
ಮಂತ್ರಸಹಿತ
‘ಸದ್ಯೋಜಾತಾ’ದಿ ಮಂತ್ರೇಸೀ| ಘ್ಯಾವೆ ಭಸ್ಮ ತಳಹಸ್ತಾಸೀ|
ಅಭಿಮಂತ್ರಾವೇ ಭಸ್ಮಾಸೀ| ‘ಅಗ್ನಿರಿತ್ಯಾ’ದಿ ಮಂತ್ರೇ ಕರೋನಿ|| ೨೦೦ ||
‘ಮಾನಸ್ತೋಕೆ’ತಿ ಮಂತ್ರೇಸೀ| ಸಂಮರ್ದಾವೇ ಅಂಗುಷ್ಠೇಸೀ|
‘ತ್ರ್ಯಂಬಕಾ’ದಿ ಮಂತ್ರೇಸೀ| ಶಿರಸಿ ಲಾವಿಜೆ ಪರಿಯೇಸಾ|| ೨೦೧ ||
‘ತ್ರಾಯುಷೇ’ತಿ ಮಂತ್ರೇಸೀ| ಲಾವಿಜೆ ಲಲಾಟಭುಜಾಂಸೀ|
ತ್ಯಾಣೋಂಚಿ ಮಂತ್ರೇ ಪರಿಯೆಸೀ| ಸ್ಥಾನಿ ಸ್ಥಾನಿ ಲಾವಿಜೆ|| ೨೦೨ ||
– ಶ್ರೀಗುರುಚರಿತ್ರೆ, ಅಧ್ಯಾಯ ೨೯
ಅರ್ಥ: ‘ಸದ್ಯೋಜಾತ’ ಇತ್ಯಾದಿ ಮಂತ್ರಗಳನ್ನು ಹೇಳಿ ಭಸ್ಮವನ್ನು ಅಂಗೈಯಲ್ಲಿ ತೆಗೆದುಕೊಳ್ಳಬೇಕು. ‘ಅಗ್ನಿರಿತಿ’ ಇತ್ಯಾದಿ ಮಂತ್ರಗಳನ್ನು ಹೇಳಿ ಅದನ್ನು ಅಭಿಮಂತ್ರಿಸಬೇಕು. || ೨೦೦||
‘ಮಾನಸ್ತೋಕ’ ಇತ್ಯಾದಿ ಮಂತ್ರಗಳನ್ನು ಹೇಳಿ ಅದನ್ನು ಹೆಬ್ಬೆರಳಿನಿಂದ ತಿಕ್ಕಬೇಕು. ‘ತ್ರ್ಯಂಬಕಾ’ ಇತ್ಯಾದಿ ಮಂತ್ರಗಳನ್ನು ಹೇಳಿ ಅದನ್ನು ತಲೆಗೆ ಹಚ್ಚಿಕೊಳ್ಳಬೇಕು. ||೨೦೧||
‘ತ್ರ್ಯಾಯುಷ’ ಮಂತ್ರವನ್ನು ಪಠಿಸುತ್ತಾ ಅದನ್ನು ಹಣೆಗೂ ರಟ್ಟೆಗಳಿಗೂ ಹಚ್ಚಿಕೊಳ್ಳಬೇಕು. ಅದೇ ಮಂತ್ರದಿಂದ ಭಸ್ಮವನ್ನು ಶರೀರದ ಬೇರೆ-ಬೇರೆ ಸ್ಥಳಗಳಿಗೆ ಹಚ್ಚಿಕೊಳ್ಳಬೇಕು. ||೨೦೨||
ಭಾವಸಹಿತ
ಜರೀ ನೇಣೆ ಮಂತ್ರಾಸಿ| ತ್ಯಾಣೆ ಲಾವಿಜೆ ಭಾವಶುದ್ಧೀಸೀ|
ತ್ಯಾಚಿ ಮಹಿಮಾ ಅಪಾರೇಸೀ| ಏಕಚಿತ್ತೇ ಪರಿಯೆಸಾ||
– ಶ್ರೀಗುರುಚರಿತ್ರೆ ೨೯, ದ್ವಿಪದಿ ೨೦೪
ಅರ್ಥ: ಒಂದು ವೇಳೆ ಮಂತ್ರವು ಬರದೇ ಇದ್ದರೆ, ಭಸ್ಮವನ್ನು ಭಕ್ತಿ-ಭಾವದಿಂದ ಹಚ್ಚಿಕೊಳ್ಳಬೇಕು. ಅದರ ಮಹಿಮೆ ಅಪಾರವಾಗಿದೆ.
