ವರ್ಷಂಪ್ರತಿ ಧನುರ್ಮಾಸದಲ್ಲಿ ಶಿವಾಲಯಗಳಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ’ಧನು ಪೂಜೆ’ ಎಂಬ ವಿಶೇಷ ಆರಾಧನೆ ನಡೆಯುತ್ತದೆ. ಅದರಲ್ಲಿ ಬಹಳಷ್ಟು ಮಂದಿ ಭಗವದ್ಭಕ್ತರು ಶ್ರದ್ಧಾ ಭಕ್ತಿಗಳಿಂದ ಪಾಲ್ಗೊಳ್ಳುತ್ತಾರೆ.
ದೇವಾಧಿದೇವ
ಧನು ಮಾಸದಲ್ಲಿ ನಡೆಯುವ ಈ ಆರಾಧನೆಗೆ ವಿಶೇಷ ಮಹತ್ವವಿದೆ. ಶೈವ ಸಂಪ್ರದಾಯದಂತೆ ಶಿವನು ಜಗತ್ತಿನ ಸೃಷ್ಟಿ – ಸ್ಥಿತಿ – ಲಯಗಳೆಂಬ ಕ್ರಿಯೆಗಳನ್ನು ನಿಯಂತ್ರಿಸುತ್ತಾನೆ. ಶಿವನ ಆಧ್ಯಾತ್ಮಿಕ ವೈಶಿಷ್ಟ್ಯಗಳೆಂದರೆ ಶಿವನು
(೧) ಮಹಾತಪಸ್ವಿ ಮತ್ತು ಮಹಾಯೋಗಿ
(೨) ಭಯಂಕರ ಕೋಪಿಷ್ಠ
(೩) ಇನ್ನೊಬ್ಬರ ಸುಖಕ್ಕಾಗಿ ಯಾವುದೇ ಕಷ್ಟವನ್ನು ಅನುಭವಿಸಲು ಸಿದ್ಧನಾಗಿರುವವನು
(೪) ಸುಲಭವಾಗಿ ಪ್ರಸನ್ನನಾಗುವವನು (ಆಶುತೋಷ)
(೫) ಪ್ರಸನ್ನನಾಗಿ ಬೇಡಿದುದನ್ನು ನೀಡುವವನು
(೬) ದೇವರು ಮತ್ತು ದಾನವರು – ಹೀಗೆ ಎರಡೂ ವಿಧದ ಉಪಾಸಕರಿರುವವನು
(೭) ಊರ್ಧ್ವರೇತಸ್ (ವೀರ್ಯಪತನವಾಗದಿರುವವನು)
(೮) ಕಲ್ಪನಾತೀತ ಲೈಂಗಿಕ ಕ್ಷಮತೆ ಇರುವವನು
(೯) ಒಂದಕ್ಕೊಂದು ವಿರುದ್ಧವಾಗಿರುವ ವೈಶಿಷ್ಟ್ಯಗಳುಳ್ಳವನು. (ಸ್ವೀಕೃತಿ ಮತ್ತು ವಿಕೃತಿ) ಅಂದರೆ ಉತ್ಪತ್ತಿ- ಕ್ಷಯ ಕ್ಷಮತೆ, ಶಾಂತ – ಕೋಪಿಷ್ಠ, ಶೀತಲತೆ – ತೇಜಸ್ಸು, ಸಾತ್ತ್ವಿಕ – ತಾಮಸಿಕ ಇತ್ಯಾದಿ ಸತ್ತ್ವ, ರಜ ಮತ್ತು ತಮೋಗುಣಗಳನ್ನು ಎಂದರೆ ಅಜ್ಞಾನವನ್ನು ನಾಶಗೊಳಿಸಿ ತ್ರಿಗುಣಾತೀತರನ್ನಾಗಿ ಮಾಡುವವನು.
