ಇತ್ತೀಚಿನ ಕಾಲದ ‘ಆದರ್ಶ ರಾಜನೆಂದು ನಾವು ಛತ್ರಪತಿ ಶಿವಾಜಿ ಮಹಾರಾಜರ ಉದಾಹರಣೆಯನ್ನು ಕೊಡುತ್ತೇವೆ. ಮಹಾರಾಜರು ೧೮ ಜಾತಿಗಳನ್ನು ಒಗ್ಗೂಡಿಸಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಇನ್ನೊಂದೆಡೆ ಇಂದಿನ ಪರಿಸ್ಥಿತಿಯನ್ನು ನೋಡುವಾಗ ಜಾತ್ಯತೀತ ಪ್ರಜಾಪ್ರಭುತ್ವವು ಪ್ರತಿಯೊಂದು ಕ್ಷೇತ್ರದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಆದರ್ಶ ರಾಜ್ಯಾಡಳಿತಕ್ಕಾಗಿ ಜನಹಿತಕಾರಿ ‘ಹಿಂದೂ ರಾಷ್ಟ್ರ ಸ್ಥಾಪನೆಯೊಂದೇ ಇಂದಿನ ಪರಿಸ್ಥಿತಿಗೆ ಏಕೈಕ ಉಪಾಯವಾಗಿದೆ. ಜಾತ್ಯತೀತ ಪ್ರಜಾಪ್ರಭುತ್ವವಿರುವ ಇಂದಿನ ಭಾರತದ ದುರ್ದೆಶೆ ಮತ್ತು ಅದನ್ನು ಸುಧಾರಿಸಲು ಹಿಂದೂ ರಾಷ್ಟ್ರ ಸ್ಥಾಪನೆಯ ಅನಿವಾರ್ಯತೆಯನ್ನು ಸ್ಪಷ್ಟಪಡಿಸುವ ಈ ಲೇಖನ !
೧. ಸ್ವಾರ್ಥಿ ರಾಜಕಾರಣಿಗಳಿಂದಾಗಿಜಾತಿಜಾತಿಗಳಲ್ಲಿ ವಿಭಜಿಸಲ್ಪಟ್ಟಿರುವ ಹಿಂದೂಗಳನ್ನು ಒಂದುಗೂಡಿಸಲು ಹಿಂದೂ ರಾಷ್ಟ್ರದ ಆವಶ್ಯಕತೆ !
ಆಂಗ್ಲರು ಭಾರತಕ್ಕೆ ಬರುವ ಮೊದಲು ಹಿಂದೂಗಳು ಒಗ್ಗಟ್ಟಿನಿಂದ ವಾಸಿಸುತ್ತಿದ್ದರು; ಆದರೆ ಆಂಗ್ಲರ ಕಾಲದಲ್ಲಿ ‘ಒಡೆದಾಳುವ ನೀತಿಯನ್ನು ಅವಲಂಬಿಸಿ ಅವರು ಹಿಂದೂಗಳನ್ನು ವಿವಿಧ ಜಾತಿಗಳಲ್ಲಿ ವಿಭಜಿಸಿದರು. ಸ್ವಾತಂತ್ರ್ಯದ ಬಳಿಕ ದೇಶದ ರಾಜಕಾರಣಿಗಳು ಭಾರತದ ತಲೆಯ ಮೇಲೆ ಮೀಸಲಾತಿಯ ಪೆಡಂಭೂತವನ್ನು ಕುಳ್ಳಿರಿಸಿದರು. ಇದರಿಂದ ಸಮಾಜದಲ್ಲಿ ಒಗ್ಗಟ್ಟು ನಿರ್ಮಾಣವಾಗುವ ಬದಲು ಜಾತಿಜಾತಿಗಳಲ್ಲಿ ದ್ವೇಷ ನಿರ್ಮಾಣವಾಯಿತು. ಚುನಾವಣೆಗಳು ಬಂತೆಂದರೆ, ರಾಜಕೀಯ ಪಕ್ಷಗಳು ವಿವಿಧ ಜಾತಿಗಳಿಗೆ ಮೀಸಲಾತಿಯ ಆಮಿಷವನ್ನೊಡ್ಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಆರಂಭಿಸಿದರು. ಡಾ. ಬಾಬಾಸಾಹೇಬ ಅಂಬೇಡ್ಕರರು ಹಿಂದುಳಿದ ಸಮಾಜದ ವಿಕಾಸಕ್ಕೆ ಚಾಲನೆ ಸಿಗಬೇಕೆಂದು ಕೇವಲ ೧೦ ವರ್ಷಗಳವರೆಗೆ ಮಾತ್ರ ಅನ್ವಯಿಸುವಂತೆ ಮಾಡಿದ ಮೀಸಲಾತಿಯು ದೇಶಕ್ಕೆ ಸ್ವಾತಂತ್ರ್ಯ ದೊರಕಿ ೭೦ ವರ್ಷಗಳಾದರೂ ಮುಂದುವರಿದಿದೆ.
