ಹಿಂದೂ ಧರ್ಮ ಪ್ರತಿಮಾ ಪೂಜೆಯನ್ನು ಹೇಳುತ್ತದೆಯೇ? ಪ್ರತಿಮೆಯೇ ಭಗವಂತನೇ?

ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಅಲ್ಲಿ ಒಂದು ಸುಂದರ ಕಲ್ಲಿನ ಮೂರ್ತಿ ಇರುತ್ತದೆ. ಆ ಕಲ್ಲಿನ ಮೂರ್ತಿ ದೇವರೇ? ಅಲ್ಲ. ಅದು ದೇವರ ಪ್ರತೀಕ ಮತ್ತು ನಾವು ಆ ಮೂರ್ತಿಯಲ್ಲಿ ದೇವರನ್ನು ಆವಾಹನೆ ಮಾಡಿ ಪೂಜೆ ಮಾಡುತ್ತೇವೆ. ಸರ್ವಾಂತರ್ಯಾಮಿ, ಸರ್ವಸಮರ್ಥ ಭಗವಂತ ಕಲ್ಲಿನೊಳಗೂ ಇರಬಹುದು – ಕಂಬದಲ್ಲೂ ಇರಬಹುದಲ್ಲವೇ? [ಹಿರಣ್ಯಕಶಿಪು ಮತ್ತು ಪ್ರಹ್ಲಾದನ ಕಥೆ-ನರಸಿಂಹಾವತಾರ ನೆನಪಿಸಿಕೊಳ್ಳಿ]

ಭಗವಂತನಿಗೆ ಮೂರು ರೂಪಗಳು
೧. ಆವೇಶರೂಪ (ಉದಾ: ಪ್ರಥುಚಕ್ರವರ್ತಿ, ನರ)
೨. ಅವತಾರರೂಪ (ಉದಾ: ರಾಮ, ಕೃಷ್ಣ)
೩. ಪ್ರತೀಕರೂಪ.

ಭಗವಂತನ ಅವತಾರಗಳೆಂದರೆ ಅದು ಅವನ ಚಿನ್ಮಯವಾದ ಅಪ್ರಾಕೃತ ರೂಪ. ಇದನ್ನು ಎಲ್ಲರೂ ಕಾಣಲು ಸಾಧ್ಯವಿಲ್ಲ. ಭಗವಂತನ ಅವತಾರ ರೂಪವನ್ನು ಜನರು ಕಂಡರೂ, ಅದನ್ನು ‘ಭಗವಂತ’ ಎಂದಾಗಲೀ, ‘ಜ್ಞಾನಾನಂದಮಯ’ ಎಂದಾಗಲೀ ಕಾಣಲಿಲ್ಲ. ಉದಾಹರಣೆಗೆ: ಕೃಷ್ಣನನ್ನು ಅಥವಾ ರಾಮನನ್ನು ಆ ಕಾಲದ ಜನರು ನಮ್ಮಂತೆ ಪಂಚಭೌತಿಕ ಶರೀರವುಳ್ಳ ಒಬ್ಬ ಸಾಮಾನ್ಯ ಮನುಷ್ಯ ಎಂದೇ ತಿಳಿದಿದ್ದರು. ಜ್ಞಾನಿಗಳನ್ನು ಹೊರತುಪಡಿಸಿ, ಇತರರಿಗೆ ಅದು ಜ್ಞಾನಾನಂದಮಯವಾದ, ಅಪ್ರಾಕೃತವಾದ ಭಗವಂತ ಎಂದು ಅನ್ನಿಸಿರಲಿಲ್ಲ. ಹಾಗಾಗಿ ಎಲ್ಲರಿಗೂ ಭಗವಂತನ ದರ್ಶನ ಭಾಗ್ಯ ದೊರೆಯಲಿಲ್ಲ.

ಇಂದು ನಮಗೆ ಭಗವಂತನ ಅವತಾರ ರೂಪ ನೋಡಲು ಲಭ್ಯವಿಲ್ಲದಿದ್ದರೂ ಕೂಡಾ, ಆತನನ್ನು ನಾವು ಕಾಣಬಹುದು! ಎಲ್ಲರೂ ಭಗವಂತನನ್ನು ಪ್ರತೀಕರೂಪದಲ್ಲಿ ಆವಾಹನೆ ಮಾಡಿ ಧ್ಯಾನದಲ್ಲಿ ಕಾಣಬಹುದು.

