ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರದ ಕಾರ್ಯಕ್ಕಾಗಿ ತ್ಯಾಗ ಮಾಡುವುದೇ ಕಾಲಾನುಸಾರ ಗುರುತತ್ತ್ವಕ್ಕೆ ಅಪೇಕ್ಷಿತವಿರುವ ಗುರುದಕ್ಷಿಣೆ!
ಗುರುಪೂರ್ಣಿಮೆಯು ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮತ್ತು ಗುರುಕಾರ್ಯದ ವೃದ್ಧಿಗಾಗಿ ತ್ಯಾಗ ಮಾಡುವ ಸಂಕಲ್ಪದ ದಿನವಾಗಿರುತ್ತದೆ. ವ್ಯಾಪಕ ಸ್ವರೂಪದ ಗುರುಕಾರ್ಯವೆಂದರೆ ಹಿಂದೂ ಧರ್ಮದ ಕಾರ್ಯ ಮತ್ತು ಸದ್ಯದ ಕಾಲಕ್ಕನುಸಾರ ವ್ಯಾಪಕ ಗುರುಕಾರ್ಯವೆಂದರೆ ಧರ್ಮಸಂಸ್ಥಾಪನೆಯ ಕಾರ್ಯ, ಅಂದರೆ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ! ಅಧ್ಯಾತ್ಮದ ಅನೇಕ ಅಧಿಕಾರಿ ಸಂತರು ಈ ಕಾರ್ಯವನ್ನು ಮಾಡುತ್ತಿದ್ದಾರೆ. ಗುರುಪೂರ್ಣಿಮೆಯ ದಿನ ಇಂತಹ ಸಂತರ ಮಾರ್ಗದರ್ಶನದಲ್ಲಿ ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರದ ಕಾರ್ಯಕ್ಕಾಗಿ ತನು-ಮನ-ಧನ ಇವುಗಳ ತ್ಯಾಗ ಮಾಡುವ ಸಂಕಲ್ಪ ಮಾಡುವುದು, ಇದುವೇ ಗುರುತತ್ತ್ವಕ್ಕೆ ಕಾಲಾನುಸಾರ ಅಪೇಕ್ಷಿತವಿರುವ ಗುರುದಕ್ಷಿಣೆಯಾಗಿದೆ.
ಹಿಂದೂ ಧರ್ಮವು ತ್ಯಾಗ ಮಾಡುವುದನ್ನು ಕಲಿಸುತ್ತದೆ. ತನು-ಮನ-ಧನ ಇವುಗಳ ಮತ್ತು ಮುಂದೆ ಸರ್ವಸ್ವದ ತ್ಯಾಗ ಮಾಡದ ಹೊರತು ಆಧ್ಯಾತ್ಮಿಕ ಉನ್ನತಿಯಾಗುವುದಿಲ್ಲ. ತನುವಿನ ತ್ಯಾಗ ಮಾಡುವುದು ಎಂದರೆ ಶರೀರದಿಂದ ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುವುದು, ಮನಸ್ಸಿನ ತ್ಯಾಗವೆಂದರೆ ನಾಮಸ್ಮರಣೆ ಮಾಡುವುದು ಅಥವಾ ರಾಷ್ಟ್ರ ಮತ್ತು ಧರ್ಮದ ಕಾರ್ಯದ ಚಿಂತನ ಮಾಡುವುದು ಮತ್ತು ಧನದ ತ್ಯಾಗವೆಂದರೆ ಈ ಕಾರ್ಯಕ್ಕಾಗಿ ತಮ್ಮ ಬಳಿ ಇರುವ ಧನವನ್ನು ಅರ್ಪಿಸುವುದು. ಈ ತ್ಯಾಗವನ್ನು ಹಂತಹಂತವಾಗಿ ಮಾಡಿದ ನಂತರ ಒಂದು ದಿನ ಸರ್ವಸ್ವದ ತ್ಯಾಗವನ್ನು ಮಾಡುವ ಮನಸ್ಸಿನ ತಯಾರಿ ಆಗುತ್ತದೆ. ತನ್ನ ಸಂಪೂರ್ಣ ಜೀವನವನ್ನು ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರದ ಕಾರ್ಯಕ್ಕಾಗಿ ಅರ್ಪಿಸುವುದೇ ಇಂದಿನ ಕಾಲದಲ್ಲಿ ಸರ್ವಸ್ವದ ತ್ಯಾಗವಾಗಿದೆ. ಧರ್ಮನಿಷ್ಠ ಹಿಂದೂಗಳು, ಸಾಧಕರು ಮತ್ತು ಶಿಷ್ಯರಿಗೆ ಆಧ್ಯಾತ್ಮಿಕ ಉನ್ನತಿಗಾಗಿ ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರದ ಕಾರ್ಯಕ್ಕಾಗಿ ಸ್ವಕ್ಷಮತೆಗನುಸಾರ ತ್ಯಾಗ ಮಾಡುವ ಬುದ್ಧಿ ಬರಲಿ, ಇದೇ ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ!
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ
Inspirational article for All to take oath on Hindurashtra sankalpa