೧೯೩೫ ರ ಜನಗಣತಿಗನುಸಾರ ಭಾರತದಲ್ಲಿ ಹಿಂದುಳಿದ ವರ್ಗದವರ ಸಂಖ್ಯೆ ೧೫೦ ರಷ್ಟಿತ್ತು. ೨೧ ನೇ ಶತಮಾನದಲ್ಲಿ ಅದು ೩ ಸಾವಿರದ ೫೦೦ ಆಯಿತು. ನಿಜವಾಗಿ ನೋಡಿದರೆ ಹಿಂದುಳಿದವರು ಕಡಿಮೆಯಾದರೆ ಅದು ರಾಷ್ಟ್ರದ ಪ್ರಗತಿಯ ಲಕ್ಷಣವಾಗುತ್ತದೆ; ಆದರೆ ಸದ್ಯಕ್ಕೆ ಅನೇಕ ಜನರು ತಮ್ಮ ಸಮಾಜವನ್ನು ಹಿಂದುಳಿದ ಸಮಾಜವೆಂದು ಘೋಷಿಸುವಂತೆ ಅನೇಕ ಚಳುವಳಿಗಳನ್ನು, ಮೆರವಣಿಗೆಗಳನ್ನು ನಡೆಸಿ ಮೀಸಲಾತಿಯ ಬೇಡಿಕೆಯನ್ನು ಮಾಡುತ್ತಿದ್ದಾರೆ. ಕೆಲವೊಮ್ಮೆ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಮೀಸಲಾತಿಯಿಂದಾಗಿ ಬುದ್ಧಿವಂತರು ದುರ್ಬಲರಾಗಿ ರಾಷ್ಟ್ರಕ್ಕೆ ಅಪಾರ ಹಾನಿಯಾಗುವುದಿಲ್ಲವೆ ? ಸಂಕ್ಷಿಪ್ತವಾಗಿ ಹೇಳುವುದಾದರೆ ನಿಃಸ್ವಾರ್ಥಿ ಸಮಾಜ ನಿರ್ಮಾಣ ಮಾಡುವುದರಲ್ಲಿ ‘ಮೊತ್ತಮೊದಲು ರಾಷ್ಟ್ರದ ವಿಚಾರ ಮಾಡುವಂತೆ ಬೋಧಿಸಲು ಪ್ರಜಾಪ್ರಭುತ್ವವು ವಿಫಲಗೊಂಡಿದೆಯೆಂದು ಹೇಳಿದರೆ ತಪ್ಪಾಗಲಾರದು. ‘ವಸುದೈವ ಕುಟುಂಬಕಮ್ | ಎಂದು ಬೋಧಿಸುವ ಹಿಂದೂ ರಾಷ್ಟ್ರದಲ್ಲಿಯೇ ನಿಸ್ವಾರ್ಥ ಸಮಾಜ ನಿರ್ಮಾಣವಾಗಲು ಸಾಧ್ಯವಾಗುವುದು.