ಆದುದರಿಂದ ಶಿವನು ಜಗದ್ಗುರುವು – ದೇವಾಧಿದೇವನಾದ ಮಹಾದೇವನು. ಶಿವನನ್ನು ಆರಾಧಿಸಿ ಪ್ರಸನ್ನಗೊಳಿಸಿ ಅಪೇಕ್ಷಿತ ಫಲವನ್ನು ಪಡೆಯುವುದು ಭಕ್ತರಿಗೆ ಸುಲಭವೆಂದು ನಂಬಲಾಗಿದೆ.
ಉತ್ತರಾಯಣ-ದಕ್ಷಿಣಾಯನ
ಜ್ಯೋತಿಷ್ಯಾಸ್ತ್ರದಂತೆ
೧) ಮಕರ ಸಂಕ್ರಮಣದಿಂದ ಕರ್ಕಾಟಕ ಸಂಕ್ರಮಣದ ವರೆಗಿನ ಆರು ತಿಂಗಳು ಉತ್ತರಾಯಣ
೨) ಕರ್ಕಾಟಕ ಸಂಕ್ರಮಣದಿಂದ ಮಕರ ಸಂಕ್ರಮಣದ ವರೆಗಿನ ಆರು ತಿಂಗಳು ದಕ್ಷಿಣಾಯನ.
ದೇವ ದೇವತೆಗಳಿಗೆ ಉತ್ತರಾಯಣವು ಹಗಲು-ದಕ್ಷಿಣಾಯನವು ರಾತ್ರಿ. ಆದುದರಿಂದ ದೇವಪ್ರತಿಷ್ಠೆ ಇತ್ಯಾದಿ ವಿಶೇಷ ದೇವತಾ ಕಾರ್ಯಗಳಿಗೆ, ಜಾತ್ರೆ ಮಹೋತ್ಸವಗಳಿಗೆ ಉತ್ತರಾಯಣವು ಯೋಗ್ಯವಾದ ಕಾಲ. ಈ ಸಮಯದಲ್ಲಿ ಬ್ರಹ್ಮಾಂಡದಿಂದ ಭೂಮಿಯ ಕಡೆಗೆ ದೇವತೆಗಳ ಸತ್ತ್ವ ಲಹರಿಗಳು ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸಲ್ಪಡುತ್ತವೆಯಾದರೆ ದಕ್ಷಿಣಾಯನದ ಹೆಚ್ಚಿನ ಸಮಯದಲ್ಲಿ ಮಾನವನಿಗೆ ಸಹಿಸಲು ತ್ರಾಸದಾಯಕವಾದ ಯಮಲಹರಿಗಳು ಭೂಮಿಯ ಕಡೆಗೆ ಪ್ರಕ್ಷೇಪಿತವಾಗುತ್ತವೆ. ದಕ್ಷಿಣಾಯನವು ದೇವತೆಗಳಿಗೆ ವಿಶ್ರಾಂತಿಯ ಕಾಲವಾಗಿರುವುದರಿಂದ ಈ ಸಮಯದಲ್ಲಿ ದುಷ್ಟಶಕ್ತಿಗಳಿಂದ ಬರುವ ತ್ರಾಸದಾಯಕ ಲಹರಿಗಳ ಪ್ರಖರತೆಯನ್ನು ತಡೆಯಲು ದೇವತೆಗಳಲ್ಲಿ ಭಕ್ತಿಭಾವ, ಪ್ರಾರ್ಥನೆ, ಕೃತಜ್ಞತೆಯನ್ನು ಹೆಚ್ಚಿಸುವ ಹಬ್ಬ ಹರಿದಿನಗಳ, ಧಾರ್ಮಿಕ ಉತ್ಸವಗಳ ಆಚರಣೆ, ವ್ರತ ವೈಕಲ್ಯಗಳ ಆಚರಣೆ ಇತ್ಯಾದಿಗಳನ್ನು ಹೇಳಲಾಗಿದೆ.
