ಇಡೀ ಪ್ರಪಂಚವನ್ನು ‘ಅಧಿಭೂತ, ಅಧಿದೈವ, ಅಧ್ಯಾತ್ಮ’ ಎಂದು ಮೂರು ವಿಧವಾಗಿ ಮೋಕ್ಷಶಾಸ್ತ್ರದಲ್ಲಿ ವಿಂಗಡಿಸಲಾಗಿದೆ. ಅಧಿಭೂತವೆಂದರೆ ನಮಗೆ ತೋರಿಬರುತ್ತಿರುವ ಈ ಪ್ರಪಂಚ, ಇದರ ಅರಿವು, ಅದರಲ್ಲಿನ ಬದಲಾವಣೆಗಳು, ಇತ್ಯಾದಿ. ಇದರಲ್ಲಿಯೇ ಈಗಿನ ಕಾಲದ ವೈಜ್ಞಾನಿಕ, ತಾಂತ್ರಿಕ, ಸಾಮಾಜಿಕ ಬದಲಾವಣೆಗಳ ಅಧ್ಯಯನ, ಪರಿಣಾಮಗಳನ್ನೂ ಸೇರಿಸಬಹುದು. ತಂತ್ರಜ್ಞಾನಯುಗವೆಂದು ಕರೆಯಲ್ಪಡುತ್ತಿರುವ ಈ ಕಾಲದಲ್ಲಿ ಅಧಿಭೂತವೇ ಎಲ್ಲರಿಗೂ ಹೆಚ್ಚಿನ ಅಕ್ಕರೆಯ ವಿಚಾರವಾಗಿದೆ.
ಇನ್ನು ಅಧಿದೈವವೆಂದರೆ ದೇವತೆಗಳು, ಪರಲೋಕ ಮುಂತಾದವುಗಳನ್ನು ಕುರಿತದ್ದು. ಒಂದು ಕಾಲದಲ್ಲಿ ಈಗಿನಂತೆ ಲೌಕಿಕ ವಿಚಾರಗಳಿಗೆ ಮನ್ನಣೆಯೇ ಇಲ್ಲದೆ ಈ ಅಧಿದೈವವೇ ಪ್ರಮುಖವಾಗಿ, ಯಜ್ಞಯಾಗಾದಿಗಳು, ಸ್ವರ್ಗ-ನರಕಗಳ ವಿಚಾರವೇ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದ್ದವು. ವೇದೋಕ್ತಕರ್ಮಗಳು ಸರಿಯಾಗಿ ವಿಚಾರಣೆಗೆ ಒಳಪಡದೆ ಅತಿಯಾಗಿ ಆಚರಿಸಲ್ಪಡುತ್ತಿದ್ದವು. ಆದರೆ ಈಚೆಗೆ ಆಗಿರುವ ವೈಜ್ಞಾನಿಕ ಸಂಶೋಧನೆಗಳು, ತಂತ್ರಜ್ಞಾನದ ಆವಿಷ್ಕಾರಗಳಿಂದ ಅತೀಂದ್ರಿಯ ವಿಷಯಗಳಾದ ಪರಲೋಕ ಇತ್ಯಾದಿಗಳ ಬಗೆಗಿನ ನಂಬಿಕೆಗಳು ತೀವ್ರ ಬದಲಾವಣೆಗೆ ಒಳಗಾಗಿವೆ. ಹಾಗಾಗಿ ಇಂದು ಅಧಿದೈವವು ಎಲ್ಲರ ಆದ್ಯತೆಯ ವಿಚಾರವಾಗೇನೂ ಉಳಿದಿಲ್ಲ.