೨. ಸಾರ್ವಜನಿಕರ ಹಣವನ್ನು ರಾಷ್ಟ್ರ ಕಾರ್ಯಕ್ಕಾಗಿ ವಿನಿಯೋಗಿಸುವ ಪ್ರಾಮಾಣಿಕ ರಾಜಕಾರಣಿಗಳನ್ನು ತರಲು ಹಿಂದೂ ರಾಷ್ಟ್ರ ಆವಶ್ಯಕ
ಹಿಂದಿನ ಕಾಲದಲ್ಲಿ ಜನರು ಧರ್ಮಾಚರಣಿಗಳಾಗಿದ್ದ ಕಾರಣ ಅವರು ಸದಾಚಾರಿಗಳು ಹಾಗೂ ನೀತಿವಂತರಾಗಿದ್ದರು. ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ರಾಷ್ಟ್ರದ ಈ ನೈತಿಕ ಬಲ ಕ್ಷೀಣಿಸಿದೆ. ಭ್ರಷ್ಟಾಚಾರದಿಂದ ಸಮಾಜ ವ್ಯವಸ್ಥೆ ಟೊಳ್ಳಾಗಿದೆ. ಒಂದು ಕಾಲದಲ್ಲಿ ಸ್ವರ್ಣಯುಗವಾಗಿದ್ದ ನಮ್ಮ ಭಾರತ ದೇಶವು ಇಂದು ನಿಷ್ಕ್ರಿಯ ಹಾಗೂ ಭ್ರಷ್ಟ ರಾಜಕಾರಣಿಗಳಿಂದಾಗಿ ಸಾಲದ ಹೊರೆಯಲ್ಲಿ ಸಿಲುಕಿದೆ. ೨೦೧೫ ರ ಅಂತ್ಯದಲ್ಲಿ ದೇಶವು ಅಂತರರಾಷ್ಟ್ರೀಯ ಬ್ಯಾಂಕ್‌ಗಳು, ಆರ್ಥಿಕ ಸಂಸ್ಥೆಗಳು ಮತ್ತು ಸರಕಾರಗಳಿಂದ ೪೭೫.೮ ಅಬ್ಜ ಡಾಲರ್ ಸಾಲ ಪಡೆದಿದೆ. ಅದರಲ್ಲಿ ಕೋಟಿಗಟ್ಟಲೆ ರೂಪಾಯಿಗಳ ಹೊಸ ಹೊಸ ಹಗರಣಗಳು ಪ್ರತಿದಿನ ಬೆಳಕಿಗೆ ಬರುತ್ತಿವೆ. ಕಾಂಗ್ರೆಸ್ಸಿನ ಕಾಲದಲ್ಲಿ ನಡೆದಿರುವ ಆದರ್ಶ ಹಗರಣ, ೨-ಜಿ ಸ್ಪೆಕ್ಟ್ರಮ್ ಹಗರಣ, ಕಲ್ಲಿದ್ದಲು ಹಗರಣ ಇತ್ಯಾದಿಗಳಿಂದ ದೇಶದ ಆರ್ಥಿಕ ಸ್ಥಿತಿಯು ನೆಲಕಚ್ಚಿರುವಾಗ ಈಗ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಸಾಲ ಪಡೆದು ಅದನ್ನು ಮುಳುಗಿಸುವ ವಿವಿಧ ಉದ್ಯಮಿಗಳ ಹಗರಣಗಳು ಸಹ ಬೆಳಕಿಗೆ ಬರಲು ಆರಂಭವಾಗಿವೆ. ‘ಕಿಂಗ್‌ಫಿಶರ್ ಕಂಪನಿಯ ಮಾಲೀಕ ವಿಜಯ ಮಲ್ಯ ವಿವಿಧ ಬ್ಯಾಂಕ್‌ಗಳಿಂದ ೯ ಸಾವಿರ ಕೋಟಿ ರೂಪಾಯಿಗಳ ಸಾಲ ಪಡೆದು ಮುಳುಗಿಸಿದರೆ, ವಜ್ರದ ವ್ಯಾಪಾರಿ ನೀರವ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಿಂದ ೧೧ ಸಾವಿರದ ೪೦೦ ಕೋಟಿ ರೂಪಾಯಿಗಳ ಸಾಲ ತೆಗೆದುಕೊಂಡು ಮುಳುಗಿಸಿದರು, ಇಬ್ಬರು ಸಹ ಭಾರತದಿಂದ ಪಲಾಯನಗೈದು ಈಗ ವಿದೇಶದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ತದ್ವಿರುದ್ಧ ಭಾರತದ ರೈತರು ಮಾತ್ರ ಬೇಸಾಯಕ್ಕಾಗಿ ಬ್ಯಾಂಕ್‌ಗಳಿಂದ ತೆಗೆದುಕೊಂಡ ಕೇವಲ ೧೦-೨೦ ಸಾವಿರ ರೂಪಾಯಿಗಳ ಸಾಲದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಕೇವಲ ಆಧ್ಯಾತ್ಮಿಕ ಅಡಿಪಾಯವಿರುವ ಆದರ್ಶ ಹಿಂದೂ ರಾಷ್ಟ್ರದಿಂದಲೇ ಬದಲಾಯಿಸಲು ಸಾಧ್ಯವಾಗಲಿದೆ.
೩. ನಾಗರಿಕರ ರಕ್ಷಣೆಗಾಗಿ ಹಿಂದೂ ರಾಷ್ಟ್ರದ ಆವಶ್ಯಕತೆ !