ಸಂಧ್ಯಾಕಾಲದ ಆಚರಣೆ ಶ್ರೇಷ್ಠವಾಗಿದೆ :
ದಕ್ಷಿಣಾಯನವು ಮುಗಿದು ಉತ್ತರಾಯಣವು ಅಂತೆಯೇ ಉತ್ತರಾಯಣವು ಮುಗಿದು ದಕ್ಷಿಣಾಯನವು ಆರಂಭವಾಗುವ ಕಾಲಕ್ಕೆ ಸಂಧಿಕಾಲವೆಂದು ಹೇಳುತ್ತಾರೆ. ರಾತ್ರಿಯು ಮುಗಿದು ಸೂರ್ಯೋದಯವಾಗುವ ತನಕದ ಬ್ರಾಹ್ಮೀಮುಹೂರ್ತವೂ ಒಂದು ಸಂಧಿಕಾಲ. ಪೂರ್ವಾಹ್ನ ಮತ್ತು ಅಪರಾಹ್ನ ಇವುಗಳ ನಡುವಿನ ಮಧ್ಯಾಹ್ನವೂ ಹಗಲು-ರಾತ್ರಿಗಳ ನಡುವಿನ ಸಂಜೆಯೂ ಸಂವತ್ಸರಗಳ, ಋತುಗಳ, ತಿಂಗಳುಗಳ ಅಂತ್ಯ- ಆದಿಗಳ ನಡುವಿನ ಸಮಯವೂ ಸಂಧಿಕಾಲಗಳಾಗಿವೆ. ಸಂಧಿಕಾಲವೆಂದರೆ ಪ್ರಕೃತಿಯಲ್ಲಿ ಬಹುಮುಖ್ಯ ಮಾರ್ಪಾಟುಗಳಾಗುವ ಕಾಲವಾಗಿದೆ. ಸಂಧಿಕಾಲದಲ್ಲಿ ಉತ್ಪನ್ನವಾಗುವ ಈಶ್ವರೀ ಚೈತನ್ಯವು ‘ಸಂಧ್ಯಾ’ ಎನಿಸುವುದು. ಈ ಶಕ್ತಿಗೆ ಮಾಡುವ ವಂದನೆಯೇ ಸಂಧ್ಯಾವಂದನೆ. ಶಾಸ್ತ್ರದಲ್ಲಿ ಹೇಳಿದಂತೆ ನಿರ್ದಿಷ್ಟ ಕಾಲದಲ್ಲಿ ಮಾಡುವ ಸಂಧ್ಯಾವಂದನೆಯಿಂದ ಆ ಈಶ್ವರೀ ಚೈತನ್ಯದ ಲಾಭದಿಂದ ಮುಂಬರುವ ಅನಿಷ್ಟಗಳು ದೂರವಾಗಿ ಜಗತ್ತಿಗೂ ಕಲ್ಯಾಣವಾಗುತ್ತದೆ. ಸಂಧ್ಯಾಕಾಲದ ಆಚರಣೆಗೆ ವಿಶೇಷವಾದ ಮಹತ್ವವಿದೆ.
ಧನು ಮಾಸದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಶಿವನ ಆರಾಧನೆ
ಮಾನವನ ಜೀವಿತಾವಧಿಯಲ್ಲಿ ಬರುವ ಕುಜ-ರಾಹು ಸಂಧಿ, ರಾಹು-ಬ್ರಹಸ್ಪತಿ ಸಂಧಿ, ಶುಕ್ರಾರ್ಕ ಸಂಧಿ ಇವುಗಳಿಂದ ಮುಂದೆ ಬರಬಹುದಾದ ಮರಣ, ಅಪಘಾತ ಭಯ, ತ್ರಾಸದಾಯಕ ಪರಿಸ್ಥಿತಿ ಇಂತಹವುಗಳನ್ನು ಶಾಂತಗೊಳಿಸಿ ಸುಖಶಾಂತಿಯನ್ನು ನೆಲೆಗೊಳಿಸಲು ಆಯಾಯ ವ್ಯಕ್ತಿಯ ವಯೋಮಾನಕ್ಕನುಸರಿಸಿ ಸಾಕಷ್ಟು ಮೊದಲಾಗಿ ಅಂದರೆ ಒಂದು ವರ್ಷ ಯಾ ಆರು ತಿಂಗಳ ಮೊದಲು ಸಂಧಿ ಶಾಂತಿಗಳನ್ನು ಮಾಡುವ ಪದ್ಧತಿಯು ಪ್ರಚಲಿತವಿದೆ.
