ಶ್ರೀ ಗಣೇಶ ಚತುರ್ಥಿಗಾಗಿ ಪೂಜಿಸುವ ಶ್ರೀ ಗಣೇಶನ ಮೂರ್ತಿಯನ್ನು ಮನೆಗೆ ಹೇಗೆ ತರಬೇಕು ?
೧. ಶ್ರೀ ಗಣೇಶಮೂರ್ತಿಯನ್ನು ಮನೆಗೆ ತರಲು ಮನೆಯಲ್ಲಿನ ಕರ್ತ (ಪ್ರಮುಖ) ಪುರುಷನು ಇತರರೊಂದಿಗೆ ಹೋಗಬೇಕು.
೨. ಮೂರ್ತಿಯನ್ನು ಕೈಯಲ್ಲಿ ತೆಗೆದುಕೊಳ್ಳುವವನು ಹಿಂದೂ ವೇಷಭೂಷಣವನ್ನು ಧರಿಸಬೇಕು, ಅಂದರೆ ನಿಲುವಂಗಿ (ಅಂಗಿ)-ಧೋತರ ಅಥವಾ ಜುಬ್ಬಾ (ಅಂಗಿ)-ಪೈಜಾಮಾವನ್ನು ಧರಿಸಬೇಕು. ತಲೆಯ ಮೇಲೆ ಟೊಪ್ಪಿಗೆಯನ್ನೂ ಹಾಕಿಕೊಳ್ಳಬೇಕು.
೩. ಮೂರ್ತಿಯನ್ನು ತರುವಾಗ ಅದರ ಮೇಲೆ ರೇಶ್ಮೆ, ಹತ್ತಿ (ನೂಲಿನ) ಅಥವಾ ಖಾದಿಯ ಸ್ವಚ್ಛ ಬಟ್ಟೆಯನ್ನು ಹಾಕಬೇಕು. ಮೂರ್ತಿಯನ್ನು ಮನೆಗೆ ತರುವಾಗ ಮೂರ್ತಿಯ ಮುಖವು ತರುವವನ ಕಡೆಗೆ ಮತ್ತು ಬೆನ್ನು ಮುಂದಿನ ಬದಿಗಿರಬೇಕು. ಮೂರ್ತಿಯ ಮುಂಭಾಗದಿಂದ ಸಗುಣ ತತ್ತ್ವ ಮತ್ತು ಹಿಂಭಾಗದಿಂದ ನಿರ್ಗುಣ ತತ್ತ್ವ ಪ್ರಕ್ಷೇಪಿಸುತ್ತಿರುತ್ತದೆ. ಮೂರ್ತಿಯನ್ನು ಕೈಯಲ್ಲಿ ತೆಗೆದುಕೊಳ್ಳುವವನು ಪೂಜಕನಾಗಿರುತ್ತಾನೆ. ಅವನು ಸಗುಣ ಕಾರ್ಯದ ಪ್ರತೀಕವಾಗಿದ್ದಾನೆ. ಮೂರ್ತಿಯ ಮುಖವನ್ನು ಅವನೆಡೆಗೆ ಮಾಡುವುದರಿಂದ ಅವನಿಗೆ ಸಗುಣ ತತ್ತ್ವದ ಲಾಭವಾಗುತ್ತದೆ ಮತ್ತು ಇತರರಿಗೆ ನಿರ್ಗುಣ ತತ್ತ್ವದ ಲಾಭವಾಗುತ್ತದೆ.
೪. ಶ್ರೀ ಗಣೇಶನ ಜಯಜಯಕಾರ ಮತ್ತು ಭಾವಪೂರ್ಣ ನಾಮಜಪ ಮಾಡುತ್ತಾ ಮೂರ್ತಿಯನ್ನು ಮನೆಗೆ ತರಬೇಕು.
೫. ಮನೆಯ ಹೊಸ್ತಿಲಿನ ಹೊರಗೆ ನಿಲ್ಲಬೇಕು. ಮನೆಯಲ್ಲಿನ ಮುತ್ತೈದೆಯು ಮೂರ್ತಿಯನ್ನು ತರುವವನ ಕಾಲುಗಳ ಮೇಲೆ ಮೊದಲು ಹಾಲು, ನಂತರ ನೀರನ್ನು ಹಾಕಬೇಕು.
೬. ಮನೆಯನ್ನು ಪ್ರವೇಶಿಸುವ ಮೊದಲು ಮೂರ್ತಿಯ ಮುಖವನ್ನು ಮುಂದಿನ ಬದಿಗೆ ಮಾಡಬೇಕು. ನಂತರ ಮೂರ್ತಿಗೆ ಆರತಿ ಬೆಳಗಬೇಕು.
೭. ಮನೆಯಲ್ಲಿ ಯಾವ ಸ್ಥಳದಲ್ಲಿ ಮೂರ್ತಿಯನ್ನು ಇಡಬೇಕಾಗಿರುತ್ತದೆಯೋ, ಅಲ್ಲಿ ಮಣೆಯ ಮೇಲೆ ಸ್ವಲ್ಪ ಅಕ್ಕಿಯನ್ನಿಟ್ಟು ಅದರ ಮೇಲೆ ಮೂರ್ತಿಯನ್ನಿಡಬೇಕು.
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ “ಶ್ರೀ ಗಣಪತಿ”)
Thank you very much for your kind advice of welcoming shri Ganesha.