ಜನರನ್ನು ದೇಶದಲ್ಲಿರುವ ಶತ್ರುಗಳಿಂದ ರಕ್ಷಿಸುವ ಹೊಣೆ ಪೊಲೀಸರದ್ದಾಗಿದೆ; ಆದರೆ ‘ಸದ್ರಕ್ಷಣಾಯ ಖಲನಿಗ್ರಹಣಾಯ ಎಂಬ ಧ್ಯೇಯವಾಕ್ಯವಿರುವ ಪೊಲೀಸರು ಇದನ್ನು ಮರೆತಂತೆ ಕಾಣಿಸುತ್ತದೆ. ಪೊಲೀಸರು ಮತ್ತು ಅಪರಾಧಿಗಳ ನಡುವೆ ಹಣಕಾಸಿನ ಒಪ್ಪಂದದಿಂದಾಗಿ ಅಪರಾಧಿಗಳಿಗೆ ಪೊಲೀಸರ ಭಯ ಕಡಿಮೆಯಾಗುತ್ತಿದೆ. ಪೊಲೀಸ್ ಠಾಣೆಗೆ ದೂರು ನೀಡಲು ಹೋಗುವವರಿಗೇ ಬೆದರಿಕೆಯೊಡ್ಡಲಾಗುತ್ತದೆ. ಪೊಲೀಸರೆ ಸೆರೆಮನೆಯಲ್ಲಿನ ಅಪರಾಧಿಗಳಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಿರುವುದು ಅನೇಕ ಸಲ ಬೆಳಕಿಗೆ ಬಂದಿದೆ ಹಾಗೂ ಕಾನೂನಿನ ರಕ್ಷಕರಾದ ಪೊಲೀಸರೇ ಕಾನೂನು ಕೈಗೆತ್ತಿಕೊಂಡು ಅದನ್ನು ಕೊಲೆ ಮಾಡುತ್ತಿದ್ದಾರೆ, ಎಂಬ ಅನುಭವ ಅನೇಕರಿಗೆ ಆಗಿದೆ. ಛತ್ರಪತಿ ಶಿವಾಜಿಮಹಾರಾಜರ ಹಿಂದವೀ ಸ್ವರಾಜ್ಯದಲ್ಲಿ ರೈತರಿಗೆ ತೊಂದರೆ ಕೊಡುವವರಿಗೆಬೆಟ್ಟದ ಮೇಲಿಂದ ಕೆಳಗೆ ತಳ್ಳುವಂತಹ ಕಠಿಣ ಶಿಕ್ಷೆಯಾಗುತ್ತಿತ್ತು. ಸ್ತ್ರೀಯರನ್ನು ವಕ್ರದೃಷ್ಟಿಯಿಂದ ನೋಡುವವರಿಗೆ ಚೌರಂಗಾ (ಕೈಕಾಲುಗಳನ್ನು ಕಡಿಯುವುದು) ಶಿಕ್ಷೆ ನೀಡಲಾಗುತ್ತಿತ್ತು. ಇದರಿಂದ ಅಪರಾಧ ಮಾಡುವವರಲ್ಲಿ ಭಯ ನಿರ್ಮಾಣವಾಗಿ ಅಪರಾಧ ಮಾಡಲು ಧೈರ್ಯ ಮಾಡುತ್ತಿರಲಿಲ್ಲ. ತದ್ವಿರುದ್ಧ ಜಾತ್ಯತೀತ ಭಾರತದಲ್ಲಿ ಜನರ ರಕ್ಷಣೆಗಾಗಿ ನೇಮಕಗೊಂಡ ಪೊಲೀಸರೇ ಅಪರಾಧಿಗಳೊಂದಿಗೆ ಸೇರಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಪರಿಸ್ಥಿತಿ ಬದಲಾಯಿಸಲು ಹಿಂದೂ ರಾಷ್ಟ್ರದ ಅವಶ್ಯಕತೆಯಿದೆ.
೪. ಶಿಕ್ಷಣದಂತಹ ಪವಿತ್ರ ಕ್ಷೇತ್ರದ ಪುನರ್ವೈಭಕ್ಕೆ ಹಿಂದೂ ರಾಷ್ಟ್ರ ಬೇಕು !