ದಕ್ಷಿಣಾಯನದ ಕೊನೆಯ ತಿಂಗಳಾದ ಧನು ಮಾಸದಲ್ಲಿ ಮನು ಕುಲಕ್ಕೆ ತ್ರಾಸದಾಯಕವಾದ ಧನುರ್ವ್ಯತಿಪಾತ, ಧನುರ್ವೈಧೃತಿ ಮೊದಲಾದ ಅಶುಭ ದಿನಗಳೂ ಬರುತ್ತವೆ. ಸಕಾಲದಲ್ಲಿ ಯೋಗ್ಯ ರೀತಿಯಲ್ಲಿ ದೇವತಾರಾಧನೆ ಮಾಡಿ ಅವುಗಳಿಂದ ಮನುಕುಲಕ್ಕೆ ಬರಬಹುದಾದ ಕಂಟಕಗಳನ್ನು ಪರಿಹರಿಸುವ ಆವಶ್ಯಕತೆ ಇದೆ. ಬೆಳಗ್ಗಿನ ಜಾವ ರಾತ್ರಿ ಮುಗಿದು ಅರುಣೋದಯದ ತನಕದ ಬ್ರಾಹ್ಮೀ ಮುಹೂರ್ತವು ಶಾಂತವೂ, ರಮಣೀಯವೂ ಆಗಿದ್ದು ಆಧ್ಯಾತ್ಮಿಕ ಸಾಧನೆಗೆ, ಸಂಧ್ಯಾವಂದನೆಗೆ, ಧ್ಯಾನಕ್ಕೆ, ದೇವತಾರಾಧನೆಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ಈ ಸಂಧ್ಯಾ ಕಾಲವು ಜಗತ್ತಿನ ಜಂಜಡಗಳಿಂದಾಗಿ ರಜ – ತಮಗುಣಗಳನ್ನು ಹೆಚ್ಚಿಸುವ ಮಧ್ಯಾಹ್ನದ ಹಾಗೂ ಸಂಜೆಯ ಸಂಧ್ಯಾ ಕಾಲಗಳ ತುಲನೆಯಲ್ಲಿ ಹೆಚ್ಚು ಚೈತನ್ಯಕಾರಿಯಾಗಿದೆ.
ಬ್ರಾಹ್ಮೀ ಮುಹೂರ್ತದಲ್ಲಿ ದ್ವಾಪರಯುಗದಲ್ಲಿ ತೀರಾ ಕಷ್ಟಕೋಟಲೆಗಳನ್ನು ಅನುಭವಿಸುತ್ತಿದ್ದ ಪಂಚಪಾಂಡವರು ಬೆಳಗ್ಗಿನ ಜಾವದಲ್ಲಿ ಬೇಗನೆ ಎದ್ದು ನಿತ್ಯವಿಧಿಗಳನ್ನು ಪೂರೈಸಿ ಶುಚಿರ್ಭೂತರಾಗಿ ಅಕ್ಕಿ ಮತ್ತು ಬೇಳೆಗಳಿಂದ ತಯಾರಿಸಿದ ಹುಗ್ಗಿ ಭಕ್ಷ್ಯವನ್ನು ದೇವರಿಗೆ ಸಮರ್ಪಿಸಿ, ಆ ಪ್ರಸಾದವನ್ನು ಸ್ವೀಕರಿಸಿ ಶ್ರೀಕೃಷ್ಣನ ಅನುಗ್ರಹದಿಂದ ಕುರುಕ್ಷೇತ್ರ ಯುದ್ಧದಲ್ಲಿ ಜಯಗಳಿಸಿದ ವಿಶೇಷ ಮಾಸವೇ ಧನುರ್ಮಾಸವೆಂದು ಹೇಳಲಾಗಿದೆ.
ಧನುರ್ಮಾಸದಲ್ಲಿ ಪ್ರತಿ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಸುಲಭವಾಗಿ ಪ್ರಸನ್ನನಾಗಿ ವಾಂಛಿತ ಫಲವನ್ನು ನೀಡುವ ಶಿವನನ್ನು (ಆಶುತೋಷನನ್ನು) ಆರಾಧಿಸಿದಲ್ಲಿ ಮುಂಬರುವ ಕಾಲದಲ್ಲಿ ಮನುಕುಲಕ್ಕೆ ಬರುವ ಕಂಟಕಗಳು ದೂರವಾಗಿ ರಕ್ಷಣೆ ಸಿಗುತ್ತದೆ ಎಂಬ ದೃಢ ನಂಬಿಕೆಯಿಂದ ಭಗವದ್ಭಕ್ತರು ಧನು ಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುತ್ತಾರೆ.
ಅಯ್ಯಪ್ಪ ಭಕ್ತರು ಕೂಡಾ ಧನು ಸಂಕ್ರಮಣಕ್ಕೆ ಮೊದಲೇ ಜಪಮಾಲೆ ಧರಿಸಿ, ಅಭಕ್ಷ್ಯಭಕ್ಷಣ, ಅಪೇಯಪಾನ ಮೊದಲಾದ ವ್ಯಸನಗಳನ್ನು ತೊರೆದು ಧನುರ್ಮಾಸವೂ ಸೇರಿದಂತೆ ೪೮ ದಿನಗಳ ಕಾಲ ಕಠಿಣ ವ್ರತಗೈದು ಹರಿಹರ ಪುತ್ರನ ಕೃಪೆಯನ್ನು ಸಂಪಾದಿಸಲು ಇದೇ ಕಾಲವನ್ನು ಆಯ್ದುಕೊಂಡಿರಬೇಕು.
ಸಂಗ್ರಹ : ಬಿ. ರಾಮಭಟ್
ಧನುರ್ಮಾಸದಲ್ಲಿ ಶ್ರೀ ಮಹಾವಿಷ್ಣುವಿನ ಆರಾಧನೆಯನ್ನು ಮಾಡುವ ಬಗ್ಗೆ ಪುರಾಣಗಳಲ್ಲಿ ಇರುವ ಕಥೆ
ಒಮ್ಮೆ ಸೃಷ್ಟಿಕರ್ತರಾದ ಬ್ರಹ್ಮದೇವರು ಹಂಸಪಕ್ಷಿಯ ಅವತಾರ ಮಾಡುತ್ತಾ ಲೋಕ ಸಂಚಾರ ಮಾಡುತ್ತಿರುವಾಗ ಸೂರ್ಯದೇವರು ಹಂಸರೂಪಿ ಬ್ರಹ್ಮದೇವರ ಮೇಲೆ ಒಮ್ಮಿಂದೊಮ್ಮೆಲೆ ಹೆಚ್ಚಿನ ಶಾಖ ಮತ್ತು ಬೆಳಕನ್ನು ಬಿಡುತ್ತಾರೆ. ಇದರಿಂದ ಕೋಪಗೊಂಡ ಬ್ರಹ್ಮ ದೇವರು ಸೂರ್ಯದೇವರಿಗೆ ನಿನ್ನ ತೇಜಸ್ಸು ಕ್ಷೀಣಿಸಲಿ ಎಂಬ ಶಾಪ ನೀಡುತ್ತಾರೆ. ಸೂರ್ಯದೇವರು ಕಾಂತಿಹೀನರಾಗಿ ತನ್ನ ಪ್ರಕಾಶ ಕಳೆದುಕೊಂಡರು. ಇದರಿಂದ ಇಡೀ ಭೂಮಂಡಲ ಅಲ್ಲೋಲ ಕಲ್ಲೋಲವಾಯಿತು. ಸೂರ್ಯದೇವರಿಲ್ಲದೆ ಋಷಿ-ಮುನಿಗಳಿಗೆ ನಿತ್ಯ-ಪೂಜೆ ಹಾಗೂ ಹೋಮ-ಹವನಗಳಿಗೆ ಬಹಳ ತೊಂದರೆಯಾಗಿ ನಿಲ್ಲಿಸುವಂತಾಯಿತು.