ಈ ವಿಶ್ವಕ್ಕೊಂದು ರೂಪಕೊಟ್ಟು, ತತ್ತದ್ ರೂಪನಾಗಿ, ವಿಶ್ವದಲ್ಲಿ ಭಗವಂತ ತುಂಬಿದ್ದಾನೆ. ಹಾಗಾಗಿ ಪ್ರತಿಯೊಂದು ವಸ್ತುವೂ ಆತನ ಪ್ರತಿಮೆ. ರೂಪವಿಲ್ಲದ ಭಗವಂತನ ರೂಪವಿದು. ಸತ್ತ್ವ, ರಜಸ್ಸು ಮತ್ತು ತಮೋಗುಣಗಳಿದಾದ ಈ ಪ್ರಪಂಚ, ಮಹತಾದಿ ತತ್ತ್ವಗಳಿಂದ ತುಂಬಿದೆ. ಕಾಣುವ ಈ ಪ್ರಪಂಚದಲ್ಲಿ, ಕಾಣುವ ವಸ್ತುವಿನೊಳಗೆ, ಕಾಣದ ಭಗವಂತನನ್ನು ಧ್ಯಾನದಲ್ಲಿ ಕಾಣಬೇಕು. ಇದನ್ನೇ ನಮಗೆ ಪ್ರಹ್ಲಾದ ಹೇಳಿರುವುದು. ಆತ ಕಂಬದಲ್ಲೂ ಭಗವಂತನನ್ನು ಕಂಡಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಕಂಬವೂ ಒಂದು ಕಲ್ಲು, ದೇವರ ಪ್ರತಿಮೆಯೂ ಒಂದು ಕಲ್ಲು. ಆದರೆ ಕಲ್ಲಿನೊಳಗೂ ಭಗವಂತನಿದ್ದಾನೆ ಎಂದು ತಿಳಿದಾಗ, ಕಲ್ಲು ಪ್ರತಿಮೆಯಾಗುತ್ತದೆ. ಇಲ್ಲದಿದ್ದರೆ ಪ್ರತಿಮೆಯೂ ಕಲ್ಲೇ!

ವಿಶ್ವದಲ್ಲಿ ಭಗವಂತ ತುಂಬಿದ್ದಾನೆ, ಪ್ರತಿಮೆಯಲ್ಲಿ ಭಗವಂತನನ್ನು ಕಾಣಬೇಕು, ಇತ್ಯಾದಿ ವಿಚಾರವನ್ನು ಕೆಲವು ತಿಳಿಗೇಡಿಗಳು ತಪ್ಪಾಗಿ ತಿಳಿದು, ಪ್ರತಿಮಾಪೂಜೆ ಬಗ್ಗೆ ಆರೋಪ ಮಾಡುತ್ತಾರೆ. ಆದರೆ ಇವರಿಗೆ “ಪ್ರತಿಮೆಯಲ್ಲಿ ದೇವರ ಪೂಜೆ ಹೊರತು, ಪ್ರತಿಮೆಯೇ ದೇವರೆಂದು ಪೂಜೆ ಅಲ್ಲ” ಎನ್ನುವ ಸತ್ಯ ತಿಳಿದಿಲ್ಲ. ಭಾರತದಲ್ಲಿ ಶಾಸ್ತ್ರ ತಿಳಿದವರು ಯಾರೂ ಪ್ರತಿಮೆಯನ್ನು ದೇವರು ಎಂದು ಪೂಜಿಸುವುದಿಲ್ಲ, ಬದಲಿಗೆ ಪ್ರತಿಮೆಯಲ್ಲಿ ದೇವರನ್ನು ಆವಾಹನೆ ಮಾಡಿ ಪೂಜಿಸುತ್ತಾರೆ. ಈ ವಿಚಾರವನ್ನು ಸ್ವಯಂ ವೇದವ್ಯಾಸರು ಬ್ರಹ್ಮಸೂತ್ರದಲ್ಲೇ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲಿ ಹೇಳುತ್ತಾರೆ: “ನ ಪ್ರತೀಕೇ ನಹಿಸಃ” ಎಂದು. ಅಂದರೆ “ಪ್ರತಿಮೆಯನ್ನು ದೇವರೆಂದು ಕಾಣಬೇಡ, ಪ್ರತಿಮೆ ದೇವರಲ್ಲ, ಪ್ರತಿಮೆಯಲ್ಲಿ ದೇವರನ್ನು ಕಾಣು” ಎಂದರ್ಥ. ಗಾಳಿಯಲ್ಲಿ ಧೂಳು ತುಂಬಿದೆ ಹೊರತು, ಗಾಳಿಯೇ ದೂಳಲ್ಲ. ಮೋಡದಿಂದ ಆಕಾಶ ಕಪ್ಪಾಗಿ ಕಾಣುತ್ತದೆ ಹೊರತು, ಆಕಾಶವೇ ಕಪ್ಪಲ್ಲ. ಹಾಗೇ ಪ್ರತಿಮೆಯಲ್ಲಿ ಭಗವಂತ ಹೊರತು, ಪ್ರತಿಮೆಯೇ ಭಗವಂತನಲ್ಲ.

ಆಧಾರ – ಭಗವದ್ಗೀತಾ

Leave a Comment