ಆದರೆ ಮೂರನೆಯದಾದ ಅಧ್ಯಾತ್ಮವು ಮಾತ್ರ ಇವೆರಡರಂತೆ ಆಯಾ ದೇಶ, ಕಾಲಗಳ ಮನ್ನಣೆಗೆ ಒಳಪಡದೆ ಸಾರ್ವಕಾಲಿಕವಾದ, ಇಡಿಯ ಜಗತ್ತಿನ ತಿರುಳಾದ, ನಮ್ಮ ಹೃದಯದಲ್ಲಿಯೇ ಸದಾ ಇದ್ದುಕೊಂಡಿರುವ ‘ಆತ್ಮ’ ನನ್ನು ಕುರಿತ ವಿಚಾರವನ್ನು ತಿಳಿಸುತ್ತದೆ. ‘ಇದು ಅಧಿಭೂತದಂತೆ ಇಂದ್ರಿಯಗಳಿಗೆ ಕಾಣಬರುವುದಿಲ್ಲ. ಅಧಿದೈವದಂತೆ ಕೇವಲ ನಂಬಿಕೆಯ ವಿಷಯವೂ ಅಲ್ಲ. ಈ ಅಧ್ಯಾತ್ಮದಲ್ಲಿ ನಮ್ಮೆಲ್ಲರ ನಿಜವಾದ ಸ್ವರೂಪವನ್ನೇ ತಿಳಿಸಿದೆ. ಇದರ ತಿಳಿವಳಿಕೆಯೇ ಮಾನವನ ಜೀವನದ ಪರಮ ಗುರಿ. ಇದನ್ನು ತಿಳಿದುಕೊಳ್ಳಲು ಕಠಿಣ ತ್ಯಾಗವೂ, ವಿಷಯವೈರಾಗ್ಯವೂ ಅತ್ಯಂತ ಅಗತ್ಯ. ಇದನ್ನು ತಿಳಿದುಕೊಳ್ಳುವುದರಿಂದ ಎಲ್ಲ ಶೋಕಮೋಹಗಳು ಹೋಗಿಬಿಡುತ್ತವೆ. ಆದ್ದರಿಂದ ಇದನ್ನೇ ಎಲ್ಲರೂ ತಿಳಿದುಕೊಳ್ಳಬೇಕು’ ಎಂದು ವೇದಗಳು ಹೇಳುತ್ತಿವೆ.
ಅಧ್ಯಾತ್ಮವು ದೇಶಕಾಲಾತೀತವಾದದ್ದೇನೋ ಇರಬಹುದು. ಹಿಂದಿನ ಎಲ್ಲ ಅಸಾಧ್ಯಕಾರ್ಯಗಳನ್ನು ಇಂದು ವಿಜ್ಞಾನ, ತಂತ್ರಜ್ಞಾನಗಳ ಸಹಾಯದಿಂದ ಸಾಧಿಸುತ್ತಾ ಲೌಕಿಕ ಜೀವನವನ್ನು ಸುಖಮಯವಾಗಿ ಮಾಡಿಕೊಳ್ಳುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿರುವ ಈ ಕಾಲದಲ್ಲಿ ಇದರ ಅಗತ್ಯವಿದೆಯೇ ? ಎಂದು ಕೆಲವರು ಯೋಚಿಸುವುದುಂಟು.
ಆದರೆ ಈಗಿನ ನಮ್ಮ ಪರಿಸ್ಥಿತಿ ಹೇಗಿದೆ ? ಯುಗಗಳು ದಿನಗಳಾಗಿ, ದಿನಗಳು ಕ್ಷಣಗಳಾಗಿ ಸದಾ ಧನ ಸಂಪಾದನೆಯಲ್ಲಿಯೇ ನಾವೆಲ್ಲರೂ ನಿರತರಾಗಿರುತ್ತೇವೆ. ನಮ್ಮ ಕಷ್ಟಗಳಿಗೆಲ್ಲಾ ದಾರಿದ್ರ್ಯವೇ ಕಾರಣವೆಂದೂ, ಧನದಿಂದ ಎಲ್ಲವೂ ದೊರೆಯುತ್ತದೆಯೆಂದೂ ನಂಬಿ ಅದಕ್ಕಾಗಿ ಅವಿರತ ಪ್ರಯತ್ನಿಸುತ್ತಿರುತ್ತೇವೆ. ಇಷ್ಟಾದರೂ ನಮ್ಮ ಮನಸ್ಸಿನಲ್ಲಿ ಅಶಾಂತಿಯು ತಾಂಡವವಾಡುತ್ತಿದೆ. ದಶಕಂಠನಾದ ರಾವಣನ ತಲೆಯನ್ನು ಕತ್ತರಿಸಿದಷ್ಟೂ ಮತ್ತೆ ಮತ್ತೆ ಮೂಡಿಬರುತ್ತಿದ್ದಂತೆ, ನಮ್ಮ ಬಯಕೆಗಳು ಪೂರೈಸಿದಷ್ಟೂ ಮನಸ್ಸಿನಲ್ಲಿ ಹೊಸ ಕಾಮನೆಗಳು ಉದಯಿಸುತ್ತಲೇ ಇವೆ. ಹೀಗೆ ಮನಸ್ಸಿನಲ್ಲಿ ಉಂಟಾಗುವ ಕೊನೆಯಿಲ್ಲದ ಕಾಮನೆಗಳ ಪೂರೈಕೆಗಾಗಿ ಬಿಡುವೇ ಇಲ್ಲದೆ ಶರೀರ, ಇಂದ್ರಿಯಗಳನ್ನು ಹಿಂಸಿಸಿ, ದುಡಿದು ದುಡಿದು ಸವೆದು ಹೋಗುವ ಯಂತ್ರಗಳಂತೆ ನಮ್ಮ ತನು, ಮನಗಳನ್ನೂ ಸಹ ವೇಗವಾಗಿ ಆಯಾಸಕ್ಕೆ ಗುರಿಪಡಿಸಿ ಶಾರೀರಿಕವಾಗಿಯೂ, ಮಾನಸಿಕವಾಗಿಯೂ ಬಳಲುತ್ತಾ, ವ್ಯಾಧಿಗಳಿಗೆ ತುತ್ತಾಗುತ್ತಾ ನಿಟ್ಟುಸಿರುಬಿಡುತ್ತಿದ್ದೇವೆ.