ಆಗ ದೇವಾನುದೇವತೆಗಳು ಹಾಗೂ ಮುನಿವೃಂದದೊಂದಿಗೆ ಬ್ರಹ್ಮದೇವರ ಕುರಿತು ತಪಸ್ಸು ಆಚರಿಸಿದರು. ಇವರ ತಪಸ್ಸಿಗೆ ಬ್ರಹ್ಮದೇವರು ಒಲಿದು ಪ್ರತ್ಯಕ್ಷರಾದರು. ಆಗ ತಪಸ್ಸಿನ ಉದ್ದೇಶ ಏನು ಎಂಬ ಬ್ರಹ್ಮದೇವರ ಪ್ರಶ್ನೆಗೆ ಈಗ ನಡೆಯುತ್ತಿರುವ ಸ್ಥಿತಿ ವಿವರಿಸಿದರು. ಆಗ ಬ್ರಹ್ಮ ದೇವರು ಒಂದು ಪರಿಹಾರ ಸೂಚಿಸುತ್ತಾರೆ. ಸೂರ್ಯದೇವ ಧನುರ್ಮಾಸದಲ್ಲಿ ಮೊದಲ ಜಾವದಲ್ಲಿ ಜಗದೊಡೆಯನಾದ ಶ್ರೀ ಮಹಾವಿಷ್ಣುವನ್ನು ಕುರಿತು ಪೂಜಿಸಿದರೆ ಆತನ ಶಾಪ ವಿಮೋಚನೆಯಾಗಲಿದೆ ಎಂಬ ಅಭಯ ಬ್ರಹ್ಮ ದೇವರಿಂದ ಬಂತು.
ಅಂತೆಯೇ ಶ್ರೀ ಸೂರ್ಯದೇವರು ಧನುರ್ಮಾಸದ ಪೂಜೆಯನ್ನು ಮೊದಲ ಜಾವದಲ್ಲಿ ಸತತವಾಗಿ ಹದಿನಾರು ವರುಷ ಮಾಡಿ ಶ್ರೀ ಮಹಾವಿಷ್ಣುವಿನ ಪೂರ್ಣಾನುಗ್ರಹದಿಂದ ಎಂದಿನಂತೆಯೇ ತೇಜಸ್ಸು ಹಾಗೂ ಕಾಂತಿ ಹೊಂದಿ ಜಗತ್ತಿಗೆ ಬೆಳಕು ನೀಡಿದರು ಎಂದು ಪುರಾಣದಿಂದ ತಿಳಿದು ಬರುತ್ತದೆ. ಸಾಕ್ಷಾತ್ ಸೂರ್ಯದೇವರೇ ಈ ಧನುರ್ಮಾಸ ಪೂಜೆ ಮಾಡಿ ಜಗತ್ತಿಗೆ ಈ ಆಚರಣೆಯ ಮಹತ್ವ ತಿಳಿಯುವಂತೆ ಮಾಡಿದರು.
ಈ ಧನುರ್ಮಾಸ ಆರಂಭ ಸೂರ್ಯದೇವರು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಪ್ರವೇಶ ಮಾಡಿ ಒಂದು ತಿಂಗಳ ಕಾಲ ಅಲ್ಲಿರುವಾಗ ಈ ಪರ್ವಕಾಲವನ್ನು ಧನುರ್ಮಾಸವಾಗಿ ಆಚರಿಸುವಂತದ್ದಾಗಿದೆ.