ಋಗ್ವೇದೀಯ ಬ್ರಹ್ಮಕರ್ಮಕ್ಕನುಸಾರ: ಭಸ್ಮಧಾರಣೆಯ ವಿಧಿಯನ್ನು ಋಗ್ವೇದೀಯ ಬ್ರಹ್ಮಕರ್ಮದಲ್ಲಿ ಕೊಡಲಾಗಿದೆ. ಅದರ ಸಾರಾಂಶವು ಹೀಗಿದೆ :
ಆಚಮನ ಮತ್ತು ಪ್ರಾಣಾಯಾಮ ಮಾಡಿ ಎಡ ಅಂಗೈ ಮೇಲೆ ಸ್ವಲ್ಪ ಭಸ್ಮವನ್ನು ತೆಗೆದುಕೊಂಡು ಅದನ್ನು ‘ಓಂ ಮಾನಸ್ತೋಕೇ೦’ ಎಂಬ ಮಂತ್ರದಿಂದ ನೀರಿನಲ್ಲಿ ನೆನೆಸಬೇಕು. ಆ ಭಸ್ಮವನ್ನು ‘ಓಂ ಈಶಾನಃ೦’ ಈ ಮಂತ್ರದಿಂದ ತಲೆ, ‘ಓಂ ತತ್ಪುರುಷಾಯ೦’ ಈ ಮಂತ್ರದಿಂದ ಮುಖ, ‘ಓಂ ಅಘೋರೇಭ್ಯೋ೦’ ಈ ಮಂತ್ರದಿಂದ ಹೃದಯ, ‘ಓಂ ವಾಮದೇವಾಯ೦’ ಮಂತ್ರದಿಂದ ಗುಪ್ತಭಾಗ ಮತ್ತು ‘ಓಂ ಸದ್ಯೋಜಾತ೦’ ಮಂತ್ರದಿಂದ ಎರಡೂ ಕಾಲುಗಳಿಗೆ ಹಚ್ಚಿಕೊಳ್ಳಬೇಕು.
ತ್ರಿಪುಂಡ್ರ (ಭಸ್ಮದ ಮೂರು ಅಡ್ಡ ಪಟ್ಟೆಗಳು)
ಋಗ್ವೇದೀಯ ಬ್ರಹ್ಮಕರ್ಮಕ್ಕನುಸಾರ ತ್ರಿಪುಂಡ್ರವನ್ನು ಹಚ್ಚುವ ಪದ್ಧತಿ: ಎಡಗೈಯಲ್ಲಿನ ಭಸ್ಮವನ್ನು ಬಲಗೈಯಿಂದ ಸ್ಪರ್ಶಿಸಿ ‘ಓಂ ಅಗ್ನಿರಿತಿ ಭಸ್ಮ, ವಾಯುರಿತಿ ಭಸ್ಮ’ ಇತ್ಯಾದಿ ೭ ಮಂತ್ರಗಳಿಂದ ಅಭಿಮಂತ್ರಿಸಬೇಕು. ಬಲಗೈಯ ಮಧ್ಯದ ಮೂರು ಬೆರಳುಗಳಿಂದ ಮತ್ತು ಎಡಗೈಯ ಮಧ್ಯದ ಮೂರು ಬೆರಳುಗಳಿಂದ ಆ ಭಸ್ಮವನ್ನು ಎರಡೂ ಕೈಗಳಿಂದ ತಿಕ್ಕಬೇಕು. ‘ಓಂ ನಮಃ ಶಿವಾಯ|’ ಎಂಬ ಮಂತ್ರವನ್ನು ಹೇಳುತ್ತಾ ಆ ಭಸ್ಮವನ್ನು ಬಲಗೈಯ ಮಧ್ಯದ ಮೂರು ಬೆರಳುಗಳಿಂದ ಹಣೆ, ಹೃದಯ (ಎದೆ), ನಾಭಿ ಮತ್ತು ಕಂಠದ ಮೇಲೆ ಅಡ್ಡವಾಗಿ ಹಚ್ಚಬೇಕು. ನಂತರ ಬಲಗೈಯಿಂದ ಎಡಭಾಗದ ಮತ್ತು ಎಡಗೈಯಿಂದ ಬಲಭಾಗದ – ಭುಜ, ರಟ್ಟೆಗಳ ಮಧ್ಯದಲ್ಲಿ, ಮಣಿಗಂಟುಗಳಿಗೆ, ಮಗ್ಗಲುಗಳಿಗೆ ಮತ್ತು ಕಾಲುಗಳಿಗೆ ಅಡ್ಡವಾಗಿ ಭಸ್ಮವನ್ನು ಹಚ್ಚಬೇಕು. ನಂತರ ಸರ್ವಾಂಗಕ್ಕೆ (ಸಂಪೂರ್ಣ ಶರೀರಕ್ಕೆ) ಹಚ್ಚಿಕೊಳ್ಳಬೇಕು.
ಮಧ್ಯಮಾನಾಮಿಕಾಂಗುಳೆಸೀ| ಲಾವಿಜೆ ಪಹಿಲೆ ಲಲಾಟೇಸೀ|
ಪ್ರತಿಲೋಮ ಅಂಗುಷ್ಠೆಸೀ| ಮಧ್ಯರೇಷಾ ಕಾಢಿಜೆ||
– ಶ್ರೀಗುರುಚರಿತ್ರೆ, ಅಧ್ಯಾಯ ೨೯, ದ್ವಿಪದಿ ೨೦೪
ಅರ್ಥ: ಮೊದಲು, ಮಧ್ಯದ ಮತ್ತು ಅನಾಮಿಕಾ ಬೆರಳುಗಳಿಂದ ಮೇಲಿನ ಮತ್ತು ಕೆಳಗಿನ ಪಟ್ಟೆಗಳನ್ನು ಎಡಗಡೆಯಿಂದ ಬಲಗಡೆಗೆ ಎಳೆಯಬೇಕು. ನಂತರ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿದ ಹೆಬ್ಬೆರಳಿನಿಂದ ಮಧ್ಯದ ಪಟ್ಟೆಯನ್ನು ಬಲಗಡೆಯಿಂದ ಎಡಗಡೆಗೆ ಎಳೆಯಬೇಕು. (ಪಟ್ಟೆಗಳನ್ನು ಎರಡೂ ದಿಕ್ಕುಗಳಲ್ಲಿ ಎಳೆಯುವುದರಿಂದ ಬಲಗಡೆಯ ನಾಡಿ ಅಥವಾ ಎಡಗಡೆಯ ನಾಡಿಯು ಪ್ರಾರಂಭವಾಗದೆ ಸುಷುಮ್ನಾನಾಡಿಯು ಪ್ರಾರಂಭವಾಗಲು ಸಹಾಯವಾಗುತ್ತದೆ.)
ತ್ರಿಪುಂಡ್ರವು ಹುಬ್ಬಿನ ಆಕಾರದ್ದಾಗಿರಬೇಕು. ಸಾಮಾನ್ಯವಾಗಿ ತ್ರಿಪುಂಡ್ರದ ಮಧ್ಯದಲ್ಲಿ ಭಸ್ಮದ ಒಂದು ಬಿಂದುವನ್ನೂ ಹಚ್ಚುತ್ತಾರೆ.
(ಆಧಾರಗ್ರಂಥ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ “ಶಿವ”)