲೂ ಚೈತನ್ಯದ ಲಾಭವನ್ನು ಪಡೆಯಲು ಆಗುತ್ತದೆ.

ಸತ್ತ್ವಗುಣಿಯಾಗಲು ಕರ್ಮಯೋಗವು ಮಹತ್ವದ್ದಾಗಿದೆ

ಸತ್ತ್ವಾತ್ಸಂಜಾಯತೆ ಜ್ಞಾನಂ ರಜಸೋ ಲೋಭ ಏವ ಚ |
ಪ್ರಮಾದಮೋಹೌ ತಮಸೋ ಭರತೋಜ್ಞಾನಮೇವ ಚ || – ಶ್ರೀಮದ್ಭಗವದ್ಗೀತೆ ೧೪.೧೭

ಅರ್ಥ : ಸತ್ತ್ವಗುಣದಿಂದ ಜ್ಞಾನವು ಉತ್ಪನ್ನವಾಗುತ್ತದೆ. ರಜೋಗುಣದಿಂದ ಕೇವಲ ಲೋಭ ಮತ್ತು ತಮೋಗುಣದಿಂದ ಪ್ರಮಾದ, ಮೋಹ ಮತ್ತು ಅಜ್ಞಾನ (ಅಂಧಕಾರ) ಇವು ಉತ್ಪನ್ನವಾಗುತ್ತವೆ.

ಸಂಸಾರದ ಕಡೆಗೆ ಹರಿಯುವ ರಜೋಗುಣದ ಪ್ರವಾಹವನ್ನು ಹೊರಳಿಸಿ ಈಶ್ವರನೊಂದಿಗೆ ಜೋಡಿಸುವುದೇ ನಿಷ್ಕಾಮ ಕರ್ಮ ಪ್ರವೃತ್ತಿಯ ಮುಖ್ಯ ಉದ್ದೇಶವಾಗಿದೆ. ಈಶ್ವರನೊಂದಿಗೆ ತ್ಯಾಗದ, ಅಂದರೆ ಕರ್ಮಫಲ ತ್ಯಾಗದ ಸಂಬಂಧವನ್ನು ಜೋಡಿಸುವುದರಿಂದ ಈಶ್ವರನೆಡೆಗೆ ಹೊರಳಿಸಿದ ರಜೋಗುಣದ ಪ್ರವಾಹವು ತನ್ನಿಂದತಾನೇ ಸತ್ತ್ವಗುಣದಲ್ಲಿ ಬದಲಾಗುತ್ತದೆ. ತ್ಯಾಗದಿಂದ ಸ್ವಾಭಾವಿಕವಾಗಿಯೇ ಸತ್ತ್ವಗುಣದ ಅರಿವಾಗುತ್ತದೆ. ಹಾಗೆಯೇ ಫಲತ್ಯಾಗದೊಂದಿಗೆ ಸತ್ತ್ವಗುಣದ ಅಧಿಕ ವಿಕಾಸವಾದಾಗ ಮುಂದೆ ಜ್ಞಾನದ ಮೂಲಕ ಕರ್ತೃತ್ವ ಮತ್ತು ಕರ್ತವ್ಯಗಳ ತ್ಯಾಗವೂ ಸಾಧ್ಯವಾಗುತ್ತದೆ.

ಪ್ರಯತ್ನ ಮತ್ತು ಈಶ್ವರನ ಕೃಪೆ

ಪೂರ್ವ ಕರ್ಮವು ಅನುಕೂಲವಿಲ್ಲದಿದ್ದರೆ ಮನುಷ್ಯನು ಎಷ್ಟೇ ಪ್ರಯತ್ನಪಟ್ಟರೂ ಯಶಸ್ಸು ಸಿಗುವುದಿಲ್ಲ. ಆದರೆ ಪ್ರಯತ್ನ ಮಾಡುವ ಮನುಷ್ಯನು ಭಕ್ತನಾಗಿದ್ದರೆ, ಅವನು ತನ್ನ ಪ್ರಯತ್ನದೊಂದಿಗೆ ಈಶ್ವರನ ಆರಾಧನೆಯ ಸಹಾಯವನ್ನು ತೆಗೆದುಕೊಳ್ಳುತ್ತಾನೆ; ಆದುದರಿಂದ ಅವನಿಗೆ ಆ ಪ್ರಯತ್ನದಲ್ಲಿ ಯಶಸ್ಸು ಸಿಗುತ್ತದೆ. ಆದುದರಿಂದ ಪ್ರಯತ್ನವನ್ನು ಮಾಡುವಾಗ ಈಶ್ವರನ ಮೇಲೆ ಶ್ರದ್ಧೆಯನ್ನು ಇಟ್ಟು ಕರ್ಮವನ್ನು ಮಾಡಿದರೆ ಅವನಿಗೆ ಬೇಗನೇ ಯಶಸ್ಸು ಸಿಗುತ್ತದೆ, ಆದುದರಿಂದ ಸಮರ್ಥ ರಾಮದಾಸ ಸ್ವಾಮಿಗಳು ಸಾಮರ್ಥ್ಯವಿದೆ ಚಳುವಳಿಯಲ್ಲಿ | ಯಾರು ಯಾರು ಮಾಡುವರೋ ಅವರ ||ಆದರೆ ಅದಕ್ಕೆ ಭಗವಂತನ ಅಧಿಷ್ಠಾನವು ಬೇಕು || ಎಂದು ಹೇಳಿದ್ದಾರೆ.