ಶೂನ್ಯಮಾಸ
ಧನುರ್ಮಾಸವನ್ನು ‘ಶೂನ್ಯಮಾಸ’ ಎಂಬು ದಾಗಿ ಶಾಸ್ತ್ರಕಾರರು ಹೇಳಿದ್ದು ಈ ಮಾಸದಲ್ಲಿ ವಿವಾಹ-ಉಪನಯನ-ಗೃಹಪ್ರವೇಶದಂತಹ ಕಾರ್ಯಕ್ರಮಗಳಿಗೆ ನಿಷಿದ್ಧಗೊಳಿಸಿದ್ದಾರೆ. ಇದೊಂದು ಪದ್ಧತಿಯಾಗಿ ಬಂದಿದೆ. ಆದರೆ ಮಾನವನಿಗೆ ಶ್ರೀ ಮಹಾವಿಷ್ಣು ಧನುರ್ಮಾಸ ಪೂಜೆ ಮಾಡುವ ಅವಕಾಶ ನೀಡಿದ್ದು ಈ ಪೂಜೆಯಿಂದ ಮಾನವನ ಜನ್ಮ ಜನ್ಮಾಂತರದ ಪಾಪಗಳು ನಾಶವಾಗಿ,ಇಹದಲ್ಲಿ ಸುಖ ಪರದಲ್ಲಿ ಮುಕ್ತಿ ಕರುಣಿಸಿ ಪೂರ್ಣಾನುಗ್ರಹ ಮಾಡುತ್ತಾನೆ.
ಧನುರ್ಮಾಸದಲ್ಲಿ ಪ್ರತಿ ನಿತ್ಯ ಒಂದು ತಿಂಗಳು ಸೂರ್ಯೋದಯದ ಮುಂಚೆ ಪೂಜೆ ಮಾಡಬೇಕು. ಮೊದಲ ಹದಿನೈದು ದಿನ ಮಹಾವಿಷ್ಣುವಿಗೆ ನೈವೇದ್ಯಕ್ಕೆ ಸಕ್ಕರೆ ಅಥವಾ ಬೆಲ್ಲ-ಅಕ್ಕಿ-ಹೆಸರು ಬೆಳೆ ಬೆರೆಸಿ ನಂತರ ಬೇಯಿಸಿ(ಪೊಂಗಲ್) ಹುಗ್ಗಿ ತಯಾರಿಸಿ ಶ್ರೀ ಹರಿ (ಶ್ರೀ ಮಹಾವಿಷ್ಣು)ಗೆ ಅರ್ಪಿಸಬೇಕು. ಉಳಿದ ಹದಿನೈದು ದಿನ ಖಾರದ ಪೊಂಗಲ್ ತಯಾರಿಸಿ ನೈವೇದ್ಯ ಮಾಡಬೇಕು ಎಂಬ ಪದ್ಧತಿ ಇದೆ. ಈ ಧನುರ್ಮಾಸ ವ್ರತದ ಪೂಜೆಯನ್ನು ಋಷಿ ಶ್ರೇಷ್ಠರಾದ ವಿಶ್ವಾಮಿತ್ರರು-ಗೌತಮರು-ಅಗಸ್ತ್ಯರು ಹಾಗೂ ಭೃಗುಮುನಿಗಳ ಸಹಿತ ದೇವಾನುದೇವತೆಗಳು ಆಚರಿಸಿ ಶ್ರೀ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಶಕ್ತಿ ಸ್ವರೂಪಿಣಿಯಾದ ಜಗನ್ಮಾತೆ ಪಾರ್ವತಿದೇವಿ ಈ ಧನುರ್ಮಾಸ ಆಚರಿಸಿರುವುದಾಗಿ ಪುರಾಣಗಳಲ್ಲಿ ಉಲ್ಲೇಖವಿದೆ.
ಕೃಪೆ : ಉದಯವಾಣಿ ಪತ್ರಿಕೆ
ನಮ್ಮ ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯ ಬಗ್ಗೆ ಜ್ಞಾನವನ್ನು ಪಡೆಯಲು ಮತ್ತು ಪಸರಿಸುವ ಈ ನಿಮ್ಮ ಪ್ರಯತ್ನಕ್ಕೆ ನನ್ನ ಅಭಿನಂದನೆಗಳು. ಬಹಳ ಉಪಯುಕ್ತ ಮಾಹಿತಿಗಳನ್ನು ತಿಳಿಯಲು ಸಹಕಾರಿಯಾಗಿದೆ.