ಜ್ಞಾನದಾನದ ಕಾರ್ಯದಿಂದ ಅತ್ಯಂತ ಪವಿತ್ರವೆಂದು ತಿಳಿಯಲ್ಪಡುತ್ತದೆ. ಹಿಂದೆ ತಕ್ಷಶಿಲೆ, ನಾಲಂದಾ ಇತ್ಯಾದಿ ವಿಶ್ವವಿದ್ಯಾಲಯಗಳಲ್ಲಿ ಕೇವಲಭರತಖಂಡದಿಂದ ಮಾತ್ರವಲ್ಲ, ಯುರೋಪ್ ಹಾಗೂ ಏಶಿಯಾ ಖಂಡದವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿತ್ತು; ಆದರೆ ವಿದ್ಯೆಯ ತವರಾಗಿದ್ದ ಭಾರತದ ಶಿಕ್ಷಣ ಪದ್ಧತಿ ಇಂದು ನಿರುಪಯುಕ್ತವಾಗಿದೆ. ಪ್ರಾಥಮಿಕ ಶಿಕ್ಷಣದಿಂದ ವಿಶ್ವವಿದ್ಯಾಲಯಗಳ ಶಿಕ್ಷಣದವರೆಗಿನ ಪ್ರವೇಶಕ್ಕಾಗಿ ಪ್ರವೇಶ ಶುಲ್ಕದ ಹೆಸರಿನಲ್ಲಿ ದೊಡ್ಡ ಪ್ರಮಾಣದ ಡೊನೇಶನ್ ವಸೂಲು ಮಾಡಲಾಗುತ್ತಿದೆ. ಯಾರನ್ನು ಗುರುಗಳೆಂದು ನೋಡಲಾಗುತ್ತಿತ್ತೋ, ಆ ಶಿಕ್ಷಕರೇ ಇಂದು ವಿದ್ಯಾರ್ಥಿಗಳ ಮೇಲೆ ಅನ್ಯಾಯ ಮಾಡುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳನ್ನು ದಿಕ್ಕುತಪ್ಪಿಸುವ ಮೆಕಾಲೆ ಶಿಕ್ಷಣ ಪದ್ಧತಿ ತೊಲಗಿಸಿ ಜ್ಞಾನದಾನದಂತಹ ಪವಿತ್ರ ಕ್ಷೇತ್ರದಲ್ಲಿ ಭಾರತಕ್ಕೆ ಗತವೈಭವವನ್ನು ದೊರಕಿಸಿಕೊಡಲು ಹಿಂದೂ ರಾಷ್ಟ್ರದ ಸ್ಥಾಪನೆಯ ಅವಶ್ಯಕತೆಯಿದೆ.
೫. ಭಾರತದ ವಾಸ್ತವಿಕ ಅಭಿವೃದ್ಧಿಗೆ ಹಿಂದೂ ರಾಷ್ಟ್ರದ ಆವಶ್ಯಕ !
ಪ್ರಾಚೀನ ಭಾರತದಲ್ಲಿ ಸನಾತನ ವೈದಿಕ ಹಿಂದೂ ಧರ್ಮಕ್ಕೆ ರಾಜಾ ಶ್ರಯವಿದ್ದ ಕಾರಣ ಈ ರಾಷ್ಟ್ರವು ವ್ಯಾವಹಾರಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಲ್ಲಿ ಪ್ರಗತಿಪಥದಲ್ಲಿತ್ತು. ಈ ಕಾರಣದಿಂದ ಸುಸಂಸ್ಕೃತ ಸಮಾಜ, ಆದರ್ಶ ಕುಟುಂಬ ವ್ಯವಸ್ಥೆ ಹಾಗೂ ರಾಜಕಾರಣಿಗಳ ನಿರ್ಮಾಣ ಹಿಂದೂಧರ್ಮಾಧಿಷ್ಠಿತ ರಾಷ್ಟ್ರದಲ್ಲಿ ಆಗಿತ್ತು; ಆದರೆ ಭಾರತದಲ್ಲಿ ಸ್ವಾತಂತ್ರ್ಯದ ೭ ದಶಕಗಳ ಬಳಿಕವೂ ಜಾತ್ಯತೀತ ಪ್ರಜಾಪ್ರಭುತ್ವವನ್ನು ಹೊಗಳುವ ಎಲ್ಲ ಪಕ್ಷಗಳ ರಾಜಕಾರಣಿಗಳಿಗೆ ಸುಸಂಸ್ಕೃತ ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಿಸಲುಆಗಲಿಲ್ಲ. ಅದರ ಪರಿಣಾಮವೇ ರಾಷ್ಟ್ರದಲ್ಲಿ ಅನೇಕ ಸಮಸ್ಯೆಗಳು ಜಟಿಲಗೊಂಡು ರಾಷ್ಟ್ರ ರಭಸದಿಂದ ವಿನಾಶದತ್ತ ಸರಿಯುತ್ತಿದೆ. ಈ ಸಮಸ್ಯೆಗಳ ತೀವ್ರತೆ ನೋಡಿದಾಗ ಜಾತ್ಯತೀತ ಪ್ರಜಾಪ್ರಭುತ್ವದ ನಿರರ್ಥಕತೆ ಮತ್ತು ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಅವಶ್ಯಕತೆ ಸ್ಪಷ್ಟವಾಗುತ್ತದೆ.