ಹಾಗಾದರೆ ಈ ನಮ್ಮ ಕಷ್ಟಗಳಿಗೆ ಪರಿಹಾರವೇ ಇಲ್ಲವೆ ? ನಮ್ಮ ಬಯಕೆಗಳು ಎಂದಿಗಾದರೂ ಸಂಪೂರ್ಣವಾಗಿ ತೀರುತ್ತದೆಯೆ? ಅಥವಾ ತೀರದ ಈ ಬಯಕೆಗಳ ಸಂಕೋಲೆಯಿಂದ ಹೊರಬರುವ ದಾರಿಯೇನಾದರೂ ಇದೆಯೆ? ನಮ್ಮ ಶರೀರ, ಇಂದ್ರಿಯಗಳಿಗೆ ನಾವು ದಾಸರಾಗದೆ, ಅವನ್ನೇ ನಮ್ಮ ಅಡಿಯಾಳನ್ನಾಗಿ ಮಾಡಿಕೊಳ್ಳಲು ಸಾಧ್ಯವೇ? ಎಂದು ಯಾರಾದರೂ ಆಲೋಚನೆ ಮಾಡಿದರೆ ಅಂತಹವರಿಗೆ ಉಪನಿಷತ್ತುಗಳು ನಮ್ಮ ಸ್ವರೂಪದ ಬಗ್ಗೆ ಸರಿಯಾದ ತಿಳಿವಳಿಕೆಯನ್ನು ಹೇಳುವ ಮೂಲಕ ಮಾರ್ಗದರ್ಶನ ಮಾಡುತ್ತವೆ.
ನಾವುಗಳು ತಿಳಿದಿರುವಂತೆ ಈ ಶರೀರ, ಇಂದ್ರಿಯಗಳು ನಿಜವಾಗಿ ನಮ್ಮ ಸ್ವರೂಪವೇನೂ ಅಲ್ಲ. ನಮ್ಮ ಸ್ವರೂಪವಾದ ಆತ್ಮನಿಗೆ ಈ ದೇಹ, ಇಂದ್ರಿಯಾದಿಗಳ ಸಂಬಂಧವು ಸ್ವಲ್ಪವೂ ಇಲ್ಲವೇ ಇಲ್ಲ. ಆದ್ದರಿಂದ ‘ಈ ಶರೀರವು ನಾನು, ಈ ಇಂದ್ರಿಯಗಳು ನನ್ನವು’ ಇಂತಹ ತಪ್ಪು ಕಲ್ಪನೆಯನ್ನು ದೂರಮಾಡಿಕೊಳ್ಳಬೇಕು. ಆಗ ಹುಟ್ಟು, ಸಾವು, ಮುಪ್ಪು, ವ್ಯಾಧಿ ಮುಂತಾದವುಗಳು ಉಂಟಾಗುವ ಈ ಶರೀರದ ಬಗೆಗಿನ ಅಭಿಮಾನವೂ, ಅದರಿಂದಾಗುವ ಕ್ಲೇಶವೂ ದೂರವಾಗಿ ಅಮೃತತ್ವವನ್ನು ಹೊಂದಬಹುದು’ ಎಂದು ಉಪನಿಷತ್ತುಗಳು ಸಾರಿ ಹೇಳುತ್ತಿವೆ.