ಅನೈಚ್ಛಿಕ ಕರ್ಮಗಳು

ಶ್ವಾಸೋಚ್ಛಾಸ, ಹೃದಯ ಬಡಿತ, ಕಣ್ಣುರೆಪ್ಪೆಗಳ ಬಡಿತ ಈ ಕರ್ಮಗಳು ಅನೈಚ್ಛಿಕವಾಗಿವೆ. ಹಸಿವೆಯಾದಾಗ ತಿನ್ನುವುದು, ಬಾಯಾರಿಕೆಯಾದಾಗ ನೀರು ಕುಡಿಯುವುದು, ಮೂತ್ರ ಮಾಡುವುದು, ನಿದ್ರೆ ಮಾಡುವುದು ಮುಂತಾದ ಕರ್ಮಗಳು ಜೀವಂತವಾಗಿರಲು ಅವಶ್ಯಕವಾಗಿರುತ್ತವೆ. ಇಂತಹ ಕರ್ಮಗಳಿಂದ ಪಾಪ-ಪುಣ್ಯ ಅಥವಾ ಸಂಸ್ಕಾರಗಳು ನಿರ್ಮಾಣವಾಗುವುದಿಲ್ಲ. ಇಂತಹ ಕರ್ಮಗಳ ಬಗ್ಗೆ ಆಸಕ್ತಿ, ಮಮತೆ ನಿರ್ಮಾಣವಾಗುವುದಿಲ್ಲ ಮತ್ತು ಅವುಗಳಿಂದ ಫಲದ ಅಪೇಕ್ಷೆಯೂ ಇರುವುದಿಲ್ಲ. ಈ ಕರ್ಮಗಳು ನೈಸರ್ಗಿಕ ರೀತಿಯಲ್ಲಿ ನಡೆಯುತ್ತಿರುವುದರಿಂದ ಅವುಗಳ ಬಗ್ಗೆ ಕರ್ತೃತ್ವದ ಭಾವನೆಯೂ ನಿರ್ಮಾಣವಾಗುವುದಿಲ್ಲ; ಆದುದರಿಂದ ಈ ಕರ್ಮಗಳು ನಮ್ಮನ್ನು ಬಂಧನದಲ್ಲಿ ಸಿಲುಕಿಸುವುದಿಲ್ಲ.

ಕರ್ಮ ಮಾಡುವುದರ ಮಹತ್ವ

ಪ್ರತಿಯೊಬ್ಬ ವ್ಯಕ್ತಿಯು ಸತತವಾಗಿ ಕರ್ಮಗಳನ್ನು ಮಾಡುತ್ತಿರುತ್ತಾನೆ. ಅವನು ಯಾವಾಗಲೂ ಯಾವುದಾದರೊಂದು ಕಾರ್ಯವನ್ನು ಮಾಡುತ್ತಿರುತ್ತಾನೆ; ಆದರೆ ಕರ್ಮದ ರಹಸ್ಯವು ತಿಳಿಯದಿರುವುದರಿಂದ ಅವನ ಕ್ರಿಯಾಶಕ್ತಿಯ ಹೆಚ್ಚಿನ ಭಾಗವು ವ್ಯರ್ಥವಾಗುತ್ತದೆ. ಕರ್ಮಯೋಗವು ನಮಗೆ ಈ ರಹಸ್ಯವನ್ನು ತಿಳಿಸಿಕೊಡುತ್ತದೆ. ಕರ್ಮ ಯಾವುದು, ಎಲ್ಲಿ ಮತ್ತು ಹೇಗೆ ಮಾಡಬೇಕು ಮತ್ತು ನಮ್ಮ ಕ್ರಿಯಾಶಕ್ತಿಯ ಹೆಚ್ಚಿನ ಭಾಗವನ್ನು ಕಾರ್ಯಕ್ಕಾಗಿ ಹೇಗೆ ಉಪಯೋಗಿಸಬೇಕು ಎಂಬುದನ್ನು ಕರ್ಮಯೋಗವು ಕಲಿಸುತ್ತದೆ. ಕರ್ಮಯೋಗಕ್ಕೆ ಕೇವಲ ಕೊಡುವುದು ಮಾತ್ರ ತಿಳಿದಿರುತ್ತದೆ ಪ್ರತಿಫಲವೆಂದು ಅದು ಯಾವತ್ತೂ ಏನನ್ನೂ ಕೇಳುವುದಿಲ್ಲ.

ನ ಋತೆ ಶ್ರಾಂತಸ್ಯ ಸಖ್ಯಾಯ ದೇವಾಃ | – ಋಗ್ವೇದ ೪.೩೩.೧೧

ಅರ್ಥ : ಆಯಾಸವಾಗುವವರೆಗೆ ಕರ್ಮವನ್ನು ಮಾಡುವ ಮನುಷ್ಯನಿಗೆ ದೇವರು ಸಹಾಯ ಮಾಡುತ್ತಾರೆ, ಇತರರಿಗೆ ಮಾಡುವುದಿಲ್ಲ.

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಕರ್ಮಯೋಗದ ಪ್ರಾಸ್ತಾವಿಕ’ ಮತ್ತು ‘ಕರ್ಮದ ಮಹತ್ವ, ವೈಶಿಷ್ಟಗಳು ಮತ್ತು ಪ್ರಕಾರ)

Leave a Comment