ಅಷ್ಟೇ ಅಲ್ಲದೆ ಅಧ್ಯಾತ್ಮವಿದ್ಯೆಯಲ್ಲಿ ವಿಜ್ಞಾನವು ಇನ್ನೂ ಕಂಡುಕೊಳ್ಳಲು ಸಾಧ್ಯವಾಗದಿರುವ ‘ಈ ಪ್ರಪಂಚದ ಉತ್ಪತ್ತಿ ರಹಸ್ಯ, ಇದರ ಹಿಂದಿನ ಶಕ್ತಿಯ ಸ್ವರೂಪ, ಈ ಶಕ್ತಿಗೂ ನಮಗೂ ಇರುವ ಸಂಬಂಧ’ ಮುಂತಾದ ವಿಚಾರಗಳಲ್ಲಿಯೂ ಮುಂದೆಂದೂ ಬದಲಾಗಲು ಸಾಧ್ಯವಿಲ್ಲದಂತಹ ನಿಜವಾದ ತತ್ವವನ್ನು ತಿಳಿಸಿದೆ. ‘ನಮ್ಮ ಇಂದ್ರಿಯಗಳಿಗೆ ಕಾಣುತ್ತಿರುವ ಈ ಪ್ರಪಂಚವು ನಿಜವಾಗಿಯೂ ಎಂದಿಗೂ ಬದಲಾವಣೆ ಹೊಂದದೆ ಇರುವ ಬ್ರಹ್ಮವೆಂಬ ವಸ್ತುವಾಗಿದೆ. ಈ ಬ್ರಹ್ಮವು ಎಲ್ಲಿದೆ ? ಯಾವ ರೀತಿ ಇದೆ ? ಎಂದರೆ ಈ ಬ್ರಹ್ಮವೇ ನಮ್ಮ ಆತ್ಮನ ಸ್ವರೂಪದಲ್ಲಿದೆ. ಈ ಆತ್ಮನು ನಮ್ಮ ಹೃದಯದಲ್ಲಿಯೇ ಇದ್ದಾನೆ.’ ಎಂದು ವೇದಗಳಲ್ಲಿ ಹೇಳಿದೆ. ಇದನ್ನು ಸರಿಯಾಗಿ ತಿಳಿದುಕೊಳ್ಳುವುದರಿಂದ ‘ಈ ಅನಾದಿಯಾದ ಪ್ರಪಂಚದಲ್ಲಿ ನಾನು ಹುಟ್ಟಿ ಕೆಲವೇ ಕಾಲ ಬದುಕಿ ಮರಣಹೊಂದುತ್ತೇನೆ. ಆದ್ದರಿಂದ ಇರುವಷ್ಟರಲ್ಲಿ ತನಕ ಎಲ್ಲ ಭೋಗಗಳನ್ನೂ ಹೊಂದಬೇಕು’ ಎಂಬ ಅತ್ಯಾಶೆ, ಅದಕ್ಕಾಗಿ ಮಾಡುವ ವ್ಯರ್ಥಪ್ರಯತ್ನಗಳನ್ನೂ ದೂರಮಾಡಲು ಸಾಧ್ಯವಾಗುತ್ತದೆ.
ಸ್ವಾರ್ಥವನ್ನು ಬಿಟ್ಟು, ಆತ್ಮತೃಪ್ತಿಯಿಂದ ಇರುತ್ತಾ ಪರೋಪಕಾರ, ಪರಮಾತ್ಮಚಿಂತನೆ, ಸದ್ವಿದ್ಯೆಯ ಅಧ್ಯಯನ, ಜ್ಞಾನಿಗಳ ಸತ್ಸಂಗ, – ಇವುಗಳಿಗಾಗಿ ಸ್ವಲ್ಪವಾದರೂ ಸಮಯವನ್ನು ಮೀಸಲಿರಿಸಬೇಕು. ಇಂತಹ ಸಾಧನಗಳಿಂದ ಮನಸ್ಸಿನ ಕೊಳೆಯನ್ನೂ, ಕ್ಲೇಶವನ್ನೂ ತೊಲಗಿಸಿಕೊಂಡು ಶ್ರದ್ಧೆಯಿಂದ ವಿಚಾರ ಮಾಡುವುದೇ ಈ ಆತ್ಮಜ್ಞಾನದ, ಅಧ್ಯಾತ್ಮವಿದ್ಯೆಯ ಸಂಪಾದನೆಗೆ ಅತ್ಯಂತ ಸುಲಭೋಪಾಯ’ ಎಂದು ಶ್ರದ್ಧಾಳುಗಳ ಮನಮುಟ್ಟುವಂತೆ ವೇದಗಳಲ್ಲಿ ಹೇಳಿದೆ. ಆಧುನಿಕ ಕಾಲದಲ್ಲಂತೂ ಈ ಸಾಧನಗಳ ಅಭ್ಯಾಸ, ಅಧ್ಯಾತ್ಮವಿದ್ಯೆಗಷ್ಟೇ ಅಲ್ಲದೆ ಲೌಕಿಕ ಜೀವನದಲ್ಲಿ ನೆಮ್ಮದಿ, ಶಾಂತಿಯನ್ನು ಕಂಡುಕೊಳ್ಳಲೂ ಸಹ ಹಿಂದೆಂದಿಗಿಂತಲೂ ಅತ್ಯಾವಶ್ಯಕ ಎಂಬುದನ್ನು ಎಲ್ಲರೂ ಸುಲಭವಾಗಿ ಮನಗಾಣಬಹುದಾಗಿದೆ !
– ದಿಲೀಪ್ ಬೆಳ್ಳಾವೆ, ಬೆಂಗಳೂರು
(Adhyatma Prakasha, Aug 2003)